"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ
ಬೆಂಗಳೂರು: ರಾಜ್ಯದ ಮನೆಮಾತಾಗಿರುವ "ನಂದಿನಿ" ತುಪ್ಪದ ಹೆಸರಿನಲ್ಲಿ ನಡೆಯುತ್ತಿದ್ದ ನಕಲಿ ಜಾಲಕ್ಕೆ ಬ್ರೇಕ್ ಹಾಕಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈಗ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದೆ. ಇನ್ನು ಮುಂದೆ ನೀವು ಖರೀದಿಸುವ ಪ್ರತಿ ನಂದಿನಿ ತುಪ್ಪದ ಪ್ಯಾಕೆಟ್ ಅಥವಾ ಬಾಟಲಿಯ ನಕಲಿಯೋ ಅಸಲಿಯೋ ಎನ್ನುವುದನ್ನು ನಿಮ್ಮ ಮೊಬೈಲ್ ಮೂಲಕವೇ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಹುದು. ಇದಕ್ಕಾಗಿ ಹೊಸ ಕ್ಯುಆರ್ ಕೋಡ್ ಅನ್ನು ಪರಿಚಯಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ನಕಲಿ ನಂದಿನಿ ತುಪ್ಪ ಮಾರಾಟವಾಗುತ್ತಿರುವ ದೂರುಗಳು ಹೆಚ್ಚಾಗಿದ್ದವು. ಇದು ಕೇವಲ ಗ್ರಾಹಕರ ಆರೋಗ್ಯಕ್ಕೆ ಸಂಚಕಾರ ತರುತ್ತಿರಲಿಲ್ಲ, ಬದಲಾಗಿ ಕೆಎಂಎಫ್‌ನ ದಶಕಗಳ ವಿಶ್ವಾಸಾರ್ಹತೆಗೂ ಧಕ್ಕೆ ತರುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಂಎಫ್ ಆಡಳಿತ ಮಂಡಳಿಯು ಆಹಾರ ಇಲಾಖೆಯ ಅನುಮತಿಯೊಂದಿಗೆ ಪ್ರತಿ ಉತ್ಪನ್ನದ ಮೇಲೂ 'ಸುರಕ್ಷಾ ಕ್ಯೂಆರ್ ಕೋಡ್' ಅಳವಡಿಸಲು ನಿರ್ಧರಿಸಿದೆ.

ಹೇಗೆ ಕೆಲಸ ಮಾಡುತ್ತೆ ಈ ತಂತ್ರಜ್ಞಾನ?
ಗ್ರಾಹಕರು ತುಪ್ಪದ ಪ್ಯಾಕೆಟ್ ಅಥವಾ ಬಾಟಲಿಯ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ (OTP) ಬರಲಿದೆ. ಆ ಒಟಿಪಿ ನಮೂದಿಸಿದ ಕೂಡಲೇ ಆ ನಿರ್ದಿಷ್ಟ ತುಪ್ಪದ ಪೂರ್ಣ ಮಾಹಿತಿ ನಿಮ್ಮ ಕಣ್ಣಮುಂದೆ ಇರಲಿದೆ. ಒಂದು ವೇಳೆ ಸ್ಕ್ಯಾನ್ ಮಾಡಿದಾಗ ಮಾಹಿತಿ ಸಿಗದಿದ್ದರೆ ಅಥವಾ ಒಟಿಪಿ ಬರದಿದ್ದರೆ ಅದು ನಕಲಿ ಎಂದು ಸುಲಭವಾಗಿ ತಿಳಿಯಬಹುದು.
ಈ ಕ್ಯೂಆರ್ ಕೋಡ್ ಕೇವಲ ತುಪ್ಪದ ಅಸಲಿತನವನ್ನಷ್ಟೇ ತೋರಿಸುವುದಿಲ್ಲ, ತುಪ್ಪ ಯಾವ ಡೈರಿಯಲ್ಲಿ ತಯಾರಾಗಿದೆ? ಉತ್ಪಾದನೆಯಾದ ಮತ್ತು ಪ್ಯಾಕ್ ಆದ ನಿಖರ ದಿನಾಂಕ, ಮಾರುಕಟ್ಟೆಗೆ ಬಿಡುಗಡೆಯಾದ ಸಮಯ, ಅಧಿಕೃತ ಡೀಲರ್ ಮತ್ತು ರಿಟೇಲರ್ ವಿವರಗಳು ಕೂಡ ಇರಲಿವೆ. ಹೀಗಾಗಿ ನಂದಿನಿ ತುಪ್ಪವನ್ನು ಖರೀದಿಸುವಾಗ ಆತುರ ಪಡಬೇಡಿ. ಪ್ಯಾಕೆಟ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಆರೋಗ್ಯಕರ ಮತ್ತು ಅಸಲಿ ತುಪ್ಪವನ್ನೇ ಮನೆಗೆ ತನ್ನಿ ಎಂದು ಮಂಡಳಿ ಹೇಳಿದೆ.́
ಮುಂದಿನ ದಿನಗಳಲ್ಲಿ ಬೆಣ್ಣೆಗೂ ಕೋಡ್
"ನಕಲಿ ಹಾವಳಿ ತಡೆಯಲು ಕ್ಯೂಆರ್ ಕೋಡ್ ಸ್ಕ್ಯಾನರ್ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸದ್ಯಕ್ಕೆ ತುಪ್ಪಕ್ಕೆ ಮಾತ್ರ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಂದಿನಿ ಬೆಣ್ಣೆ ಸೇರಿದಂತೆ ಇತರ ಪ್ರಮುಖ ಉತ್ಪನ್ನಗಳಿಗೂ ಈ ತಂತ್ರಜ್ಞಾನವನ್ನು ವಿಸ್ತರಿಸುವ ಯೋಜನೆ ಇದೆ" ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರ ಜೊತೆಗೂಡಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ, ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನ ತಿರುಪೂರಿನಲ್ಲೂ ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಅಡ್ಡೆಗಳನ್ನು ಕೆಎಂಎಫ್ ಪತ್ತೆ ಹಚ್ಚಿತ್ತು. ಈಗ ಬಾರ್‌ಕೋಡ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಎಂಎಫ್, ಈಗ ಪ್ರತಿ ತುಪ್ಪದ ಬಾಟಲಿ ಮತ್ತು ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸುತ್ತಿದೆ. ಈ ಮೂಲಕ ಪ್ರತಿ ಉತ್ಪನ್ನಕ್ಕೂ ಒಂದು ಡಿಜಿಟಲ್ ಗುರುತು ನೀಡಲಾಗುತ್ತಿದೆ.
ಇನ್ಮುಂದೆ ಗ್ರಾಹಕರು ಅಂಗಡಿಗಳಲ್ಲಿ ತುಪ್ಪ ಖರೀದಿಸುವ ಮುನ್ನ ತಮ್ಮ ಸ್ಮಾರ್ಟ್‌ಫೋನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಇದು ಕೇವಲ ನಕಲಿ ಮಾರಾಟಕ್ಕೆ ಕಡಿವಾಣ ಹಾಕುವುದು ಮಾತ್ರವಲ್ಲದೆ, ಗ್ರಾಹಕರಲ್ಲಿ ನಂದಿನಿ ಬ್ರ್ಯಾಂಡ್ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications