Bengaluru: ಸದ್ಯಕ್ಕಿಲ್ಲ GBA ಎಲೆಕ್ಷನ್, ಹೊಸ ಡೆಡ್ಲೈನ್ ನಿಗದಿಪಡಿಸಿದ ಸುಪ್ರೀಂ ಕೋರ್ಟ್
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಹೊಸ ನಗರ ಪಾಲಿಕೆಗಳ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆದಂತಿದೆ. ಈ ಪಾಲಿಕೆಗಳ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡದೆ, ಇದೇ ವರ್ಷದ ಡಿಸೆಂಬರ್ 31ರ ಒಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಖಡಕ್ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಮಹತ್ವದ ಆದೇಶ ಹೊರಡಿಸಿದ್ದು, ಸರ್ಕಾರದ ವಿಳಂಬ ನೀತಿಗೆ ಬ್ರೇಕ್ ಹಾಕಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆ
ಎಲ್ಲರಿಗೂ ಗೊತ್ತಿರುವ ಹಾಗೆ ಬೆಂಗಳೂರಿನ ಆಡಳಿತವನ್ನು ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ಹಿಂದೆ ಇದ್ದ ಬಿಬಿಎಂಪಿಯನ್ನು ವಿಭಜಿಸಿ, ಈಗಾಗಲೇ ಜಿಬಿಎ ಅಡಿಯಲ್ಲಿ ಐದು ಪ್ರತ್ಯೇಕ ನಗರ ಪಾಲಿಕೆಗಳನ್ನು ರಾಜ್ಯ ಸರ್ಕಾರ ರಚಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್, ಆಗಸ್ಟ್ 31ರೊಳಗೆ ಈ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿತ್ತು.

ಆದರೆ, ಸವಾಲುಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಈ ಗಡುವಿನೊಳಗೆ ಚುನಾವಣೆ ನಡೆಸುವುದು ಅಸಾಧ್ಯ ಎಂದರಿತ ರಾಜ್ಯ ಸರ್ಕಾರ, ಚುನಾವಣೆಯನ್ನ ಮುಂದೂಡುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸರ್ಕಾರದ ಈ ಮನವಿಯನ್ನು ಪರಿಶೀಲಿಸಿರುವ ನ್ಯಾಯಾಲಯವು ಹೊಸ ಗಡುವನ್ನ ನೀಡಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವಿಳಂಬ
ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವಾಗ ಪ್ರಮುಖವಾಗಿ 'ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ' ಪ್ರಕ್ರಿಯೆಯನ್ನ ಉಲ್ಲೇಖಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಮುಗಿಯಲು ನವೆಂಬರ್ ತಿಂಗಳವರೆಗೂ ಆಗಬಹುದು. ಪರಿಷ್ಕೃತ ಮತದಾರರ ಪಟ್ಟಿ ಸಿದ್ಧವಾಗದೆ ಪಾರದರ್ಶಕ ಚುನಾವಣೆ ನಡೆಸುವುದು ಅಸಾಧ್ಯ. ಹೀಗಾಗಿ, ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ ಆಗಸ್ಟ್ 31ರ ಗಡುವಿನೊಳಗೆ ಚುನಾವಣೆ ನಡೆಸಲು ಆಗುವುದಿಲ್ಲ ಎಂದು ಸರ್ಕಾರವು ನ್ಯಾಯಾಲಯಕ್ಕೆ ಸೂಕ್ತ ಕಾರಣಗಳೊಂದಿಗೆ ವಿವರಿಸಿತು. ಈ ಅಂಶವನ್ನು ಪರಿಶೀಲಿಸಿದ ಪೀಠ, ಚುನಾವಣಾ ಗಡುವನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿದೆ.
ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ
ಡಿಸೆಂಬರ್ 31ರವರೆಗೆ ಗಡುವನ್ನ ವಿಸ್ತರಿಸಿದ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನ ನೀಡಿದೆ. "ಡಿಸೆಂಬರ್ ತಿಂಗಳು ಸಮೀಪಿಸಿದಾಗ, ಮತ್ತಾವುದೋ ಹೊಸ ಕಾರಣಗಳನ್ನು ಅಥವಾ ನೆಪಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಇನ್ನಷ್ಟು ಮುಂದೂಡುವಂತೆ ಕೋರಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಬಾರದು. ಕೊಟ್ಟಿರುವ ಗಡುವಿನೊಳಗೆ ಯಾವುದೇ ಲೋಪವಿಲ್ಲದೆ ಚುನಾವಣಾ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು" ಎಂದು ಸ್ಪಷ್ಟವಾಗಿ ಹೇಳಿದೆ.
ಈ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರವಾಗಿ ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಹಾಜರಾಗಿದ್ದರು. ನ್ಯಾಯಾಲಯದ ಎಚ್ಚರಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, "ಒಂದು ವೇಳೆ ಭವಿಷ್ಯದಲ್ಲಿ ಚುನಾವಣೆ ಮುಂದೂಡುವಂತೆ ಕೋರಿ ರಾಜ್ಯ ಸರ್ಕಾರವು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾದರೆ, ಆಗ ನಾನು ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗುವುದಿಲ್ಲ" ಎಂದು ನ್ಯಾಯಾಲಯದ ಮುಂದೆಯೇ ಸ್ಪಷ್ಟಪಡಿಸಿದ್ದಾರೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ


Click it and Unblock the Notifications
