Bengaluru: ಟ್ರಾಫಿಕ್ ರೂಲ್ಸ್ ಪಾಠ ಮಾಡಿದ ಬೀದಿ ನಾಯಿಗಳು; ಝೀಬ್ರಾ ಕ್ರಾಸಿಂಗ್‌ನಲ್ಲಿ ರಸ್ತೆ ದಾಟಿದ ಶ್ವಾನಗಳ Video Viral
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಟ್ರಾಫಿಕ್, ಆಫೀಸ್ಸಿಗೆ ಹೋಗುವ ಗಡಿಬಿಡಿ ಹೀಗೆ ಮುಂತಾದ ಕಾರಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನ ಉಲ್ಲಂಘಿನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಆದರೆ, ಇಲ್ಲೊಂದು ಬೀದಿ ನಾಯಿಗಳ ಹಿಂಡು ಮನುಷ್ಯರಿಗೆ ನಾಚಿಕೆಯಾಗುವಂತೆ ರಸ್ತೆ ನಿಯಮಗಳನ್ನು ಪಾಲಿಸಿ ಮಾದರಿಯಾಗಿದೆ. ಇದು ಕಾಕತಾಳೀಯವಾಗಿದ್ದರು ಕೂಡ ಇದು ಸತ್ಯ.
ಹೌದು, ಬೆಂಗಳೂರಿನ ರಸ್ತೆಯೊಂದರಲ್ಲಿ ನಾಯಿಗಳು ತುಂಬ ಶಿಸ್ತಿನಿಂದ 'ಝೀಬ್ರಾ ಕ್ರಾಸಿಂಗ್' ಬಳಸಿಕೊಂಡು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ. ನೆಟ್ಟಿಗರು ಈ ಶ್ವಾನಗಳನ್ನು ಪ್ರೀತಿಯಿಂದ 'ಡೋಗೇಶ್ ಗ್ಯಾಂಗ್' ಎಂದು ಕರೆಯುತ್ತಿದ್ದು, ಇವುಗಳ ಬುದ್ಧಿವಂತಿಕೆಗೆ ಫಿದಾ ಆಗಿದ್ದಾರೆ.

ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಬೀದಿ ನಾಯಿಗಳ ಶಿಸ್ತು
ಸಾಮಾನ್ಯವಾಗಿ ರಸ್ತೆ ದಾಟುವಾಗ ಮನುಷ್ಯರೇ ಅಕ್ಕಪಕ್ಕ ನೋಡದೆ, ಸಿಕ್ಕಸಿಕ್ಕಲ್ಲಿ ನುಗ್ಗುವುದುಂಟು. ಆದರೆ ಈ ವಿಡಿಯೋದಲ್ಲಿ ಬೀದಿ ನಾಯಿಗಳು ತೋರಿರುವ ಶಿಸ್ತು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಕಾರೊಂದರ ಡ್ಯಾಶ್‌ಕ್ಯಾಮ್‌ನಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಡಿಯೋದ ಆರಂಭದಲ್ಲಿ ಟ್ರಕ್ ಒಂದು ಟ್ರಾಫಿಕ್ ಸಿಗ್ನಲ್ ಬಳಿ ಮುಂದಕ್ಕೆ ಚಲಿಸುವುದನ್ನು ಕಾಣಬಹುದು. ಟ್ರಕ್ ರಸ್ತೆ ದಾಟುತ್ತಿದ್ದಂತೆಯೇ, ರಸ್ತೆಯ ಬದಿಯಲ್ಲಿ ಕಾಯುತ್ತಿದ್ದ ಸುಮಾರು ಐದಾರು ನಾಯಿಗಳ ಹಿಂಡೊಂದು, ವಾಹನಗಳು ಬರುತ್ತಿವೆಯೇ ಎಂದು ನೋಡಿ, ಸರಿಯಾಗಿ ಝೀಬ್ರಾ ಕ್ರಾಸಿಂಗ್ ಮೇಲೆಯೇ ಹೆಜ್ಜೆ ಹಾಕುತ್ತಾ ರಸ್ತೆ ದಾಟಿವೆ. ಇವುಗಳ ಈ ಶಿಸ್ತಿನ್ನ ನೋಡಿದರಂತೂ ಯಾರಿಗಾದರೂ ಆಶ್ಚರ್ಯವಾಗದೆ ಇರದು. ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ "ಬೆಂಗಳೂರಿನಲ್ಲಿ ಝೀಬ್ರಾ ಕ್ರಾಸಿಂಗ್ ಬಳಸುತ್ತಿರುವ ಬೀದಿ ನಾಯಿಗಳು" ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿದೆ.
ಸಂಚಾರ ನಿಯಮಗಳ ಬಗ್ಗೆ ಮನುಷ್ಯರಿಗೆ ಪಾಠ
ಈ ವಿಡಿಯೋ ನೋಡಿದ ತಕ್ಷಣ ಹೆಚ್ಚಿನವರ ತಲೆಯಲ್ಲಿ ಹೊಳೆದ ವಿಚಾರವೆಂದರೆ, ಇದು ನಿಯಮಗಳನ್ನ ಗಾಳಿಗೆ ತೂರುವ ಮನುಷ್ಯರಿಗೆ ನೀಡಿದ ಓಳ್ಳೆಯ ಪಾಠ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಝೀಬ್ರಾ ಕ್ರಾಸಿಂಗ್‌ಗಳನ್ನು ಪಾದಚಾರಿಗಳಿಗಾಗಿಯೇ ಮಾಡಿರುತ್ತಾರೆ. ಆದರೆ ನಮ್ಮಲ್ಲಿ ಅನೇಕ ವಾಹನ ಸವಾರರು ಸಿಗ್ನಲ್ ಬಿದ್ದ ತಕ್ಷಣ ಈ ಝೀಬ್ರಾ ಕ್ರಾಸಿಂಗ್ ಮೇಲೆ ವಾಹನಗಳನ್ನ ನಿಲ್ಲಿಸಿಕೊಳ್ಳುತ್ತಾರೆ, ಇಲ್ಲವೇ ಪಾದಚಾರಿಗಳಿಗೆ ಜಾಗ ಬಿಡದೆ ಮುನ್ನುಗ್ಗುತ್ತಾರೆ.
ಆದರೆ ಯಾವುದೇ ಶಾಲೆಯಲ್ಲಿ ಟ್ರಾಫಿಕ್ ಪಾಠ ಕಲಿಯದ ಈ ಮೂಕ ಪ್ರಾಣಿಗಳು ಇಷ್ಟೊಂದು ನಾಗರಿಕ ಪ್ರಜ್ಞೆ ಮೆರೆದಿರುವುದು ಅದ್ಭುತ. ಈ ಬೆಂಗಳೂರಿನ ಈ ವೈರಲ್ ವಿಡಿಯೋ ಇದೀಗ ವಾಟ್ಸಪ್, ಇನ್‌ಸ್ಟಾಗ್ರಾಮ್‌ಗಳಲ್ಲೂ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನಮ್ಮ ದೈನಂದಿನ ಜಂಜಾಟದ ಬದುಕಿನಲ್ಲಿ ನಾವೆಲ್ಲರೂ ಎಷ್ಟೋ ಬಾರಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತೇವೆ. ರಸ್ತೆ ದಾಟುವಾಗ ಕನಿಷ್ಠ ಪಕ್ಷ ಅಕ್ಕ ಪಕ್ಕ ಕೂಡ ನೋಡುವುದಕ್ಕೂ ಸಮಯವಿಲ್ಲದಂತೆ ದಾಟಿಬಿಡುತ್ತೇವೆ. ಆದರೆ ಈ ನಾಯಿಗಳು ಯಾವುದೇ ಗಡಿಬಿಡಿಯಿಲ್ಲದೆ, ವಾಹನಗಳು ಸಂಪೂರ್ಣವಾಗಿ ನಿಂತ ಮೇಲೆ, ತಮಗೆಂದೇ ಮಾಡಲಾಗಿರುವ ಸುರಕ್ಷಿತ ಜಾಗದಲ್ಲಿ ಗುಂಪಾಗಿ ರಸ್ತೆ ದಾಟಿವೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದೆ. ನಾಯಿಗಳ ಈ ಕ್ರಮವನ್ನು ಹೊಗಳುತ್ತಿರುವ ನೆಟ್ಟಿಗರು, ಮನುಷ್ಯರ ಅಜಾಗರೂಕತೆಯನ್ನು ಲೇವಡಿ ಮಾಡಿದ್ದಾರೆ. ಬಳಕೆದಾರರೊಬ್ಬರು, "ಈ ನಾಯಿಗಳಿಗೆ ಝೀಬ್ರಾ ಕ್ರಾಸಿಂಗ್‌ನ ಅಸಲಿ ಉದ್ದೇಶವೇನೆಂದು ಅರ್ಥವಾಗಿದೆ. ಆದರೆ ಕೆಲವು ಮನುಷ್ಯರು ಝೀಬ್ರಾ ಕ್ರಾಸಿಂಗ್ ಎಂದರೆ ಪಾರ್ಕಿಂಗ್ ಜಾಗ ಎಂದುಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, "ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಅರಿವಿದೆ. ಭಾರತದ ಶ್ವಾನಗಳು ಅತ್ಯಂತ ಸುಸಂಸ್ಕೃತವಾಗಿವೆ" ಎಂದು ಕೊಂಡಾಡಿದ್ದಾರೆ.


Click it and Unblock the Notifications
