Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ
ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ವಿಶೇಷ ಬರಹ ಇಲ್ಲಿದೆ.
ನಾನು ವಿವಾಹಿತ, ಹಾಗಾಗಿ ಬ್ರಹ್ಮಚಾರಿಯಲ್ಲ. ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ. ನಾನು ಹೀಗೆಂದು ಡೈಲಾಗ್ ಹೊಡೆದರೆ ಅಲ್ಲಿದ್ದ ಸ್ವಾಮೀಜಿಗಳೂ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕರು. ಯಾಕೆಂದರೆ ಅದು ಡೈಲಾಗ್ ಆಗಿರಲಿಲ್ಲ, ಅದು ವಿಷಾದನೀಯ ಸತ್ಯವೂ ಆಗಿತ್ತು.

ಇಂದು ಚನ್ನಗಿರಿ ಬಳಿಯ ಪಾಂಡೋಮಟ್ಟಿ ಮಠದಲ್ಲಿ "ಸರ್ವೋದಯ ಜಾಥಾ" ಕುರಿತಾದ ಸಭೆ ಏರ್ಪಾಡಾಗಿತ್ತು. ಪ್ರಗತಿಪರ, ಜನಪರ ಆಲೋಚನೆಗಳುಳ್ಳ ಸ್ವಾಮೀಜಿಗಳೂ ಸೇರಿದಂತೆ ಸಮಾನಮನಸ್ಕ ಚಿಂತಕರು, ಹೋರಾಟಗಾರರು, ರಾಜಕಾರಣಿಗಳು ರಾಜ್ಯದ 31 ಜಿಲ್ಲೆಗಳಿಗೂ ಇದೇ ಮೇ 1ರಿಂದ ಆರಂಭಿಸಿ 16 ದಿನಗಳ ಕಾಲ ನಿರಂತರ ಪ್ರವಾಸ ಮಾಡಿ, ಜನರಲ್ಲಿ ಸುಸ್ಥಿರ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತದ ಕುರಿತಾಗಿ ಜಾಗೃತಿ ಮೂಡಿಸುವ ಜಾಥಾದ ಕುರಿತಾದ ರೂಪುರೇಷೆಗಳ ಸಭೆ ಇದಾಗಿತ್ತು.
ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ಪಾಂಡೋಮಟ್ಟಿ ಮಠದ ಗುರುಬಸವ ಸ್ವಾಮೀಜಿ, ಮಾಜಿ ಶಾಸಕ ಮಹಿಮಾ ಪಟೇಲ್, ದಾವಣಗೆರೆಯ ಶಿವನಕೆರೆ ಬಸವಲಿಂಗಪ್ಪ ಮುಂತಾದವರು ಇದರ ನೇತೃತ್ವ ವಹಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಮಹಿಮಾ ಪಟೇಲರೊಂದಿಗೆ ಬೆಂಗಳೂರಿನಿಂದ ಹೊರಟು ನಾನೂ ಸಹ ಇಂದಿನ ಸಭೆಯಲ್ಲಿ ಭಾಗವಹಿಸಿ ನನ್ನದೂ ಕೆಲವೊಂದು ವಿಚಾರಗಳನ್ನು ಹಂಚಿಕೊಂಡೆ.
ಇತ್ತೀಚಿನ ದಿನಗಳಲ್ಲಿ ಜನರಿಗೆ ಮತ್ತು ಭಕ್ತರಿಗೆ ವಿಶ್ವಾಸದ್ರೋಹ, ನಂಬಿಕೆದ್ರೋಹ ಎಸಗಿರುವ ಕಾವಿಧಾರಿ ಸ್ವಾಮೀಜಿಗಳ ಸಂಖ್ಯೆ ಕಡಿಮೆಯಿಲ್ಲ. ನುಡಿದಂತೆ ನಡೆಯುವವರು ತೀರಾ ಕಡಿಮೆಯಾಗಿರುವ ಕಾರಣ ಜನರಿಗೆ ಯಾರ ಮೇಲೆಯೂ ವಿಶ್ವಾಸವಿಲ್ಲ. ಆ ಮಟ್ಟಿಗೆ, ಆ ಪ್ರಮಾಣದಲ್ಲಿ ಜನ ಸ್ವಾಮೀಜಿಗಳಿಂದ ಮತ್ತು ನಾಯಕರಿಂದ ಮೋಸಕ್ಕೊಳಗಾಗಿದ್ದಾರೆ, ಭ್ರಮನಿರಸನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಿನ ಮಾತುಗಳನ್ನು ಹೇಳುತ್ತಾ ನಾನು ಅಲ್ಲಿ ಹಾಜರಿದ್ದ ಸ್ವಾಮೀಜಿಗಳಲ್ಲಿ ಕೈಮುಗಿದು ಒಂದು ಪ್ರಾರ್ಥನೆಯನ್ನೂ ಮಾಡಿದೆ: "ನೀವು ಒಳ್ಳೆಯವರನ್ನು ಬೆಂಬಲಿಸದಿದ್ದರೂ ಪರವಾಗಿಲ್ಲ. ಆದರೆ ಸಮಾಜದಲ್ಲಿಯ ದುಷ್ಟರನ್ನು ಮತ್ತು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸುವುದನ್ನು ನಿಲ್ಲಿಸಿ. ಹಣವಂತ, ಸ್ವಜಾತಿ, ಉಪಜಾತಿ ಎಂದುಕೊಂಡು ಭ್ರಷ್ಟರನ್ನು ಬೆಂಬಲಿಸಬೇಡಿ. ನಿಮ್ಮಲ್ಲಿ ಕೆಲವರಾದರೂ ಇದನ್ನು ಆರಂಭಿಸಿ."
Swamijis: ಭ್ರಷ್ಟರನ್ನು ಬೆಂಬಲಿಸುವುದು ನಿಲ್ಲಿಸಿ
ನಮ್ಮ ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣಕ್ಕಾಗಿಯ ಹೋರಾಟಗಳನ್ನು ಸಾರ್ವಜನಿಕವಾಗಿ ಬೆಂಬಲಿಸಿದ ಮಠಾಧೀಶರು ಬಹಳ ವಿರಳ. ಬಹುತೇಕ ಪ್ರಭಾವಿ ಮಠಾಧೀಶರು ನಮ್ಮ ವಿರುದ್ಧವೇ ಇದ್ದಾರೆ. ಹಾಗಾಗಿ ಒಳ್ಳೆಯ ಮನಸ್ಥಿತಿ ಇರುವ ಸ್ವಾಮೀಜಿಗಳು ಬಹಿರಂಗವಾಗಿ ನಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ. ಆದರೆ ಅವರು ಭ್ರಷ್ಟರನ್ನು ಬೆಂಬಲಿಸುವುದನ್ನು ನಿಲ್ಲಿಸಿದರೆ ಸಾಕು, ಅದೇ ನಮಗೆ ದೊಡ್ಡ ಬೆಂಬಲ; ಸಮಾಜಕ್ಕೆ ಉಪಕಾರ.
ಇಂದು ಬಂದಿದ್ದ ಸ್ವಾಮೀಜಿಗಳೆಲ್ಲ ಸದುದ್ದೇಶದಿಂದ ಮತ್ತು ಕಾಳಜಿಯಿಂದ ಬಂದಿದ್ದವರು. ಅವರಿಗೆ ಬೇಸರ ತರಿಸುವುದು ನನ್ನ ಉದ್ದೇಶವಲ್ಲ. ಆದರೆ ಅವರಲ್ಲಿಯೂ ಆತ್ಮಾವಲೋಕನಗಳು ಮತ್ತು ಗಟ್ಟಿ ನಿರ್ಧಾರಗಳು ಮೂಡಲಿ ಎಂದು ಇಷ್ಟನ್ನು ಹೇಳಿದೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.












Click it and Unblock the Notifications