ಮುಂಬೈಗಿಂತ ಗಾರ್ಡನ್ ಸಿಟಿ ಬೆಂಗಳೂರೇ ಬೆಸ್ಟ್: ತಾಯ್ತನದ ಬಳಿಕ ಕನಸಿನ ನಗರಿಯನ್ನೇ ಬದಲಾಯಿಸಿದ ವಿದೇಶಿ ಮಹಿಳೆ
ನಮ್ಮ ಜೀವನದಲ್ಲಿ ನಮ್ಮ ಆದ್ಯತೆಗಳು ಬದಲಾದಂತೆ ನಾವು ನೋಡುವ ದೃಷ್ಟಿಕೋನ ಮತ್ತು ನಮಗೆ ಇಷ್ಟ ಕಷ್ಟಗಳೂ ಕೂಡ ಬದಲಾಗುತ್ತೆ. ನೆದರ್ಲೆಂಡ್ಸ್ ಮೂಲದ ವಿದೇಶಿ ಮಹಿಳೆಯೊಬ್ಬರ ಜೀವನ ಕಥೆ ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎನ್ನಬಹುದು. ವರ್ಷಗಳಿಂದ ಮುಂಬೈ ನಗರದಲ್ಲಿ ನೆಲೆಸಬೇಕು ಎಂಬ ದೊಡ್ಡ ಕನಸು ಕಂಡಿದ್ದ ಆಕೆ, ಕೊನೆಗೂ ಅಲ್ಲಿಗೆ ಸ್ಥಳಾಂತರಗೊಂಡಾಗ ಎದುರಾದ ಅನುಭವಗಳು ಅವರಿಗೆ ಶಾಕ್ ನೀಡಿದೆ. ಇದರಿಂದಾಗಿ ಮುಂಬೈಗಿಂತ ಉದ್ಯಾನ ನಗರಿ ಬೆಂಗಳೂರೇ ತಮಗೆ ನೆಮ್ಮದಿ ನೀಡಿದ ಸ್ಥಳ ಎಂಬುದನ್ನು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ಹೌದು, ಇದಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಮ್ ಬಳಕೆದಾರರಾದ ಇವಾನಾ ಪೆರ್ಕೋವಿಕ್ ಹಂಚಿಕೊಂಡಿರುವ ವಿಡಿಯೋ ಸದ್ಯ ಇಂಟರ್ನೆಟ್ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ತಾಯ್ತನ ತಂದ ಮಹತ್ವದ ಬದಲಾವಣೆ
ಇವಾನಾ ಪೆರ್ಕೋವಿಕ್ ತುಂಬ ಸಮಯದಿಂದ ಭಾರತದಲ್ಲೇ ನೆಲೆಸಿದ್ದಾರೆ. ಮುಂಬೈ ಮೇಲೆ ಅವರಿಗೆ ಅಪಾರ ಆಕರ್ಷಣೀಯ ಹಾಗೂ ಅದು ಅವರಿಗೆ ಕನಸಿನ ನಗರಿ ಕೂಡ ಆಗಿತ್ತು. ಆದರೆ, ಅವರು ತಾಯ್ತನಕ್ಕೆ ಕಾಲಿಟ್ಟಾಗ ಅವರ ಕನಸುಗಳು ಬೇರೆಯದೇ ಆದ ತಿರುವು ಪಡೆದುಕೊಂಡಿದೆ. "ತಾಯ್ತನ ಎಂಬುದು ನಮ್ಮ ಕೆಲವು ಸುಂದರ ಕನಸುಗಳನ್ನು ಹೇಗೆ ದುಸ್ವಪ್ನವಾಗಿ ಬದಲಾಯಿಸಬಹುದು ಎಂಬುದು ಆಶ್ಚರ್ಯ ತರುತ್ತದೆ ಅಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ. ಮುಂಬೈಗೆ ತೆರಳಿದ ತಕ್ಷಣವೇ ಅವರಿಗೆ ಮತ್ತೆ ಬೆಂಗಳೂರಿಗೆ ಮರಳಬೇಕು ಎಂಬ ಆಸೆ ಉಂಟಾಗಿದೆ ಅಂತೆ.
ಮುಂಬೈ ತಲುಪಿದ ಇವಾನಾಗೆ ಅಲ್ಲಿನ ಅತಿಯಾದ ಉಷ್ಣಾಂಶ, ಅಲ್ಲಿನ ಜೀವನಶೈಲಿ ಮತ್ತು ಸದಾ ಗಿಜಿಗುಡುವ ಜನದಟ್ಟಣೆ ತೀರಾ ಮುಜುಗರ ಹಾಗೂ ಆಯಾಸ ಉಂಟುಮಾಡಿತು. ಈ ಹಿಂದೆ ತಾವು ಇಷ್ಟಪಡುತ್ತಿದ್ದ ಜೀವನಶೈಲಿ ಈಗ ತಮಗೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನು ಅವರು ಅರಿತುಕೊಂಡರು. ಆ ಸಮಯದಲ್ಲಿ ಅವರು ಗರ್ಭಾವಸ್ಥೆಗೆ ಸಂಬಂಧಿಸಿದ ಪ್ಲಾಸೆಂಟಾ ರಕ್ತಸ್ರಾವ ಮತ್ತು ತೀವ್ರ ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇಂತಹ ಸಮಸ್ಯೆಯ ನಡುವೆ ಮುಂಬೈನ ಸಣ್ಣ ಅಪಾರ್ಟ್ಮೆಂಟ್ನಲ್ಲಿ ವಾಸಿಸುವುದು ಅವರಿಗೆ ಒಂಟಿತನ ಮತ್ತು ಮಾನಸಿಕ ಒತ್ತಡವನ್ನು ತಂದಿತು.
ಬೆಂಗಳೂರಿನ ಹಸಿರು ಮತ್ತು ಪ್ರಶಾಂತ ವಾತಾವರಣ
ಮುಂಬೈಗೆ ಹೋಗುವ ಮುಂಚೆ ಇವಾನಾ ಬೆಂಗಳೂರಿನಲ್ಲಿ ತುಂಬ ಆರಾಮದಾಯಕ ಜೀವನ ನಡೆಸುತ್ತಿದ್ದರು. ಬೆಂಗಳೂರು ತಮಗೆ ಹಸಿರು ಮತ್ತು ವಿಶಾಲವಾದ ಪರಿಸರವನ್ನು ಒದಗಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ತಾಯ್ತನಕ್ಕೆ ಸಿದ್ಧರಾಗುತ್ತಿದ್ದ ಇವಾನಾ ಅವರಿಗೆ ಇಂತಹದ್ದೇ ಒಂದು ಶಾಂತವಾಗಿರುವ ವಾತಾವರಣದ ಅಗತ್ಯವಿತ್ತು. ಅದನ್ನೇ ಬೆಂಗಳೂರು ಮತ್ತು ಮುಂಬೈ ಜೀವನಶೈಲಿ ನಡುವಿನ ವ್ಯತ್ಯಾಸವಾಗಿ ಅವರು ಗುರುತಿಸಿದ್ದಾರೆ.
ವರ್ಷಗಳಿಂದ ಕಂಡ ಕನಸು ನನಸಾಗಿದ್ದರೂ ತಮಗೆ ಸಂತೋಷಪಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಅಪರಾಧ ಪ್ರಜ್ಞೆಯೂ ಇವಾನಾ ಅವರನ್ನು ಕಾಡಿತ್ತು. "ಬಹಳ ದಿನಗಳವರೆಗೆ ನಾನು ನನ್ನದೇ ಭಾವನೆಗಳನ್ನು ನಿರಾಕರಿಸುತ್ತಿದ್ದೆ, ಏಕೆಂದರೆ ಇದು ನನ್ನ ಕನಸಿನ ನಗರವಾಗಿತ್ತಲ್ಲವೇ?" ಎಂದು ಅವರು ಹೇಳಿದ್ದಾರೆ. ಆದರೆ, ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗಳು ಮತ್ತು ನಮ್ಮ ಆದ್ಯತೆಗಳು ಬದಲಾಗುವುದು ಸಹಜ ಎಂಬುದನ್ನು ಅವರು ಕೊನೆಗೂ ಒಪ್ಪಿಕೊಂಡರು.
ನೆಟ್ಟಿಗರ ಕಮೆಂಟ್
ಇವಾನಾ ಅವರ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಸ್ಥಳಕ್ಕೆ ಹೋದಾಗ ಎದುರಾಗುವ ಇಂತಹ ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಕುರಿತು ಮಾತನಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರಿನ ಪ್ರಶಾಂತ ವಾತಾವರಣ ಹಾಗೂ ಮುಂಬೈನ ವೇಗದ ಬದುಕು ವಿಭಿನ್ನ ಹಂತದ ಜನರನ್ನು ಆಕರ್ಷಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಜೀವನದ ಒಂದು ಹಂತದಲ್ಲಿ ಖುಷಿ ನೀಡುವ ನಗರ, ಮತ್ತೊಂದು ಹಂತದಲ್ಲಿ ಅದು ಅತಿಯನಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


Click it and Unblock the Notifications
