ಕೇವಲ 5 ನಿಮಿಷ ವಿಡಿಯೋ ಕಾಲ್‌ನಲ್ಲಿ ನೋಡಿ 36 ಲಕ್ಷ ಕೊಟ್ಟು ಮದುವೆಯಾದ: 9 ದಿನಕ್ಕೇ 'ಸಾಕಪ್ಪಾ ಸಾಕು' ಎಂದ ಪತಿರಾಯ

ಚೀನಾದಲ್ಲಿ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. 32 ವರ್ಷದ ಯುವಕನೊಬ್ಬ ಮಹಿಳೆಯೊಬ್ಬಳನ್ನು ಕೇವಲ 5 ನಿಮಿಷದ ವಿಡಿಯೋ ಕಾಲ್‌ನಲ್ಲಿ ನೋಡಿ ಮದುವೆಯಾಗಲು ಬರೋಬ್ಬರಿ 36 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ಆದರೆ, ಮದುವೆಯಾದ ಕೇವಲ 9 ದಿನಗಳಲ್ಲೇ ಈ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಟ್ಟು ವಿಚ್ಛೇದನಕ್ಕೆ ಮುಂದಾಗಿದ್ದಾನೆ.

ಚೀನಾದ ಝೆಜಿಯಾಂಗ್ ಪ್ರಾಂತ್ಯದ 'ಗು' ಎಂಬ 32 ವರ್ಷದ ಯುವಕನೇ ಈ ವಿವಾಹಕ್ಕೆ ಮುಂದಾದವನು. ಈತ ತನ್ನ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ಹೀಗಾಗಿ, ಪೋಷಕರು ಮದುವೆಗೆ ತೀವ್ರ ಒತ್ತಡ ಹೇರುತ್ತಿದ್ದರು. ಈ ಒತ್ತಡಕ್ಕೆ ಮಣಿದು ಯುವಕ, ತರಾತುರಿಯಲ್ಲಿ ಯಾವುದೇ ಪರಿಚಯವಿಲ್ಲದ ಮಹಿಳೆಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದ.

Chinese Man

ಮ್ಯಾಚ್ ಮೇಕಿಂಗ್ ಏಜೆನ್ಸಿಯ ಭರವಸೆ

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಯುವಕ ಮದುವೆಗಾಗಿ ಮೊದಲು ಸ್ಥಳೀಯ ಮ್ಯಾಚ್ ಮೇಕಿಂಗ್ ಕೇಂದ್ರಕ್ಕೆ 200 ಯುವಾನ್ ಅಂದರೆ ಸುಮಾರು 2,700 ರೂಪಾಯಿ ನೀಡಿ ನೋಂದಾಯಿಸಿಕೊಂಡಿದ್ದ. ಏಜೆನ್ಸಿಯವರು ಮೂವರು ಮಹಿಳೆಯರನ್ನು ಪರಿಚಯಿಸಿದರೂ, ಯಾರೂ ಇತನ ಬಗ್ಗೆ ಆಸಕ್ತಿ ತೋರಲಿಲ್ಲ. ಆಗ ಏಜೆನ್ಸಿಯವರು, ಬೇರೆ ಪ್ರಾಂತ್ಯದ ವಧುವನ್ನು ಹುಡುಕುವಂತೆ ಸಲಹೆ ನೀಡಿ, ಕೇವಲ 2 ದಿನಗಳಲ್ಲಿ ಮದುವೆ ಮಾಡಿಸುವುದಾಗಿ ಭರವಸೆ ನೀಡಿದರು. ಏಪ್ರಿಲ್ ತಿಂಗಳಲ್ಲಿ, ಶಾಂಕ್ಸಿ ಪ್ರಾಂತ್ಯದ 30 ವರ್ಷದ ಮಹಿಳೆಯ ಪ್ರೊಫೈಲ್ ಅನ್ನು ಯುವಕನಿಗೆ ಕಳುಹಿಸಲಾಯಿತು.

ಆಕೆಗೆ ಯಾವುದೇ ಸಾಲಗಳಿಲ್ಲ, ಕ್ರಿಮಿನಲ್ ಹಿನ್ನೆಲೆಯಿಲ್ಲ ಮತ್ತು ಗಂಭೀರ ಕಾಯಿಲೆಗಳಿಲ್ಲ ಎಂದು ಏಜೆನ್ಸಿ ನಂಬಿಸಿತ್ತು. ಕೇವಲ 5 ನಿಮಿಷದ ವಿಡಿಯೋ ಕಾಲ್ ಮದುವೆ ಮಾತುಕತೆ ನಡೆಸಿ, ಇಬ್ಬರೂ ಈ ವಿವಾಹಕ್ಕೆ ಸಮ್ಮತಿಸಿದರು.

36 ಲಕ್ಷ ರೂ. ಖರ್ಚು ಮಾಡಿ ಫ್ಲಾಶ್ ಮದುವೆ

ಯುವಕ ಮಹಿಳೆಯ ಕುಟುಂಬವನ್ನು ಭೇಟಿಯಾಗಲಿಲ್ಲ ಅಥವಾ ಮುಖಾಮುಖಿ ಭೇಟಿಯೂ ಆಗಲಿಲ್ಲ. ಮದುವೆಗೂ ಮುನ್ನ ಮಹಿಳೆಯ ಕ್ರೆಡಿಟ್ ಹಿಸ್ಟರಿ ಮತ್ತು ವೈದ್ಯಕೀಯ ವರದಿಗಳನ್ನು ನೀಡುವುದಾಗಿ ಮ್ಯಾಚ್ ಮೇಕಿಂಗ್ ಸಂಸ್ಥೆ ಹೇಳಿತ್ತು. ಇದನ್ನು ಕುರುಡಾಗಿ ನಂಬಿದ ಯುವಕ, ವಧುವಿನ ಬೆಲೆಯಾಗಿ 1 ಲಕ್ಷ ಯುವಾನ್ ಅಂದರೆ ಸುಮಾರು 13.9 ಲಕ್ಷ ರೂ. ಮತ್ತು ಮ್ಯಾಚ್ ಮೇಕಿಂಗ್ ಶುಲ್ಕವಾಗಿ 1.6 ಲಕ್ಷ ಯುವಾನ್ (ಸುಮಾರು 22.2 ಲಕ್ಷ ರೂ.) ಸೇರಿ ಒಟ್ಟು 2.65 ಲಕ್ಷ ಯುವಾನ್ (ಸುಮಾರು 36 ಲಕ್ಷ ರೂ.) ಪಾವತಿಸಿದ. ಮೂರೇ ದಿನಗಳಲ್ಲಿ ಮದುವೆ ನೋಂದಣಿಯೂ ಮುಗಿಯಿತು.

ಮದುವೆಯಾದ 9 ದಿನದಲ್ಲೇ ವಿಚ್ಛೇದನ ಪ್ರಕರಣ

ಮದುವೆಯಾದ ಕೆಲವೇ ದಿನಗಳಲ್ಲಿ ಅಸಲಿ ಸತ್ಯಗಳು ಹೊರಬರಲಾರಂಭಿಸಿದವು. ಏಜೆನ್ಸಿ ಹೇಳಿದಂತೆ ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ. ಯುವಕ ತನ್ನ ಪತ್ನಿಯನ್ನು ಬ್ಯಾಂಕ್‌ಗೆ ಕರೆದೊಯ್ದು ಕ್ರೆಡಿಟ್ ರಿಪೋರ್ಟ್ ಪರಿಶೀಲಿಸಿದಾಗ, ಆಕೆಯ ಹೆಸರಿನಲ್ಲಿ 1 ಲಕ್ಷ ಯುವಾನ್ ಸಾಲ ಇರುವುದು ಪತ್ತೆಯಾಯಿತು. ಆದರೆ ಆಕೆ, ಇದು ತನ್ನ ಮಾಜಿ ಪ್ರಿಯಕರನ ಸಾಲ ಎಂದು ಸಬೂಬು ನೀಡಿದಳು.

ಇದಲ್ಲದೆ, ಆಕೆಯ ಮೊಬೈಲ್ ಪೇಮೆಂಟ್ ಖಾತೆಯಲ್ಲಿ ಬೇರೆಯದೇ ಹೆಸರಿತ್ತು. ಜೊತೆಗೆ ತನಗೆ ಲಿವರ್ ಸಮಸ್ಯೆ ಇದೆ ಎಂದು ಆಕೆ ಬಾಯಿಬಿಟ್ಟಳು. ಈ ಎಲ್ಲಾ ಸುಳ್ಳುಗಳಿಂದ ಬೇಸತ್ತ ಯುವಕ, ಮದುವೆಯಾದ ಕೇವಲ 9 ದಿನಗಳಲ್ಲೇ ವಿಚ್ಛೇದನ ಕೇಳಿದ.

ನ್ಯಾಯಾಲಯದ ಮೆಟ್ಟಿಲೇರಿದ ವಿವಾದ

ಆರಂಭದಲ್ಲಿ ವಿಚ್ಛೇದನಕ್ಕೆ ಒಪ್ಪಿದ್ದ ಮಹಿಳೆ, ನಂತರ ತನ್ನ ನಿರ್ಧಾರ ಬದಲಿಸಿ ಯುವಕನ ವಿರುದ್ಧವೇ ಕೇಸ್ ದಾಖಲಿಸಿದಳು. ಈ ಮದುವೆಯಿಂದ ತನಗೆ ಖಿನ್ನತೆ ಉಂಟಾಗಿದೆ ಎಂದು ವೈದ್ಯಕೀಯ ವರದಿ ನೀಡಿ, 50,000 ಯುವಾನ್ ಅಂದರೆ ಸುಮಾರು 7 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾಳೆ. ತಾನು ಮೇಕಪ್ ಮಾಡಿಕೊಳ್ಳಬೇಕು, ಮನೆಗೆಲಸ ಮಾಡಬೇಕು ಮತ್ತು ಕೆಲಸ ಹುಡುಕಬೇಕು ಎಂದು ಆತ ಒತ್ತಾಯಿಸುತ್ತಿದ್ದ ಎಂದು ಆಕೆ ಆರೋಪಿಸಿದ್ದಾಳೆ.

ಇತ್ತ ಯುವಕ, ತನಗೆ ವಂಚಿಸಿದ ಮ್ಯಾಚ್ ಮೇಕಿಂಗ್ ಏಜೆನ್ಸಿ ವಿರುದ್ಧ ಕೇಸ್ ಹಾಕಿ, ತನ್ನ 1.6 ಲಕ್ಷ ಯುವಾನ್ ಶುಲ್ಕವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾನೆ. ಆದರೆ, ತಾವು ಜೋಡಿಯನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ, ಹಣ ವಾಪಸ್ ಪಡೆಯಲು ಇಬ್ಬರೂ ಸೇರಿ ನಾಟಕವಾಡುತ್ತಿದ್ದಾರೆ ಎಂದು ಏಜೆನ್ಸಿ ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+