NEET Re-Exam: ನೆಲಮಂಗಲದ ಬಳಿ ಕೆಟ್ಟು ನಿಂತ ರೈಲು, ಪರೀಕ್ಷಾ ಕೇಂದ್ರ ತಲುಪಲು ಹರಸಾಹಸ ಪಟ್ಟ ವಿದ್ಯಾರ್ಥಿಗಳು
ದೇಶಾದ್ಯಂತ ಇಂದು ಕಟ್ಟುನಿಟ್ಟಿನ ಭದ್ರತೆ ಮತ್ತು ನಿಯಮಗಳ ನಡುವೆ ನೀಟ್ ಮರುಪರೀಕ್ಷೆ ನಡೆಯುತ್ತಿದೆ. ಆದರೆ, ಪರೀಕ್ಷಾ ಕೇಂದ್ರ ತಲುಪಲು ರೈಲು ಮಾರ್ಗವನ್ನು ಅವಲಂಬಿಸಿದ್ದ ನೂರಾರು ವಿದ್ಯಾರ್ಥಿಗಳಿಗೆ ಕೊನೆ ಕ್ಷಣದಲ್ಲಿ ರೈಲು ಕೈಕೊಟ್ಟಿದ್ದರಿಂದ ತೀವ್ರ ಆತಂಕ ಸೃಷ್ಟಿಯಾದ ಘಟನೆ ನೆಲಮಂಗಲ ತಾಲೂಕಿನ ಸೋಲೂರು ಬಳಿ ನಡೆದಿದೆ. ಈ ಘಟನೆಯ ಜೊತೆಗೆ ದೇಶದ ಇತರೆಡೆಗಳಲ್ಲೂ ನೀಟ್ ಮರುಪರೀಕ್ಷೆ ಅವಾಂತರಗಳು ವರದಿಯಾಗಿವೆ.
ಹಳಿ ಮೇಲೆಯೇ ನಿಂತ ರೈಲು: ವಿದ್ಯಾರ್ಥಿಗಳ ಪರದಾಟ
ಸಮಯಕ್ಕೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪುವ ಉದ್ದೇಶದಿಂದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸೊಲ್ಲಾಪುರ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ ಸೋಲೂರು ಬಳಿ ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ರೈಲು ಹಳಿ ಮೇಲೆಯೇ ಸ್ಥಗಿತಗೊಂಡಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈಲು ನಿಂತಲ್ಲೇ ನಿಂತಿದ್ದರಿಂದ ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿತ್ತು.

ಸೋಲೂರು ಬಳಿ ರೈಲು ಕೆಟ್ಟು ಹಳಿಯ ಮೇಲೆ ನಿಂತಿದ್ದರಿಂದ ಈ ಮಾರ್ಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪರಿಣಾಮವಾಗಿ, ಹಾಸನದಿಂದ ಯಶವಂತಪುರದ ಕಡೆಗೆ ಬರುತ್ತಿದ್ದ ಮತ್ತೊಂದು ರೈಲು ಕೂಡ ಮುಂದೆ ಸಾಗಲು ಟ್ರ್ಯಾಕ್ ಇಲ್ಲದೆ ಮಾರ್ಗ ಮಧ್ಯದಲ್ಲೇ ನಿಲ್ಲಬೇಕಾಯಿತು. ಈ ಎರಡೂ ರೈಲುಗಳಲ್ಲಿದ್ದ ನೀಟ್ ವಿದ್ಯಾರ್ಥಿಗಳು ತೀವ್ರ ಆತಂಕ ಹಾಗೂ ಸಂಕಷ್ಟಕ್ಕೆ ಸಿಲುಕಿದರು. ತಮ್ಮ ಭವಿಷ್ಯದ ದಾರಿದೀಪವಾದ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಕಳವಳ ಅವರನ್ನು ಕಾಡಲಾರಂಭಿಸಿತ್ತು.
ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವೆರಿಫಿಕೇಷನ್ ಮತ್ತು ಕಠಿಣ ತಪಾಸಣಾ ಪ್ರಕ್ರಿಯೆಗಳು ಬೆಳಿಗ್ಗೆ 11 ಗಂಟೆಯಿಂದಲೇ ಆರಂಭವಾಗಿದ್ದವು. ರೈಲು ರಿಪೇರಿಯಾಗುವುದನ್ನೇ ನಂಬಿಕೊಂಡರೆ ಪರೀಕ್ಷೆ ಬರೆಯುವುದು ಅಸಾಧ್ಯ ಎಂದು ಅರಿತ ವಿದ್ಯಾರ್ಥಿಗಳು ಮತ್ತು ಪೋಷಕರು ತಕ್ಷಣವೇ ಕಾರ್ಯಪ್ರವೃತ್ತರಾದರು. ರೈಲಿನಿಂದ ಕೆಳಗಿಳಿದು ಲಗೇಜ್ ಸಮೇತ ನಡೆದುಕೊಂಡು ಹೋಗಿ, ಸ್ಥಳೀಯವಾಗಿ ಸಿಕ್ಕ ಬಸ್, ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿನ ಪರೀಕ್ಷಾ ಕೇಂದ್ರಗಳತ್ತ ಧಾವಿಸಿದರು. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ನಡುವೆ ಪರೀಕ್ಷೆ ಬರೆಯಲು ಸಜ್ಜಾಗಿದ್ದ ವಿದ್ಯಾರ್ಥಿಗಳಿಗೆ ಈ ತಾಂತ್ರಿಕ ದೋಷ ಭಾರಿ ಟೆನ್ಷನ್ ನೀಡಿತ್ತು. ಹೇಗೋ ಮಾಡಿ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪುವ ಧಾವಂತದಲ್ಲಿ ವಿದ್ಯಾರ್ಥಿಗಳು ಹರಸಾಹಸ ಪಟ್ಟರು.
ನಾಗ್ಪುರದ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ
ನೆಲಮಂಗಲದ ಘಟನೆಯ ಜೊತೆಗೆ, ದೇಶದ ಇತರೆಡೆಯೂ ನೀಟ್ ಮರುಪರೀಕ್ಷೆ ಅವಾಂತರಗಳು ಬೆಳಕಿಗೆ ಬಂದಿವೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ತಾಂತ್ರಿಕ ದೋಷದಿಂದಾಗಿ ಮಹಾರಾಷ್ಟ್ರದ ನಾಗ್ಪುರದ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬುವವರಿಗೆ ದುಬೈನ ಅಬುಧಾಬಿ ಇಂಡಿಯನ್ ಸ್ಕೂಲ್‌ನಲ್ಲಿ ಪರೀಕ್ಷಾ ಕೇಂದ್ರ ನಿಗದಿಪಡಿಸಲಾಗಿತ್ತು.
ದೇಶದೊಳಗಿನ ಅಭ್ಯರ್ಥಿಗೆ ವಿದೇಶದಲ್ಲಿ ಕೇಂದ್ರ ನೀಡಿರುವುದು ಎನ್‌ಟಿಎಯ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿತ್ತು. ಇದು ಆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ತೀವ್ರ ಗೊಂದಲ ಮೂಡಿಸಿತ್ತು. ತಾವು ಇಂತಹ ಯಾವುದೇ ಆಯ್ಕೆಯನ್ನು ನೀಡಿಲ್ಲ, ಹಾಗೆಯೇ ನಮ್ಮ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದರು. ಬಳಿಕ, ದೂರು ದಾಖಲಿಸಿದ ನಂತರ ಎನ್‌ಟಿಎ ಈ ತಾಂತ್ರಿಕ ದೋಷ ಸರಿಪಡಿಸಿ ನಾಗ್ಪುರದಲ್ಲೇ ಕೇಂದ್ರ ನೀಡಿದೆ.
ಮಧ್ಯಪ್ರದೇಶದಲ್ಲಿ ಹೆಸರಿಗಷ್ಟೇ ವಿಶೇಷ ರೈಲು
ನೀಟ್ ಮರುಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಧ್ಯಪ್ರದೇಶದಲ್ಲಿ ರೈಲ್ವೆ ಇಲಾಖೆಯು ಇಂದೋರ್‌ನಿಂದ ಭೋಪಾಲ್‌ಗೆ ವಿಶೇಷ ರೈಲನ್ನು ಓಡಿಸಿತ್ತು. ಆದರೆ, ಈ ರೈಲು ಶನಿವಾರ ಬೆಳಿಗ್ಗೆ ಇಂದೋರ್‌ನಿಂದ ಹೊರಟು ಸಂಜೆ ಭೋಪಾಲ್ ತಲುಪಿತ್ತು. ಆಶ್ಚರ್ಯವೆಂದರೆ, ಭಾನುವಾರ ಮಧ್ಯಾಹ್ನ 2 ಗಂಟೆಯಿಂದ 5:15 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಈ ವಿಶೇಷ ರೈಲಿನ ಹಿಂದಿರುಗುವ ಪ್ರಯಾಣವನ್ನು ಶನಿವಾರ ರಾತ್ರಿಯೇ ನಿಗದಿಪಡಿಸಲಾಗಿತ್ತು! ಪರೀಕ್ಷೆ ಮುಗಿಯುವ ಮುನ್ನವೇ ರೈಲು ವಾಪಸ್ ಆಗುವಂತೆ ವೇಳಾಪಟ್ಟಿ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಇದು ರೈಲ್ವೆ ಇಲಾಖೆಯ ಅವೈಜ್ಞಾನಿಕ ನಿರ್ವಹಣೆಯನ್ನು ಎತ್ತಿ ತೋರಿಸಿದೆ.
ಮುಂಬೈನಲ್ಲಿ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ಆಸರೆ
ಮತ್ತೊಂದೆಡೆ, ಮಹಾರಾಷ್ಟ್ರದಲ್ಲಿ ಮುಂಬೈ ಸೆಂಟ್ರಲ್ ರೈಲ್ವೆ ವಿದ್ಯಾರ್ಥಿಗಳಿಗೆ ನೆರವಾಗಿದೆ. ಭಾನುವಾರದಂದು ಸಾಮಾನ್ಯವಾಗಿ ರೈಲುಗಳ ಸಂಚಾರ ಕಡಿಮೆ ಇರುತ್ತದೆ ಮತ್ತು ನಿರ್ವಹಣೆಗಾಗಿ 'ಮೆಗಾ ಬ್ಲಾಕ್' ಮಾಡಲಾಗುತ್ತದೆ. ಆದರೆ, ನೀಟ್ ಪರೀಕ್ಷೆಯ ಪ್ರಯುಕ್ತ ಯಾವುದೇ ಮೆಗಾ ಬ್ಲಾಕ್ ಮಾಡದೆ, ಎಲ್ಲಾ 1,820 ಲೋಕಲ್ ರೈಲುಗಳನ್ನು ಸಾಮಾನ್ಯ ದಿನಗಳಂತೆಯೇ ಓಡಿಸುವ ಮೂಲಕ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ರೈಲ್ವೆ ಇಲಾಖೆ ಸಹಕರಿಸಿದೆ. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆಯಿಲ್ಲದೆ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಿದೆ.












Click it and Unblock the Notifications