ಕರ್ನಾಟಕದ ದೇವಾಲಯಗಳ ಹುಂಡಿಗಳಿಗೆ 4 CCTV ರಕ್ಷಣೆ, ಹಣ ಬಳಕೆ ಬಗ್ಗೆ ಜಿ.ಪರಮೇಶ್ವರ್ ಮಹತ್ವದ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 39 ಸಾವಿರ ದೇವಸ್ಥಾನಗಳಿವೆ. 'ಎ' ವರ್ಗದ ದೇವಸ್ಥಾನಗಳಿಗೆ ಸಾಕಷ್ಟು ಹಣ ಬರುತ್ತಿದೆ. ಭಕ್ತರು ಹುಂಡಿಗಳಲ್ಲಿ ಕಾಣಿಕೆಯನ್ನು ಹಾಕುತ್ತಾರೆ. ಹೀಗಾಗಿ ಪ್ರತಿಯೊಂದು ಹುಂಡಿ ಮೇಲೆ ನಿಗಾವಹಿಸಲು 4 ಕಡೆಗಳಿಂದ ಸಿಸಿಟಿವಿ ಅಳವಡಿಸಿ, ಕೇಂದ್ರ ಕಚೇರಿಯಿಂದ ನಿಗಾವಹಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಗುರುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ದೇವಸ್ಥಾನಗಳನ್ನು ಸಂಪೂರ್ಣವಾಗಿ ಸಿಸಿಟಿವಿ ಮೂಲಕ ನಿಗಾವಹಿಸಲು ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ಮಾಡಲಾಗುವುದು. ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಾಗುತ್ತಿರುವ ದುರುಪಯೋಗ ತಡೆಗಟ್ಟಲು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದರು.

ಹೊರ ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ರಾಜ್ಯ ಮುಜರಾಯಿ ಇಲಾಖೆಯ ಆಸ್ತಿ ಇದೆ. ಅಲ್ಲಿನ ಆಸ್ತಿ ಸಂರಕ್ಷಣೆ ಮಾಡಬೇಕು. ತಿರುಪತಿಯಲ್ಲಿ ನಮ್ಮ ರಾಜ್ಯಕ್ಕೆ ಸೇರಿದ 7ಎಕರೆ ಭೂಮಿ ಇದೆ. ಅಲ್ಲಿಗೆ ತೆರಳುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ಅದೇ ಪ್ರಕಾರ, ಶ್ರೀಶೈಲ, ವಾರಣಾಸಿ, ತುಳಜಾಪುರದಲ್ಲೂ ಮುಜರಾಯಿ ಇಲಾಖೆಗೆ ಸೇರಿದ ಆಸ್ತಿ ಇದೆ. ವಸತಿಗೃಹ, ಯಾತ್ರಿಗಳಿಗೆ ಉಳಿದುಕೊಳ್ಳಲು ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಕೊಲ್ಲೂರು ದೇಗುಲ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್
ರಾಜ್ಯದ 'ಎ' ವರ್ಗದ ದೇವಸ್ಥಾನದಲ್ಲಿ ಸಾಕಷ್ಟು ಹಣವಿದೆ. ಕೆಲವು ದಿನಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದೇನೆ. ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಎಲ್ಲಾ ದೇವಸ್ಥಾನಗಳಲ್ಲಿ ಕಾಣಿಕೆಯ ಹಣದ್ದು ಸರಿಯಾದ ಲೆಕ್ಕ ನೀಡಬೇಕು. 'ಎ' ವರ್ಗದ ದೇವಸ್ಥಾನಗಳಲ್ಲಿ ಸುಮಾರು 2,521 ಕೋಟಿ ರೂಪಾಯಿ ಫಿಕ್ಸ್ ಡೆಪಾಸಿಟಿ ಇದೆ. ಈ ಹಣ ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಖರ್ಚು ಮಾಡಬೇಕು. ಮುಂದಿನ ದಿನಗಳಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಕ್ರಮ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ದೇವಸ್ಥಾನಗಳ ಹಣ ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ. ಆ ದೇವಸ್ಥಾನದ ಅಭಿವೃದ್ಧಿಗೆ ಬಳಸುತ್ತೇವೆ. ಶೇ 10ರಷ್ಟು ಹಣವನ್ನುಮಾತ್ರ 'ಸಿ' ವರ್ಗದ ದೆವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.
ಹಾವೇರಿ; ಮೋಡ ಬಿತ್ತನೆ ವರದಿ
ಹಾವೇರಿಯಲ್ಲಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಿದ್ದಾರೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಅನುಕೂಲವಾಗಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಮಳೆ-ಮೋಡಗಳು ಸೃಷ್ಟಿ ಆಗುತ್ತಿಲ್ಲ. ಹೀಗಾಗಿ ಮೋಡ ಬಿತ್ತನೆ ಮಾಡುವುದು ಕಷ್ಟ. ವೈಜ್ಞಾನಿಕವಾಗಿ ಪರಿಶೀಲಿಸಿ, ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯಕ್ಕೆ ಸ್ವಾಭಾವಿಕವಾಗಿ ಬರ ಅಧ್ಯಯನ ತಂಡ ಬರುತ್ತದೆ. ಇದು ತಡವಾಗಬಾರದು. ಬರ ಘೋಷಣೆ ಮಾಡಲು ನಿಯಮಗಳನ್ನು ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೇಳಲಾಗಿದೆ. ಈಗಿನ ನಿಯಮದ ಪ್ರಕಾರ ಆಗಸ್ಟ್‌ವರೆಗೆ ಬರ ಘೋಷಣೆ ಮಾಡಲು ಆಗುವುದಿಲ್ಲ. ಅಲ್ಲಿಯವರೆಗೆ ಕಾಯಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಒಬ್ಬ ಅಥ್ಲೆಟ್. ಹೈಸ್ಕೂಲ್‌ನಲ್ಲಿ ಇರ್ಬೇಕಾದ್ರೆ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿದ್ದೆ. ಕಂಠೀರವ ಸ್ಟೇಡಿಯಂನಲ್ಲೂ ಆಡಿ ಮೊದಲ ಸ್ಥಾನ ಪಡೆದುಕೊಂಡಿದ್ದೆ. ದಸರಾ ಕ್ರೀಡೆ ಈ ಹಿಂದೆ ಇದ್ದಂತೆ ಆರಂಭಿಸಬೇಕು. ಕಬ್ಬಡ್ಡಿ, ಅಥ್ಲೆಟಿಕ್ಸ್, ಗ್ರಾಮೀಣ ಕ್ರೀಡೆಗಳು ಎಲ್ಲವೂ ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಟಿಟಿಡಿ ಆರತಿ ಬಗ್ಗೆ ಡಿಸಿಎಂ ಹೇಳಿದ್ದೇನು?
ಶ್ರೀ ಕೃಷ್ಣ ದೇವರಾಯ ಕಾಲದಲ್ಲಿ ತಿರುಪತಿಯಲ್ಲಿ ಮೊದಲ ಆರತಿ ಮಾಡಲು ವಿಜಯನಗರ ಸಂಸ್ಥಾನದವರಿಗೆ ಸಿಗುತ್ತಿತ್ತು. ತದನಂತರ ಮೈಸೂರು ಅರಸರಿಗೆ ಕೊಡಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಬಳಿಕ ಸಿಎಂ ಅವರು ಭಾಗವಹಿಸಬಹುದು ಎನ್ನುವ ನಿಯಮ ಬಂತು. ಈಗಿನ ಮುಖ್ಯಮಂತ್ರಿಗಳು ರಾಜ್ಯದ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆಂದು ತಿಳಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಭಾರತ್ ಜೋಡೋ ಯುವ ಸಂಘದ ಬಗ್ಗೆ ಸರಿಯಾಗಿ ಅರ್ಥವಾಗಿಲ್ಲ. ಜಾತ್ಯಾತೀತ, ಪಕ್ಷಾತೀತವಾಗಿ ಸಂಘವನ್ನು ಮಾಡಲಾಗುತ್ತಿದೆ. ಜಾತಿ, ಧರ್ಮದ ವ್ಯತ್ಯಾಸ ಹೋಗಬೇಕು. ಇದನ್ನು ಈಗಲೂ ಸಮಾಜದಲ್ಲಿ ನೋಡುತ್ತಿದ್ದೇವೆ. ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ. ಭಾರತ್ ಜೋಡೋ ಸಂಘ ಅನುಷ್ಟಾನದ ಸಂದರ್ಭದಲ್ಲಿ ಎಲ್ಲಾ ರೀತಿಯಲ್ಲೂ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.














Click it and Unblock the Notifications