ಕರ್ನಾಟಕದ 4 ರೈಲು ನಿಲ್ದಾಣಗಳಿಗೆ ಹೊಸ ರೂಪ: ಏರ್‌ಪೋರ್ಟ್ ಮಾದರಿಯ ಸೌಲಭ್ಯ, 'ನಮೋ' ಲೋಕಾರ್ಪಣೆ
ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರದ 'ಅಮೃತ್ ಸ್ಟೇಷನ್' ಯೋಜನೆಯಡಿ ಕರ್ನಾಟಕ 4 ಸೇರಿದಂತೆ ಒಟ್ಟು 75 ನಿಲ್ದಾಣಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿವೆ. ಇಂದು ಆ ಎಲ್ಲ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದಾರೆ. ಕರ್ನಾಟಕ ಯಾವ ರೈಲು ನಿಲ್ದಾಣಗಳು ಹೊಸ ವಿನ್ಯಾಸ, ಸೌಲಭ್ಯಗಳೊಂದಿಗೆ ಜನ ಬಳಕೆಗೆ ಮುಕ್ತವಾಗಿವೆ? ಅಂದಾಜು ವೆಚ್ಚ, ಏನೆಲ್ಲ ಸೌಲಭ್ಯಗಳನ್ನು ಪ್ರಯಾಣಿಕರು ಪಡೆಯಬಹುದು ಎಂಬ ವಿವರ ಇಲ್ಲಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು 'ಅಮೃತ್ ಸ್ಟೇಷನ್'ಗಳ ಫೋಟೋ ಹಂಚಿಕೊಂಡಿದ್ದಾರೆ. ರೈಲ್ವೆ ಇಲಾಖೆಯು ದೇಶದಲ್ಲಿ ಇಂದಿನ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುತ್ತಾ, ನಾಳಿನ ಭಾರತದ ಕನಸುಗಳನ್ನು ಸಾಕಾರಗೊಳಿಸುವತ್ತ ಆಧುನಿಕ ರೈಲು ನಿಲ್ದಾಣಗಳಿಗೆ ಮರು ಜೀವ ನೀಡಿದೆ ಎಂದು ವಿ.ಸೋಮಣ್ಣ ಬಣ್ಣಿಸಿದ್ದಾರೆ.

'ಅಮೃತ ಭಾರತ ನಿಲ್ದಾಣ' ಯೋಜನೆ ಅಡಿಯಲ್ಲಿ ಕರ್ನಾಟಕದ 50ಕ್ಕೂ ಅಧಿಕ ರೈಲು ನಿಲ್ದಾಣಗಳು ಬಹುಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ. ಈ ಪೈಕಿ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಕೊಪ್ಪಳ, ಬಂಟ್ವಾಳ, ಬಾದಾಮಿ ಹಾಗೂ ಅಳ್ನಾವರ ರೈಲು ನಿಲ್ದಾಣಗಳು ಪ್ರಯಾಣಿಕರ ಬಳಕೆಗೆ ಇಂದು ಲೋಕಾರ್ಪಣೆಗೊಂಡಿವೆ.
ಹೊಸ ರೂಪದಲ್ಲಿ ನಿಲ್ದಾಣಗಳು ನಿರ್ಮಾಣ
ರೈಲು ನಿಲ್ದಾಣವು ಆಧುನಿಕ ಸೌಲಭ್ಯಗಳು, ಸುಧಾರಿತ ಪ್ರವೇಶ ವ್ಯವಸ್ಥೆ, ಉನ್ನತೀಕೃತ ಪ್ರಯಾಣಿಕರ ಸೌಲಭ್ಯಗಳು, ವಿಶಾಲ ಸಂಚಾರ ಸ್ಥಳಗಳು ಹಾಗೂ ನವೀಕೃತ ನಿಲ್ದಾಣ ಪರಿಸರದೊಂದಿಗೆ ಹೊಸ ರೂಪ ಪಡೆದುಕೊಂಡಿದೆ. ದೇಶದ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನವ ಕ್ರಾಂತಿಯೇ ಸೃಷ್ಠಿಯಾಗಿದೆ ಎಂದರು.
ವಿಮಾನ ನಿಲ್ದಾಣದಂತಿವೆ ರೈಲು ನಿಲ್ದಾಣಗಳು!
ರಾಜ್ಯದ ಬಂಟ್ವಾಳ, ಕೊಪ್ಪಳ, ಅಳ್ನಾವರ ಹಾಗೂ ಬಾದಾಮಿ ರೈಲು ನಿಲ್ದಾಣಗಳು ಲೋಕಾರ್ಪಣೆಗೊಳ್ಳಲಿವೆ. ಹೈಟೆಕ್ ಎಸ್ಕಲೇಟರ್‌ಗಳು, 12 ಮೀಟರ್ ಅಗಲದ ವಿಶಾಲ ಮೇಲ್ಸೇತುವೆಗಳು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಸುಲಭ ಸಂಚಾರ ಸೇರಿದಂತೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಈ ರೈಲು ನಿಲ್ದಾಣಗಳು ಒಳಗೊಂಡಿವೆ. ಸುಸಜ್ಜಿತ ವಿಶ್ರಾಂತಿ ಕೊಠಡಿ, ವಿದ್ಯುತ್ ಲೈಟ್, ವಾಹನ ಪಾರ್ಕಿಂಗ್ ವ್ಯವಸ್ಥೆ, ಭದ್ರತೆಗಾಗಿ ಸಿಸಿಟಿವಿ, ಮೊದಲಿಗಿಂತ ಅಧಿಕ ಮತ್ತು ಹೆಚ್ಚು ಉದ್ದನೆಯ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಎಲ್ಲ ಸೌಕರ್ಯಗಳು ಈ ನಿಲ್ದಾಣಗಳಲ್ಲಿವೆ. ಒಟ್ಟಾರೆ ಈ ರೈಲು ನಿಲ್ದಾಣಗಳಿಗೆ ಬಂದರೆ, ಏರ್‌ಪೋರ್ಟ್ ಗೆ ಹೋದಂತಹ ಅನುಭವ ಜನರಿಗೆ ಆಗಲಿದೆ.
ಪ್ರತ್ಯೇಕ ಪ್ರವೇಶ, ನಿರ್ಗಮನ ದ್ವಾರಗಳು, ಉಚಿತ ವೈಫೈ ಸೌಲಭ್ಯ, ಉನ್ನತೀಕರಿಸಿದ ನಿರೀಕ್ಷಣಾ ಕೊಠಡಿಗಳು, ಸ್ಕೈವಾಕ್ ಜೊತೆಗೆ ಎರಡು ಲಿಫ್ಟ್‌ಗಳು ಇವೆ. ನಿಲ್ದಾಣದ ಮುಂಭಾಗದ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲ ನಿಲ್ದಾಣಗಳಲ್ಲೂ ಇದೇ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ನಾಲ್ಕು ನಿಲ್ದಾಣಗಳಿಗೆ ಅಂದಾಜು 80ಕೋಟಿ ರೂಪಾಯಿ ಖರ್ಚಾಗಿದೆ.
ಕರ್ನಾಟಕದ ರೈಲುಗಳ ಅಂದಾಜು ವೆಚ್ಚ
* ದಕ್ಷಿಣ ಕನ್ನಡ ಜಿಲ್ಲೆಯ 'ಬಂಟ್ವಾಳ ರೈಲು ನಿಲ್ದಾಣ': ಅಂದಾಜು ವೆಚ್ಚ 26.18 ಕೋಟಿ ರೂ.
* ಉತ್ತರ ಕರ್ನಾಟಕದ 'ಕೊಪ್ಪಳ ರೈಲು ನಿಲ್ದಾಣ': 21.14 ಕೋಟಿ ರೂ.
* ಉತ್ತರ ಕನ್ನಡ ಜಿಲ್ಲೆಯ 'ಅಳ್ನಾವರ ರೈಲು ನಿಲ್ದಾಣ': 17.2 ಕೋಟಿ ರೂ.
* ಬಾಗಲಕೋಟೆ ಜಿಲ್ಲೆಯ 'ಬಾದಾಮಿ ರೈಲು ನಿಲ್ದಾಣ': 15.1 ಕೋಟಿ ರೂ.
ವಿಕಸಿತ ಭಾರತಕ್ಕಾಗಿ ಆಧುನಿಕ ಮೂಲಸೌಕರ್ಯ
— V. Somanna (@VSOMANNA_BJP) July 17, 2026
ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ದೇಶದ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನವ ಕ್ರಾಂತಿಯೇ ಸೃಷ್ಠಿಯಾಗಿದೆ. ಈ ಯೋಜನೆಯಡಿ ನಿರ್ಮಾಣವಾದ ದೇಶದ 75 ರೈಲು ನಿಲ್ದಾಣಗಳನ್ನು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮದ… pic.twitter.com/bvjpxHlGJj
ಅಮೃತ್ ಭಾರತ್ ನಿಲ್ದಾಣಗಳ ಜೊತೆಗೆ ಪ್ರಧಾನಿ ಮೋದಿಯವರು ದೇಶದಲ್ಲೇ ಮೊಟ್ಟ ಮೊದಲು ಹೈಡ್ರೋಜನ್ ಇಂಧನ ಕೋಶ ಆಧಾರದಲ್ಲಿ ಸಂಚಾರ ಮಾಡುವ 'ಹೈಡ್ರೋಜನ್ ರೈಲಿಗೆ' ಮತ್ತು ದೇಶದ ಎರಡನೇ ವಂದೇ ಭಾರತ್ ರೈಲಿನ ಮೊದಲ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.














Click it and Unblock the Notifications