ಐಟಿ ಮಂದಿಗೆ ತಪ್ಪದ ಟ್ರಾಫಿಕ್ ನರಕ: ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ ಮತ್ತೆ ವಿಳಂಬ

ಬೆಂಗಳೂರಿನ ಔಟರ್ ರಿಂಗ್ ರೋಡ್ (ORR) ಭಾಗದಲ್ಲಿ ಸಂಚರಿಸುವ ಸಾವಿರಾರು ಐಟಿ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ನಮ್ಮ ಮೆಟ್ರೋ ಮತ್ತೊಂದು ನಿರಾಸೆಯ ಸುದ್ದಿ ನೀಡಿದೆ. ಕೆ.ಆರ್.ಪುರಂ, ಮಾರತ್ತಹಳ್ಳಿ, ಬೆಳ್ಳಂದೂರು ಮತ್ತು ಸಿಲ್ಕ್ ಬೋರ್ಡ್ ನಡುವೆ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದ ಜನರಿಗೆ ಮೆಟ್ರೋ 'ಬ್ಲೂ ಲೈನ್' (Blue Line) ಉದ್ಘಾಟನೆ ಮತ್ತಷ್ಟು ಮುಂದೂಡಲ್ಪಟ್ಟಿರುವುದು ಬೇಸರ ತಂದಿದೆ. ಸದ್ಯದ ಮಾಹಿತಿ ಪ್ರಕಾರ, ಬ್ಲೂ ಲೈನ್ ಮೆಟ್ರೋದ ಪ್ರಾಯೋಗಿಕ ಸಂಚಾರ ಆರಂಭವಾಗುವುದೇ ಅಕ್ಟೋಬರ್ 2026ಕ್ಕೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ಈ ಮಾರ್ಗ ಮುಕ್ತವಾಗಲು 2027ರ ಮಧ್ಯಭಾಗದವರೆಗೆ ಕಾಯುವುದು ಅನಿವಾರ್ಯವಾಗಿದೆ.

ಪ್ರತಿದಿನ 4 ಕೋಟಿ ರೂಪಾಯಿ ಆರ್ಥಿಕ ನಷ್ಟ

ಮೆಟ್ರೋ ಕಾಮಗಾರಿಯ ಈ ವಿಳಂಬ ಧೋರಣೆಯನ್ನು 'ಮಹದೇವಪುರ ಟಾಸ್ಕ್ ಫೋರ್ಸ್' ನಾಗರಿಕ ಸಮಿತಿ ತೀವ್ರವಾಗಿ ಖಂಡಿಸಿದೆ. ಯೋಜನೆಯಲ್ಲಿ ಎದುರಾಗುತ್ತಿರುವ ಅಡೆತಡೆಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಿರುವ ಈ ಸಮಿತಿಯು, "ಮೆಟ್ರೋ ಕಾಮಗಾರಿ ತಡವಾಗುತ್ತಿರುವ ಪ್ರತಿ ದಿನವೂ ಬೆಂಗಳೂರಿಗೆ ಬರೋಬ್ಬರಿ 4 ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ನಷ್ಟವಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದೆ. ಬಿಎಂಆರ್‌ಸಿಎಲ್ ತ್ವರಿತವಾಗಿ ಕೆಲಸ ಮುಗಿಸಬೇಕು, ಪ್ರಮುಖ ನಿಲ್ದಾಣಗಳಲ್ಲಿ ದಿನಗಣನೆ ಪ್ರದರ್ಶಿಸುವ ಕೌಂಟ್‌ಡೌನ್ ಬೋರ್ಡ್‌ಗಳನ್ನು ಅಳವಡಿಸಬೇಕು ಮತ್ತು ದಿನದ 24 ಗಂಟೆಯೂ ಕೆಲಸ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.

Namma Metro Blue Line

ಸಚಿವ ಕೃಷ್ಣ ಬೈರೇಗೌಡ ಸೂಚನೆ ಏನು?

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕೆ.ಆರ್.ಪುರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ 19.75 ಕಿಲೋಮೀಟರ್ ಉದ್ದದ (Reach 2A) ಮಾರ್ಗದ ಕೆಲವು ನಿಲ್ದಾಣಗಳಲ್ಲಿ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಮಾರತ್ತಹಳ್ಳಿ ಸೇರಿದಂತೆ ಕೆಲವು ನಿಲ್ದಾಣಗಳ ಕಾಮಗಾರಿ ತಡವಾಗುತ್ತಿದ್ದು, ತಾಂತ್ರಿಕ ಸವಾಲುಗಳ ನೆಪ ಹೇಳದೆ ದಿನದ 24 ಗಂಟೆಯೂ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ ಇಡೀ ಮಾರ್ಗದ ಬದಲು ಸಿದ್ಧವಾಗಿರುವ ಭಾಗಗಳಲ್ಲಿ, ಅಂದರೆ ಕೆ.ಆರ್.ಪುರದಿಂದ ಮಾರತ್ತಹಳ್ಳಿ ಹಾಗೂ ಮಾರತ್ತಹಳ್ಳಿಯಿಂದ ಎಚ್‌ಎಸ್‌ಆರ್ ಲೇಔಟ್‌ವರೆಗೆ ಹಂತ ಹಂತವಾಗಿ ಅಕ್ಟೋಬರ್‌ನಿಂದಲೇ ಪ್ರಾಯೋಗಿಕ ಸಂಚಾರ ಆರಂಭಿಸಲು ಅವರು ಸಲಹೆ ನೀಡಿದ್ದಾರೆ.

ಟ್ರಯಲ್ ರನ್ ಆದ ಮೇಲೂ 6 ತಿಂಗಳು ಕಾಯಬೇಕು

ಒಮ್ಮೆ ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾದರೂ ಸಾರ್ವಜನಿಕರ ಬಳಕೆಗೆ ಮೆಟ್ರೋ ಸಿಗಲು ಕನಿಷ್ಠ 5ರಿಂದ 6 ತಿಂಗಳು ಬೇಕಾಗುತ್ತದೆ. ಏಕೆಂದರೆ ರೈಲುಗಳ ವೇಗ ಪರೀಕ್ಷೆ, ಹಳಿಗಳ ಜೋಡಣೆ ಪರಿಶೀಲನೆ, ಸಿಗ್ನಲಿಂಗ್ ವ್ಯವಸ್ಥೆ, ಆರ್‌ಡಿಎಸ್‌ಒ (RDSO) ಪ್ರಮಾಣೀಕರಣ ಮತ್ತು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಅಂತಿಮ ಪರಿಶೀಲನೆ ಹಾಗೂ ಅನುಮೋದನೆ ದೊರೆಯಲು ಇಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ 2027ರ ಮಧ್ಯದ ಅವಧಿಗಿಂತ ಮುನ್ನ ಕಮರ್ಷಿಯಲ್ ಸಂಚಾರ ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನುಳಿದಂತೆ ಬ್ಲೂ ಲೈನ್‌ನ ಕೆ.ಆರ್.ಪುರಂನಿಂದ ಹೆಬ್ಬಾಳವರೆಗಿನ ಮಾರ್ಗವು ತಾಂತ್ರಿಕ ಸವಾಲುಗಳಿಂದಾಗಿ ಡಿಸೆಂಬರ್ 2027ಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹಾಗೆಯೇ 26 ಕಿಲೋಮೀಟರ್ ಉದ್ದದ ಹೆಬ್ಬಾಳ-ಏರ್‌ಪೋರ್ಟ್ (Phase 2B) ಮಾರ್ಗವನ್ನು ಜೂನ್ 2027ರೊಳಗೆ ಮುಗಿಸುವ ಗುರಿ ಹೊಂದಲಾಗಿದೆ. ಈ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ, "ಖಂಡಿತವಾಗಿಯೂ ಈ ಕೆಲಸಗಳು ನಾನು ಹೇಳಿದಷ್ಟು ಸುಲಭವಲ್ಲ. ಕನಿಷ್ಠ 2 ವರ್ಷ ಯೋಜನೆಗಳನ್ನು ವಿಳಂಬ ಮಾಡುವುದು ನಮ್ಮ ಇಲಾಖೆಗಳಲ್ಲಿ ಒಂದು ಸಂಸ್ಕೃತಿ ಆಗಿಬಿಟ್ಟಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೂ, ಆದಷ್ಟು ಬೇಗ ಈ ಯೋಜನೆಯನ್ನು ಸಾಕಾರಗೊಳಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+