ಕೆಪಿಸಿಸಿ ಪದಗ್ರಹಣ ಸಮಾವೇಶ: ತಮ್ಮ ಪರ ಘೋಷಣೆ ಕೂಗಿದವರಿಗೆ ಕ್ಲಾಸ್ ತೆಗೆದುಕೊಂಡ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಐತಿಹಾಸಿಕ ಸಂಕಲ್ಪ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಆರು ವರ್ಷಗಳ ತಮ್ಮ ಅಧ್ಯಕ್ಷೀಯ ಪಯಣದ ಹೋರಾಟಗಳನ್ನು ಸ್ಮರಿಸಿದ ಅವರು, ಮುಂಬರುವ 2028 ಮತ್ತು 2029ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ವದ ಗುರಿಯನ್ನು ಕಾರ್ಯಕರ್ತರ ಮುಂದಿಟ್ಟರು.
"ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ"
ಸಮಾವೇಶದ ಭಾಷಣದ ನಡುವೆ ಕಾರ್ಯಕರ್ತರ ಗುಂಪೊಂದು ಡಿ.ಕೆ.ಶಿವಕುಮಾರ್ ಅವರ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿತು. ಇದರಿಂದ ಅಸಮಾಧಾನಗೊಂಡ ಶಿವಕುಮಾರ್ ಅವರು ತಕ್ಷಣವೇ ಘೋಷಣೆ ಕೂಗಿದವರನ್ನು ವೇದಿಕೆಯ ಮೇಲಿಂದಲೇ ತರಾಟೆಗೆ ತೆಗೆದುಕೊಂಡರು. "ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯ. ಇಲ್ಲಿ ಯಾರಿಗೂ ವ್ಯಕ್ತಿ ಪೂಜೆ ಅಗತ್ಯವಿಲ್ಲ, ಎಲ್ಲರೂ ಪಕ್ಷ ಪೂಜೆ ಮಾಡುವುದನ್ನು ಕಲಿಯಬೇಕು" ಎಂದು ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಮಾಡಿದರು.

ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ
ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕಾರ್ಯಕರ್ತರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಿದ ಡಿ.ಕೆ.ಶಿವಕುಮಾರ್, "ರಾಜ್ಯದ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರನ್ನೊಳಗೊಂಡ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುವುದು. ಇಡೀ ರಾಜ್ಯದ 7 ಸಾವಿರ ಪಂಚಾಯಿತಿ ಹಾಗೂ 4 ಸಾವಿರ ವಾರ್ಡ್‌ಗಳಲ್ಲಿ ಈ ಸಮಿತಿಗಳು ಅಸ್ತಿತ್ವಕ್ಕೆ ಬರಲಿದ್ದು, ಸಾವಿರಾರು ತಳಮಟ್ಟದ ಕಾರ್ಯಕರ್ತರು ಇದರ ಮೂಲಕ ಅಧಿಕಾರ ಪಡೆಯಲಿದ್ದಾರೆ. ಈ ಸಮಿತಿಯ ಸದಸ್ಯರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದಾಖಲೆಗಳನ್ನು ಮರುಪರಿಶೀಲನೆ ಮಾಡುವ ಹೊಣೆ ಹೊರಲಿದ್ದಾರೆ. ನಾಯಕನಾದವನು ಹಿಂಬಾಲಕರನ್ನಲ್ಲ, ಹೊಸ ನಾಯಕರನ್ನು ಬೆಳೆಸಬೇಕು ಎಂಬ ತತ್ವಕ್ಕೆ ಕಾಂಗ್ರೆಸ್ ಬದ್ಧವಾಗಿದೆ" ಎಂದರು.
ಕಾಲೇಜುಗಳಲ್ಲಿ ಇದೇ ವರ್ಷ ವಿದ್ಯಾರ್ಥಿ ಚುನಾವಣೆ
ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ರಾಜ್ಯದ ಕಾಲೇಜುಗಳಲ್ಲಿ ಇದೇ ವರ್ಷದಿಂದ ವಿದ್ಯಾರ್ಥಿ ನಾಯಕರ ಚುನಾವಣೆಯನ್ನು ಮರುಪ್ರಾರಂಭಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್‌ವರೆಗೆ ಹೊಸ ತಲೆಮಾರಿನ ನಾಯಕರನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.
ಸಿಎಂ ಆಗಿದ್ರೂ ಕಾರ್ಯಕರ್ತನಂತೆ ದುಡಿಯುವೆ
"ಇಡೀ ಸರ್ಕಾರ ಮತ್ತು ಪಕ್ಷ ಬಿ.ಕೆ.ಹರಿಪ್ರಸಾದ್ ಅವರ ನಾಯಕತ್ವದ ಬೆನ್ನಿಗೆ ನಿಲ್ಲಲಿದೆ. ನಾನು ಮುಖ್ಯಮಂತ್ರಿಯಾಗಿದ್ದರೂ ಸಹ ನಿಮ್ಮ ಜೊತೆ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತೇನೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಮುನ್ನಡೆಸಲಿದ್ದು, 2029ರಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಸಂಕಲ್ಪ. ಇದನ್ನು ಕಂಡು ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಕೈ ಹಿಸುಕಿಕೊಳ್ಳುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಪದಗ್ರಹಣ ಮಾಡಿದ್ದನ್ನು ನೆನೆದ ಸಿಎಂ, "ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಕಿಟ್ ನೀಡಿದ್ದು, ವಲಸೆ ಕಾರ್ಮಿಕರ ಬಸ್ ದರ ಸುಲಿಗೆಯನ್ನು ತಡೆದು 1 ಕೋಟಿ ರೂ. ನೆರವು ನೀಡಿದ್ದು, ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಉದ್ಯೋಗ ಕೊಟ್ಟ ಮಾತು ಈಡೇರಿಸಿದ್ದು ನಮ್ಮ ಹೆಮ್ಮೆ. ಇಂಧನ ಬೆಲೆ ಏರಿಕೆ ವಿರುದ್ಧದ ಹೋರಾಟ, ಮೇಕೆದಾಟು ಪಾದಯಾತ್ರೆ, ಪ್ರಜಾಧ್ವನಿ ಯಾತ್ರೆಯ ಮೂಲಕ ನಿಮ್ಮೆಲ್ಲರ ಶಕ್ತಿಯಿಂದಲೇ ಇಂದು ಪಕ್ಷ 136 ಸ್ಥಾನಗಳೊಂದಿಗೆ ಅಧಿಕಾರ ಹಿಡಿದಿದೆ" ಎಂದು ಪರಿಶ್ರಮ ಸ್ಮರಿಸಿದರು.
ಕೇಂದ್ರ ಸರ್ಕಾರದ ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಿದ ಅವರು, "ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಮತಗಳನ್ನು ತೆಗೆದುಹಾಕಲಾಗಿದೆ. ನಮ್ಮ ರಾಜ್ಯದಲ್ಲೂ ಹೊಸದಾಗಿ ಮತಪಟ್ಟಿ ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಬಿಎಲ್‌ಒ (BLO) ನೀಡುವ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ತುಂಬಿ ನೀಡದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ. ಮತದಾನದ ಹಕ್ಕು ಹೋದರೆ ಗ್ಯಾರಂಟಿ, ಪಿಂಚಣಿ ಸೌಲಭ್ಯಗಳೂ ಸಿಗುವುದಿಲ್ಲ. ಹೀಗಾಗಿ ಉಸ್ತುವಾರಿ ಸಚಿವರು ಮತ್ತು ಶಾಸಕರು ತಳಮಟ್ಟದಲ್ಲಿ ಜನರ ಹಕ್ಕು ರಕ್ಷಣೆಗೆ ಧಾವಿಸಬೇಕು" ಎಂದು ಮನವಿ ಮಾಡಿದರು. ರಾಜ್ಯದ 100 ಕ್ಷೇತ್ರಗಳಲ್ಲಿ 'ಗಾಂಧಿ ಭಾರತ' ಹೆಸರಿನಲ್ಲಿ ಕಾಂಗ್ರೆಸ್ ಭವನಗಳನ್ನು ನಿರ್ಮಿಸಲು ಜಾಗ ಮಂಜೂರು ಮಾಡಲಾಗಿದ್ದು, ವ್ಯಕ್ತಿಗಳು ಶಾಶ್ವತವಲ್ಲ ಆದರೆ ಕಾಂಗ್ರೆಸ್ ಎಂಬ ದೇವಾಲಯ ಶಾಶ್ವತವಾಗಿ ಉಳಿಯಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.













Click it and Unblock the Notifications