ನೀನಿನ್ನು ಚಿಗುರುತ್ತಿರುವ... ಎಂದವರಿಗೆ ವೈಭವ್ ಸೂರ್ಯವಂಶಿ ಕೊಟ್ಟ ಉತ್ತರ 324.14, 94, 29, 10, 8
Vaibhav Sooryavanshi: ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟ ಆಡಿದ್ದಾರೆ. ಸರಣಿಯ ಆರಂಭಿಕ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದಾಗ ಹಾಗೂ ಮೈದಾನದ ವರ್ತನೆಯ ವಿಚಾರವಾಗಿ ಇನ್ನೂ ಕಲಿಯುವುದು ತುಂಬಾ ಇದೆ. ಅನುಭವ ತೀರಾ ಕಡಿಮೆ ಎಂದು ಟೀಕೆ ಮಾಡಿದ್ದವರಿಗೆ ಈ 15 ವರ್ಷದ ಯುವ ಪ್ರತಿಭೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಶ್ರೀಲಂಕಾ 'ಎ' ವಿರುದ್ಧದ ಪ್ರಶಸ್ತಿ ಜಿದ್ದಾಜಿದ್ದಿನ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿ ಭಾರತ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದಾರೆ. ಹೀಗೆ ತಮ್ಮನ್ನ ಟೀಕಿಸಿದ್ದವರಿಗೆ ತಮ್ಮ ಬ್ಯಾಟ್ ಮೂಲಕವೇ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿ ಗಮನ ಸೆಳೆದಿದ್ದಾರೆ.

ಟೀಕಾಕಾರರಿಗೆ ವೈಭವ್ ಸೂರ್ಯವಂಶಿ ತಿರುಗೇಟು
ಸರಣಿಯ ಲೀಗ್ ಹಂತದಲ್ಲಿ ಶ್ರೀಲಂಕಾ ಆಟಗಾರರೊಂದಿಗೆ ಮೈದಾನದಲ್ಲಿ ನಡೆದ ವಾಗ್ವಾದ ಹಾಗೂ ಬ್ಯಾಟಿಂಗ್ ವೈಫಲ್ಯದಿಂದಾಗಿ ವೈಭವ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಫೈನಲ್‌ನಂತಹ ಒತ್ತಡದ ಪಂದ್ಯದಲ್ಲಿ ನಾಯಕ ತಿಲಕ್ ವರ್ಮಾ ನೀಡಿದ ಬೆಂಬಲವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡ ಸೂರ್ಯವಂಶಿ ಯಾವುದೇ ಭಯವಿಲ್ಲದೆ ಅಬ್ಬರಿಸಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಅವರು 94 ರನ್‌ಗಳನ್ನು ಸಿಡಿಸಿದರು. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸಿದ್ದ ಟೀಕಾಕಾರರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ವೈಭವ್ ಆಟಕ್ಕೆ ಬೆಚ್ಚಿದ ಲಂಕಾ ಬೌಲರ್
324.14ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ಸೂರ್ಯವಂಶಿ ಅವರು 10 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಿತ 94 ರನ್ ಸಿಡಿಸಿದರು. 94 ರನ್‌ಗಳಲ್ಲಿ ಬರೋಬ್ಬರಿ 88 ರನ್‌ಗಳು ಕೇವಲ ಬೌಂಡರಿಗಳ ಮೂಲಕವೇ ಬಂದಿರುವುದು ವಿಶೇಷವಾಗಿದೆ. ಅದರಲ್ಲೂ ಮೊಹಮ್ಮದ್ ಶಿರಾಜ್ ಅವರ ಒಂದೇ ಓವರ್‌ನಲ್ಲಿ 26 ರನ್ ಚಚ್ಚಿದ್ದು ಈ ಇನ್ನಿಂಗ್ಸ್‌ನ ಪ್ರಮುಖ ಆಕರ್ಷಣೆಯಾಗಿತ್ತು.
ವೈಭವ್ ಶತಕ ಜಸ್ಟ್ ಮಿಸ್..
ಮೈದಾನದ ನಾಲ್ಕೂ ದಿಕ್ಕುಗಳಿಗೂ ಚೆಂಡನ್ನು ಅಟ್ಟಿದ ವೈಭವ್ ಸೂರ್ಯವಂಶಿ ಕೇವಲ 6 ರನ್‌ಗಳಿಂದ ಶತಕ ವಂಚಿತರಾದರು. ಅವರು ಶ್ರೀಲಂಕಾ 'ಎ' ತಂಡದ ನಾಯಕ ಸಹನ್ ಅರಾಚ್ಚಿಗೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ವೈಭವ್ ಔಟಾಗಿ ಹೊರನಡೆಯುವಾಗ ಲಂಕಾ ಆಟಗಾರರು ನಿಟ್ಟುಸಿರು ಬಿಟ್ಟರೆ, ಭಾರತ ತಂಡದ ಸಹ ಆಟಗಾರರು, ಸಿಬ್ಬಂದಿ ಸೇರಿದಂತೆ ಇಡೀ ಮೈದಾನವೇ ಈ ಬಾಲಕನ ಆಟಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಾಚ್ಚಿಗೆ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಆದರೆ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಲಂಕಾ ಬೌಲರ್‌ಗಳನ್ನು ಧೂಳೀಪಟ ಮಾಡಿ ಬೆವರಿಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮತ್ತೊಬ್ಬ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 39 ರನ್ ಗಳಿಸಿ ದುಲಾಜ್ ಸಮುದಿತಾ ಬೌಲಿಂಗ್‌ನಲ್ಲಿ ಔಟಾದರು.
ಬಳಿಕ 40 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಅವರು ಶಿರಾಜ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದೀಗ ನಾಯಕ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ ಅವರು ಆಕ್ರಮಣಕಾರಿ ಆಟ ಮುಂದುವರೆಸಿದ್ದಾರೆ. ಸದ್ಯ ಭಾರತ 'ಎ' ತಂಡವು ಆರಂಭಿಕರಿಬ್ಬರ ಮೂರು ವಿಕೆಟ್ ಕಳೆದುಕೊಂಡಿದ್ದರೂ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ. ಒಟ್ಟಿನಲ್ಲಿ ವೈಭವ್ ಬಗ್ಗೆ ಟೀಕೆ ಮಾಡಿದ್ದವರಿಗೆ ಇದು ಒಂದು ತಕ್ಕ ಪಾಠ ಆಗಿದೆ ಎಂದರೆ ತಪ್ಪಾಗಲಾರದು.
324.14, 94, 29, 10, 8.. ನಂಬರ್ಸ್ ಅರ್ಥ ಏನು?
* 324.14-ಸ್ಟ್ರೈಕ್ ರೇಟ್
* 94 - ರನ್
* 29 - ಎಸೆತ
* 10 - ಬೌಂಡರಿ
* 8 - ಸಿಕ್ಸ್












Click it and Unblock the Notifications