ಟಾಕ್ಸಿಕ್ ಸಿನಿಮಾ ರಿಲೀಸ್: ಪಕ್ಕಾ ಡೇಟ್ ಅನೌನ್ಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್
'ಕೆಜಿಎಫ್-2' ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದರೂ, ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇತ್ತು. ಅಂತರರಾಷ್ಟ್ರೀಯ ಮಟ್ಟದ ವಿತರಣೆ ಹಾಗೂ ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಗಳ ಕಾರಣದಿಂದಾಗಿ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' (Toxic: A Fairytale for Grown-Ups) ಚಿತ್ರದ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ಹೊರಬಿದ್ದಿದೆ.
ಸ್ವತಃ ನಟ ಯಶ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ಬಿಗ್ ಅಪ್ಡೇಟ್ ನೀಡಿದ್ದಾರೆ. ಹೊಸ ಪೋಸ್ಟರ್ ಹಂಚಿಕೊಂಡಿರುವ ಯಶ್, ಅಪ್ಪಂದಿರ ದಿನದಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಆಗಸ್ಟ್ 26ರಂದು ಟಾಕ್ಸಿಕ್ ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ತಂದೆ-ಮಗನ ನಡುವಿನ ಭಿನ್ನವಾದ ಸಂಬಂಧ, ಅಧಿಕಾರದ ಸಂಘರ್ಷ ಹಾಗೂ ಎಮೋಷನಲ್ ಎಲಿಮೆಂಟ್‌ಗಳು ಇರಲಿವೆ ಎಂಬ ಸುಳಿವು ನೀಡಿದ್ದಾರೆ.

ಹೊಸ ಪೋಸ್ಟರ್‌ನಲ್ಲಿ ಡಬಲ್ ಧಮಾಕಾ
ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಯಶ್ ಅವರು 'ರಾಯಾ' (Raya) ಮತ್ತು 'ಟಿಕೆಟ್' (Ticket) ಎಂಬ ವಿಭಿನ್ನ ಶೇಡ್‌ಗಳ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಡಾರ್ಕ್ ಹಾಗೂ ಮಾಸ್ ಲುಕ್‌ನಲ್ಲಿ ಯಶ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 26ರಂದು ಚಿತ್ರ ಜಾಗತಿಕವಾಗಿ ತೆರೆಕಾಣುತ್ತಿದೆ. ಈ ಮಿಡ್-ವೀಕ್ (Mid-week) ರಿಲೀಸ್ ತಂತ್ರ ಚಿತ್ರಕ್ಕೆ ವರವಾಗುವ ಸಾಧ್ಯತೆ ಇದೆ. ಏಕೆಂದರೆ ಅದರ ಬೆನ್ನಲ್ಲೇ ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಸಾಲು ಸಾಲು ರಜೆಗಳಿರುವುದರಿಂದ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಕಲೆಕ್ಷನ್ ಮಾಡಲು ಸೂಕ್ತ ಸಮಯವನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
Honour Thy Father...#Toxic In Cinemas Worldwide from 26-08-2026#ToxicTheMovie#Nayanthara @advani_kiara #TaraSutaria@humasqureshi @rukminitweets #GeetuMohandas @VishalMMishra #RajeevRavi #UjwalKulkarni #TPAbid #MohanBKere #SandeepSadashiva #PrashantDileepHardikar… pic.twitter.com/oAlW0JdldO
— Yash (@TheNameIsYash) June 21, 2026
ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ಕನ್ನಡದ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾದಲ್ಲಿ ರವಿ ಬಸ್ರೂರ್ ಮ್ಯೂಸಿಕ್ ಮೋಡಿ ಮಾಡಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಯಶ್ ಬೆಳ್ಳಿಪರದೆಗೆ ಮರಳುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದು, ಇಂದಿನ ಅಧಿಕೃತ ಪ್ರಕಟಣೆಯಿಂದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಪದೇ ಪದೇ ಪೋಸ್ಟ್‌ಪೋನ್ ಆಗಿದ್ದೇಕೆ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ, ಈ ಚಿತ್ರದ ರಿಲೀಸ್ ಡೇಟ್ ಒಂದಲ್ಲ ಎರಡಲ್ಲ, ಹಲವು ಬಾರಿ ಮುಂದೂಡಲ್ಪಟ್ಟು ಕೊನೆಗೂ ಈಗ ಆಗಸ್ಟ್ 26ಕ್ಕೆ ಫಿಕ್ಸ್ ಆಗಿದೆ. 'ಟಾಕ್ಸಿಕ್' ಸಿನಿಮಾ ಬಹಳ ಹಿಂದೆಯೇ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಅಂತರರಾಷ್ಟ್ರೀಯ ಮಟ್ಟದ ಶೂಟಿಂಗ್ ಶೆಡ್ಯೂಲ್‌ಗಳು, ಚಿತ್ರದ ಭಾರಿ ಬಜೆಟ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ವಿಳಂಬದಿಂದಾಗಿ ಬಿಡುಗಡೆ ದಿನಾಂಕ ಪದೇ ಪದೇ ಮುಂದೂಡಲ್ಪಡುತ್ತಾ ಬಂದಿತ್ತು. ನಂತರ ಜಾಗತಿಕ ಮಟ್ಟದ ವಿತರಣಾ ಹಕ್ಕುಗಳ ವ್ಯವಹಾರ ಕುದುರಿಸುವುದು ತಡವಾದ ಕಾರಣ ಚಿತ್ರತಂಡ ಅನಿವಾರ್ಯವಾಗಿ ಬಿಡುಗಡೆ ಮುಂದೂಡುತ್ತಲೇ ಬರಬೇಕಾಯಿತು. ಇದು ಯಶ್ ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿಸಿತ್ತು.
'ಧುರಂಧರ್-2' ಚಿತ್ರದೊಂದಿಗಿನ ಪೈಪೋಟಿ ತಪ್ಪಿತು
'ಟಾಕ್ಸಿಕ್' ಮತ್ತೊಂದು ಬಹುನಿರೀಕ್ಷಿತ ಸಿನಿಮಾವಾದ 'ಧುರಂಧರ್-2' ಬಿಡುಗಡೆಯಾಗುವ ದಿನವೇ ತೆರೆಗೆ ಬರಲು ಸಜ್ಜಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸಂಘರ್ಷ ಏರ್ಪಡುವ ಎಲ್ಲ ಲಕ್ಷಣಗಳು ಕಾಣಿಸಿದ್ದವು. ಥಿಯೇಟರ್‌ಗಳ ಹಂಚಿಕೆ ಹಾಗೂ ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಯಲಿದೆ ಎಂದೇ ಹೇಳಲಾಗಿತ್ತು. ಈಗ 'ಟಾಕ್ಸಿಕ್' ತಂಡವು ಬಿಡುಗಡೆಯನ್ನು ಆಗಸ್ಟ್ 26ಕ್ಕೆ ಅಧಿಕೃತವಾಗಿ ನಿಗದಿಪಡಿಸಿದೆ. ಈಗ ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ಒತ್ತಡವಿಲ್ಲದೆ ಕಲೆಕ್ಷನ್ ಮಾಡಲು ಸುಲಭವಾಗಲಿದೆ. ಚಿತ್ರರಂಗದ ದೃಷ್ಟಿಯಿಂದಲೂ ಇದು ಒಳ್ಳೆಯ ಬೆಳವಣಿಗೆ ಎಂದು ವಿತರಕರು ಅಭಿಪ್ರಾಯಪಟ್ಟಿದ್ದಾರೆ.













Click it and Unblock the Notifications