Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು
Bengaluru Property Sale: ಬೆಂಗಳೂರಿನಲ್ಲಿ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಚುರುಕುಗೊಳಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸರ್ಕಾರದ ಆದೇಶದಂತೆ ಗ್ರೇಟರ್ ಬೆಂಗಳೂರು -ಪ್ರಾಧಿಕಾರವನ್ನಾಗಿ ಪುನರ್ ರಚಿಸಲಾಗಿದೆ. ಅಲ್ಲದೆ ಪ್ರಾಧಿಕಾರದ ಅಡಿಯಲ್ಲಿ ಐದು ಪ್ರತ್ಯೇಕ ಬೆಂಗಳೂರು ನಗರ ಪಾಲಿಕೆಗಳನ್ನಾಗಿ ರಚಿಸಲಾಗಿದೆ. ಇದರ ಬೆನ್ನಲ್ಲೇ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಶಾಕ್ ಕೊಡುವುದನ್ನು ಮುಂದುವರಿಸಿದೆ.
ಅದರಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಂದ ಸ್ವೀಕರಿಸಲಾಗುವ ಆಸ್ತಿ ತೆರಿಗೆಯನ್ನು ದಕ್ಷಿಣ ನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಥವಾ ನಿರ್ವಹಿಸಲು ಉಪಯೋಗಿಸಲಾಗುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ರ ಅಡಿಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳು ಪ್ರತಿಯೊಂದು ಆರ್ಥಿಕ ಸಾಲಿನಲ್ಲಿ ಆಸ್ತಿತೆರಿಗೆ ಪಾವತಿ ಮಾಡಬೇಕಾಗಿರುತ್ತದೆ. ಆಸ್ತಿತೆರಿಗೆ ಪಾವತಿಸದ ಪ್ರಕರಣಗಳಲ್ಲಿ ಆಸ್ತಿತೆರಿಗೆ ವಸೂಲಿ ಮಾಡುವ ಕಾರ್ಯವಿಧಾನವನ್ನು ಆಸ್ತಿತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024 ರ ಅಡಿಯಲ್ಲಿ ಅಧಿಸೂಚಿಸಲಾಗಿರುತ್ತದೆ.

ಈ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿತೆರಿಗೆ ಸುಸ್ತಿದಾರರಿಗೆ ಕಾರಣಕೇಳಿ ಪತ್ರ, ಆಸ್ತಿತೆರಿಗೆ ಬೇಡಿಕೆ ಪತ್ರಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಲಾದ ನಂತರದಲ್ಲೂ ಬೇಬಾಕಿ ಉಳಿಸಿಕೊಂಡ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ತಮ್ಮ ಸ್ವತ್ತಿನ ಆಸ್ತಿತೆರಿಗೆಯನ್ನು ಪಾವತಿಸಲು ತಿಳಿಸಲಾಗಿತ್ತು.
ಮುಂದುವರಿದು, ಸಾಕಷ್ಟು ಅವಕಾಶಗಳನ್ನು ನೀಡಿದ ನಂತರ ಗುರುತಿಸಲಾಗಿರುವ ಆಸ್ತಿತೆರಿಗೆಯನ್ನು ಪಾವತಿಸದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿನ ಒಟ್ಟು 30 ಸ್ವತ್ತುಗಳನ್ನು ದಿನಾಂಕ: 21.02.2026 ರಂದು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು ಈ ಪೈಕಿ 13 ಆಸ್ತಿಗಳ ಮಾಲೀಕರುಗಳು ತಮ್ಮ ಬಾಕಿ ಆಸ್ತಿ ತೆರಿಗೆಯನ್ನು ಸ್ಥಳದಲ್ಲೇ ಪಾವತಿಸಿದ್ದು, ಉಳಿದ 17 ಬಾಕಿ ಆಸ್ತಿದಾರರ ಆಸ್ತಿಗಳು ಮತ್ತು ಹೆಚ್ಚುವರಿಯಾಗಿ 33 ಆಸ್ತಿಗಳನ್ನು ಸೇರಿಸಿ ಒಟ್ಟಾರೆ 50 ಬೇಬಾಕಿ ಆಸ್ತಿದಾರರ ಆಸ್ತಿಗಳನ್ನು ದಿನಾಂಕ 27.02.2026 ರಂದು ಕರೆಯಲಾಗಿದ್ದು, ಇದರಲ್ಲಿಯೂ ಸಹ 14 ಬೇ-ಬಾಕಿದಾರರು (ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ) ಉಳಿಸಿಕೊಂಡಿರುವ ಆಸ್ತಿದಾರರ ಆಸ್ತಿ ಹರಾಜು ಪ್ರಕ್ರಿಯೆಗೂ ಮುನ್ನವೇ ತಮ್ಮ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಿರುತ್ತಾರೆ. ಮುಂದುವರಿದಂತೆ ಇನ್ನೂ 50 ಅತೀ ಹೆಚ್ಚು ಬೇಬಾಕಿ ಉಳಿಸಿಕೊಂಡಿರುವ ಹೆಚ್ಚುವರಿ ಬಾಕಿದಾರರ ಆಸ್ತಿಗಳನ್ನು ಜಿ.ಬಿ.ಎ ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿರುತ್ತದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್ ಅವರು ತಿಳಿಸಿದ್ದಾರೆ.
ಮುಂದುವರಿದು, ದಿನಾಂಕ: 13.03.2026 ರಂದು ಬೆಳಿಗ್ಗೆ 11.00 ಗಂಟೆಗೆ ಬೇಗೂರು ಮುಖ್ಯ ರಸ್ತೆಯಲ್ಲಿರುವ ಬೊಮ್ಮನಹಳ್ಳಿ ವಲಯದ ಒಂದನೇ ಮಹಡಿಯಲ್ಲಿರುವ ಸಂಭಾಗಣದಲ್ಲಿ ವಲಯ ಜಂಟಿ ಆಯುಕ್ತರು (ಬೊಮ್ಮನಹಳ್ಳಿ ವಲಯ) ಅವರ ಅಧ್ಯಕ್ಷತೆಯಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ 50 ಆಸ್ತಿತೆರಿಗೆ ಸುಸ್ತಿದಾರರೆಂದು ಗುರುತಿಸಲಾಗಿರುವ ಸ್ವತ್ತುಗಳಿಂದ ಹರಾಜಿನ ಮೂಲಕ ಬೇಬಾಕಿ ಆಸ್ತಿತೆರಿಗೆ ವಸೂಲಾತಿ ಮಾಡಲಾಗುವುದು. ಮತ್ತು ಅಂತಹ ಸ್ವತ್ತುಗಳ ಮಾಹಿತಿಯನ್ನು ಅದೇ ಕಟ್ಟಡದಲ್ಲಿನ ವಲಯ ಜಂಟಿ ಆಯುಕ್ತರು (ಬೊಮ್ಮನಹಳ್ಳಿ ವಲಯ) ಕಛೇರಿಯ ಸೂಚನಾ ಫಲಕದಲ್ಲಿ ಪ್ರಚಾರ ಮಾಡಲಾಗಿತ್ತು.
ಹರಾಜು ಪ್ರಕ್ರಿಯೆಯ ಮುನ್ನ ಸ್ವತ್ತಿಗೆ ಸಂಬಂಧಿಸಿದಂತೆ ಸಂಪೂರ್ಣ ಆಸ್ತಿತೆರಿಗೆ ಪಾವತಿಸಿದಲ್ಲಿ ಅಂತಹ ಆಸ್ತಿಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications