NEET: ಜಂತರ್ ಮಂತರ್‌ನಲ್ಲಿ ಪೊಲೀಸರ ಎಚ್ಚರಿಕೆ ಲೆಕ್ಕಿಸದೆ ರಾತ್ರಿಪೂರ್ತಿ ಸಿಜೆಪಿ ಧರಣಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು
ನವದೆಹಲಿ: ನೀಟ್ ಪೇಪರ್ ಸೋರಿಕೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ಡಿಪ್ಕೆ ನೇತೃತ್ವದಲ್ಲಿ ಬೆಂಬಲಿಗರು ನವದೆಹಲಿಯ ಜಂತರ್ ಮಂತರ್‌ನಲ್ಲಿ ರಾತ್ರಿಪೂರ್ತಿ ತಮ್ಮ ಧರಣಿಯನ್ನು ಮುಂದುವರಿಸಿದ್ದಾರೆ. ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ನೀಟ್ ಪೇಪರ್ ಸೋರಿಕೆ ಪ್ರತಿಭಟನೆ
ಈ ನೀಟ್ ಪೇಪರ್ ಸೋರಿಕೆ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಜಂತರ್ ಮಂತರ್‌ಗೆ ಆಗಮಿಸುವಂತೆ ಜನರಿಗೆ ಡಿಪ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ನೀಟ್ ಮರುಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಗಿದ ಬಳಿಕ ಹೋರಾಟದಲ್ಲಿ ಕೈಜೋಡಿಸುವಂತೆ ಅವರು ಕೋರಿದ್ದಾರೆ. "ನಾವು ಕೋಟೆಯನ್ನು ಕಾಯುತ್ತಿದ್ದೇವೆ, ಆದರೆ ನಿಮ್ಮ ಬೆಂಬಲವಿಲ್ಲದೆ ಈ ಚಳುವಳಿ ಯಶಸ್ವಿಯಾಗುವುದಿಲ್ಲ" ಎಂದು ಡಿಪ್ಕೆ ತಮ್ಮ ಬೆಂಬಲಿಗರಿಗೆ ಸ್ಫೂರ್ತಿ ತುಂಬಿದ್ದಾರೆ.

ಪೊಲೀಸರ ಸೂಚನೆ ಧಿಕ್ಕರಿಸಿ ರಾತ್ರಿಪೂರ್ತಿ ಧರಣಿ
ಶನಿವಾರ ಸಂಜೆ 5 ಗಂಟೆಗೆ ಜಂತರ್ ಮಂತರ್ ಪ್ರತಿಭಟನೆಗೆ ನೀಡಲಾಗಿದ್ದ ಅನುಮತಿ ಮುಕ್ತಾಯಗೊಂಡಿದೆ ಮತ್ತು ಸ್ಥಳವನ್ನು ತೆರವುಗೊಳಿಸುವಂತೆ ದೆಹಲಿ ಪೊಲೀಸರು ಪ್ರತಿಭಟನಾಕಾರರಿಗೆ ಸೂಚಿಸಿದ್ದರು. ಆದಾಗ್ಯೂ, ಪ್ರತಿಭಟನೆ ನಿರಂತರವಾಗಿ ಮುಂದುವರಿದಿದೆ. ಪ್ರತಿಭಟನೆಗೆ ಬೇರೆ ಸ್ಥಳವನ್ನು ನಿಯೋಜಿಸುವಂತೆ ಪೊಲೀಸರನ್ನು ಡಿಪ್ಕೆ ಕೋರಿದ್ದಾರೆ, ಆದರೆ ಅಲ್ಲಿಯವರೆಗೆ ಜಂತರ್ ಮಂತರ್‌ನಲ್ಲಿಯೇ ತಮ್ಮ ಧರಣಿ ಮುಂದುವರಿಸುವುದಾಗಿ ಅವರು ಪಟ್ಟು ಹಿಡಿದಿದ್ದಾರೆ.
ಪೊಲೀಸರು ಜನರನ್ನು ಜಂತರ್ ಮಂತರ್‌ಗೆ ಬರದಂತೆ ತಡೆಯಬಾರದು. ನಾವು ಯಾವುದೇ ತಪ್ಪು ಮಾಡುತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಕೇಳುತ್ತಿದ್ದೇವೆ ಎಂದು ಡಿಪ್ಕೆ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಮನವಿ ಮಾಡಿದ್ದಾರೆ. ಶನಿವಾರ ರಾತ್ರಿಯಿಂದ ಸಾರ್ವಜನಿಕ ಶೌಚಾಲಯಗಳಿಗೆ ನೀರಿನ ಪೂರೈಕೆ ಸ್ಥಗಿತಗೊಂಡಿದೆ ಎಂದು ಆರೋಪಿಸಿರುವ ಅವರು, ತಕ್ಷಣ ನೀರಿನ ಸೌಲಭ್ಯವನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ದೀಪಗಳನ್ನು ಆರಿಸಲಾಗಿದೆ ಹಾಗೂ ನೀರು, ಆಹಾರ ಮತ್ತು ಶೌಚಾಲಯಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಈ ಮೊದಲು ಆರೋಪಿಸಿದ್ದರು. ಬಳಿಕ ಕುಡಿಯುವ ನೀರಿನ ಸೌಲಭ್ಯ ಮತ್ತು ದೀಪಗಳ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಅನುಮತಿಸಲಾದ ಸಮಯ ಮೀರಿ ಸಿಜೆಪಿ ಪ್ರತಿಭಟನೆ ಮುಂದುವರಿಸುವುದು ನಿಯಮಗಳ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶನಿವಾರ ರಾತ್ರಿ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ, ಡಿಪ್ಕೆ ಮತ್ತು ಬೆಂಬಲಿಗರು ಸ್ಥಳದಲ್ಲೇ ಬಿಡಾರ ಹೂಡಿದ್ದು, ರಾತ್ರಿಯಿಡೀ ಧರಣಿ ನಡೆಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಪೇಪರ್ ಸೋರಿಕೆ ಮತ್ತು ಪ್ರವೇಶ ಪರೀಕ್ಷೆ ರದ್ದತಿಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಡಿಪ್ಕೆ ಒತ್ತಾಯಿಸಿದ್ದಾರೆ. "ಒಂದು ವೇಳೆ ಬಂಧನಗಳಾದರೆ, ನಾನೇ ಮೊದಲು ಬಂಧನಕ್ಕೊಳಗಾಗುತ್ತೇನೆ" ಎಂದು ಅವರು ಹೇಳಿದ್ದಾರೆ. ತಟ್ಟೆ ಮತ್ತು ಚಮಚಗಳನ್ನು ತಂದು ಶಬ್ದ ಮಾಡುವ ಮೂಲಕ ವಿಶಿಷ್ಟವಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವೂ ಇಲ್ಲಿ ನಡೆದಿದೆ.
ಏನಿದು ವಿವಾದ?
ಮೇ 3, 2026 ರಂದು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ಆದರೆ, ಪರೀಕ್ಷೆಗೂ ಮುನ್ನವೇ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗಳಲ್ಲಿ 'ಗೆಸ್ ಪೇಪರ್' ರೂಪದಲ್ಲಿ ಪಿಡಿಎಫ್ ಒಂದು ಹರಿದಾಡುತ್ತಿತ್ತು. ಪರೀಕ್ಷೆಯ ನಂತರ ಪರಿಶೀಲಿಸಿದಾಗ, ಆ ಪಿಡಿಎಫ್‌ನಲ್ಲಿದ್ದ ಬಹುತೇಕ ಪ್ರಶ್ನೆಗಳು ಅಸಲಿ ಪ್ರಶ್ನೆಪತ್ರಿಕೆಗೆ ನಿಖರವಾಗಿ ಹೊಂದಾಣಿಕೆಯಾಗಿದ್ದವು.
ಪರೀಕ್ಷೆ ರದ್ದತಿ ಮತ್ತು ಸಿಬಿಐ ತನಿಖೆ: ಸೋರಿಕೆಯ ಬಗ್ಗೆ ಸಾಕ್ಷ್ಯಗಳು ಹೊರಬಿದ್ದ ಹಿನ್ನೆಲೆಯಲ್ಲಿ, ತೀವ್ರ ಒತ್ತಡಕ್ಕೆ ಮಣಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೇ 12 ರಂದು ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. ಜೊತೆಗೆ ಕೇಂದ್ರ ಸರ್ಕಾರವು ಈ ಅಕ್ರಮದ ಸಮಗ್ರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಿದೆ.
ರದ್ದಾಗಿರುವ ಪರೀಕ್ಷೆಯನ್ನು ಜೂನ್ 21 ಅಂದರೆ ಇಂದು ಮರುಪರೀಕ್ಷೆ ನಡೆಸಲು ನಿರ್ಧರಿಸಿತು.
ಸುಪ್ರೀಂ ಕೋರ್ಟ್ ಅಸಮಾಧಾನ
ಈ ಹಿಂದೆಯೂ ಇಂತಹದ್ದೇ ಘಟನೆಗಳು ನಡೆದಿದ್ದರೂ, ಪರೀಕ್ಷಾ ಪ್ರಾಧಿಕಾರವಾದ NTA ಯಾವುದೇ ಪಾಠ ಕಲಿತಿಲ್ಲ ಮತ್ತು ಭದ್ರತಾ ವೈಫಲ್ಯಗಳನ್ನು ಸರಿಪಡಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸೋನಮ್ ವಾಂಗ್‌ಚುಕ್ ಬೆಂಬಲ
ಈ ಹೋರಾಟಕ್ಕೆ ಪ್ರಖ್ಯಾತ ಸೋನಮ್ ವಾಂಗ್‌ಚುಕ್ ಕೂಡ ಸಾಥ್ ನೀಡಿದ್ದಾರೆ. ಶಿಕ್ಷಣ ಸಚಿವರು ತಮ್ಮ ಸ್ಥಾನದಿಂದ ಕೆಳಗಿಳಿಯದಿದ್ದರೆ ಜೂನ್ 27 ರಂದು ತಾವು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ವಾಂಗ್‌ಚುಕ್ ಎಚ್ಚರಿಸಿದ್ದಾರೆ. ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸಿ ಮತ್ತು ಪದೇ ಪದೇ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಗಳನ್ನು ಖಂಡಿಸಿ ಸಿಜೆಪಿ ಆಯೋಜಿಸಿರುವ ಎರಡನೇ ದೊಡ್ಡ ನೀಟ್ ಪರೀಕ್ಷೆ ವಿವಾದ ಪ್ರತಿಭಟನೆ ಇದಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಈ ಬೃಹತ್ ಲೋಪಗಳ ವಿರುದ್ಧ ಯುವಜನತೆ ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.












Click it and Unblock the Notifications