25 ಲಕ್ಷ ರೂ. ಪ್ಯಾಕೇಜ್ ಇದ್ದರೂ ಕೈಗೆ ಬಂದಿದ್ದು ಕೇವಲ 1.4 ಲಕ್ಷ ರೂ.! IIT ಪದವೀಧರನಿಗೆ ಶಾಕ್ ಕೊಟ್ಟ ಮೊದಲ ಸಂಬಳ
ನವದೆಹಲಿ: ಇಂಜಿನಿಯರಿಂಗ್ ಅಥವಾ ಎಂಬಿಎ ಮುಗಿಸಿ ಕಾರ್ಪೊರೇಟ್ ಜಗತ್ತಿಗೆ ಕಾಲಿಡುವ ಪ್ರತಿಯೊಬ್ಬರಿಗೂ ದೊಡ್ಡ ಪ್ಯಾಕೇಜ್ ಪಡೆಯುವ ಕನಸಿರುತ್ತದೆ. ಆಫರ್ ಲೆಟರ್‌ನಲ್ಲಿ ಕಾಣುವ ಲಕ್ಷಾಂತರ ರೂಪಾಯಿಗಳ 'ಸಿಟಿಸಿ' ನೋಡಿ ಖುಷಿಪಡುವವರು, ಮೊದಲ ತಿಂಗಳ ಸಂಬಳ ಕೈಗೆ ಬಂದಾಗ ಒಮ್ಮೆಲೆ ಶಾಕ್ ಆಗುವುದು ಸಾಮಾನ್ಯ. ಇಂತಹದ್ದೇ ಒಂದು ಕಹಿ ಸತ್ಯವನ್ನು ಐಐಟಿ ರೂರ್ಕಿ ಮತ್ತು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಪದವೀಧರರಾದ ಸಿದ್ಧಾರ್ಥ್ ಮಹೇಶ್ವರಿ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಾರ್ಷಿಕ 25 ಲಕ್ಷ ರೂ. ಸಿಟಿಸಿ ಹೊಂದಿದ್ದರೂ, ತಮ್ಮ ಮೊದಲ ತಿಂಗಳ ಸಂಬಳ ಕೈಗೆ ಬಂದಾಗ ಅವರು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಮತ್ತೆ ಮತ್ತೆ ಚೆಕ್ ಮಾಡಿದ್ದರಂತೆ!

ಐಐಟಿ ಪದವೀಧರನಿಗೆ ಅಚ್ಚರಿ ಮೂಡಿಸಿದ ಮೊದಲ ಇನ್-ಹ್ಯಾಂಡ್ ಸ್ಯಾಲರಿ
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ 35 ವರ್ಷದ ಸಿದ್ಧಾರ್ಥ್ ಮಹೇಶ್ವರಿ, ತಾವು ಎಂಬಿಎ ಮುಗಿಸಿ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಆಗಿ ಕೆಲಸಕ್ಕೆ ಸೇರಿದಾಗಿನ ಮೊದಲ ತಿಂಗಳ ಸಂಬಳದ ಅನುಭವವನ್ನು ವಿವರಿಸಿದ್ದಾರೆ. "ನನಗೆ 35 ವರ್ಷ. ಐಐಟಿ ರೂರ್ಕಿ ಮತ್ತು ಐಎಸ್‌ಬಿ ಪದವೀಧರ. ಎಂಬಿಎ ನಂತರ ಮೊದಲ ಬಾರಿಗೆ ಬ್ಯಾಂಕ್ ಖಾತೆಗೆ ಸಂಬಳ ಜಮೆಯಾದಾಗ, ಬ್ಯಾಂಕ್ ಏನಾದರೂ ತಪ್ಪು ಮಾಡಿರಬೇಕು ಎಂದು ನಾನು ಭಾವಿಸಿದ್ದೆ" ಎಂದು ಅವರು ಬರೆದುಕೊಂಡಿದ್ದಾರೆ. ಅವರ ಆಫರ್ ಲೆಟರ್‌ನಲ್ಲಿ ವಾರ್ಷಿಕ 25 ಲಕ್ಷ ರೂ. ಸಿಟಿಸಿ ಎಂದು ನಮೂದಿಸಲಾಗಿತ್ತು. ಆದರೆ ಅವರ ಖಾತೆಗೆ ಬಂದಿದ್ದು ಕೇವಲ 1.45 ಲಕ್ಷ ರೂ. ಮಾತ್ರ. ಇದನ್ನು ನೋಡಿ ಗೊಂದಲಕ್ಕೊಳಗಾದ ಅವರು, ತಮ್ಮ ಬ್ಯಾಂಕ್ ಖಾತೆಯ ಮೊತ್ತವನ್ನು ಪದೇ ಪದೇ ಪರಿಶೀಲಿಸಿದ್ದರು.
25 ಲಕ್ಷ ಸಿಟಿಸಿ ಅಸಲಿಯತ್ತು: ಕಡಿತಗೊಂಡ ಹಣ ಎಲ್ಲಿಗೆ ಹೋಯಿತು?
ಬ್ಯಾಂಕ್ ಯಾವುದೇ ತಪ್ಪು ಮಾಡಿಲ್ಲ, ಬದಲಾಗಿ ಕಾರ್ಪೊರೇಟ್ ಕಂಪನಿಗಳ ಸಿಟಿಸಿ ಲೆಕ್ಕಾಚಾರವೇ ಹಾಗಿದೆ ಎಂಬ ಸತ್ಯ ಅವರಿಗೆ ನಂತರ ಅರಿವಾಯಿತು. ತಮ್ಮ ಸಂಬಳದ ಲೆಕ್ಕಾಚಾರವನ್ನು ಬಿಡಿಸಿಟ್ಟಿರುವ ಸಿದ್ಧಾರ್ಥ್, ವಾರ್ಷಿಕ 25 ಲಕ್ಷ ರೂ. ಸಿಟಿಸಿ ಎಂದರೆ ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಮೊತ್ತವಾಗುತ್ತದೆ. ಆದರೆ, ಅವರ ಒಟ್ಟು ಸಂಬಳ ತಿಂಗಳಿಗೆ ಸುಮಾರು 1.7 ಲಕ್ಷ ರೂ. ಆಗಿತ್ತು. ಇದರಲ್ಲಿ ಪ್ರಾವಿಡೆಂಟ್ ಫಂಡ್, ವೃತ್ತಿ ತೆರಿಗೆ, ಮತ್ತು ಆದಾಯ ತೆರಿಗೆ ಕಡಿತಗೊಂಡ ನಂತರ ಅವರ ಕೈಗೆ ಸಿಕ್ಕಿದ್ದು ಕೇವಲ 1.45 ಲಕ್ಷ ರೂ. ಮಾತ್ರ.
ಸಿಟಿಸಿಯ ಬಹುಪಾಲು ಮೊತ್ತವು ಉದ್ಯೋಗಿಗಳಿಗೆ ಪ್ರತಿ ತಿಂಗಳು ನಗದು ರೂಪದಲ್ಲಿ ಸಿಗುವುದಿಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ. ಉದ್ಯೋಗದಾತರು ನೀಡುವ ಪಿಎಫ್ ದೇಣಿಗೆ, ಗ್ರಾಚ್ಯುಟಿ, ಆರೋಗ್ಯ ವಿಮೆ ಮತ್ತು ವೇರಿಯಬಲ್ ಪೇ ಇವೆಲ್ಲವೂ ಸಿಟಿಸಿಯಲ್ಲಿ ಸೇರಿರುತ್ತವೆ. ಅದರಲ್ಲೂ ವೇರಿಯಬಲ್ ಪೇ ಎಂಬುದು ಕಂಪನಿಯ ಕಾರ್ಯಕ್ಷಮತೆ ಮತ್ತು ಲಾಭದ ಮೇಲೆ ಆಧಾರಿತವಾಗಿದ್ದು, ಅದು ಖಚಿತವಾಗಿ ಪ್ರತಿ ತಿಂಗಳು ಸಿಗುವ ಮೊತ್ತವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುವಜನರಿಗೆ ಕಿವಿಮಾತು
ಹೊಸದಾಗಿ ಕೆಲಸ ಹುಡುಕುತ್ತಿರುವವರು ಕೇವಲ ಸಿಟಿಸಿ ಮೊತ್ತವನ್ನು ನೋಡಿ ಮೋಸಹೋಗಬಾರದು ಎಂಬುದು ಸಿದ್ಧಾರ್ಥ್ ಅವರ ಸಲಹೆ. "ಸಿಟಿಸಿ ಎಂಬುದು ಕೇವಲ ಒಂದು ಮಾರ್ಕೆಟಿಂಗ್ ನಂಬರ್ ಅಷ್ಟೇ. ನಮ್ಮ ಇಎಂಐ ಮತ್ತು ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ನಮ್ಮ ಕೈಗೆ ಸಿಗುವ ಇನ್-ಹ್ಯಾಂಡ್ ಸ್ಯಾಲರಿ " ಎಂದು ಅವರು ಹೇಳಿದ್ದಾರೆ.
ಸಂದರ್ಶನದ ಸಮಯದಲ್ಲಿಯೇ ಕಂಪನಿಯ ಎಚ್‌ಆರ್ ಬಳಿ ತೆರಿಗೆ ಮತ್ತು ಕಡಿತಗಳ ನಂತರ ಪ್ರತಿ ತಿಂಗಳು ನಿಖರವಾಗಿ ಎಷ್ಟು ಹಣ ಕೈಗೆ ಬರುತ್ತದೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಸಿದ್ಧಾರ್ಥ್ ಅವರ ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚಿನ ವೇತನದ ಕೆಲಸಕ್ಕೆ ಸೇರಿದ ನಂತರ ತಮಗೂ ಇಂತಹದ್ದೇ ಅನುಭವವಾಗಿತ್ತು ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹೊಸ ಪದವೀಧರರು ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಒಟ್ಟು ಸಂಬಳ ಮತ್ತು ಕೈಗೆ ಸಿಗುವ ಸಂಬಳದ ನಡುವಿನ ವ್ಯತ್ಯಾಸದ ಬಗ್ಗೆ ಮೊದಲೇ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ, ಕಾಗದದ ಮೇಲಿರುವ ಸಿಟಿಸಿಗಿಂತ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಬೀಳುವ ಅಸಲಿ ಮೊತ್ತವೇ ನಿಜವಾದ ಆದಾಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.












Click it and Unblock the Notifications