ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: 'ಡ್ಯುರೇಷನ್ ಆಫ್ ಸ್ಟೇಟಸ್' ರದ್ದುಗೊಳಿಸಿದ US ಸರ್ಕಾರ

ನವದೆಹಲಿ: ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಅಲ್ಲಿಗೆ ತೆರಳಲು ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ದೊಡ್ಡ ಆಘಾತ ನೀಡಿದೆ. ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ಎಫ್-1 ವೀಸಾ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದ್ದು, ದಶಕಗಳಿಂದ ಜಾರಿಯಲ್ಲಿದ್ದ 'ಡ್ಯುರೇಷನ್ ಆಫ್ ಸ್ಟೇಟಸ್' ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಶ್ವೇತಭವನದ 'ಆಫೀಸ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಬಜೆಟ್' ಅಂತಿಮ ಒಪ್ಪಿಗೆ ನೀಡಿದೆ.

ಇದರ ಬದಲಾಗಿ ಗರಿಷ್ಠ 4 ವರ್ಷಗಳ ನಿಗದಿತ ಅವಧಿಯ ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದು ಅಮೆರಿಕದಲ್ಲಿ ನೆಲೆಸುವ ಕನಸು ಕಂಡಿದ್ದ ವಿದ್ಯಾರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

United States

ಏನಿದು 'ಡ್ಯುರೇಷನ್ ಆಫ್ ಸ್ಟೇಟಸ್' ರದ್ದು?

ಹಳೆಯ ನಿಯಮದ ಪ್ರಕಾರ, ಅಂತರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳ್ಳುವವರೆಗೆ ಅಮೆರಿಕದಲ್ಲಿ ನೆಲೆಸಲು ಅವಕಾಶವಿತ್ತು. ಅಂದರೆ, ಅವರು ನಿಯಮಗಳ ಅಡಿಯಲ್ಲಿ ಪೂರ್ಣಾವಧಿ ವಿದ್ಯಾರ್ಥಿಯಾಗಿರುವವರೆಗೂ ಮತ್ತು ಕೋರ್ಸ್ ಪ್ರಗತಿಯಲ್ಲಿರುವವರೆಗೂ ನಿರ್ದಿಷ್ಟ ದಿನಾಂಕದ ಮಿತಿಯಿಲ್ಲದೆ ಅಲ್ಲಿಯೇ ಇರಬಹುದಿತ್ತು. 'ಸ್ಟೂಡೆಂಟ್ ಅಂಡ್ ಎಕ್ಸ್‌ಚೇಂಜ್ ವಿಸಿಟರ್ ಇನ್ಫಾರ್ಮೇಶನ್ ಸಿಸ್ಟಮ್' ಮೂಲಕ ನಡೆಯುತ್ತಿತ್ತು. ಆದರೆ, ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಪ್ರಸ್ತಾಪಿಸಿದ್ದ ಹೊಸ ನಿಯಮಕ್ಕೆ ಈಗ ಅಂತಿಮ ಅನುಮೋದನೆ ಸಿಕ್ಕಿದ್ದು, ವಿದ್ಯಾರ್ಥಿಗಳಿಗೆ ಗರಿಷ್ಠ 4 ವರ್ಷ ಅಥವಾ ಅವರ ಕೋರ್ಸ್‌ನ ಅವಧಿ, ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಮಯ ಮಾತ್ರ ಅಮೆರಿಕದಲ್ಲಿ ಉಳಿಯಲು ಅವಕಾಶ ನೀಡಲಾಗುತ್ತದೆ.

ಎಫ್ 1 ವೀಸಾ ಅವಧಿ ವಿಸ್ತರಣೆಗೆ ಕಠಿಣ ನಿಯಮ

ಒಂದು ವೇಳೆ 4 ವರ್ಷಗಳಿಗಿಂತ ಹೆಚ್ಚು ಅವಧಿಯ ಕೋರ್ಸ್ ಉದಾಹರಣೆಗೆ: ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಅಥವಾ ಪಿಎಚ್‌ಡಿ ಮಾಡುತ್ತಿದ್ದರೆ, ವಿದ್ಯಾರ್ಥಿಗಳು ತಮ್ಮ ವೀಸಾ ಅವಧಿ ಮುಗಿಯುವ ಮುನ್ನವೇ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳಿಗೆ ಅಧಿಕೃತವಾಗಿ 'ಎಕ್ಸ್‌ಟೆನ್ಶನ್ ಆಫ್ ಸ್ಟೇ' ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಇದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕು ಮತ್ತು ಕಡ್ಡಾಯವಾಗಿ ಬಯೋಮೆಟ್ರಿಕ್ ಪ್ರಕ್ರಿಯೆಗಳಿಗೆ ಒಳಗಾಗಬೇಕಾಗುತ್ತದೆ. ಈ ಮೊದಲು ವಿವಿಯ ಅಧಿಕಾರಿಗಳ ಮೂಲಕವೇ ಸುಲಭವಾಗಿ ಆಗುತ್ತಿದ್ದ ಈ ಕೆಲಸ, ಈಗ ಅಧಿಕೃತ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಬದಲಾಗಲಿದ್ದು, ವಿಸ್ತರಣೆ ಸಿಗುವುದು ಖಚಿತವಾಗಿರದ ಕಾರಣ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ಗ್ರೇಸ್ ಪಿರಿಯಡ್ ಕಡಿತ

ವ್ಯಾಸಂಗದ ನಂತರ ಅಮೆರಿಕ ತೊರೆಯಲು, ಮುಂದಿನ ಕೋರ್ಸ್ ಸೇರಲು ಅಥವಾ ಉದ್ಯೋಗ ಹುಡುಕಲು ಈ ಮೊದಲು 60 ದಿನಗಳ 'ಗ್ರೇಸ್ ಪಿರಿಯಡ್' ನೀಡಲಾಗುತ್ತಿತ್ತು. ಈಗ ಅದನ್ನು ಕೇವಲ 30 ದಿನಗಳಿಗೆ ಕಡಿತಗೊಳಿಸಲಾಗಿದೆ. ಓದು ಮುಗಿದ 30 ದಿನಗಳಲ್ಲಿಯೇ ಉದ್ಯೋಗ ಅವಕಾಶಗಳನ್ನು ಹುಡುಕುವುದು ಅಥವಾ ದೇಶ ಬಿಡಲು ಸಿದ್ಧರಾಗುವುದು ವಿದ್ಯಾರ್ಥಿಗಳಿಗೆ ಬಹುದೊಡ್ಡ ಸವಾಲಾಗಲಿದೆ. ಇದು ಅವರ ವೃತ್ತಿಜೀವನದ ಯೋಜನೆಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಭಾರತೀಯ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ

ಇತ್ತೀಚಿನ ಓಪನ್ ಡೋರ್ಸ್ ವರದಿಗಳ ಪ್ರಕಾರ, ಅಮೆರಿಕದಲ್ಲಿ ಸುಮಾರು 3.6 ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದು, ಅಮೆರಿಕದ ಒಟ್ಟು ಅಂತರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಇವರದ್ದೇ ಸಿಂಹಪಾಲು (ಶೇ. 31%). ಹೀಗಾಗಿ ಹೊಸ ವೀಸಾ ನಿಯಮಗಳಿಂದ ಇವರ ಮೇಲೆಯೇ ಅತಿ ದೊಡ್ಡ ಹೊಡೆತ ಬೀಳಲಿದೆ.

ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅಥವಾ ಮೇಜರ್ ವಿಷಯಗಳನ್ನು ಬದಲಾಯಿಸಲು ಹೊಸ ನಿಯಮದಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಒಂದು ಹಂತದ ಪದವಿ ಮುಗಿಸಿದ ನಂತರ, ಅದೇ ಹಂತದ ಅಥವಾ ಅದಕ್ಕಿಂತ ಕಡಿಮೆ ಹಂತದ ಮತ್ತೊಂದು ಕೋರ್ಸ್ ಸೇರಲು ಅವಕಾಶವಿರುವುದಿಲ್ಲ.

ವೀಸಾ ಅವಧಿ ಮುಗಿದು ಎಕ್ಸ್‌ಟೆನ್ಶನ್ ಅರ್ಜಿ ಇತ್ಯರ್ಥವಾಗದಿದ್ದರೆ, ಅದನ್ನು 'ಕಾನೂನುಬಾಹಿರ ವಾಸ್ತವ್ಯ' ಎಂದು ಪರಿಗಣಿಸುವ ಅಪಾಯವೂ ಇದೆ. ಇದರಿಂದ ಭವಿಷ್ಯದಲ್ಲಿ ಅಮೆರಿಕ ಪ್ರವೇಶಿಸಲು 3 ರಿಂದ 10 ವರ್ಷಗಳ ನಿಷೇಧ ಎದುರಿಸಬೇಕಾಗಬಹುದು. ಒಟ್ಟಾರೆಯಾಗಿ ಅಮೆರಿಕದ ಈ ಕಠಿಣ ನಿರ್ಧಾರವು ಭಾರತೀಯ ವಿದ್ಯಾರ್ಥಿಗಳ ನೆಮ್ಮದಿ ಕಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+