ಹೇಗಿದ್ದ ಡಿಬಾಸ್ ಹೇಗಾಗಿದ್ದಾರೆ? ಜೈಲಲ್ಲಿ ದರ್ಶನ್ ಯೋಗಾಭ್ಯಾಸದ ವೈರಲ್ ಫೋಟೋ ನೋಡಿ ಅಭಿಮಾನಿಗಳು ಶಾಕ್
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು. ಅಚ್ಚರಿ ಎಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿ ಸದ್ಯ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಕೂಡ ಈ ಸಂದರ್ಭದಲ್ಲಿ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆರಂಭದಲ್ಲಿ ಹಿಂದೇಟು ಹಾಕಿದ್ದ ದರ್ಶನ್
ಮಾಧ್ಯಮಗಳ ವರದಿ ಪ್ರಕಾರ, ಜೈಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ ದರ್ಶನ್ ಆರಂಭದಲ್ಲಿ ಹಿಂದೇಟು ಹಾಕಿದ್ದರು. ತಮಗೆ ತೀವ್ರ ಬೆನ್ನು ನೋವು ಇರುವುದಾಗಿ ಜೈಲು ಅಧಿಕಾರಿಗಳ ಮುಂದೆ ಕಾರಣ ನೀಡಿದ್ದರು ಎನ್ನಲಾಗಿದೆ. ಆದರೆ, ಸ್ಥಳದಲ್ಲಿದ್ದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ ಅವರು ದರ್ಶನ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. "ಬೆನ್ನು ನೋವಿನ ನಿವಾರಣೆಗೆ ಯೋಗವೇ ಅತ್ಯುತ್ತಮವಾದ ಮದ್ದು" ಎಂದು ತಿಳಿಹೇಳಿ ಪ್ರೋತ್ಸಾಹಿಸಿದರು. ಅಧಿಕಾರಿಗಳ ಮಾತಿಗೆ ಒಪ್ಪಿದ ದರ್ಶನ್, ನಂತರ ಯೋಗ ಮಾಡಲು ಮುಂದಾದರು ಎಂದು ತಿಳಿದುಬಂದಿದೆ.

ಬ್ಯಾರಕ್ ಕಾರಿಡಾರ್‌ನಲ್ಲೇ ಯೋಗ
ಇತರ ಕೈದಿಗಳಿದ್ದ ಸಾಮೂಹಿಕ ಯೋಗದ ವೇದಿಕೆಗೆ ಬರಲು ಇಷ್ಟಪಡದ ದರ್ಶನ್, ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲಿಯೇ ಉಳಿದ ಸಹ-ಆರೋಪಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಶಿಬಿರದಲ್ಲಿ ದರ್ಶನ್ ಅವರು ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಹಾಗೂ ಶವಾಸನ ಭಂಗಿಗಳನ್ನು ಅಭ್ಯಾಸ ಮಾಡಿದರು ಎಂದು ಹೇಳಲಾಗುತ್ತಿದೆ.
ನಟನ ಸ್ಥಿತಿ ನೋಡಿ ಅಭಿಮಾನಿಗಳಿಗೆ ಬೇಸರ
ಬೆಳ್ಳಿಪರದೆಯ ಮೇಲೆ ಸದಾ ಅಬ್ಬರಿಸುತ್ತಿದ್ದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ ಇತ್ತೀಚಿನ ಜೈಲಿನ ಚಿತ್ರಗಳು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿವೆ. ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ದರ್ಶನ್ ತೀವ್ರ ನಿಶ್ಯಕ್ತಿಯಿಂದ ಬಳಲಿದಂತೆ ಕಾಣುತ್ತಿದ್ದು, ಮುಖದ ತೇಜಸ್ಸು ಮಾಯವಾಗಿ, ದೇಹ ತೀರಾ ಸೊರಗಿದಂತೆ ಕಾಣುತ್ತಿದೆ.
ಜೈಲಿನ ಕಠಿಣ ವಾತಾವರಣ ಹಾಗೂ ಮಾನಸಿಕ ಒತ್ತಡದಿಂದ ದರ್ಶನ್ ಸಂಪೂರ್ಣ ದಣಿದಿದ್ದಾರೆ. ಸಿನಿಮಾ ರಂಗದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿ ರಾಜನಂತೆ ಮೆರೆದಿದ್ದ ನಟ, ಇಂದು ಜೈಲಿನಲ್ಲಿ ಇಂತಹ ಸ್ಥಿತಿ ಅನುಭವಿಸುತ್ತಿರುವುದನ್ನು ಕಂಡು, "ಹೇಗಿದ್ದ ನಮ್ಮ ಡಿ-ಬಾಸ್, ಈಗ ಹೇಗಾಗಿದ್ದಾರೆ" ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಇನ್ನೊಂದೆಡೆ, ಇದೇ ಪ್ರಕರಣದ ಎ-1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಜೈಲಿನ ಮಹಿಳಾ ಕೈದಿಗಳ ಸಾಲಿನಲ್ಲಿ ಕುಳಿತು ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದರು. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿರುವ ಈ ಇಬ್ಬರ ಯೋಗಾಭ್ಯಾಸದ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ವೈರಲ್ ಆಗಿವೆ.













Click it and Unblock the Notifications