ಅಯೋಧ್ಯೆ ರಾಮ ಮಂದಿರದ ಸಿಇಒ ಹುದ್ದೆಗೆ ಭಾರಿ ಪೈಪೋಟಿ: 24 ಗಂಟೆಯಲ್ಲಿ 1000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಆಡಳಿತವನ್ನು ನೋಡಿಕೊಳ್ಳಲು ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (ಸಿಇಒ) ನೇಮಕಾಮ ಮಾಡಿಕೊಳ್ಳುವ ಕೆಲಸ ಭರದಿಂದ ಸಾಗುತ್ತಿದೆ. ಇದೀಗ ರಾಮ ಮಂದಿರ ಸಿಇಒ ಹುದ್ದೆಗೆ ದೇಶಾದ್ಯಂತ ಭಾರಿ ಬೇಡಿಕೆ ಕಂಡುಬಂದಿದ್ದು, ನೇಮಕಾತಿ ಅಧಿಸೂಚನೆ ಹೊರಡಿಸಿದ ಕೇವಲ 24 ಗಂಟೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಈ ಹುದ್ದೆಯ ರೇಸ್‌ನಲ್ಲಿ ದೇಶದ ವಿವಿಧ ರಾಜ್ಯದ ನಿವೃತ್ತ ಐಎಎಸ್, ಐಪಿಎಸ್ ಹಾಗೂ ಹಿರಿಯ ಅಧಿಕಾರಿಗಳೇ ಪಟ್ಟಿಯ ಮುಂಚೂಣಿಯಲ್ಲಿದ್ದಾರೆ.
ಸದಸ್ಯ ಸಮಿತಿ ರಚನೆ
ಇತ್ತೀಚೆಗೆ ರಾಮ ಮಂದಿರದ ಕಾಣಿಕೆ ಹುಂಡಿಯಲ್ಲಿ ಹಣ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಮಂದಿರದ ಆಡಳಿತವನ್ನು ಮತ್ತಷ್ಟು ಬಿಗಿ ಮಾಡಬೇಕು ಎಂದು 'ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್' ನಿರ್ಧರಿಸಿದೆ. ಮಂದಿರದ ನಿರ್ವಹಣೆ ಮತ್ತು ದೈನಂದಿನ ವ್ಯವಹಾರಗಳ ಉಸ್ತುವಾರಿಗಾಗಿ ನೂತನ ಸಿಇಒ ನೇಮಕ ಮಾಡಲು ಟ್ರಸ್ಟ್ ಮೂರು ಜನರ ಆಯ್ಕೆ ಸಮಿತಿಯನ್ನು ರಚಿಸಿದೆ.

ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಹಾಗೂ ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷ, ನಿವೃತ್ತ ಅಣು ವಿಜ್ಞಾನಿ ಸುರೇಶ್ ಹವಾರೆ ಅವರು ಸದಸ್ಯರಾಗಿದ್ದಾರೆ. ಸಮಿತಿಯ ಅಧಿಕೃತ ಇ-ಮೇಲ್‌ಗೆ ಈ ಸಿಇಒ ನೇಮಕಾತಿಗೆ ಸಂಬಂಧಿಸಿದ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿದೆ.
ಸಿಇಒ ಹುದ್ದೆಗೆ ನಿಗದಿಪಡಿಸಿರುವ ಅರ್ಹತೆಗಳೇನು?
ರಾಮ ಮಂದಿರದ ಸಿಇಒ ಹುದ್ದೆಯು ಒಂದು ಜವಾಬ್ದಾರಿಯುತ ಸ್ಥಾನವಾಗಿರುವುದರಿಂದ, ಆಯ್ಕೆ ಸಮಿತಿಯು ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳನ್ನು ಪ್ರಕಟಿಸಿದೆ.
1. ವಯೋಮಿತಿ ಮತ್ತು ಅನುಭವ: ಅರ್ಜಿದಾರರ ವಯಸ್ಸು ಕಡ್ಡಾಯವಾಗಿ 50 ರಿಂದ 70 ವರ್ಷದೊಳಗಿರಬೇಕು. ಆಡಳಿತಾತ್ಮಕ ವಿಭಾಗದಲ್ಲಿ ಕನಿಷ್ಠ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಇರಬೇಕು.
2. ಧಾರ್ಮಿಕ ಹಿನ್ನೆಲೆ: ಹುದ್ದೆಗೆ ಅರ್ಜಿ ಸಲ್ಲಿಸುವವರು 'ಹಿಂದೂ ಧರ್ಮದ ಆಚರಣೆಗಳನ್ನು' ಪಾಲಿಸುವವರಾಗಿರಬೇಕು ಮತ್ತು 'ಭಗವಾನ್ ಶ್ರೀರಾಮನ ಮೇಲೆ ಅಪಾರ ಭಕ್ತಿ' ಹೊಂದಿರಬೇಕು.
3. ಭಾಷಾ ಜ್ಞಾನ ಹಾಗೂ ವಾಸಸ್ಥಳ: ಆಯ್ಕೆಯಾಗುವ ಅಭ್ಯರ್ಥಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಉತ್ತಮ ಹಿಡಿತವಿರಬೇಕು. ಜೊತೆಗೆ, ಅಯೋಧ್ಯೆಯಲ್ಲೇ ಶಾಶ್ವತವಾಗಿ ನೆಲೆಸಲು ಸಿದ್ಧರಿರಬೇಕು.
ಜುಲೈ 18 ಅರ್ಜಿ ಸಲ್ಲಿಸಲು ಕಡೆಯ ದಿನ. ಜುಲೈ 19ರಂದು ಆಯ್ಕೆ ಸಮಿತಿ ಸಭೆ ಸೇರಿ, ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಲಿದೆ. ತದನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ಗೊತ್ತುಮಾಡುತ್ತಾರೆ.
ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರಿಂದಲೂ ಅರ್ಜಿ ಸಲ್ಲಿಕೆ
ಈಗಾಗಲೇ ಅರ್ಜಿ ಸಲ್ಲಿಸಿರುವ ಸಾವಿರಾರು ಅಭ್ಯರ್ಥಿಗಳಲ್ಲಿ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಕೂಡ ಒಬ್ಬರಾಗಿದ್ದಾರೆ. ತಾವು ಈ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಿರುವುದಾಗಿ ಅವರೇ ತಿಳಿಸಿದ್ದಾರೆ. ಅಮಿತಾಭ್ ಠಾಕೂರ್ ಅವರು ಈ ಹಿಂದೆಯೂ ಹಲವು ಬಾರಿ ವಿವಾದಗಳ ಮೂಲಕವೇ ಸುದ್ದಿಯಾಗಿದ್ದರು. 1999ರಲ್ಲಿ ದೇವೋರಿಯಾ ಜಿಲ್ಲೆಯಲ್ಲಿ ಕೈಗಾರಿಕಾ ನಿವೇಶನ ಮಂಜೂರು ಮಾಡಿಸುವ ಸಂಬಂಧ ನಡೆದಿದೆ ಎನ್ನಲಾದ ಪ್ರಕರಣದಲ್ಲಿ, ಕಳೆದ ವರ್ಷ ಲಕ್ನೋ ಪೊಲೀಸರು ಇವರನ್ನು ಬಂಧಿಸಿದ್ದರು.
ರಾಮ ಮಂದಿರಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಕೋಟ್ಯಂತರ ರೂಪಾಯಿ ದೇಣಿಗೆ ಹರಿದುಬರುತ್ತಿದೆ. ಇಷ್ಟು ದೊಡ್ಡ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಮರ್ಥ್ಯವಿರುವ ಪ್ರಾಮಾಣಿಕ ಹಾಗೂ ಅನುಭವಿ ಅಧಿಕಾರಿಯ ಹುಡುಕಾಟದಲ್ಲಿ ಟ್ರಸ್ಟ್ ನಿರತವಾಗಿದೆ. ಮುಂದಿನ ದಿನಗಳಲ್ಲಿ ಯಾರಿಗೆ ಒಲಿಯಲಿದೆ ಈ ಪ್ರತಿಷ್ಠಿತ ಸಿಇಒ ಪಟ್ಟ ಎಂದು ಕಾದು ನೋಡಬೇಕಷ್ಟೇ.












Click it and Unblock the Notifications