TTD Arati: ಮೈಸೂರು ಮಹಾರಾಜರಿಂದ ಸರ್ಕಾರದವರೆಗೆ; ತಿರುಪತಿ ಆರತಿ ಸಂಪ್ರದಾಯ ಬಿಚ್ಚಿಟ್ಟ ಬೊಮ್ಮಾಯಿ
ನವದೆಹಲಿ: ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಮೊದಲ ಆರತಿ ಸ್ವೀಕರಿಸುವ ಸಂಪ್ರದಾಯ ಮತ್ತು ಜನಪ್ರತಿನಿಧಿಗಳ ಆದ್ಯತೆ ಕುರಿತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆಗಳಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಕೆ. ಶಿವಕುಮಾರ್ ಅವರು ಒಂದೇ ಬಾರಿಗೆ ಹತ್ತಾರು ಗೊಂದಲದ ಹೇಳಿಕೆಗಳನ್ನು ನೀಡುತ್ತಾ ತಮಗೇ ತಾವೇ ವಿರೋಧಾಭಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು. ಅಷ್ಟೇ ಅಲ್ಲದೇ ತಿರುಮಲದ ಆರತಿ ಸಂಪ್ರದಾಯ ಕುರಿತು ವಿವರಿಸಿದ್ದಾರೆ.
ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ದೇಗುದಲ್ಲಿ ನಿತ್ಯ ನಡೆಯುವ ಮೊದಲ ಆರತಿಗೆ ಕರ್ನಾಟಕದ ಜನಪ್ರತಿನಿಧಿಗಳಿಗೆ ನೀಡುವ ವಿಶೇಷ ಶಿಷ್ಟಾಚಾರದ ಆದೇಶ ಹೊರಡಿಸಲಾಗುವುದು ಎಂಬ ಡಿಕೆ ಶಿವಕುಮಾರ್ ಹೇಳಿಕೆಯನ್ನು ಟಿಟಿಡಿ ತಳ್ಳಿ ಹಾಕಿದೆ. ಪ್ರತ್ಯೇಕ ನಿಯಮಗಳಿಗೆ ಇಲ್ಲಿ ಅವಕಾಶ ಇಲ್ಲ. ಇಲ್ಲಿನ ಸಭೆಯಲ್ಲಿ ಚರ್ಚೆ ಆ ಬಗ್ಗೆ ನಿರ್ಧರಿಸಲಾಗುವುದು ಎಂದು ಟಿಟಿಡಿ ಮುಖ್ಯಸ್ಥರು ತಿಳಿಸಿದ್ದಾರೆ.

ಇದರ ಬೆನ್ನಲ್ಲೆ ಡಿಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ವ್ಯಾಪಕ ಚರ್ಚೆ ಆಗುತ್ತಿದ್ದು, ಇದೀಗ ಬೊಮ್ಮಾಯಿ ಅವರು ಆಕ್ಷೇಪಿಸಿ ನವದೆಹಲಿಯಲ್ಲಿ ಮಂಗಳವಾರ ಮಾತನಾಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಒಂದೇ ಬಾರಿಗೆ ಹಲವಾರು ಗೊಂದಲದ ವಿಷಯಗಳನ್ನು ಮಾತನಾಡುತ್ತಾರೆ. ದೇವರ ಮುಂದೆ ಎಲ್ಲರೂ ಸಮಾನರು ಎಂದು ಒಂದು ಕಡೆ ಹೇಳುವ ಅವರು, ಇನ್ನೊಂದೆಡೆ ಜನಪ್ರತಿನಿಧಿಗಳಿಗೆ ಆದ್ಯತೆ ನೀಡಬೇಕೆಂದು ಏಕೆ ಬಯಸುತ್ತಾರೆ? ಈಗ ಸಾರ್ವಜನಿಕ ವಲಯದಲ್ಲಿ ಎದುರಾಗಿರುವ ಟೀಕೆಗಳಿಗೆ ಹೆದರಿ ಎಲ್ಲರೂ ಸಮಾನರು ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ನಿಜವಾಗಿಯೂ ಎಲ್ಲರೂ ಸಮಾನರೆಂದಾದರೆ, ಅವರು ಮೊದಲ ಹಂತದಲ್ಲೇ ಅಂತಹ ಭೇದಭಾವದ ಹೇಳಿಕೆ ನೀಡಬಾರದಿತ್ತು" ಎಂದು ಹೇಳಿದರು.
ಆರತಿ ಸಂಪ್ರದಾಯದ ಇತಿಹಾಸ ಬಿಚ್ಚಿಟ್ಟ ಬೊಮ್ಮಾಯಿ
ದೇವಸ್ಥಾನದ ಮೊದಲ ಆರತಿಯ ಇತಿಹಾಸದ ಬಗ್ಗೆ ಮಾತನಾಡಿದ ಬೊಮ್ಮಾಯಿ "ಈ ಆರತಿಯು ದೀರ್ಘ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯಾಗಿದೆ. ಮಹಾನ್ ಸಾಮ್ರಾಟ ಕೃಷ್ಣದೇವರಾಯರು ಆ ದೇವಸ್ಥಾನವನ್ನು ನಿರ್ಮಿಸಿದರು. ಮೈಸೂರು ಒಡೆಯರ್ ಅವರು ವೆಂಕಟೇಶ್ವರ ಸ್ವಾಮಿಯ ಪರಮ ಭಕ್ತರಾಗಿದ್ದರು ಮತ್ತು ದೇವಸ್ಥಾನಕ್ಕೆ ಹಲವಾರು ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಆರತಿಯನ್ನು ಮೈಸೂರು ಮಹಾರಾಜರಿಗೆ ನೀಡುವ ಸಂಪ್ರದಾಯವಿತ್ತು" ಎಂದು ವಿವರಿಸಿದರು.
"ನಂತರದ ದಿನಗಳಲ್ಲಿ ರಾಜಪ್ರಭುತ್ವ ಕೊನೆಗೊಂಡು ಈ ಸಂಪ್ರದಾಯವು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರವಾಯಿತು. ಸರ್ಕಾರದ ಪರವಾಗಿ ವಿಶೇಷ ಅಧಿಕಾರಿಯೊಬ್ಬರು ಅಲ್ಲಿ ಪ್ರತಿನಿಧಿಯಾಗಿ ಇರುತ್ತಾರೆ. ಶಾಸಕರು, ಸಂಸದರು ಅಥವಾ ಜನಪ್ರತಿನಿಧಿಗಳು ಸರ್ಕಾರವನ್ನು ನೇರವಾಗಿ ಪ್ರತಿನಿಧಿಸುವುದಿಲ್ಲ. ಆದ್ದರಿಂದ, ಸರ್ಕಾರವನ್ನು ಅಧಿಕೃತವಾಗಿ ಪ್ರತಿನಿಧಿಸುವ ಅಧಿಕಾರಿಯೇ ಆರತಿ ಸ್ವೀಕರಿಸುವುದು ನ್ಯಾಯಸಮ್ಮತ ಮತ್ತು ಸರಿಯಾದ ಕ್ರಮವಾಗಿದೆ" ಎಂದು ಸ್ಪಷ್ಟಪಡಿಸಿದರು.
ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಡಿಕೆಶಿ
ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯಕ್ಕೆ ಯಾವುದೇ ಕೆಲಸವಿಲ್ಲದ ಕಾರಣ ಇಲ್ಲದ ವಿಷಯಗಳನ್ನು ಕೆದಕಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಅನಗತ್ಯ ಹಾಗೂ ಸಮಯ ವ್ಯರ್ಥ ಮಾಡುವ ಕೆಲಸವಾಗಿದೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಗಳು ಎಂದಿನಂತೆ ಮುಂದುವರಿಯಲಿ. ದೇವರ ಮುಂದೆ ಎಲ್ಲ ಜನರೂ ಸಮಾನರು" ಎಂದು ತಿಳಿಸಿದರು.












Click it and Unblock the Notifications