ಬಿಜೆಪಿ ಪಟ್ಟಿ: ಶಶಿ ತರೂರ್‌ಗೆ ರಾಜೀವ್ ಚಂದ್ರಶೇಖರ್ ಎದುರಾಳಿ!
ತಿರುವನಂತಪುರಂ, ಮಾರ್ಚ್ 03: ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಸ್ಪರ್ಧೆ ಮಾಡುವ ಕ್ಷೇತ್ರಗಳು ಅಂತಿಮವಾಗಿದೆ.
ಕೇರಳ ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಗಮನ ಸೆಳೆದಿರುವುದು ತಿರುವನಂತರಪುರಂ ಕ್ಷೇತ್ರ. ಹಾಲಿ ಸಂಸದರು ಕಾಂಗ್ರೆಸ್ ನಾಯಕ ಶಶಿ ತರೂರ್.

ತಿರುವನಂತಪುರಂ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಕೇಂದ್ರ ಸಚಿವರು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅಭ್ಯರ್ಥಿ.
ಹ್ಯಾಟ್ರಿಕ್ ಬಾರಿಸಿರುವ ತರೂರ್: ತಿರುವನಂತಪುರಂ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಕಾಂಗ್ರೆಸ್ ನಾಯಕ ಶಶಿ ತರೂರ್ ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.
ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗಿದ್ದವರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರು. ಮೊದಲ ಬಾರಿಗೆ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಬಿಜೆಪಿ ಕೇರಳದಲ್ಲಿ ತಿರುವನಂತಪುರಂ ಮತ್ತು ತ್ರಿಶೂರ್ ಕ್ಷೇತ್ರದಲ್ಲಿ ಮಾತ್ರ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಮೊದಲ ಚುನಾವಣೆಯಲ್ಲಿ ರಾಜೀವ್ ಚಂದ್ರಶೇಖರ್ ಶಶಿ ತರೂರ್‌ಗೆ ಸೋಲುಣಿಸಲಿದ್ದಾರೆಯೇ? ಕಾದು ನೋಡಬೇಕಿದೆ.
ರಾಜೀವ್ ಚಂದ್ರಶೇಖರ್ ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು. ಅವರು ಯುವ ಮತದಾರರು ಅದರಲ್ಲೂ ಐಟಿ ಉದ್ಯೋಗಿಗಳನ್ನು ಸೆಳೆಯಬಲ್ಲರು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಮೂಲತಃ ರಾಜೀವ್ ಚಂದ್ರಶೇಖರ್ ಕೇರಳದ ತ್ರಿಶೂರ್‌ನವರು. ಅವರು ರಾಜ್ಯಸಭಾ ಸದಸ್ಯರಾಗಿದ್ದು ಕರ್ನಾಟಕದ ವಿಧಾನಸಭೆಯಿಂದ ಮಲೆಯಾಳಿಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜೀವ್ ಚಂದ್ರಶೇಖರ್‌ಗೆ ಟಿಕೆಟ್ ನೀಡಿದೆ. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಕೆಲವು ದಿನಗಳ ಹಿಂದೆ ಅಂತ್ಯಗೊಂಡಿತ್ತು.
ಕೇರಳದ ಇತರ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ತಿರುವನಂತಪುರಂನಲ್ಲಿ ಬಿಜೆಪಿ ಕಳೆದ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿದೆ. 2014, 2019ರ ಚುನಾವಣೆಯಲ್ಲಿ ಪಕ್ಷವು ಶೇ 30ಕ್ಕಿಂತ ಅಧಿಕ ಮತಗಳನ್ನು ಇಲ್ಲಿ ಪಡೆದಿದೆ. ಒಟ್ಟು 7 ವಿಧಾನಸಭಾ ಕ್ಷೇತ್ರಗಳು ಇಲ್ಲಿವೆ.
ಕಾಂಗ್ರೆಸ್ ನಾಯಕ ಎ. ಚಾರ್ಲ್ಸ್ 1984, 1989, 1991ರಲ್ಲಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದರು. 2009ರಿಂದ ಮೂರು ಬಾರಿ ಗೆದ್ದು ಶಶಿ ತರೂರ್ ಸಹ ಹ್ಯಾಟ್ರಿಕ್ ಹೊಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶಶಿ ತೂರೂರ್ ಸೋಲಿಸಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಶಿ ತರೂರ್ 416,131 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಕುಮ್ಮನ್ ರಾಜಶೇಖರನ್ (316,142 ಮತ) ಸೋಲಿಸಿ ಹ್ಯಾಟ್ರಿಕ್ ಬಾರಿಸಿದರು. ಸಿಪಿಐನ ಸಿ. ದಿವಾಕರನ್ 258,556 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದರು.
2014ರ ಚುನಾವಣೆಯಲ್ಲಿ ಶಶಿ ತರೂರ್ 297,806 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಓ. ರಾಜಗೋಪಾಲ್ 282,336 ಮತಗಳನ್ನು ಪಡೆದಿದ್ದರು. ಸಿಪಿಐನ ಡಾ. ಬೆನೆಟ್ ಅಬ್ರಾಹಂ 248,941 ಮತಗಳನ್ನು ಪಡೆದಿದ್ದರು.
2009ರ ಚುನಾವಣೆಯಲ್ಲಿ ಬಿಜೆಪಿ 4ನೇ ಸ್ಥಾನಕ್ಕೆ ಕುಸಿದಿತ್ತು. ಕಾಂಗ್ರೆಸ್‌ನ ಶಶಿ ತರೂರ್ 326,725 ಮತಗಳನ್ನು ಪಡೆದು ಜಯಗಳಿಸಿದ್ದರು. ಸಿಪಿಐನ ಪಿ. ರಾಮಚಂದ್ರ ನಾಯರ್ 226,727 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ಬಿಎಸ್‌ಪಿಯ ಡಾ. ಎ. ಎನ್. ನಾದರ್ 86,233 ಮತಗಳಿಂದ 3ನೇ ಸ್ಥಾನ ಪಡೆದರೆ ಬಿಜೆಪಿಯ ಪಿ. ಕೆ. ಕೃಷ್ಣದಾಸ್ 84,094 ಮತಗಳನ್ನು ಪಡೆದಿದ್ದರು.












Click it and Unblock the Notifications