ಸ್ಮೃತಿ ಮಂಧಾನ, ಶಫಾಲಿ ವರ್ಮಾಗೆ ಶಿಖಾ ಪಾಂಡೆ ಎಚ್ಚರಿಕೆ ಸಂದೇಶ
Women's T20 World Cup 2026: ಮಹಿಳಾ ಟಿ20 ವಿಶ್ವಕಪ್ 2026 ಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ಭಾನುವಾರ (ಜೂನ್ 21) ಕೆಲವೇ ಕ್ಷಣಗಳಲ್ಲಿ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಹೈವೊಲ್ಟೇಜ್ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಬಗ್ಗೆ ಮಾಜಿ ವೇಗಿ ಶಿಖಾ ಪಾಂಡೆ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಗ್ರೂಪ್ 'ಎ'ನ ಪ್ರಮುಖ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ವೇಗಿ ಶಿಖಾ ಪಾಂಡೆ ಅವರು ಮಹತ್ವದ ಭವಿಷ್ಯ ನುಡಿದಿದ್ದಾರೆ. ಭಾರತ ತಂಡದ ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂಧಾನಾ ಮತ್ತು ಶಫಾಲಿ ವರ್ಮಾ ಅವರಿಗೆ ಈ ಪಂದ್ಯವು ಟೂರ್ನಿಯಲ್ಲೇ ಅತ್ಯಂತ ಕಠಿಣ ಪರೀಕ್ಷೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಖಾ ಪಾಂಡೆ ಹೇಳಿದ್ದೇನು?
ಜಿಯೋಹಾಟ್‌ಸ್ಟಾರ್‌ನ 'ಗೇಮ್ ಪ್ಲಾನ್' ಕಾರ್ಯಕ್ರಮದಲ್ಲಿ ಮಾತನಾಡಿದ ಶಿಖಾ ಪಾಂಡೆ ಅವರು 'ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಅತ್ಯುತ್ತಮ ಮತ್ತು ಬಲಿಷ್ಠ ವೇಗದ ಬೌಲಿಂಗ್ ವಿಭಾಗವನ್ನು ಹೊಂದಿದೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಆಲ್‌ರೌಂಡರ್ ಮರಿಜಾನ್ನೆ ಕಪ್ ಅವರ ಜೋಡಿಯು ಅತ್ಯಂತ ಅಪಾಯಕಾರಿಯಾಗಿದೆ.' ಎಂದು ಹೇಳಿದ್ದಾರೆ.
ಮಂಧಾನಾ ಮತ್ತು ಶಫಾಲಿಗೆ ಮಹತ್ವದ ಸಲಹೆ
'ಸ್ಮೃತಿ ಮಂಧಾನಾ ಅವರು ಈ ಹಿಂದೆ ಮೈದಾನದಲ್ಲಿ ಬಿಗ್ ಮಾಡಲು ಪ್ರಯತ್ನಿಸಿ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ ಔಟ್ ಆಗಿರುವ ಇತಿಹಾಸವಿದೆ. ಆದ್ದರಿಂದ ಇವರ ವಿರುದ್ಧ ಅವರು ಅತ್ಯಂತ ಜಾಗರೂಕರಾಗಿರಬೇಕು,' ಎಂದು ಶಿಖಾ ಪಾಂಡೆ ಅವರು ಎಚ್ಚರಿಸಿದ್ದಾರೆ. 'ಮತ್ತೊಂದೆಡೆ ಶಫಾಲಿ ವರ್ಮಾ ಮತ್ತು ಶಬ್ನಿಮ್ ಇಸ್ಮಾಯಿಲ್ ನಡುವಿನ ಸ್ಪರ್ಧೆಯು ರೋಚಕವಾಗಿರಲಿದೆ. ಏಕೆಂದರೆ ಶಫಾಲಿ ಸವಾಲುಗಳನ್ನು ಇಷ್ಟಪಡುತ್ತಾರೆ ಮತ್ತು ಇಸ್ಮಾಯಿಲ್ ಬೌನ್ಸರ್‌ಗಳನ್ನು ಎಸೆಯುವುದರಲ್ಲಿ ಹೆಸರುವಾಸಿ,' ಎಂದು ಹೇಳಿದ್ದಾರೆ.
ಟಿ20 ಬ್ಯಾಟರ್ ಆಗಿ ಮಂಧಾನಾ ಸ್ಫೋಟಕ ಆಟ
ಸ್ಮೃತಿ ಮಂಧಾನಾ ಅವರ ಬ್ಯಾಟಿಂಗ್ ಶೈಲಿಯಲ್ಲಿ ಆಗಿರುವ ಬದಲಾವಣೆಯನ್ನು ಪಾಂಡೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಈ ಹಿಂದೆ ಕೇವಲ ಟೈಮಿಂಗ್ ಆಧಾರದ ಮೇಲೆ ಆಡುತ್ತಿದ್ದ ಮಂಧಾನಾ ಈಗ ತಮ್ಮ ಪವರ್-ಹಿಟ್ಟಿಂಗ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಅವರು ಮಿಡ್-ವಿಕೆಟ್ ಮೂಲಕ ಆಡಿದ ಶಾಟ್‌ಗಳೇ ಇದಕ್ಕೆ ಸಾಕ್ಷಿ. ಈಗ ಅವರು ಸ್ವೀಪ್ ಶಾಟ್‌ಗಳನ್ನು ಹಾಗೂ ಡೀಪ್ ಸ್ಕ್ವೇರ್ ಲೆಗ್ ದಿಕ್ಕಿನಲ್ಲಿಯೂ ರನ್ ಗಳಿಸುತ್ತಿದ್ದು, ಮೈದಾನದ ಎರಡೂ ಬದಿಗಳಲ್ಲಿ ಪ್ರಾಬಲ್ಯ ಸಾಧಿಸಬಲ್ಲ ಪರಿಪೂರ್ಣ ಟಿ20 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ,' ಎಂದು ಹೇಳಿದ್ದಾರೆ.
ವೇದಾ ಕೃಷ್ಣಮೂರ್ತಿ ಹೇಳಿದ್ದೇನು?
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಟೀಮ್ ಇಂಡಿಯಾ ಮಾಜಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಅವರನ್ನು ಬೆಂಬಲಿಸಿದ್ದಾರೆ. 'ಕೇವಲ ಕೆಲವು ಪಂದ್ಯಗಳ ವೈಫಲ್ಯದಿಂದ ಜೆಮಿಮಾ ಅವರ ಸಾಮರ್ಥ್ಯವನ್ನು ಅಳೆಯಬಾರದು. ಈ ಹಿಂದಿನ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಆಡಿದ್ದ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಲಯಕ್ಕೆ ಮರಳುವ ಮುನ್ಸೂಚನೆ ನೀಡಿದ್ದು, ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ತಂಡವು ಈಗಾಗಲೇ ಆಡಿದ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿ ಆರಂಭವನ್ನು ಪಡೆದಿದ್ದು, ಈ ಗೆಲುವಿನ ಲಯವನ್ನು ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದೆ.












Click it and Unblock the Notifications