ಅರ್ಜುನ್ ಜನ್ಯ ಜೊತೆ ಸಿಂಗನ್ನಡಿಗರ ರಾಜ್ಯೋತ್ಸವ

Posted By: ಆರತಿ ನಾಗೇಶ್, ಸಿಂಗಪುರ
Subscribe to Oneindia Kannada

ನವೆಂಬರ್ 5ರ ಭಾನುವಾರ, ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣವು, ನವವಧುವಿನಂತೆ ಸಿಂಗಾರಗೊಂಡು ಶೋಭಿಸುತಿತ್ತು. ಕನ್ನಡದ ಮಹನೀಯರು, ಬಾವುಟಗಳು, ಕರ್ನಾಟಕದ ಭೂಪಟಗಳು, ಜೊತೆಗೆ ಸಿಂಗಪುರ ಕನ್ನಡ ಸಂಘದ ಬ್ಯಾನರಗಳು... ಇದಕ್ಕೆ ಕಳಶಪ್ರಾಯದಂತೆ, ಕನ್ನಡ ಉಲಿಯುವ... ಸಿಂಗಾರಗೊಂಡು ಆಗಮಿಸಿದ್ದ ಸಿಂಗನ್ನಡಿಗರು. ಕ್ಷಣ ಮಾತ್ರ... ನಾವು ದೂರದ ಸಿಂಗಪುರದಲ್ಲಿ ಇರುವುದು ನಿಜವೇ, ಎನ್ನುವ ಮಟ್ಟಕ್ಕೆ ವಾತಾವರಣ ಕನ್ನಡಮಯವಾಗಿತ್ತು.

ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ

ದೀಪಾವಳಿ -ಕನ್ನಡ ರಾಜ್ಯೋತ್ಸವ... ಈ ಎರಡು ಹಬ್ಬಗಳ ಮಿಳಿತ ಆಚರಣೆಯೇ ಸಿಂಗಪುರ ಕನ್ನಡ ಸಂಘದಿಂದ ಆಯೋಜಿಸಲ್ಪಡುವ 'ದೀಪೋತ್ಸವ'. ಕಳೆದ ಭಾನುವಾರ, 7 ಹಿಲ್ಸ್ ಎಂಟರ್ಟೈನ್ಮೆಂಟ್ ಜೊತೆ ಸೇರಿ ಕನ್ನಡ ಸಂಘ (ಸಿಂಗಪುರ) ಆಯೋಜಿಸಿದ್ದ 2017ರ ದೀಪೋತ್ಸವಕ್ಕೆ ಕರ್ನಾಟಕದಿಂದ ಆಗಮಿಸಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗು ಅವರ ತಂಡ.

Singapore celebrates Deepavali and Rajyotsava with Arjun Janya

ಕಳೆದ ತಿಂಗಳಿಂದ, ಕನ್ನಡ ಸಂಘದ ಕಾರ್ಯಕಾರಿ ಸಮಿತಿ, ಇವರ ತಂಡದ ಆಗಮನವನ್ನು ಕುರಿತು ವ್ಯಾಪಕವಾದ ಪ್ರಚಾರವನ್ನು ನೀಡಿ, ಸಿಂಗಪುರದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರನ್ನು ಒಂದು ಸೂರಿನ ಕೆಳಗೆ ಸೆಳೆಯುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಕೂಂಡಿದ್ದರು.

ಮಧ್ಯಾಹ್ನ 3 ಗಂಟೆಯಿಂದಲೇ ಕನ್ನಡ ಸಂಘವು ಹಲವಾರು ಆಸಕ್ತಿದಾಯಕ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. ಭಾವಚಿತ್ರಗಳಿಗೆಂದು ಮೀಸಲಾಗಿದ್ದ ಎರಡು ಸ್ಥಳಗಳಲ್ಲಿ, ಮೈಸೂರು ಅರಮನೆ ಹಾಗು ದೀಪಾವಳಿಯ ಹಿನ್ನೆಲೆ ಬಹಳ ಅಪ್ಯಾಯಮಾನವಾಗಿತ್ತು.

ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ

ಮೈಸೂರು ಪೇಟ ಕೆಲ ಪುರುಷರ ಶಿರವನ್ನು ಅಲಂಕರಿಸಿದರೆ, ಮತ್ತೆ ಕೆಲವರು ಹಳದಿ ಕೆಂಪಿನ ಉತ್ತರೀಯಗಳನ್ನು ತೊಟ್ಟು, ಕನ್ನಡ ಹೋರಾಟಗಾರರಂತೆ ಪೋಸ್ ಕೊಟ್ಟಿದ್ದು ಸುಳ್ಳಲ್ಲ.. ಇನ್ನು, ಸಿಂಗನ್ನಡಿಗ ಮಹಿಳೆಯರು ಹಾಗು ಮಕ್ಕಳಂತೂ 'ಗಾಂಚಾಲಿ ಬಿಡಿ, ಕನ್ನಡ ಮಾತಾಡಿ', 'ಐ ಲವ್ ಕನ್ನಡ', 'ಸಿಂಗನ್ನಡತಿ' ಮುಂತಾದ ಬೋರ್ಡುಗಳನ್ನು ಪ್ರದರ್ಶಿಸಿ, ವಿವಿಧ ಭಂಗಿಗಳಲ್ಲಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಇದರೊಂದಿಗೆ ಅಲ್ಲಿ 'ಆಶು ಭಾಷಣ' ಕೂಡ ಉತ್ಸಾಹದಿಂದ ಜರುಗುತಿತ್ತು.

Singapore celebrates Deepavali and Rajyotsava with Arjun Janya

ಹುಬ್ಬಳ್ಳಿ ಧಾರಾವಾಡಗಳ ಕನ್ನಡದಲ್ಲಿ ಮಾತನಾಡಲು ಕೆಲವರು ಪ್ರಯತ್ನಿಸಿದರೆ, "ಹೊಸ ಬೆಳಕು ..... ಮೂಡುತಿದೆ" ಅಂತ ಯುವತಿಯೊಬ್ಬಳು ಹಾಡಿದ್ದು ಆಯಿತು. ಮಕ್ಕಳಿಗೆಂದೇ ಏರ್ಪಾಟಾಗಿದ್ದ 'ಫೇಸ್ ಪೇಂಟಿಂಗ್' ಮೇಜಿನ ಮುಂದಂತೂ ಚಿಣ್ಣರ ಗುಂಪೇ ನೆರೆದಿತ್ತು. ಕೆನ್ನೆಯ ಮೇಲೆ, ಕೈಗಳ ಮೇಲೆ ಕನ್ನಡದ ಬಾವುಟಗಳನ್ನು ಬರೆಸಿಕೊಂಡ ಚಿಣ್ಣರು, ಸಭಾಂಗಣದ ತುಂಬೆಲ್ಲ ಓಡಾಡಿ, ವಾತಾವರಣವನ್ನು ಮತ್ತಷ್ಟು ಕನ್ನಡಮಯ ಮಾಡಿದರು.

ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆತದ್ದು ಸಂಜೆ 5 ಘಂಟೆಗೆ, ಗಿರೀಶ್ ಜಮದಗ್ನಿ ಅವರ "ಮಳೆಬಿಲ್ಲಿನ ಮೇಲೇರುವ" ಎಂಬ ಸಿಂಗನ್ನಡಿಗ ಗೀತೆಯಿಂದ. ಗೀತೆಗೆ ಅದ್ಭುತವಾದ ರಾಗ ಸಂಯೋಜನೆ ಮಾಡಿದ್ದವರು ಸಿಂಗಪುರದ ಗಾನ ಕೋಗಿಲೆ ಎಂದೆ ಪ್ರಖ್ಯಾತಿ ಪಡೆದಿರುವ ಭಾಗ್ಯ ಮೂರ್ತಿ ಅವರು. ಕನ್ನಡದ ಅರಳುಮಲ್ಲಿಗೆಗಳಂತೆ ಕಾಣುತ್ತಿದ್ದ ಸೊಬಗಿಯರಿಂದ ಹೊಮ್ಮಿದ ಕಾವ್ಯವನ್ನು ಆಸ್ವಾದಿಸಿದ ಕನ್ನಡಿಗರು ಕ್ಷಣಕಾಲ ಭಾವುಕರಾದರು.

ಆನಂತರ ವೇದಿಕೆಯನ್ನೇರಿ ಸ್ವಾಗತ ಭಾಷಣವನ್ನು ಮಾಡಿದವರು, ಕನ್ನಡ ಸಂಘದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಅವರು. ಯಾವುದೇ ಸಂಕೋಚ, ಹಿಂಜರಿಕೆ ಇಲ್ಲದೆ ಕನ್ನಡ ಸಂಘದ ಕಾರ್ಯಕ್ರಮಗಳಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಬೇಕು ಎಂದು ಅವರು ಸಮಯೋಚಿತ ಕರೆಯನ್ನು ನೀಡಿದರು. ಸ್ವಾಗತ ಭಾಷಣದ ನಂತರ ಸಿಂಗಪುರದಲ್ಲಿ ನೆಲೆಸಿರುವ ಹಾಗು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಮಕ್ಕಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ, ಬೆನ್ನು ತಟ್ಟಿ ಪ್ರೋತ್ಸಾಹ ನೀಡಲಾಯಿತು. ಈ ಸಾಲಿಗೆ ಈ ಬಾರಿ ಅಕ್ಕಿ ಹೆಬ್ಬಾಳ್ ಲಕ್ಷ್ಮೀನಾರಾಯಣ ಪುರಸ್ಕಾರ, ನಾಟ್ಯರಂಜನಿ ಪುರಸ್ಕಾರ ಸೇರ್ಪಡೆ ಆಗಿದ್ದು ಮತ್ತೊಂದು ವಿಶೇಷ.

Singapore celebrates Deepavali and Rajyotsava with Arjun Janya

ಇದಾದನಂತರ, ಸಿಂಗಾರ ಅಜೀವ ಸಾಧನೆಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ಡಾ.ಸಾಧನ ತೋಳ್ಪಾಡಿ ಹಾಗು ಡಾ.ಮಂಜುನಾಥ ಕಿಣಿ ಅವರನ್ನು ವೇದಿಕೆಯ ಮೇಲೆ ಮುಖ್ಯ ಅತಿಥಗಳಾದ ಸಿಂಗಪುರದಲ್ಲಿ ಭಾರತೀಯ ರಾಯಭಾರಿಗಳಾಗಿರುವ ಜಾವೆದ್ ಅಶ್ರಫ್ ಅವರೊಂದಿಗೆ ಕರೆತಂದಿದ್ದು ಅಧ್ಯಕ್ಷರಾದಂಥ ವಿಜಯ ರಂಗ ಪ್ರಸಾದ್ ಹಾಗು ಉಪಾಧ್ಯಕ್ಷೆ ಅರ್ಚನಾ ಪ್ರಕಾಶ್. ನಾಟ್ಯ ಕ್ಷೇತ್ರಕ್ಕೆ ನೀಡಿರುವ ಉನ್ನತ ಕೊಡುಗೆಗಾಗಿ ಸಾಧನ ಅವರನ್ನು ಆಯ್ಕೆ ಮಾಡಿದ್ದರೆ, ಕಿಣಿ ಅವರನ್ನು ಸಂಶೋಧನಾ ಕ್ಷೇತ್ರದ ಅಮೋಘ ಕೊಡುಗೆಗಾಗಿ ಆಯ್ಕೆ ಮಾಡಲಾಗಿತ್ತು.

ಸನ್ಮಾನದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಾವೆದ್ ಅಶ್ರಫ್ ಅವರು, ಸನ್ಮಾನಿತರಲ್ಲಿ ಒಬ್ಬರು, ನಮ್ಮ ಸಂಸ್ಕೃತಿಯನ್ನು ಉಳಿಸುವ ನಿರಂತರ ಕಾರ್ಯ ಮಾಡುತ್ತಿದ್ದಾರೆ, ಮತ್ತೊಬ್ಬರು ಹೇಗೆ ನಾವು ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಸಂಶೋಧನೆಗಳಿಂದ ಮುಂದುವರೆಯಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಬಹಳ ಮನೋಜ್ಞವಾಗಿ ಬಿಡಿಸಿಟ್ಟು ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಇವರಿಬ್ಬರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿದ ಕನ್ನಡ ಸಂಘವನ್ನು ಅಭಿನಂದಿಸಿದರು.

ಪ್ರೇಕ್ಷಕರೆಲ್ಲರೂ ಅತ್ಯಂತ ಕಾತರದಿಂದ ಎದುರುನೋಡುತ್ತಿದ್ದ "ಅರ್ಜುನ್ ಜನ್ಯ ಲೈವ್" ಕಾರ್ಯಕ್ರಮ ಪ್ರಾರಂಭಗೊಳ್ಳಲು ಕ್ಷಣಗಣನೆ ಆರಂಭವಾಯಿತು. ತಂಡದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿರೂಪಕಿ, ಅನುಪಮಾ ಭಟ್ ಅವರು ಕಾರ್ಯಕ್ರಮಕ್ಕೆ ಲವಲವಿಕೆಯ ಚಾಲನೆಯನ್ನು ಕೊಟ್ಟು, ನೃತ್ಯ ಕಲಾವಿದೆಯರನ್ನು ವೇದಿಕೆಗೆ ಆಹ್ವಾನಿಸಿದರು. ನೃತ್ಯ ಕಲಾವಿದೆಯರೊಂದಿಗೆ ಗಣೇಶ ಸ್ತುತಿಯನ್ನು ಹಾಡುತ್ತಾ ಅಂದಿನ ರಸಸಂಜೆಯನ್ನು ಪ್ರಾರಂಭ ಮಾಡಿದವರು ತಂಡದ ಗಾಯಕಿ ಇಂಪಾದ ಕಂಠದ ಅನುರಾಧ ಭಟ್. ಇವರ ನಂತರ ವೇದಿಕೆಗೆ ಆಗಮಿಸಿದ ಜೀ ಟಿವಿ ಸರಿಗಮಪ ಕಾರ್ಯಕ್ರಮ ಖ್ಯಾತಿಯ ವ್ಯಾಸರಾಜ ಭಟ್.

Singapore celebrates Deepavali and Rajyotsava with Arjun Janya

ಇವರಿಬ್ಬರು ಒಂದೆರಡು ಹಾಡುಗಳನ್ನು ಹಾಡಿ ಮುಗಿಸಿದ ನಂತರ ಸಭಿಕರ ಮಧ್ಯದಿಂದ ತಮ್ಮದೇ ನಿರ್ದೇಶನದ "ಜೈ ಭಜರಂಗಿ.." ಹಾಡನ್ನು ಹಾಡುತ್ತಾ ವೇದಿಕೆಗೆ
"ಪಂಚ್" ಎಂಟ್ರಿ ಕೊಟ್ಟಿದ್ದು ಅಂದಿನ ಸಂಜೆಯ ತಾರೆ ಅರ್ಜುನ್ ಜನ್ಯ. ಸಭಿಕರ ಹರ್ಷೋದ್ಗಾರ, ಶಿಳ್ಳೆ ಹಾಗು ಕರತಾಡಣಗಳ ನಡುವೆ ಇವರ ಹಾಡೇ ಕೇಳದಂತಾಗಿತ್ತು. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಯುವ ಸಿಂಗನ್ನಡಿಗರನ್ನು ನಿರಾಶೆಗೊಳಿಸದ ಜನ್ಯ, ಒಂದಾದ ನಂತರ ಒಂದು, ತಮ್ಮದೇ ನಿರ್ದೇಶನದ ಗೀತೆಗಳನ್ನು ಹಾಡುತ್ತಾ, ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇವರೇ ರಚಿಸಿ, ರಾಗ ಸಂಯೋಜನೆ ಮಾಡಿರುವ "ಅಪ್ಪ ಐ ಲವ್ ಯು" ಗೀತೆಯನ್ನು ಅನುರಾಧ ಭಟ್ ಅವರ
ಜೊತೆಗೂಡಿ ಹಾಡಿ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರರಾದರು.

ಕೆಲವು ಹೊಸ ಗೀತೆಗಳ ಗಾಯನದ ನಂತರ, ನಿರೂಪಕಿ ಅನುಪಮಾ ಅವರು, ಇದೀಗ ಕೆಲ ಹಳೆಯ ಗೀತೆಗಳನ್ನು ತಂಡ ಪ್ರಸ್ತುತ ಪಡಿಸುತ್ತದೆ ಎಂದಾಗ, ಸಿಂಗನ್ನಡಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ, ಹಳೆಯ ಕನ್ನಡ ಚಿತ್ರಗಳ ಕೆಲವು ಚಿರನೂತನ ಹಾಡುಗಳ ಗುಚ್ಛವನ್ನು ಅನುರಾಧ ಹಾಗು ಜ್ಯೋತಿ ಅವರೊಂದಿಗೆ ಕೂಡಿ ಹಾಡಿ, ನೆರೆದಿದ್ದವರ ಮನಸೂರೆಗೊಂಡರು.

Singapore celebrates Deepavali and Rajyotsava with Arjun Janya

'ಹೊಸ ನೀರು ಬಂದು, ಹಳೆಯ ನೀರು ಕೆಚ್ಚಿಕೊಂಡು ಹೋಯಿತು' ಎಂಬ ನಾಣ್ಣುಡಿಯನ್ನು ಸಿಂಗನ್ನಡಿಗರು ಈ ವಿಷಯದಲ್ಲಿ ಹುಸಿಯಾಗಿಸಿದ್ದರು! ಕನ್ನಡದ ಕೆಲ ಮೇರು ನಟರ ಕನ್ನಡ ಪ್ರೇಮ ಅಭಿವ್ಯಕ್ತಿಗೊಳಿಸುವ ಹಾಡುಗಳನ್ನು ಕೂಡ ಪ್ರಸ್ತುತ ಪಡಿಸಿದ ವ್ಯಾಸರಾಜ್, ಕನ್ನಡಿಗರ ಭಾಷಾಪ್ರೇಮವನ್ನು ಕೆಲಹೊತ್ತಿಗಾದರು ಜಾಗೃತಗೊಳಿಸುವಲ್ಲಿ ಯಶಸ್ವಿಯಾದರು!

ತಮ್ಮ ಗಾಯನ ಸುಧೆಯನ್ನು ಮುಂದುವರೆಸಿದ ಅರ್ಜುನ್ ಜನ್ಯ, ಪ್ರೇಕ್ಷಕರನ್ನು ಅಕ್ಷರಶಃ ಕುಣಿದಾಡಿಸಿಬಿಟ್ಟರು. ಸಿಂಗಪುರದಲ್ಲಿಯೇ ಖರೀದಿಸಿದ್ದ ಒಂದು ಅತ್ಯಾಧುನಿಕ ಕೀಬೋರ್ಡ್ ವಾದನವನ್ನು ಕೂಡ ಅವರು ಪ್ರೇಕ್ಷಕರ ಮುಂದೆ ನುಡಿಸಿ, ಸಿಂಗನ್ನಡಿಗರು ಮೂಕವಿಸ್ಮಿತರಾಗುವಂತೆ ಮಾಡಿದರು. ಆನಂತರ, ತಮ್ಮ ಯಶಸ್ಸಿಗೆ ಕಾರಣರಾದ ತಮ್ಮ ವಾದ್ಯಗಾರರ ತಂಡದ ಪ್ರತಿಯೊಬ್ಬ ಸದಸ್ಯನನ್ನೂ ಅತ್ಯಂತ ಗೌರವದಿಂದ, ಸ್ಪುಟವಾಗಿ, ಚುಟುಕಾಗಿ ಆದರೆ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಪರಿಚಯಿಸಿದರು. ಈಗಾಗಲೇ ಅವರ ಮೇರು ಪ್ರತಿಭೆಗಳ ರುಚಿಯನ್ನು ಕಂಡುಕೊಂಡಿದ್ದ ಪ್ರೇಕ್ಷಕರು ಅತ್ಯದ್ಭುತವಾದ ಕರತಾಡನದಿಂದ ಅವರುಗಳಿಗೆ ತಮ್ಮ ಗೌರವವನ್ನು ಸೂಚಿಸಿದರು.

Singapore celebrates Deepavali and Rajyotsava with Arjun Janya

ಅಂದಿನ ಸಂಜೆಯ ಮತ್ತೊಂದು ವಿಶೇಷ ಎಂದರೆ, ಕುಮಾರಿ ಶೀತಲ್ ಭರದ್ವಾಜ ಅವರು ಜನ್ಯ ಅವರೊಂದಿಗೆ ಹಾಡಿದ ಯುಗಳಗೀತೆ, ಹಾಡಿನ ಲಯಕ್ಕೆ ತಕ್ಕಂತೆ ಇಬ್ಬರು ಹೆಜ್ಜೆ ಹಾಕಿದ್ದು, ನೆರೆದಿದ್ದವರಿಗೆ ಮತ್ತಷ್ಟು ಸಂತಸವನ್ನು ನೀಡಿತ್ತು. ಸಿಂಗನ್ನಡತಿಯೊಬ್ಬಳು ಇಂತಹ ಮೇರು ಸಂಗೀತ ನಿರ್ದೇಶಕರೊಬ್ಬರ ಜೊತೆಯಲ್ಲಿ ಹಾಡುತ್ತಿದ್ದಾಳೆ ಎಂಬ ಹೆಮ್ಮ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಕನ್ನಡಿಗನದಾಗಿದ್ದರೆ ತನ್ನ ಅಂಗಳದಲ್ಲಿ ಅರಳಿದ ಪ್ರತಿಭೆ, ಈ ಮಟ್ಟಕ್ಕೆ ಏರಿರುವುದನ್ನು ನೋಡಿ, ಸಿಂಗಪುರ ಕನ್ನಡ ಸಂಘ ಬೀಗುತ್ತಿತ್ತು!
ತಮ್ಮದೇ ರಾಗ ಸಂಯೋಜನೆಯ ಗೀತೆಯಾದ 'ಖಾಲಿ ಕ್ವಾಟರ್ ಬಾಟಲ್ ಹಂಗೆ ಲೈಫ಼ು..." ಮೂಲಕ ಮಂಗಳ ಹಾಡಿದ ಅರ್ಜುನ್ ಜನ್ಯ, ಮತ್ತೊಮ್ಮೆ ಇಡೀ ಸಭೆಯನ್ನು ಮೋಡಿಗೊಳಿಸಿ, ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಕುಣಿಸಿಬಿಟ್ಟರು.

ಇದೇ ಸಮಯದಲ್ಲಿ 6ನೇ ಸಿಂಚನ ಸಾಹಿತ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಿ ಸ್ಪರ್ಧೆಯ ತೀರ್ಪುಗಾರರಾದ ರಾಜ್ಯಶ್ರೀ ಎಚ್ ಎನ್ ಮತ್ತು ಆರತಿ ಎಚ್ಎನ್ ಅವರಿಗೆ ಧನ್ಯವಾದ ಅರ್ಪಿಸಿದರು. ನಂತರ ಸಿಂಗನ್ನಡಿಗರ ಮನರಂಜಿಸಿದ ಎಲ್ಲಾ ಕಲಾವಿದರಿಗೆ ಹಾಗೂ ಕಾರ್ಯಕ್ರಮದ ಪ್ರಾಯೋಜಕರಿಗೆ ಗೌರವ ಕಾಣಿಕೆ ನೀಡಲಾಯಿತು. ಕಾರ್ಯಕ್ರಮ ನಾಡಗೀತೆಯಾದ "ಜಯ ಭಾರತ ಜನನಿಯ ತನುಜಾತೆ"ಯೊಂದಿಗೆ ಕೊನೆಗೊಂಡಾಗ ಗಂಟೆ 10 ಸಮೀಪಿಸುತಿತ್ತು.

ಯಾವುದೇ ಒಂದು ಕಾರ್ಯಕ್ರಮ ಸಂಪೂರ್ಣ ಯಶಸ್ವಿಯೆನ್ನಿಸಿಕೊಳ್ಳುವುದು ತೋರಣದ ಜೊತೆ ಹೂರಣವೂ ಚೆನ್ನಾಗಿದ್ದಾಗಲೇ. ಮನತಣಿಸಿದ ಕಾರ್ಯಕ್ರಮದ ನಂತರ ಹೊಟ್ಟೆ ತುಂಬಿಸಲು ರುಚಿಯಾದ ಊಟದ ಏರ್ಪಾಡೂ ಆಗಿತ್ತು.

ಸಂಘದ ಹಿರಿಯ ಸದ್ಯಸರ ಮುಂದಾಳತ್ವ ಹಾಗು ಮಾರ್ಗದರ್ಶನದಲ್ಲಿ, ಯುವ ಉತ್ಸಾಹಿ ಕಾರ್ಯಕಾರಿ ಸಮಿತಿಯ ಸದ್ಯಸರು ಮತ್ತು ಸ್ವಯಂಸೇವಕರು ಮತ್ತೊಂದು ಯಶಸ್ವೀ ಮೈಲಿಗಲ್ಲಿಗೆ ಸಿಂಗಪುರ ಕನ್ನಡ ಸಂಘವನ್ನು ಮುನ್ನೆಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Singapore Kannada Sangha celebrated Deepavali and Kannada Rajyotsava with Kannada movie music director Arjun Janya. Arjun sang several Kannada songs of his composition with singer Anuradha Bhat. Singara puraskara was also presented to the winners.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ