ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ? ಲೇಟ್ ಅಟೆಂಡೆನ್ಸ್ ನಿಯಮ ಬದಲಾವಣೆಯ ಸಾಧ್ಯತೆ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದ 8ನೇ ವೇತನ ಆಯೋಗದ (8th Pay Commission) ಕುರಿತು ಚರ್ಚೆಗಳು ಆರಂಭವಾಗಿವೆ. ವೇತನ ಹೆಚ್ಚಳ, ಭತ್ಯೆಗಳ ಪರಿಷ್ಕರಣೆ ಮುಂತಾದ ವಿಷಯಗಳ ಜೊತೆಗೆ, 'ಆಫೀಸ್‌ಗೆ ತಡವಾಗಿ ಬರುವ ನೌಕರರ ವಿರುದ್ಧ ಇರುವ ನಿಯಮಗಳನ್ನು ಸಡಿಲಿಸಬೇಕು' ಎಂಬ ಬೇಡಿಕೆಯೂ ಈಗ ಗಮನ ಸೆಳೆಯುತ್ತಿದೆ.

ನೌಕರರ ಸಂಘಟನೆಗಳು, ವಿಶೇಷವಾಗಿ 'ನ್ಯಾಷನಲ್ ಕೌನ್ಸಿಲ್-ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (NC-JCM)', ಪ್ರಸ್ತುತ ಇರುವ ಲೇಟ್ ಅಟೆಂಡೆನ್ಸ್ ನಿಯಮಗಳಲ್ಲಿ ಬದಲಾವಣೆ ತರಲು 8ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿವೆ.

No More Half Day

ಈಗಿರುವ ನಿಯಮ ಏನು?

ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ:

* ಒಂದು ತಿಂಗಳಲ್ಲಿ ಎರಡು ಬಾರಿ ಮಾತ್ರ ನೌಕರರು ಒಂದು ಗಂಟೆಯವರೆಗೆ ತಡವಾಗಿ ಬರಬಹುದು.

* ಈ ಎರಡು ಸಂದರ್ಭಗಳಲ್ಲಿ ಯಾವುದೇ ಶಿಕ್ಷೆ ಅಥವಾ ರಜೆ ಕಡಿತ ಇರುವುದಿಲ್ಲ.

* ಆದರೆ ಮೂರನೇ ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ತಡವಾಗಿ ಬಂದರೆ, ಪ್ರತಿ ಬಾರಿ ಅರ್ಧ ದಿನದ ಕ್ಯಾಶುಯಲ್ ಲೀವ್ (CL) ಕಡಿತಗೊಳ್ಳುತ್ತದೆ.

ಅಂದರೆ, ತಿಂಗಳಲ್ಲಿ ಮೂರನೇ ಬಾರಿ ತಡವಾದರೆ ನೌಕರರ ರಜೆ ಖಾತೆಯಿಂದ ಅರ್ಧ ದಿನ ರಜೆ ಕಟ್ ಆಗುತ್ತದೆ.

ನೌಕರರು ಏನು ಹೇಳುತ್ತಿದ್ದಾರೆ?

ನೌಕರರ ಸಂಘಗಳ ಅಭಿಪ್ರಾಯವೇನೆಂದರೆ, ಇಂದಿನ ನಗರ ಜೀವನದಲ್ಲಿ ಟ್ರಾಫಿಕ್ ಸಮಸ್ಯೆ ಬಹಳ ಹೆಚ್ಚಾಗಿದೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮೊದಲಾದ ನಗರಗಳಲ್ಲಿ ರಸ್ತೆ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚುತ್ತಿದ್ದು, ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪುವುದು ನೌಕರರ ನಿಯಂತ್ರಣದಲ್ಲಿಲ್ಲ.

EPFO 3.0: ಪಿಎಫ್‌ ಹಣ ತೆಗೆಯೋದು ಸುಲಭ, ಆದರೆ ತೆರಿಗೆ ಅನ್ವಯಿಸುತ್ತಾ? ವಿವರ ಇಲ್ಲಿದೆ
EPFO 3.0: ಪಿಎಫ್‌ ಹಣ ತೆಗೆಯೋದು ಸುಲಭ, ಆದರೆ ತೆರಿಗೆ ಅನ್ವಯಿಸುತ್ತಾ? ವಿವರ ಇಲ್ಲಿದೆ

ಇದಲ್ಲದೆ, ಈಗ ಬಹುತೇಕ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಟೆಂಡೆನ್ಸ್ ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ನೌಕರರು ಎಷ್ಟು ನಿಮಿಷ ತಡವಾಗಿ ಬಂದಿದ್ದಾರೆ ಎಂಬ ಮಾಹಿತಿ ನಿಖರವಾಗಿ ದಾಖಲಾಗುತ್ತದೆ. ಈ ಕಾರಣಗಳಿಂದ ಹಳೆಯ ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಹೊಸ ಪ್ರಸ್ತಾವನೆ ಏನು?

NC-JCM ಸಂಘಟನೆ ಹೊಸ ವ್ಯವಸ್ಥೆಯನ್ನು ಸೂಚಿಸಿದೆ. ಅದರ ಪ್ರಕಾರ, ಒಂದು ತಿಂಗಳಲ್ಲಿ ಒಟ್ಟು 120 ನಿಮಿಷಗಳ (2 ಗಂಟೆಗಳ) ಲೇಟ್ ಅಟೆಂಡೆನ್ಸ್‌ಗೆ ಅವಕಾಶ ನೀಡಬೇಕು. ಈ 120 ನಿಮಿಷಗಳ ಮಿತಿಯೊಳಗೆ ಎಷ್ಟು ಬಾರಿ ತಡವಾಗಿ ಬಂದರೂ ರಜೆ ಕಡಿತ ಮಾಡಬಾರದು. ಒಟ್ಟು ಲೇಟ್ ಸಮಯ 120 ನಿಮಿಷ ಮೀರಿದ ನಂತರ ಮಾತ್ರ ಅರ್ಧ ದಿನದ CL ಕಡಿತ ಮಾಡಬಹುದು.

ಉದಾಹರಣೆಗೆ ಒಬ್ಬ ನೌಕರ ಮೊದಲ ದಿನ 20 ನಿಮಿಷ ತಡವಾಗಿ, ಎರಡನೇ ದಿನ 15 ನಿಮಿಷ ತಡವಾಗಿ, ಮೂರನೇ ದಿನ 30 ನಿಮಿಷ ತಡವಾಗಿ, ನಾಲ್ಕನೇ ದಿನ 25 ನಿಮಿಷ ತಡವಾಗಿ ಬರಬಹುದು. ಒಟ್ಟು ತಡವಾದ ಸಮಯ 90 ನಿಮಿಷ. ಹೊಸ ಪ್ರಸ್ತಾವನೆಯ ಪ್ರಕಾರ, ಇದು 120 ನಿಮಿಷಗಳ ಮಿತಿಯೊಳಗಿರುವುದರಿಂದ ಯಾವುದೇ ರಜೆ ಕಡಿತವಾಗುವುದಿಲ್ಲ. ಆದರೆ ಒಟ್ಟು ಲೇಟ್ ಸಮಯ 120 ನಿಮಿಷ ಮೀರಿದರೆ ನಂತರದ ನಿಯಮಗಳು ಅನ್ವಯಿಸಬಹುದು.

ಈ ಪ್ರಸ್ತಾವನೆ ಜಾರಿಯಾದರೆ ಟ್ರಾಫಿಕ್ ಸಮಸ್ಯೆಯಿಂದ ಬಳಲುವ ನೌಕರರಿಗೆ ನೆಮ್ಮದಿ ಸಿಗುತ್ತದೆ. ಸಣ್ಣ ಪ್ರಮಾಣದ ತಡಕ್ಕಾಗಿ ರಜೆ ಕಳೆದುಕೊಳ್ಳುವ ಪರಿಸ್ಥಿತಿ ತಪ್ಪುತ್ತದೆ. ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ನಿಖರ ಲೆಕ್ಕ ಇಡುವುದು ಸುಲಭವಾಗುತ್ತದೆ. ನೌಕರರ ಮೇಲೆ ಅನಗತ್ಯ ಒತ್ತಡ ಕಡಿಮೆಯಾಗಬಹುದು.

ಗಾಯಗೊಂಡ ನೌಕರರಿಗೂ ವಿಶೇಷ ಬೇಡಿಕೆ

ಲೇಟ್ ಅಟೆಂಡೆನ್ಸ್ ವಿಷಯ ಮಾತ್ರವಲ್ಲ, ಕೆಲಸದ ವೇಳೆ ಗಾಯಗೊಂಡ ನೌಕರರಿಗೆ ನೀಡುವ ರಜೆಯ ನಿಯಮದಲ್ಲೂ ಬದಲಾವಣೆ ತರಬೇಕೆಂದು ಸಂಘಟನೆಗಳು ಮನವಿ ಮಾಡಿವೆ. "Work Related Illness and Injury Leave (WRIIL)ʼʼ ಅಡಿಯಲ್ಲಿ, ಕರ್ತವ್ಯ ನಿರ್ವಹಿಸುವಾಗ ಗಾಯಗೊಂಡ ನೌಕರರಿಗೆ ಸಂಪೂರ್ಣ ವೇತನದೊಂದಿಗೆ ರಜೆ ನೀಡಬೇಕು. ಅವರು ಪಡೆಯುವ ಪರಿಹಾರ ಧನ (Compensation) ಆಧರಿಸಿ ವೇತನದಲ್ಲಿ ಯಾವುದೇ ಕಡಿತ ಮಾಡಬಾರದು. ಗಾಯದ ಕಾರಣದಿಂದ ರಜೆಯಲ್ಲಿದ್ದ ಅವಧಿಯಲ್ಲೂ ರಜೆ ಕ್ರೆಡಿಟ್‌ಗಳು ಮುಂದುವರಿಯಬೇಕು ಎಂಬ ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ.

8ನೇ ವೇತನ ಆಯೋಗದ ಮಹತ್ವ ಏನು?

8ನೇ ವೇತನ ಆಯೋಗದ ಶಿಫಾರಸುಗಳು ದೇಶದಾದ್ಯಂತ ಸುಮಾರು 1.1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಅವರ ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಲ್ಲಿ ಇದುವರೆಗೆ 7 ವೇತನ ಆಯೋಗಗಳು ಜಾರಿಗೆ ಬಂದಿವೆ. ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ರಚಿಸಲಾಗುತ್ತದೆ.

8ನೇ ವೇತನ ಆಯೋಗದಲ್ಲಿ ವೇತನ ಹೆಚ್ಚಳದ ಜೊತೆಗೆ ನೌಕರರ ದಿನನಿತ್ಯದ ಕೆಲಸದ ಪರಿಸ್ಥಿತಿಗಳಿಗೂ ಸಂಬಂಧಿಸಿದ ಹಲವು ವಿಷಯಗಳು ಚರ್ಚೆಯಾಗುತ್ತಿವೆ. ಅವುಗಳಲ್ಲಿ ಲೇಟ್ ಅಟೆಂಡೆನ್ಸ್ ನಿಯಮ ಸಡಿಲಿಸುವ ಪ್ರಸ್ತಾವನೆ ಪ್ರಮುಖ. ಟ್ರಾಫಿಕ್ ಮತ್ತು ನಗರ ಜೀವನದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಜಾರಿಯಾದರೆ ಸಾವಿರಾರು ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದ ನೆರವಾಗುವ ಸಾಧ್ಯತೆ ಇದೆ.

ಬರಹ: ಭವಾನಿ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+