Karavali Controversy: ಡಬ್ಬಿಂಗ್, ಸಂಭಾವನೆ, ಸಿಕ್ಸ್‌ಪ್ಯಾಕ್ ಆರೋಪಗಳಿಗೆ ಕ್ಲಾರಿಟಿ ಕೊಟ್ಟ ನಟ ಪ್ರಜ್ವಲ್ ದೇವರಾಜ್
ಸ್ಯಾಂಡಲ್‌ವುಡ್‌ನಲ್ಲಿ "ಕರಾವಳಿ" ಚಿತ್ರದ ಡಬ್ಬಿಂಗ್ ಹಾಗೂ ಸಂಭಾವನೆ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟ ಪ್ರಜ್ವಲ್ ದೇವರಾಜ್ ಕೊನೆಗೂ ಮೌನ ಮುರಿದಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆಯಾದ ಗುರುದತ್ ಗಣಿಗ ಫಿಲ್ಮ್ಸ್ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಇತ್ತೀಚೆಗೆ ನೀಡಿದ್ದ ಸಾರ್ವಜನಿಕ ಹೇಳಿಕೆಗಳಿಗೆ ಪ್ರತಿಯಾಗಿ, ಪ್ರಜ್ವಲ್ ಕೂಡ ಪ್ರಕಟಣೆಯೊಂದನ್ನು ಹೊರಡಿಸುವ ಮೂಲಕ ತಮ್ಮ ಕಡೆಯ ವಾಸ್ತವಾಂಶಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಟ್ರೈಲರ್ ಲಾಂಚ್‌ಗೆ ಗೈರಾಗಲು ಅಸಲಿ ಕಾರಣ
"ಕರಾವಳಿ" ಚಿತ್ರದ ಟ್ರೈಲರ್ ಬಿಡುಗಡೆಯಾಗುವ ಸಂದರ್ಭದಲ್ಲಿ ತಮಗೆ ಯಾವುದೇ ಮುನ್ಸೂಚನೆ ನೀಡದೆ ಅಥವಾ ಅನುಮತಿ ಪಡೆಯದೆ ತಮ್ಮ ಪಾತ್ರಕ್ಕೆ ಮತ್ತೊಬ್ಬ ಧ್ವನಿ ಕಲಾವಿದರಿಂದ ಡಬ್ಬಿಂಗ್ ಮಾಡಿಸಿರುವ ವಿಷಯ ತಿಳಿಯಿತು. ಇದರ ಜೊತೆಗೆ ಒಪ್ಪಂದದ ಪ್ರಕಾರ ತಮಗೆ ಸಿಗಬೇಕಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಸಿಕ್ಕಿರಲಿಲ್ಲ. ಈ ಎರಡು ಪ್ರಮುಖ ಕಾರಣಗಳಿಂದ ನಾನು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಿಂದ ದೂರ ಉಳಿಯಬೇಕಾಯಿತು ಎಂದು ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.

ಸಿಕ್ಸ್‌ಪ್ಯಾಕ್‌ಗೂ ಇದಕ್ಕೂ ಸಂಬಂಧವಿಲ್ಲ
ಚಿತ್ರತಂಡದವರು ಹೇಳಿರುವಂತೆ ತಮ್ಮ ದೈಹಿಕ ರೂಪಾಂತರ ಅಥವಾ ಸಿಕ್ಸ್ ಪ್ಯಾಕ್ ಲುಕ್‌ನ ಕಾರಣಕ್ಕೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ಧ್ವನಿ ಬದಲಾಯಿಸಿದ್ದು ಮತ್ತು ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇ ಈ ಎಲ್ಲ ಸಮಸ್ಯೆಗೆ ಕಾರಣ ಎಂದು ಅವರು ತಿರುಗೇಟು ನೀಡಿದ್ದಾರೆ. ಬಾಕಿ ಇರುವ ಸಂಭಾವನೆಯನ್ನು ಪೂರ್ಣವಾಗಿ ಪಾವತಿಸಿದ ತಕ್ಷಣವೇ ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿಕೊಡಲು ಹಾಗೂ ಸಿನಿಮಾದ ಪ್ರಚಾರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತಾವು ಸಿದ್ಧರಿರುವುದಾಗಿ ಮೊದಲ ದಿನದಿಂದಲೂ ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸುತ್ತಾ ಬಂದಿದ್ದಾಗಿ ಪ್ರಜ್ವಲ್ ಹೇಳಿದ್ದಾರೆ.
ಚಿತ್ರತಂಡವೇ ನನ್ನನ್ನು ಕೈಬಿಟ್ಟಿದೆ
ಟ್ರೈಲರ್ ಬಿಡುಗಡೆಯಾದ ಮರುದಿನ ಜಿಎಸ್‌ಟಿ ಮೊತ್ತ ಹೊರತುಪಡಿಸಿ ಉಳಿದ ಬಾಕಿ ಸಂಭಾವನೆಯನ್ನು ಚಿತ್ರತಂಡ ಪಾವತಿಸಿತು. ಆದರೆ ಹಣ ನೀಡಿದ ಬೆನ್ನಲ್ಲೇ ನಿರ್ಮಾಣ ಸಂಸ್ಥೆಯು ಪ್ರಜ್ವಲ್ ಅವರ ಮ್ಯಾನೇಜರ್‌ಗೆ ಸಂದೇಶ ರವಾನಿಸಿ, "ಇನ್ನು ಮುಂದೆ ಚಿತ್ರದ ಡಬ್ಬಿಂಗ್‌ಗಾಗಲಿ ಅಥವಾ ಚಿತ್ರದ ಪ್ರಚಾರಕ್ಕಾಗಲಿ ಪ್ರಜ್ವಲ್ ಅವರ ಅಗತ್ಯ ನಮಗಿಲ್ಲ" ಎಂದು ತಿಳಿಸಿದ್ದು, ತಾವು ಸಿನಿಮಾದಿಂದ ದೂರ ಸರಿದಿರುವುದು ಸ್ವಯಂಪ್ರೇರಿತ ನಿರ್ಧಾರವಲ್ಲ, ಬದಲಿಗೆ ಚಿತ್ರತಂಡವೇ ತಮ್ಮನ್ನು ಕೈಬಿಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನನ್ನ ಧ್ವನಿ ಬೇಡ ಎಂದಿದ್ದಕ್ಕೆ ಬೇಸರ
"ನನ್ನ ಧ್ವನಿ ಆ ಪಾತ್ರಕ್ಕೆ ಸೂಕ್ತವಲ್ಲ" ಎಂದು ಚಿತ್ರತಂಡ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಪ್ರಜ್ವಲ್ ಹೇಳಿದ್ದಾರೆ. ತಮಗೆ ಡಬ್ಬಿಂಗ್ ಮಾಡಲು ಅವಕಾಶವೇ ನೀಡದೆ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಸರಿಯಲ್ಲ. ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದು ಗಳಿಸಿರುವ ಗೌರವ, ನಂಬಿಕೆ ಮತ್ತು ಪ್ರೇಕ್ಷಕರ ಪ್ರೀತಿಗೆ ಈ ಬೆಳವಣಿಗೆಗಳು ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಬೇಸರ ತರಿಸಿದೆ ಎಂದಿದ್ದಾರೆ.
ಈ ಸ್ಪಷ್ಟನೆ ಮೂಲಕ ಸಾರ್ವಜನಿಕರಿಗೆ ಸತ್ಯ ತಿಳಿಸುವ ಉದ್ದೇಶ ಮಾತ್ರ ತಮ್ಮದಾಗಿದ್ದು, ಇನ್ನು ಮುಂದೆ ಈ ವಿಷಯದ ಕುರಿತು ಯಾವುದೇ ಸಾರ್ವಜನಿಕ ಚರ್ಚೆ, ಪ್ರತಿಕ್ರಿಯೆ ಅಥವಾ ವಾಗ್ವಾದಕ್ಕೆ ನಾನು ಹೋಗುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಇಲ್ಲಿಗೇ ಪೂರ್ಣವಿರಾಮ ಇಟ್ಟಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಶ್ರಮವನ್ನು ಮರೆಮಾಚಬಾರದು ಎಂದಿರುವ ಪ್ರಜ್ವಲ್, "ಕರಾವಳಿ" ಚಿತ್ರಕ್ಕೆ ಹಾಗೂ ಅದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ನನ್ನ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿ ಚಿತ್ರವನ್ನು ಬೆಂಬಲಿಸಿ ಎಂದು ವಿನಂತಿಸಿದ್ದಾರೆ. ತಮಗೆ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ ಅಭಿಮಾನಿಗಳು, ಮಾಧ್ಯಮ ಮಿತ್ರರು ಮತ್ತು ಚಿತ್ರರಂಗದ ಬಂಧುಗಳಿಗೆ ಧನ್ಯವಾದ ತಿಳಿಸಿದ್ದಾರೆ.













Click it and Unblock the Notifications