TTD: ಟಿಟಿಡಿ ಬ್ರಹ್ಮೋತ್ಸವ 2026: ಭಕ್ತರು ಗಮನಿಸಲೇಬೇಕಾದ ಮಹತ್ವದ ಮಾಹಿತಿ ಇಲ್ಲಿದೆ
TTD Twin Brahmotsavams: ವಿಶ್ವವಿಖ್ಯಾತ ದೇವಸ್ಥಾನಗಳಲ್ಲಿ ಒಂದಾದ ತಿರುಮಲ ತಿರುಪತಿ (ಟಿಟಿಡಿ)ಯಲ್ಲಿ ಈ ಬಾರಿ ಅವಳಿ ಬ್ರಹ್ಮೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ವರ್ಷದಲ್ಲಿ ಅಧಿಕ ಮಾಸ ಬಂದಿರುವುದರಿಂದ ತಿರುಮಲದಲ್ಲಿ ಎರಡು ಬಾರಿ ಬ್ರಹ್ಮೋತ್ಸವಗಳು ಜರುಗಲಿವೆ. ಈ ಹಿನ್ನೆಲೆ ಭಾರಿ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ದರ್ಶನ ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿಯು ಬಹುತೇಕ ಎಲ್ಲಾ ಮಾದರಿಯ ವಿಶೇಷ ಮತ್ತು ಸೌಲಭ್ಯ ದರ್ಶನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಪದ್ಮಾವತಿ ಅತಿಥಿ ಗೃಹದ ಸುಧರ್ಮಾ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ.ವೆಂಕಯ್ಯ ಚೌಧರಿ ಅವರ ನೇತೃತ್ವದಲ್ಲಿ ಈ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರಮುಖ ದರ್ಶನಗಳ ರದ್ದು, ಮಹತ್ವದ ಬದಲಾವಣೆಗಳು
ವಿಐಪಿ ಬ್ರೇಕ್ ದರ್ಶನ ರದ್ದು: ಬ್ರಹ್ಮೋತ್ಸವದ ಇಡೀ ಅವಧಿಯಲ್ಲಿ ವಿಐಪಿ ಬ್ರೇಕ್ ದರ್ಶನಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಕೇವಲ ಪ್ರೋಟೋಕಾಲ್ ವ್ಯಾಪ್ತಿಗೆ ಬರುವ ಗಣ್ಯರಿಗೆ ಮಾತ್ರ ಇದಕ್ಕೆ ವಿನಾಯಿತಿ ಇರಲಿದೆ. ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಸಿದೆ.
* ಹಿರಿಯ ನಾಗರಿಕರು, ವಿಕಲಚೇತನರು, ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರು, ಅನಿವಾಸಿ ಭಾರತೀಯರು ಮತ್ತು ದಾನಿಗಳಿಗೆ ನೀಡಲಾಗುತ್ತಿದ್ದ ವಿಶೇಷ ದರ್ಶನ ಸೌಲಭ್ಯಗಳನ್ನು ಹಬ್ಬದ ದಿನಗಳಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
* ಸಾಮಾನ್ಯ ಭಕ್ತರಿಗೆ ಆದ್ಯತೆ: ಇತ್ತೀಚೆಗೆ ಸೋಮವಾರದ ವಿಐಪಿ ಬ್ರೇಕ್ ಹಾಗೂ ಶ್ರೀವಾಣಿ ದರ್ಶನದ ಕೋಟಾಗಳನ್ನು ಕಡಿತಗೊಳಿಸಲಾಗಿದ್ದು, ಸರ್ವದರ್ಶನದ ಭಕ್ತರಿಗೆ ಹೆಚ್ಚು ಸಮಯ ಸಿಗುವಂತೆ ಮಾಡಲಾಗಿದೆ.
ಬ್ರಹ್ಮೋತ್ಸವದ ಪ್ರಮುಖ ದಿನಾಂಕಗಳ ವಿವರ
* ಉತ್ಸವದ ಸಿದ್ಧತೆಗಳು ಸೆಪ್ಟೆಂಬರ್ ಮೊದಲ ವಾರದಿಂದಲೇ ಆರಂಭವಾಗಲಿವೆ. ಸೆಪ್ಟೆಂಬರ್ 8ಎಂದು ಕೋಯಿಲ್ ಆಳ್ವಾರ್ ತಿರುಮಂಜನಂ (ಆಲಯ ಶುದ್ಧಿ ಕಾರ್ಯಕ್ರಮ).
* ಸೆಪ್ಟೆಂಬರ್ 14: ಅಂಕುರಾರ್ಪಣಂ
* ಸೆಪ್ಟೆಂಬರ್ 15: ಅಧಿಕೃತವಾಗಿ ಉತ್ಸವಕ್ಕೆ ಚಾಲನೆ
* ಸೆಪ್ಟೆಂಬರ್ 19: ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ
* ಸೆಪ್ಟೆಂಬರ್ 22: ರಥೋತ್ಸವ
* ಸೆಪ್ಟೆಂಬರ್ 23: ಚಕ್ರಸ್ನಾನಂ
ಗಮನಿಸಬೇಕಾದ ಪ್ರಮುಖ ಅಂಶಗಳು
* ದ್ವಿಚಕ್ರ ವಾಹನಗಳಿಗೆ ನಿರ್ಬಂಧ: ಗರುಡ ಸೇವೆಯ ದಿನದಂದು ಉಂಟಾಗುವ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ಸೆಪ್ಟೆಂಬರ್ 18ರ ರಾತ್ರಿ 9 ಗಂಟೆಯಿಂದ ಸೆಪ್ಟೆಂಬರ್ 20ರ ಬೆಳಗ್ಗೆ 6ಗಂಟೆಯವರೆಗೆ ತಿರುಮಲ ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
* ಕ್ಯೂ ಕಾಂಪ್ಲೆಕ್ಸ್ ಹಾಗೂ ಗ್ಯಾಲರಿಗಳಲ್ಲಿ ಕಾಯುವ ಭಕ್ತರಿಗೆ ನಿರಂತರವಾಗಿ ಅನ್ನಪ್ರಸಾದಂ ಹಾಗೂ ಕುಡಿಯುವ ನೀರು ವಿತರಣೆ ಮಾಡಲು ಇಲಾಖೆಗಳಿಗೆ ಸೂಚಿಸಲಾಗಿದೆ.
* ತಿರುಮಲದ ಸಾರ್ವಜನಿಕ ಶೌಚಾಲಯಗಳು ಮತ್ತು ಗ್ಯಾಲರಿಗಳನ್ನು ಸ್ವಚ್ಛವಾಗಿಡಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಜೊತೆಗೆ ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಪಾಲಂಕಾರಕ್ಕೆ ವಿಶೇಷ ಯೋಜನೆ ರೂಪಿಸಲಾಗಿದೆ.
ಭಕ್ತರ ಬೇಡಿಕೆಗೆ ತಕ್ಕಂತೆ ಲಡ್ಡುಗಳ ಸಂಗ್ರಹ
ಭಕ್ತರ ಬೇಡಿಕೆಗೆ ತಕ್ಕಂತೆ ತಿರುಪತಿ ಲಡ್ಡುಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭಕ್ತರಿಗೆ ನೆರವಾಗಲು ಸ್ವಯಂಸೇವಕರು ಕೂಡ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಸಭೆಯಲ್ಲಿ ತಿರುಪತಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಎ.ಶರತ್ ಹಾಗೂ ಮುಖ್ಯ ಜಾಗೃತ ಮತ್ತು ಭದ್ರತಾ ಅಧಿಕಾರಿ ಮುರಳಿಕೃಷ್ಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications