ಪ್ರಧಾನಿ ಮೋದಿ 12 ವರ್ಷಗಳಿಂದ ಏಕೆ ಪ್ರೆಸ್‌ಮೀಟ್ ನಡೆಸಿಲ್ಲ? ಸಂಸದ ತೇಜಸ್ವಿ ಸೂರ್ಯ ನೀಡಿದ ಉತ್ತರ ವೈರಲ್
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ಒಂದೂ ಜಂಟಿ ಅಥವಾ ಮುಕ್ತ ಪತ್ರಿಕಾಗೋಷ್ಠಿ ನಡೆಸದಿರುವ ಕುರಿತು ಕೇಳಲಾದ ಪ್ರಶ್ನೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ನೀಡಿದ ಸಮರ್ಥನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಜೈನ್ ಕಾಲೇಜಿನಲ್ಲಿ ವಿದ್ಯಾರ್ಥಿ ಕೇಳಿದ ಪ್ರಶ್ನೆ ಏನು?
ಇತ್ತೀಚೆಗೆ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಜೈನ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅತಿಥಿಯಾಗು ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬರು, "ನಾವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದರೂ, ನಮ್ಮ ಗೌರವಾನ್ವಿತ ಪ್ರಧಾನಿಯವರು ಕಳೆದ 10 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಒಂದೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ನಿಮ್ಮ ನಿಲುವೇನು?" ಎಂದು ಪ್ರಶ್ನೆ ಕೇಳಿದರು.

"ಈಗೆಲ್ಲ ಪತ್ರಿಕಾಗೋಷ್ಠಿ ಅನಗತ್ಯ" ಎಂದ ತೇಜಸ್ವಿ
ವಿದ್ಯಾರ್ಥಿಯ ಪ್ರಶ್ನೆಯನ್ನು "ಉತ್ತಮ ಆರಂಭ" ಎಂದು ಶ್ಲಾಘಿಸಿದ ತೇಜಸ್ವಿ ಸೂರ್ಯ, ಇಂದಿನ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳ ಪ್ರಸ್ತುತತೆ ಕಡಿಮೆಯಾಗಿದೆ ಎಂದರು. "ಇಂದಿನ 24x7 ಸೋಷಿಯಲ್ ಮೀಡಿಯಾ ಯುಗದಲ್ಲಿ ನಾಯಕರು ನೇರವಾಗಿ ಮತದಾರರೊಂದಿಗೆ ಸಂವಹನ ನಡೆಸಬಹುದು. ಭಾಷಣಗಳ ಕಾಲ ಈಗ ಮುಗಿದುಹೋಗಿದೆ. ಪತ್ರಿಕಾಗೋಷ್ಠಿ ಎಂಬುದು ನಾಯಕರು ಮತ್ತು ಸಾರ್ವಜನಿಕರ ನಡುವೆ ಒಂದು ರೀತಿಯ ತಡೆಗೋಡೆಯನ್ನು ಸೃಷ್ಟಿಸುತ್ತದೆ. ಹಾಗಾಗಿ ಇಂದಿನ ದಿನಗಳಲ್ಲಿ ಅದು ಅನಗತ್ಯ" ಎಂದು ಸೂರ್ಯ ಉತ್ತರಿಸಿದರು. ಅಲ್ಲದೆ, "ಪ್ರಧಾನಿಯವರು ಮಾಧ್ಯಮಗಳ ಜೊತೆ ಮಾತನಾಡುತ್ತಿಲ್ಲ ಎಂದಲ್ಲ, ಅವರು ಪ್ರತಿದಿನ ಬೇರೆ ಬೇರೆ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾ ಚಾನೆಲ್‌ಗಳ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ" ಎಂದೂ ಸಮರ್ಥಿಸಿಕೊಂಡರು.
ವಿರೋಧ ಪಕ್ಷಗಳಿಂದ ಲೇವಡಿ
ತೇಜಸ್ವಿ ಸೂರ್ಯ ಅವರ ಈ ಉತ್ತರದ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷಗಳ ನಾಯಕರು ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಈ ವಿಡಿಯೋವನ್ನು ಹಂಚಿಕೊಂಡು, "ಜೆನ್-ಝಿ (Gen Z) ತಲೆಮಾರಿನ ವಿದ್ಯಾರ್ಥಿ ತೇಜಸ್ವಿ ಸೂರ್ಯಗೆ ಸರಿಯಾಗಿ ಮಣ್ಣು ಮುಕ್ಕಿಸಿದ್ದಾನೆ" ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯೆ ರುಚಿರಾ ಚತುರ್ವೇದಿ ಕೂಡ ಪ್ರತಿಕ್ರಿಯಿಸಿ, "ಪ್ರಧಾನಿ ಪ್ರೆಸ್ ಕಾನ್ಫರೆನ್ಸ್ ನಡೆಸದ ಬಗ್ಗೆ ಪ್ರಶ್ನಿಸಿದರೆ ತೇಜಸ್ವಿ ಸೂರ್ಯ 'ಅಬ್ಬಾ ಡಬ್ಬಾ ಜಬ್ಬಾ' (ಅಸ್ಪಷ್ಟ ಉತ್ತರ) ಎಂದು ಹೇಳುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
Gen Z stumped cerelac baby Tejasvi Surya!
— Supriya Shrinate (@SupriyaShrinate) June 20, 2026
A simple question was asked: “Why is our Honorable PM not attending any Press conferences in over 10 years”
🤐🤐🤐🤐 pic.twitter.com/Dfx5FSC0lE
ಚರ್ಚೆಯಲ್ಲೇ ಉಳಿದಿರುವ 'ಪ್ರೆಸ್ ಕಾನ್ಫರೆನ್ಸ್' ವಿಚಾರ
ಈ ಟೀಕೆಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಇದುವರೆಗೆ ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕಾಲೇಜು ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಇಂದಿನ ಯುವ ಪೀಳಿಗೆಯಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡುವ ಅದ್ಭುತ ಮಹತ್ವಾಕಾಂಕ್ಷೆ ಮತ್ತು ಸಂಕಲ್ಪವಿದೆ ಎಂದು ಬರೆದುಕೊಂಡಿದ್ದಾರೆ. ಮೇ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ನರೇಂದ್ರ ಮೋದಿ ಅವರು ಇದುವರೆಗೆ ಯಾವುದೇ ಔಪಚಾರಿಕ ಮುಕ್ತ ಪತ್ರಿಕಾಗೋಷ್ಠಿಯನ್ನು ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂಬುದು ಸದಾ ರಾಜಕೀಯ ಚರ್ಚೆಯ ವಿಷಯವಾಗಿದೆ. ಅವರು ವಿವಿಧ ದೇಶಿ ಮತ್ತು ವಿದೇಶಿ ಮಾಧ್ಯಮ ಸಂಸ್ಥೆಗಳಿಗೆ ಪ್ರತ್ಯೇಕ ಸಂದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.













Click it and Unblock the Notifications