ಕೇರಳಕ್ಕೆ ನೈಋತ್ಯ ಮುಂಗಾರು ಆಗಮನ ವಿಳಂಬ ಸಾಧ್ಯತೆ
ತಿರುವನಂತಪುರ, ಮೇ 26; ಕೇರಳದಲ್ಲಿ ಮಳೆ ಮತ್ತು ಬಿಸಿಲು ಕಣ್ಣಾಮುಚ್ಚಾಲೆ ಆಡುತ್ತಿದ್ದು, ನೈರುತ್ಯ ಮುಂಗಾರು ವಿಳಂಬವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಭಾರತೀಯ ಹವಾಮಾನ ಇಲಾಖೆ ಕೆಲವು ದಿನಗಳ ಹಿಂದೆ, ನೈಋತ್ಯ ಮಾನ್ಸೂನ್ ಮೇ 27ರ ವೇಳೆಗೆ ಕೇರಳ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ಈಗ ಕೇರಳದಲ್ಲಿ ಮುಂಗಾರು ನಾಲ್ಕು ದಿನ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂಬ ವರದಿ ಬಂದಿದೆ.
ಸದ್ಯದ ಹವಾಮಾನ ಪರಿಸ್ಥಿತಿಯನ್ನು ಗಮನಿಸಿದರೆ, ಈಗಾಗಲೇ ಅಂಡಮಾನ್‌ಗೆ ತಲುಪಿರುವ ಮಾನ್ಸೂನ್ ನೈಋತ್ಯ ದಿಕ್ಕಿನಲ್ಲಿ ಅರಬ್ಬಿ ಸಮುದ್ರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಮಾರುತಗಳು ಸ್ಥಿರತೆ ಮತ್ತು ವೇಗವನ್ನು ಪಡೆದರೆ ಮಾತ್ರ ಕೇರಳಕ್ಕೆ ಮಾನ್ಸೂನ್ ಆಗಮನದ ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

"ನೈಋತ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್, ಕೊಮೊರಿನ್, ದಕ್ಷಿಣ, ಪೂರ್ವ-ಮಧ್ಯ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿವೆ" ಎಂದು ಬುಧವಾರ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಿದೆ.
ಹಳದಿ ಎಚ್ಚರಿಕೆ ವಾಪಸ್; ಮೇ 29ರವರೆಗೆ ವಿವಿಧ ಜಿಲ್ಲೆಗಳಿಗೆ ನೀಡಿದ್ದ ಹಳದಿ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಹಿಂತೆಗೆದುಕೊಂಡಿದೆ. ಆದಾಗ್ಯೂ, ಈ ಅವಧಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಬಲವಾದ ಗಾಳಿಯ ಜೊತೆಗೆ ಮಳೆ ಮತ್ತು ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಕೇರಳ, ಮಾಹೆ, ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ಗುರುವಾರ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಮುಂದಿನ ದಿನಗಳಲ್ಲಿ ಮಾನ್ಸೂನ್ ಮಾರುತಗಳು ಬಲಗೊಳ್ಳಲಿರುವುದರಿಂದ ಮುಂದಿನ ಐದು ದಿನಗಳಲ್ಲಿ ನೈಋತ್ಯ ಅರೇಬಿಯನ್ ಸಮುದ್ರದಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷದಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಮಾನ್ಸೂನ್ ಅವಧಿಯಲ್ಲಿ ದೇಶಾದ್ಯಂತ ಸಾಮಾನ್ಯ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶೇಕಡಾ 75ರಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications