ಬೆಂಗಳೂರು: ಟ್ರಾಫಿಕ್ ಜಾಮ್‌ನಿಂದ ನೀಟ್ ಪರೀಕ್ಷೆ ಮಿಸ್: ಗೇಟ್ ಬಳಿ ವಿದ್ಯಾರ್ಥಿನಿಯರ ಕಣ್ಣೀರು
ದೇಶಾದ್ಯಂತ ಭಾನುವಾರ (ಜೂನ್ 21) ಅತ್ಯಂತ ಬಿಗಿ ಭದ್ರತೆಯ ನಡುವೆ ನೀಟ್ ಯುಜಿ ಮರುಪರೀಕ್ಷೆ ನಡೆಯಿತು. ಆದರೆ, ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ತುಸು ತಡವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಗೇಟ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ಇದರಿಂದಾಗಿ ಆತಂಕಗೊಂಡ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ಕಣ್ಣೀರು ಹಾಕುತ್ತಿರುವ ದೃಶ್ಯಗಳು ಕಂಡುಬಂದಿವೆ.
ನೀಟ್ ಪರೀಕ್ಷಾ ಕೇಂದ್ರದ ಬಳಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳು
ಬೆಂಗಳೂರು ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಸರ್ಕಾರಿ ರಾಮನಾರಾಯಣ ಚೆಲ್ಲರಾಮ್ ಕಾಲೇಜಿನ ನೀಟ್ ಪರೀಕ್ಷಾ ಕೇಂದ್ರದ ಹೊರಗೆ ಈ ಘಟನೆ ನಡೆದಿದೆ. ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಕಾರಣಕ್ಕಾಗಿ ಸಿಬ್ಬಂದಿ ಗೇಟ್ ಮುಚ್ಚಿದ್ದಾರೆ. ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿದ್ದರಿಂದ ತೀವ್ರ ನಿರಾಶರಾದ ವಿದ್ಯಾರ್ಥಿಗಳು ಗೇಟ್ ಬಳಿ ನಿಂತು ಕಣ್ಣೀರು ಹಾಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.

ಒಂದು ವಿಡಿಯೋದಲ್ಲಿ, ಹತಾಶಳಾದ ವಿದ್ಯಾರ್ಥಿನಿಯೊಬ್ಬಳು ಮುಚ್ಚಿದ್ದ ಗೇಟ್ ಅನ್ನು ಏರಿ ಒಳಗೆ ಪ್ರವೇಶಿಸಲು ವಿಫಲ ಯತ್ನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ದೇಶದ ಇತರ ಕೆಲವು ಭಾಗಗಳಿಂದಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ.
ಕಾಂಗ್ರೆಸ್ ಸಮಾವೇಶ ಸೃಷ್ಟಿಸಿದ ಟ್ರಾಫಿಕ್ ಜಾಮ್ ಫಜೀತಿ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬರಲು ಪ್ರಮುಖ ಕಾರಣ ನಗರದ ಟ್ರಾಫಿಕ್ ವ್ಯವಸ್ಥೆ ಎನ್ನಲಾಗಿದೆ. ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ಯಾಲೇಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಲಿಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ, ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗಲಿಲ್ಲ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬೇಕಾಯಿತು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bengaluru, Karnataka: Students are seen crying after arriving late at the NEET examination centre pic.twitter.com/TYug1N9lep
— IANS (@ians_india) June 21, 2026
ಕಟ್ಟುನಿಟ್ಟಾದ ಎನ್‌ಟಿಎ ನಿಯಮಗಳು ಹಾಗೂ ಬಿಗಿ ಭದ್ರತಾ ಕ್ರಮಗಳು
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹೊರಡಿಸಿದ್ದ ಸ್ಪಷ್ಟ ಎನ್‌ಟಿಎ ನಿಯಮಗಳ ಪ್ರಕಾರ, ಬೆಳಿಗ್ಗೆ 11 ಗಂಟೆಯಿಂದಲೇ ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಆದರೆ, ಮಧ್ಯಾಹ್ನ 1.30ಕ್ಕೆ ಸರಿಯಾಗಿ ಪ್ರವೇಶ ದ್ವಾರಗಳನ್ನು ಮುಚ್ಚಬೇಕಿತ್ತು. ಆ ಬಳಿಕ ಯಾವುದೇ ಕಾರಣಕ್ಕೂ ಯಾರನ್ನೂ ಒಳಗೆ ಬಿಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶವಿತ್ತು. ಈ ವರ್ಷ ಜಾರಿಗೆ ತರಲಾದ ಮುಖ ಗುರುತಿಸುವಿಕೆ, ಬಯೋಮೆಟ್ರಿಕ್ ಪರಿಶೀಲನೆ ಹಾಗೂ ತೀವ್ರ ಭದ್ರತಾ ತಪಾಸಣೆಗಳಿಗಾಗಿ ಮುಂಚಿತವಾಗಿಯೇ ಆಗಮಿಸುವಂತೆ ಎನ್‌ಟಿಎ ಮುನ್ನೆಚ್ಚರಿಕೆ ನೀಡಿತ್ತು.
ಈ ಬಾರಿ ಪೇಪರ್ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಯುತ್ತಿರುವುದರಿಂದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15 ರವರೆಗೆ ನಡೆದ ಈ ಪರೀಕ್ಷೆಗೆ ದೇಶಾದ್ಯಂತ 551 ನಗರಗಳ 5,440 ಕೇಂದ್ರಗಳಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ಅಕ್ರಮಗಳನ್ನು ತಡೆಯಲು 1.38 ಲಕ್ಷಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ಆಧಾರಿತ ಕಣ್ಗಾವಲು ವ್ಯವಸ್ಥೆಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
Bengaluru, Karnataka: Students arriving late at the NEET examination centre are trying to enter through the gate pic.twitter.com/paF67NdSoV
— IANS (@ians_india) June 21, 2026
ಆದರೆ, ಈ ಘಟನೆ ಇದೀಗ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವರ್ಷಗಟ್ಟಲೆ ಹಗಲಿರುಳು ಕಷ್ಟಪಟ್ಟು ಓದಿದರೂ, ಕೇವಲ ಐದತ್ತು ನಿಮಿಷಗಳ ವಿಳಂಬದಿಂದಾಗಿ ಪರೀಕ್ಷೆ ಬರೆಯುವ ಮಹತ್ತರ ಅವಕಾಶ ಕಳೆದುಕೊಂಡ ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಹಾನುಭೂತಿ ವ್ಯಕ್ತವಾಗುತ್ತಿದೆ. ಭದ್ರತೆಯ ಹೆಸರಿನಲ್ಲಿ ಟ್ರಾಫಿಕ್‌ಗೆ ಸಿಲುಕಿ ಅಲ್ಪಸ್ವಲ್ಪ ತಡವಾಗಿ ಬಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬಾರದಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.














Click it and Unblock the Notifications