ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಆಯ್ಕೆ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಕೆಪಿಸಿಸಿ (KPCC) ನೂತನ ಅಧ್ಯಕ್ಷರಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಅಧಿಕಾರ ವಹಿಸಿಕೊಂಡ ಪದಗ್ರಹಣ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ, ಪಕ್ಷದ ಮುಂದಿನ ರಾಜಕೀಯ ದಿಕ್ಸೂಚಿ ಹಾಗೂ ಸಿದ್ಧಾಂತಗಳ ಕುರಿತು ಮಾತನಾಡಿದರು. 2028ರ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದರ ಹಿಂದಿನ ಅಸಲಿ ಕಾರಣವನ್ನೂ ಸಿದ್ದರಾಮಯ್ಯ ಬಹಿರಂಗಪಡಿಸಿದರು.
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಹರಿಪ್ರಸಾದ್ ಆಯ್ಕೆ
ಬಿ.ಕೆ.ಹರಿಪ್ರಸಾದ್ ಅವರನ್ನು ಕೇವಲ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. "ಅದಕ್ಕಿಂತಲೂ ಮಿಗಿಲಾಗಿ ನಮ್ಮ ಪಕ್ಷದ ಜಾತ್ಯತೀತ ತತ್ವಗಳು ಮತ್ತು ಸಿದ್ಧಾಂತಗಳು ಪ್ರತಿಯೊಬ್ಬರಿಗೂ ತಲುಪಬೇಕಿದೆ. ಸಮಾಜದಲ್ಲಿ ಇಂದು ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲದವರು ಹೆಚ್ಚಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತವನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಹರಿಪ್ರಸಾದ್ ಅವರು ಎಂದಿಗೂ ಕೋಮುವಾದಿ ಶಕ್ತಿಗಳ ಜೊತೆ ರಾಜಿ ಮಾಡಿಕೊಂಡವರಲ್ಲ. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಮರುಸ್ಥಾಪಿಸಿ ದೇಶವನ್ನು ಮುನ್ನಡೆಸುವ ಕೆಲಸವನ್ನು ಅವರು ಯಶಸ್ವಿಯಾಗಿ ಮಾಡಲಿದ್ದಾರೆ ಎಂಬ ನಂಬಿಕೆ ನನಗಿದೆ" ಎಂದು ಸಿದ್ದರಾಮಯ್ಯ ಹೇಳಿದರು.

ಐದು ಉಪಚುನಾವಣೆಗಳ ಗೆಲುವೇ ಗ್ಯಾರಂಟಿಗಳಿಗೆ ಸಾಕ್ಷಿ
ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, "ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಜನರನ್ನು ತಲುಪಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ತೀವ್ರ ಸಂತಸವಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ 5 ವಿಧಾನಸಭಾ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ನಾವು ಎಲ್ಲಾ 5 ಕ್ಷೇತ್ರಗಳಲ್ಲಿ ಗೆದ್ದಿರುವುದೇ ಸಾರ್ವಜನಿಕರು ನಮ್ಮ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಅತ್ಯುತ್ತಮ ಉದಾಹರಣೆ" ಎಂದರು.
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ
ಮುಂದಿನ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಕಾರ್ಯಕರ್ತರಿಗೆ ಕರೆ ನೀಡಿದ ಸಿದ್ದರಾಮಯ್ಯ, "2028ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾರ್ಯಕರ್ತರೆಲ್ಲರೂ ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಮತ್ತಷ್ಟು ಸಧೃಡಗೊಳಿಸಬೇಕು. 2028 ಹಾಗೂ 2029ರ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವುದರ ಜೊತೆಗೆ, 2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಇಂದಿನಿಂದಲೇ ಸಂಕಲ್ಪ ಮಾಡಬೇಕು" ಎಂದು ಕರೆ ನೀಡಿದರು.
ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ಪಕ್ಷದ ಅತ್ಯುನ್ನತ ಜವಾಬ್ದಾರಿ ಹೊತ್ತುಕೊಂಡಿರುವ ಹರಿಪ್ರಸಾದ್ ಅವರ ನಡೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಮಾದರಿ. ಬಿ.ಕೆ. ಹರಿಪ್ರಸಾದ್ ಅವರ ರಾಜಕೀಯ ಹಿನ್ನೆಲೆ ನೆನೆದ ಸಿದ್ದರಾಮಯ್ಯ, "ಹರಿಪ್ರಸಾದ್ ಅವರು ಯಾವುದೇ ಗಾಡ್‌ಫಾದರ್ ಇಲ್ಲದೆ ಸಾಮಾನ್ಯ ಕುಟುಂಬದಿಂದ ಬಂದವರು. 1972ರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಸೇರಿ, ಇಂದು ಸುಮಾರು 5 ದಶಕಗಳ ಕಾಲ (50 ವರ್ಷ) ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ನಾಯಕನಾಗಿ, ಯುವ ಕಾಂಗ್ರೆಸ್ ಮುಖಂಡನಾಗಿ, ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ಹಾಗೂ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದಾರೆ. ಅವರ ಸೈದ್ಧಾಂತಿಕ ಬದ್ಧತೆ ಹಾಗೂ ಪಕ್ಷದ ಮೇಲಿರುವ ನಿಷ್ಠೆಯೇ ಇಂದು ಅವರನ್ನು ಈ ಎತ್ತರಕ್ಕೆ ಬೆಳೆಸಿದೆ" ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, "2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಹಾಳುಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಭಾರತವು ವಿವಿಧ ಜಾತಿ, ಧರ್ಮ ಮತ್ತು ವಿಭಿನ್ನ ಸಂಸ್ಕೃತಿಗಳ ಸುಂದರ ತೋಟ. ಇಲ್ಲಿನ ಬಹುತ್ವವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಬಿಜೆಪಿ ಮಾತ್ರ ಧರ್ಮ, ಜಾತಿ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹಾಗೂ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.













Click it and Unblock the Notifications