ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ
ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದಿಂದ ಜಾತಿಕವಾಗಿ ಆರ್ಥಿಕತೆಗೆ ಹಾನಿ ಎದುರಾಗುವ ನಿರೀಕ್ಷೆ ನಡುವೆ ಅನೇಕ ರಾಷ್ಟ್ರಗಳ ತೈಲ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗಿದೆ. ಇಂಧನ ಸಂರಕ್ಷಣೆಗಾಗಿ ಐಟಿ ಕಚೇರಿಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ನೌಕರರಿಗೆ ವರ್ಕ್ ಫ್ರಂ ಹೋಮ್‌ಗೆ ಆದ್ಯತೆ ನೀಡಲಾಗುತ್ತಿದೆ. ಇಂಧನ, ಅಡುಗೆ ಅನಿಲ ಮಾರಾಟದಲ್ಲಿ ಮಿತಿ ಹೇರಿಕೆ, ಶಾಲೆಗಳಿಗೆ ರಜೆ ಘೋಷಣೆಯಂತಹ ನಿಯಮಗಳನ್ನು ವಿವಿಧ ದೇಶಗಳು ಕೈಗೊಳ್ಳುತ್ತಿವೆ. ಇಂದಿನ ಎಲ್‌ಪಿಜಿ ಅನಿಲ ಪೂರೈಕೆ ಕೊರತೆ, ಬೆಲೆ ಏರಿಕೆ ಬೆಳವಣಿಗೆಗಳ ಮಧ್ಯೆ ಇವೆಲ್ಲವು ತುರ್ತು ಕ್ರಮಗಳಾಗಿವೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ತೀವ್ರಗೊಂಡ ಬೆನ್ನಲ್ಲೆ ಇರಾನ್ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಬಂದ್ ಮಾಡಿದೆ. ಇಲ್ಲಿ ತೈಲ ಹಡಗು ಹಾದು ಹೋದರೆ ದಾಳಿ ಮಾಡುವುದಾಗಿ ತಿಳಿಸಿದೆ. ಈ ಸಂಘರ್ಷವು ತೈಲ ಬೆಲೆಗಳಲ್ಲಿ ತೀವ್ರ ಏರಿಳಿತವನ್ನು ಉಂಟು ಮಾಡಿದೆ. ಮಾರ್ಚ್ 9ರಂದು ಸೋಮವಾರ ಪ್ರತಿ ಬ್ಯಾರೆಲ್‌ಗೆ 119 ಇದ್ದ ಬೆಲೆ ದಾಖಲಾಗಿತ್ತು. ಇದೆಲ್ಲ ನೋಡಿದರೆ ಭಾರತದಲ್ಲೂ ಐಟಿ ನೌಕರರಿಗೆ ವರ್ಕ್ ಫ್ರಂ ಹೋಂ ಮತ್ತೆ ಶುರುವಾಗುತ್ತಾ? ಇಂಧನ ಬಳಕೆ ಮಿತಿ, ದರ ಏರಿಕೆ ಮೇಲೆ ಮಿತಿ ಜಾರಿ ಆಗುತ್ತಾ ಎಂದು ಕಾದು ನೋಡಬೇಕಿದೆ. ಬೇರೆ ಬೇರೆ ದೇಶಗಳಲ್ಲಿ ಕೈಗೊಂಡ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.

ಪಾಕಿಸ್ತಾನ: ಶಾಲೆಗಳಿಗೆ ರಜೆ ಘೋಷಣೆ
ತೈಲ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಾಕಿಸ್ತಾನವು ಎರಡು ವಾರಗಳ ಕಾಲ ಶಾಲೆಗಳನ್ನು ಮುಚ್ಚುವಂತೆ ಸೋಮವಾರ ಆದೇಶಿಸಿದೆ. ಇಂಧನವನ್ನು ಸಂರಕ್ಷಿಸುವ ಪ್ರಯತ್ನಗಳ ಭಾಗವಾಗಿ ಕಚೇರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಇನ್ನೂ ಸರ್ಕಾರಿ ಇಲಾಖೆಗಳಿಗೆ ಇಂಧನ ಭತ್ಯೆಯನ್ನು ಎರಡು ತಿಂಗಳವರೆಗೆ ಶೇ.50 ರಷ್ಟು ಕಡಿತಗೊಳಿಸಲಾಗುವುದು. ಹೆಚ್ಚಿನ ವಾಹನಗಳನ್ನು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಕೈಗೊಂಡ ಕ್ರಮಗಳೇನು?
ಬಾಂಗ್ಲಾದೇಶವು ಇಂಧನ ಮಾರಾಟದ ಮೇಲೆ ದೈನಂದಿನ ಮಿತಿ ನಿಗದಿಪಡಿಸಿದೆ. ವಿದ್ಯುತ್ ಸಂರಕ್ಷಿಸಲು ಮತ್ತು ಸಾರಿಗೆ ಬೇಡಿಕೆಯನ್ನು ಕಡಿತಗೊಳಿಸಲು ಸರ್ಕಾರ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಿ ನಿರ್ದೇಶಿಸಿದೆ. ದೇಶವು ತನ್ನ ವಿದ್ಯುತ್ ಬೇಡಿಕೆ ಪೂರೈಸಲು ಅನಿಲಕ್ಕಾಗಿ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ರೈಲ ಬಿಕ್ಕಟ್ಟು ಎದುರಿಸಲು ಈ ಕ್ರಮ ಕೈಗೊಂಡಿದೆ ಎಂದು ವರದಿ ಆಗಿದೆ.
ವಿಯೆಟ್ನಾಂ: ವರ್ಕ್ ಫ್ರಂ ಹೊಮ್
ಇಂಧನ, ಅಡುಗೆ ಅನಿಲ ಸರಬರಾಜು ಅಡಚಣೆಗಳ ಮಧ್ಯ ಇಂಧನ ಸಂರಕ್ಷಿಸಲು ವಿಯೆಟ್ನಾಂ ನಲ್ಲಿ ಸ್ಥಳೀಯ ವ್ಯವಹಾರಗಳನ್ನು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಉತ್ತೇಜಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದಕ್ಕೂ ಮೊದಲು ಇಂಧನ ಆಮದಿನ ಮೇಲಿನ ತೆರಿಗೆಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕಲು ನಿರ್ಧರಿಸಲಾಗಿತ್ತು. ಅದಿನ್ನು ಜಾರಿಗೆ ಬರಬೇಕಿದೆ.
ದಕ್ಷಿಣ ಕೊರಿಯಾದಲ್ಲೂ ತುರ್ತು ಕ್ರಮ
ತುರ್ತು ಇಂಧನ ಉಳಿತಾಯ ಕ್ರಮಗಳ ಭಾಗವಾಗಿ ದಕ್ಷಿಣ ಕೋರಿಯಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಮಿತಿ ಹೇರಿದೆ. ದಿಢೀರ್ ಏರಿಕೆ ತಡೆಯಲು ಮುಂದಾಗಿದೆ. ತೈಲ ಸಂಸ್ಕರಣಾಗಾರಗಳು ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಲಭ್ಯತೆಗೆ ಆದ್ಯತೆ ನೀಡಲಾಗಿದೆ. ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗಿದೆ. ಮಧ್ಯಪ್ರಾಚ್ಯ ಯುದ್ಧವು ದೇಶದ ಆರ್ಥಿಕತೆಯ ಮೇಲೆ ಗಮನಾರ್ಹ ಹೊರೆ ಉಂಟು ಮಾಡಿದೆ ಎಂದು ಅಲ್ಲಿನ ಅಧ್ಯಕ್ಷ ಲೀ ಜೇ ಮ್ಯುಂಗ್ ಹೇಳಿದ್ದಾರೆ.
ತೈವಾನ್ ಮತ್ತು ಥೈಲ್ಯಾಂಡ್‌ನಲ್ಲಿ ಸರಕು ತೆರಿಗೆ ಕಡಿತ
ಇನ್ನೂ ಹಾಗೂ ಥೈಲಾಂಡ್ ದೇಶಗಳ ಪೈಕಿ ತೈವಾನ್ ಸರ್ಕಾರ ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಮತ್ತೊಂದೆಡೆ ಗ್ರಾಹಕರು ಮತ್ತು ವ್ಯವಹಾರಗಳ ಮೇಲಿನ ಸರಕು ತೆರಿಗೆ ಕಡಿಮೆ ಮಾಡುವ ಮೂಲಕ ಕೊಂಚ ಹೊರೆ ಇಳಿಕೆಗೆ ನಿರ್ಧರಿಸಿದೆ. ಅದೇ ರೀತಿ ಥೈಲ್ಯಾಂಡ್ ಇಂಧನ ಬೆಲೆಯನ್ನು 15 ದಿನಗಳವರೆಗೆ ಮಿತಿಗೊಳಿಸುವುದಾಗಿ ತಿಳಿಸಿದೆ.












Click it and Unblock the Notifications