ಬೆಂಗಳೂರು: ಕಳಪೆ ರಸ್ತೆ ಕಾಮಗಾರಿಗೆ ಬ್ರೇಕ್: GBA ಎಂಜಿನಿಯರ್ ಸಸ್ಪೆಂಡ್ ಮಾಡಿದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿಗಳನ್ನು ನಡೆಸುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸರ್ಕಾರ ಈಗ ಚಾಟಿ ಬೀಸಿದೆ. ಗುಣಮಟ್ಟವಿಲ್ಲದ ರಸ್ತೆ ನಿರ್ಮಾಣದಿಂದಾಗಿ ಸಾರ್ವಜನಿಕರು ನಿತ್ಯ ಪರದಾಡುತ್ತಿರುವ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ರಸ್ತೆ ಡಾಂಬರೀಕರಣದಲ್ಲಿ ನಡೆದಿದ್ದ ಗಂಭೀರ ಅಕ್ರಮವನ್ನು ಖುದ್ದಾಗಿ ಪತ್ತೆಹಚ್ಚಿ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ನೇರ ಪರಿಣಾಮವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಹಾಯಕ ಎಂಜಿನಿಯರ್ ಒಬ್ಬರ ಅಮಾನತ್ತಾಗಿದೆ.
ಕಳಪೆ ಕಾಮಗಾರಿಗೆ ಜಿಬಿಎ ಎಂಜಿನಿಯರ್ ಅಮಾನತು
ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗಂಭೀರ ನಿಯಮ ಉಲ್ಲಂಘನೆ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ವಾರ್ಡ್ ಸಂಖ್ಯೆ 110 ರ ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಎಂಜಿನಿಯರ್ ಪೂಜಾರಪ್ಪ ಅವರನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ವಸಂತನಗರ ಉಪವಿಭಾಗದ ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಳಪೆ ಕಾಮಗಾರಿಯೇ ಈ ಕಠಿಣ ಕ್ರಮಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಗುತ್ತಿಗೆದಾರರ ಜೊತೆ ಶಾಮೀಲಾಗಿರುವುದು ಈ ಅಮಾನತು ಪ್ರಕ್ರಿಯೆಯ ಮೂಲಕ ಸ್ಪಷ್ಟವಾಗಿದೆ.
ಬೆಂಗಳೂರಿನಲ್ಲಿ ಕಳಪೆ ಡಾಂಬರೀಕರಣ ಪತ್ತೆ
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರು ದಿಡೀರ್ ತಪಾಸಣೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಬಿಬಿಎಂಪಿಯ 'ಇನ್‌ಫ್ರಾಸ್ಟ್ರಕ್ಚರ್ ಪ್ರೋಗ್ರಾಂ' ಅಡಿಯಲ್ಲಿ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ಅಸ್ಫಾಲ್ಟಿಂಗ್ ಅಥವಾ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
ಆದರೆ, ತಪಾಸಣೆಯ ವೇಳೆ ಯೋಜನೆ ಪ್ರಕಾರ ಇರಬೇಕಾದ ಸರಿಯಾದ ಪ್ರಮಾಣ ಹಾಗೂ ಅಗತ್ಯ ದಪ್ಪದಲ್ಲಿ ಡಾಂಬರೀಕರಣ ಮಾಡದೇ ಇರುವುದು ಕಂಡುಬಂದಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಸ್ತುಗಳನ್ನು ಬಳಸಿ ಕಳಪೆಯಾಗಿ ಕಾಮಗಾರಿ ನಡೆಸಿರುವುದು ಮೇಲ್ನೋಟಕ್ಕೇ ಸಾಬೀತಾಗಿದೆ. ರಸ್ತೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಎಂಜಿನಿಯರ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಠಿಣ ಕ್ರಮ
ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟರೂ, ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಹೊಣೆಗಾರಿಕೆಯುಳ್ಳ ಅಧಿಕಾರಿಯಾಗಿದ್ದರೂ ಸಹಾಯಕ ಎಂಜಿನಿಯರ್ ಪೂಜಾರಪ್ಪ ಅವರು ಕಾಮಗಾರಿ ನಡೆಯುವ ಸ್ಥಳದಲ್ಲಿ ನಿಂತು ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಬದಲಿಗೆ ಗುಣಮಟ್ಟವಿಲ್ಲದ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ, ಪಾಲಿಕೆಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಉಂಟುಮಾಡಿರುವುದು ತಪಾಸಣೆ ವೇಳೆ ಸ್ಪಷ್ಟವಾಗಿದೆ.
ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು?
"ನಾನು ಆಗಾಗ್ಗೆ ಹೀಗೆ ಮಾಡಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಮಾತ್ರ ನಾನು ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡುವಂತೆ ನಾನು ಮನವಿ ಮಾಡುತ್ತೇನೆ".
"ಇಂದು, ನಾನು ಡಾಂಬರೀಕರಣದ ಕೆಲಸವನ್ನು ಗಮನಿಸಿದೆ. ಗುಣಮಟ್ಟದ ಬಗ್ಗೆ ನನಗೆ ಸಂದೇಹವಿತ್ತು. ಈ ಡಾಂಬರು ಕೆಲಸವನ್ನು ಪರಿಶೀಲಿಸಲು ನಾನು ಆಯುಕ್ತರನ್ನು ಕೇಳಿದೆ. ವಾಸ್ತವವಾಗಿ, ಕೆಲಸವು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಪರಿಣಾಮ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ." ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
I really hope I don’t have to do this frequently. But, if officers and contractors do not listen and do their job, unfortunately, I will be forced. I appeal to them to do their job properly.
— Krishna Byre Gowda (@krishnabgowda) June 20, 2026
Today, I happened to observe an asphalt work in progress. I was doubtful of the quality.… pic.twitter.com/1idKAaXbpF
ಈ ಅಧಿಕಾರಿಯ ಬೇಜವಾಬ್ದಾರಿತನ ಹಾಗೂ ಕರ್ತವ್ಯದ ಮೇಲಿನ ಅಸಡ್ಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಪಾಲಿಕೆಯು, 1957ರ ಸಿಸಿಎ ನಿಯಮ 10 ರ ಅಡಿಯಲ್ಲಿ ಪೂಜಾರಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದೆ. ಸಚಿವ ಕೃಷ್ಣ ಬೈರೇಗೌಡ ಅವರ ಈ ಕಠಿಣ ನಿರ್ಧಾರವು ಬಿಬಿಎಂಪಿಯ ಇತರ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಳಪೆ ರಸ್ತೆ ಕಾಮಗಾರಿ ನಡೆಸಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಗ್ಯಾರಂಟಿ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.














Click it and Unblock the Notifications