ಅಬ್ಬಾ...ಸದ್ಯ ಬಜಾವ್: ಒಂಟಿ ಸಲಗದ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು!
ಚಾಮರಾಜನಗರ, ಫೆಬ್ರವರಿ 01: ಪ್ರಾಣಿ-ಮ ಮನುಷ್ಯರ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಒಂದು ಕಡೆ ಸೇವ್ ಬಂಡೀಪುರ ಅಭಿಯಾನ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪ್ರಾಗಳಿಂದ ನಮ್ಮನ್ನು ರಕ್ಷಿಸಿ ಎಂದು ಮನುಷ್ಯರು ಕೂಡ ಬೇಡಿಕೊಳ್ಳುವಂತಾಗಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗದ ಸ್ಥಿತಿಯಲ್ಲಿದೆ ಅರಣ್ಯ ಇಲಾಖೆ.
ಇದೆ ಬೆನ್ನಲ್ಲೇ ಬಂಡೀಪುರ ಅಭಯಾರಣ್ಯದ ಗಡಿಗೆ ಹೊಂದಿಕೊಂಡಂತ್ತಿರುವ ಕೇರಳದ ವೈನಾಡಿನ ಸುಲ್ತಾನ್ ಬತ್ತೇರಿ ಅರಣ್ಯದಲ್ಲಿ ರಸ್ತೆಗಿಳಿದ ಇಬ್ಬರು ಪ್ರವಾಸಿಗರನ್ನು ಒಂಟಿ ಸಲಗವೊಂದು ಅಟ್ಟಾಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಅದೃಷ್ಟವಶಾಃತ್ ಇಬ್ಬರು ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಕೇರಳದ ವಯನಾಡು ಅಭಯಾರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಪ್ರವಾಸಿಗರು ವಾಹನದಿಂದ ಇಳಿದು ಸೆಲ್ಫಿಗೋ ಅಥವಾ ಅರಣ್ಯ ವೀಕ್ಷಣೆಗೆ ರಸ್ತೆ ಬದಿಗೆ ಬಂದಿದ್ದಾರೆ. ಈ ವೇಳೆ ಮರದ ಪಕ್ಕದಲ್ಲಿ ನಿಂತಿದ್ದ ಕಾಡಾನೆಯೊಂದು ಏಕಾಏಕಿ ದಾಳಿಗೆ ಮುಂದಾಗಿದೆ.
ಇದರಿಂದ ಭಯಭೀಯತರಾದ ಪ್ರವಾಸಿಗರು ಕಾಲ್ತಿಕ್ಕಿತ್ತಿದ್ದಾರೆ. ಓಡುವ ಭರದಲ್ಲಿ ಒಬ್ಬಾತ ಕೆಳಗೆ ಬಿದ್ದಿದ್ದು, ಆತನನ್ನು ಸಲಗ ತುಳಿಯುವ ಪ್ರಯತ್ನ ಮಾಡಿದ್ದು, ಅದೃಷ್ಟವಶಾಃತ್ ವ್ಯಕ್ತಿ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.

ಬಂಡೀಪುರ: ಕಾದಾಟದಲ್ಲಿ ಗಂಡು ಹುಲಿ ಸಾವು
ಮತ್ತೊಂದು ಪ್ರಕರಣದಲ್ಲಿ ಕಾದಾಟದಲ್ಲಿ 3 ರಿಂದ 4 ವರ್ಷ ವಯಸ್ಸಿನ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ವ್ಯಾಪ್ತಿಯ ಮದ್ದೂರು ಗಸ್ತಿನ ಸೀಗನಬೆಟ್ಟದ ಬಳಿ ನಡೆದಿದೆ. ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಹುಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ಹುಲಿಯು ಕಾಡಿನೊಳಗೆ ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸುವಾಗ ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಮರಣೋತ್ತರ ಪರೀಕ್ಷೆ ಸಮಯದಲ್ಲಿ ಹುಲಿಯ ಹೊಟ್ಟೆಯ ಒಳಭಾಗದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಕಂಡುಬಂದಿದೆ. ಹೊಟ್ಟೆಯ ಒಳ ಭಾಗದಲ್ಲಿ ಮುಳ್ಳುಗಳು ಚುಚ್ಚಿ ರಕ್ತ ಸ್ರಾವವಾಗಿ ಹುಲಿಯು ಮೃತಪಟ್ಟಿದೆ ಎಂದು ಇಲಾಖಾ ಪಶುವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.












Click it and Unblock the Notifications