IND vs ENG: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಏಕದಿನ ತಂಡ ಪ್ರಕಟ, ಯಾರಿಗೆಲ್ಲಾ ಸ್ಥಾನ?
IND vs ENG: ಮುಂಬರುವ 2026ರ ಇಂಗ್ಲೆಂಡ್ ಪ್ರವಾಸದ ಹೈ-ವೋಲ್ಟೇಜ್ ಏಕದಿನ ಕ್ರಿಕೆಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ (ಜೂನ್ 21) ಭಾರತ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಹೆಸರಿದೆ. ಹಾಗಾದ್ರೆ ಇನ್ನೂ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಬರುವ ಜುಲೈ ತಿಂಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಬಿಸಿಸಿಐ 15 ಆಟಗಾರರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಜುಲೈ 1ರಿಂದ 11ರ ವರೆಗೆ ಮೊದಲು 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಆ ಬಳಿಕ ಜುಲೈ 14ರಿಂದ 19ರ ವರೆಗೆ ಮೂರು ಪಂದ್ಯಗಳ ರೋಚಕ ಏಕದಿನ ಸರಣಿ ನಡೆಯಲಿದೆ. ಈ ಹೈ ವೋಲ್ಟೇಜ್ ಏಕದಿನ ಸರಣಿಗಾಗಿ ಈಗ ಆಯ್ಕೆ ಮಂಡಳಿಯು ಸಮತೋಲಿತ ತಂಡವನ್ನು ಆಯ್ಕೆ ಮಾಡಿದೆ.

ತಂಡ ಮುನ್ನಡೆಸಲಿರುವ ಶುಭ್ಮನ್ ಗಿಲ್
ಭವಿಷ್ಯದ ದೃಷ್ಟಿಯಿಂದ ಯುವ ಬ್ಯಾಟರ್ ಶುಭ್ಮನ್ ಗಿಲ್ ಅವರನ್ನೇ ನಾಯಕನಾಗಿ ಮುಂದುವರೆಸಲಾಗಿದ್ದು, ಶ್ರೇಯಸ್ ಅಯ್ಯರ್ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷ ಅಂದ್ರೆ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಿರುವುದು ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿಸಿದೆ. ಈ ಆಯ್ಕೆಯ ಮೂಲಕ ಇವರಿಬ್ಬರು 2027ರ ಏಕದಿನ ವಿಶ್ವಕಪ್‌ನಲ್ಲೂ ಆಡುವುದು ಬಹುತೇಕ ಖಚಿತ ಆದಂತಾಗಿದೆ.
ಯಶಸ್ವಿ ಜೈಸ್ವಾಲ್‌ಗಿಲ್ಲ ಸ್ಥಾನ, ಹಾರ್ದಿಕ್ ಔಟ್
ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಈ ಇಂಗ್ಲೆಂಡ್ ಪ್ರವಾಸದ ಏಕದಿನ ತಂಡದಿಂದ ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣ ಈ ಸರಣಿಯಿಂದ ಹೊರಬಿದ್ದಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನ
ತಂಡದ ವಿಕೆಟ್ ಕೀಪರ್-ಬ್ಯಾಟರ್‌ಗಳಾಗಿ ಅನುಭವಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಇನ್ನು ಸ್ಪಿನ್ ಆಲ್ ರೌಂಡರ್‌ಗಳಾಗಿ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಆಯ್ಕೆ ಆಗಿದ್ದರೆ, ಬೌಲಿಂಗ್ ಆಲ್ ರೌಂಡರ್ ಕೋಟಾದಲ್ಲಿ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಮಣೆ ಹಾಕಲಾಗಿದೆ.
ಬೌಲಿಂಗ್ ವಿಭಾಗ ಹೀಗಿದೆ
ಇಂಗ್ಲೆಂಡ್ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ಬೌಲಿಂಗ್ ಲೈನ್‌ಅಪ್ ಸಿದ್ಧಪಡಿಸಲಾಗಿದೆ. ಮುಖ್ಯ ಸ್ಪಿನ್ನರ್ ಆಗಿ ಕುಲ್‌ದೀಪ್ ಯಾದವ್ ಜವಾಬ್ದಾರಿ ಹೊರಲಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗವನ್ನು ಜಸ್‌ಪ್ರಿತ್ ಬುಮ್ರಾ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ಕನ್ನಡಿಗ ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್ ತಂಡದಲ್ಲಿದ್ದಾರೆ.
🚨 News 🚨
— BCCI (@BCCI) June 21, 2026
India’s ODI squad for the England tour announced.
𝗡𝗢𝗧𝗘: Varun Chakaravarthy has been ruled out of the Ireland T20I Series as he continues his rehab at the BCCI COE.
More Details ▶️ https://t.co/wOdXTQqJto #TeamIndia | #ENGvIND pic.twitter.com/t0GypgM4kp
ಭಾರತ ಏಕದಿನ ತಂಡ
ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್












Click it and Unblock the Notifications