ಮೈಸೂರು ದಸರಾದಲ್ಲಿ ಈ ವಿಷಯ ಬೇಡ; ದೈವಿಕ ಹಿನ್ನೆಲೆ - ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರಬೇಡಿ: ಎಚ್‌ಡಿ ಕುಮಾರಸ್ವಾಮಿ
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ವಿಚಾರವು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಇದೀಗ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ಮೈಸೂರು ದಸರಾದಲ್ಲಿ ಕಂಬಳ ಬೇಡ ಎಂದು ಸಂಸದ ಯದುವೀರ ಒಡೆಯರ್ ಅವರು ಹೇಳಿದ್ದರು. ಇದೀಗ ಈ ವಿಚಾರಕ್ಕೆ ಕುಮಾರಸ್ವಾಮಿ ಅವರು ದನಿಗೂಡಿಸಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಕುಮಾರಸ್ವಾಮಿ ಅವರು ಪೋಸ್ಟ್ ಮಾಡಿದ್ದಾರೆ. ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ಚರ್ಚೆ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ. ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕ. ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು ಎಂದಿದ್ದಾರೆ.
ಮುಂದುವರಿದು ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮ. ಇಂಥ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ ಎನ್ನುವುದು ನನ್ನ ಭಾವನೆ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಕಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸದ ಯದುವೀರ ಒಡೆಯರ್ ಹೇಳಿದ್ದೇನು ?
ಸಂಸದ ಯದುವೀರ ಒಡೆಯರ್ ಅವರು, ನಾನು ಕಂಬಳವನ್ನು ವಿರೋಧಿಸುತ್ತಿಲ್ಲ. ಅದು ನಮ್ಮ ರಾಜ್ಯದ ಹೆಮ್ಮೆ. ಆದರೆ, ಮೈಸೂರಿನ ಜನತೆಯ ಭಾವನೆಯನ್ನು ಪ್ರತಿಧ್ವನಿಸುವ ನನ್ನ ನಿರಂತರ ನಿಲುವೇನೆಂದರೆ, ಈ ಸಾಂಪ್ರದಾಯಿಕ ಕ್ರೀಡೆಗೆ ಅದರದ್ದೇ ಆದ ಮೂಲ ನೆಲದಲ್ಲಿ ಗರಿಷ್ಠ ಉತ್ತೇಜನ ಮತ್ತು ಆಚರಣೆಯ ಗೌರವ ಸಿಗಬೇಕೇ ಹೊರತು, ಈಗಾಗಲೇ ತೀವ್ರ ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿರುವ ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು. ಇಂದಿನ ಸಭೆಯಲ್ಲಿ ನಾನು ಈ ಸೇರ್ಪಡೆಯನ್ನು ಪ್ರಶ್ನಿಸಿದೆ ಮತ್ತು ಮರುಪರಿಶೀಲಿಸುವಂತೆ ಅಧಿಕೃತವಾಗಿ ವಿನಂತಿಸಿದೆ. ಈ ವಿಷಯದಲ್ಲಿ ನಾನು ಒಬ್ಬಂಟಿಯಾಗಿರಲಿಲ್ಲ; ಇತರ ಹಲವಾರು ನಾಯಕರು ಮತ್ತು ಸಮಿತಿಯ ಸದಸ್ಯರು ಸಹ ಇದೇ ರೀತಿಯ ಕಳಕಳಿಯನ್ನು ವ್ಯಕ್ತಪಡಿಸಿದರು.
ಕಂಬಳದ ಸೇರ್ಪಡೆಗಾಗಿ ತೀವ್ರವಾಗಿ ಒತ್ತಾಯಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ನನ್ನ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ತೀವ್ರ ವಿಷಾದನೀಯ. ನಮ್ಮ ರಾಜ್ಯ ಹಬ್ಬಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯ ನಡಾವಳಿಗಳನ್ನು ಒಬ್ಬ ಜನಪ್ರತಿನಿಧಿಯು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸುವುದು ಅವರ ಸ್ಥಾನಕ್ಕೆ ತಕ್ಕುದಲ್ಲದ ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಡವಳಿಕೆಯಾಗಿದೆ ಎಂದೂ ಹೇಳಿದ್ದಾರೆ.
ಬಿಡದಿ ರೈತರಿಗೆ ಮರಣಶಾಸನ: ಎಚ್‌ಡಿ ಕುಮಾರಸ್ವಾಮಿ
ಇನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬಿಡದಿ ರೈತರಿಗೆ ಮರಣಶಾಸನ ಬರೆಯುವುದಕ್ಕೆ ಮುಂದಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಬಿಡದಿ ರೈತರಿಗೆ ಮರಣಶಾಸನ ಬರೆಯಲು ಹೊರಟಿರುವ ರಾಜ್ಯ ಸರಕಾರ, ತನಗೆ ಕೃಷಿಗಿಂತ ರಿಯಲ್ ಎಸ್ಟೇಟ್ ಮುಖ್ಯ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಟ್ರ್ಯಾಕ್ಟರ್'ಗಳ ಮೂಲಕ ಪ್ರತಿಭಟನೆ ನಡೆಸಲು ಬಂದ ಅನ್ನದಾತರ ಮೇಲೆ ಪೊಲೀಸರು ದರ್ಪ ತೋರಿಸಿರುವುದು ನಿರಂಕುಶತೆಯ ಪರಮಾವಧಿ. ಪೊಲೀಸರ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಲಾಠಿಗಳಿಂದ ಹೋರಾಟವನ್ನು ಹತ್ತಿಕ್ಕುತ್ತೇವೆ ಎನ್ನುವುದು ಕೇವಲ ಭ್ರಮೆ ಎಂದು ಹೇಳಿದ್ದಾರೆ.












Click it and Unblock the Notifications