New Airports: ಬಳ್ಳಾರಿ, ವಿಜಯನಗರ, ಕೊಪ್ಪಳದ ಜನರಿಗಾಗಿ ಹೊಸ ವಿಮಾನ ನಿಲ್ದಾಣ; ಎಂಬಿ ಪಾಟೀಲ್ ಬಿಗ್ ಅಪ್ಡೇಟ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ನಿರ್ಮಿಸಬೇಕೆಂಬ ಯೋಜನೆ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದೆ. ಈ ವೇಳೆ ಉತ್ತರ ಕರ್ನಾಟಕ ಭಾಗದತ್ತಲೂ ಗಮನಹರಿಸಿ. ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಿರ್ಮಿಸುವಂತೆ ಒಂದಷ್ಟು ಆಗ್ರಹ ಕೇಳಿ ಬಂದಿದ್ದವು. ಇದೀಗ ರಾಜ್ಯ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ರಾಜ್ಯ 03 ಜಿಲ್ಲೆಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಈ ಮೂರೂ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳದಲ್ಲಿ ಒಂದು ಹೊಸ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ಮಂಗಳವಾರ ಮಾಹಿತಿ ನೀಡಿದರು. ಬಜೆಟ್ ಮೇಲಿನ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ವೈ.ಎಂ ಸತೀಶ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.

ಉತ್ತರ ಕರ್ನಾಟಕ ಬಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಹೆಚ್ಚಿನ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಸಭೆ ನಡೆಸಿದ ನಂತರ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದರು.
900 ಎಕರೆಯಲ್ಲಿ ಬಳ್ಳಾರಿ ಏರ್‌ಪೋರ್ಟ್‌ಗೆ ಮರು ಟೆಂಡರ್
2010ರಲ್ಲಿ ರಾಜ್ಯದ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಆಲೋಚನೆ ಬಂದಿತ್ತು.ಇದಕ್ಕಾಗಿ 900 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಚೆನ್ನೈನ ಮೆ.ಮಾರ್ಗ್ ಶ್ರೀಕೃಷ್ಣದೇವರಾಯ ಏರ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಿಮಾನ ನಿಲ್ದಾಣ ನಿರ್ಮಿಸಲು ವಹಿಸಿ, ಭೂಮಿಯನ್ನು ಹಸ್ತಾಂತರಿಸಲಾಗಿತ್ತು. ಆದರೆ, ಆ ಸಂಸ್ಥೆಯು ನಿಯಮಾನುಸಾರ 2 ವರ್ಷವಾದರೂ ಕೆಲಸ ಶುರು ಮಾಡಲಿಲ್ಲ. ಹೀಗಾಗಿ, ಅದರೊಂದಿಗಿನ ಒಪ್ಪಂದ ರದ್ದಾಗಿದೆ. ಇದಾದ ಮೇಲೆ, ಯೋಜನೆಗೆ ಡಿಪಿಆರ್ ತಯಾರಿಸಲು ಸಲಹೆಗಾರರನ್ನು ನೇಮಿಸಿಕೊಳ್ಳಲು ಕಳೆದ ಅಕ್ಟೋಬರ್‌ನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ ಎಂದರು.
ಕೊಪ್ಪಳ, ವಿಜಯನಗರದಲ್ಲಿ ಏರ್‌ಪೋರ್ಟ್?
ಈ ನಡುವೆ ವಿಜಯನಗರ ಮತ್ತು ಕೊಪ್ಪಳ ಭಾಗದವರೂ ವಿಮಾನ ನಿಲ್ದಾಣ ಬೇಕೆನ್ನುತ್ತಿದ್ದಾರೆ. ಹೀಗಾಗಿ ಜಿಲ್ಲೆಗೊಂದು ವಿಮಾನ ನಿಲ್ದಾಣ ಮಾಡುವುದು ಕಾರ್ಯಸಾಧುವಲ್ಲ ಎಂದು ಈ ರೀತಿಯ ಚಿಂತನೆ ಮಾಡಲಾಗುತ್ತಿದೆ. ಆದರೆ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಕ್ಕೆಂದು ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ವಾಪಸ್ ಕೊಡಲು ಬರುವುದಿಲ್ಲ ಎಂದು ಹೇಳಿದರು.
ಉಡಾನ್ ಯೋಜನೆ ಬಗ್ಗೆ ಸಚಿವರು ಹೇಳಿದ್ದೇನು?
ಕೇಂದ್ರ ಸರ್ಕಾರವು ದೇಶೀಯ ವಿಮಾನಯಾನ ಉತ್ತೇಜಿಸಲು ಉಡಾನ್ ಯೋಜನೆ ತಂದಿದೆ. ಅದರಿಂದ ಮೊದಲ ಮೂರು ವರ್ಷಗಳ ಕಾಲ ರಾಜ್ಯದ ವಿಮಾನ ನಿಲ್ದಾಣಗಳು ಚೆನ್ನಾಗಿ ನಡೆದವು. ಇದಾದ ಮೇಲೆ ಬೀದರ್, ಕಲಬುರಗಿ ವಿಮಾನ ನಿಲ್ದಾಣಗಳಿಂದ ವಿಮಾನ ಸೇವೆ ಸ್ಥಗಿತಗೊಂಡಿತು. ಈಗ ಬೀದರ್ ನಡೆಯುತ್ತಿದೆ. ಈ ಪರಿಸ್ಥಿತಿ ಬಳ್ಳಾರಿ ವಿಮಾನ ನಿಲ್ದಾಣಕ್ಕೂ ಬರಬಾರದು ಎನ್ನುವ ಕಾರಣಕ್ಕೆ ಮೂರೂ ಜಿಲ್ಲೆಗಳನ್ನು ಸೇರಿಸಿಕೊಂಡು ಸೂಕ್ತ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.
ಬಳ್ಳಾರಿ ವಿಮಾನ ನಿಲ್ದಾಣವನ್ನು ಬಿಳಿಯಾನೆ ಎಂಬಂತೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಸೊರಗಿವೆ. ಆದ್ದರಿಂದ ಉಡಾನ್ ಯೋಜನೆಯನ್ನು 5 ವರ್ಷಗಳಿಗೆ ವಿಸ್ತರಿಸಬೇಕೆಂದು ಕೇಳುತ್ತಿದ್ದೇವೆ. ಮೂರೂ ಜಿಲ್ಲೆಗಳಿಗೆ ಸರಿ ಹೊಂದುವ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಆರ್ಥಿಕವಾಗಿಯೂ ಕಾರ್ಯಸಾಧುವಾಗಲಿದೆ ಎನ್ನುವ ಭಾವನೆ ಇದೆ. ಈ ಸಂಬಂಧ ಎಲ್ಲರ ಜತೆ ಚರ್ಚಿಸಿಯೇ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ವಿಜಯಪುರದಲ್ಲಿ 3 ಕಂಪನಿಗಳಿಂದ ಹೂಡಿಕೆ
ಬಿಜೆಪಿ ಸದಸ್ಯ ಪಿ ಎಚ್ ಪೂಜಾರ ಕೇಳಿದ ಮತ್ತೊಂದು ಪ್ರಶ್ನೆಗೆ ಸಚಿವರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಮೆಂಟ್ ಮತ್ತು ಸಕ್ಕರೆ ಉದ್ಯಮ ಬಿಟ್ಟು ಬೇರೆ ಕ್ಷೇತ್ರಗಳಿಗೆ ಸೇರಿದ ಉದ್ಯಮಗಳ ಸ್ಥಾಪನೆಗೆ ಮಾತುಕತೆ ನಡೆದಿದೆ. ವಿಜಯಪುರದಯಲ್ಲಿ ಈ ಉದ್ಯಮಗಳಲ್ಲದೆ, ಇತರ 7-8 ಕಂಪನಿಗಳ ಜತೆ ಹೂಡಿಕೆ ಸಂಬಂಧ ಮಾತುಕತೆ ನಡೆದಿದೆ. ರಿಲಯನ್ಸ್ ಸಮೂಹದ ಭಾಗವಾದ ಕ್ಯಾಂಪಾಕೋಲಾ, ಪವನ ವಿದ್ಯುತ್ ವಲಯಕ್ಕೆ ಸೇರಿದ ಸುಜ್ಲಾನ್ ಹಾಗೂ ತೊಗರಿ ಬೇಳೆ ಸಂಸ್ಕರಣೆ ಮಾಡುವ ವಿಟೇರಾ ಸಂಸ್ಥೆ ಹೂಡಿಕೆ ಮಾಡುವುದು ಬಹುತೇಕ ಖಚಿತವಾಗಿದೆ. ಕ್ಯಾಂಪಾಕೋಲಾ ಮುಂದಿನ ವಾರದಲ್ಲೇ ತನ್ನ ಸ್ಥಾವರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತಿದೆ. ಉಳಿದ 5 ಕಂಪನಿಗಳ ಜತೆ ವಿಚಾರ ವಿನಿಮಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.












Click it and Unblock the Notifications