ವಿಮಾನದಿಂದ ಜಿಗಿದು ಇನ್‌ಸ್ಟ್ರಕ್ಟರ್ ಆತ್ಮ*ಹತ್ಯೆ: ಒಂಟಿಯಾಗಿ ವಿಮಾನ ಲ್ಯಾಂಡ್ ಮಾಡಿ ಪ್ರಾಣ ಉಳಿಸಿಕೊಂಡ ವಿದ್ಯಾರ್ಥಿನಿ
ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ವಿಮಾನ ಹಾರಾಡುತ್ತಿರುವಾಗ ಪಕ್ಕದಲ್ಲಿ ಕುಳಿತಿದ್ದವರು ಅದರಲ್ಲಿಯೂ ನಮಗೆ ಹೇಳಿಕೊಡುವ ಇನ್‌ಸ್ಟ್ರಕ್ಟರ್ ಇದ್ದಕ್ಕಿದ್ದಂತೆ ಬಾಗಿಲು ತೆರೆದು ಮೇಲಿನಿಂದ ಕೆಳಗೆ ಜಿಗಿದರೆ ಏನಾಗಬಹುದು?
ಯಾರಿಂದಲೂ ಇದ್ದನ್ನಾ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿಜವಾಗಿಯೂ ಕೂಡ ಇಂತಹ ನಡುಕ ಹುಟ್ಟಿಸುವಂತಹ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಪೈಲಟ್‌ಗಳಿಗೆ ವಿಮಾನ ಹಾರಾಟದ ತರಬೇತಿ ನೀಡುತ್ತಿದ್ದ ಇನ್‌ಸ್ಟ್ರಕ್ಟರ್ ಆಕಾಶದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಪಕ್ಕದಲ್ಲಿದ್ದ 22 ವರ್ಷದ ವಿದ್ಯಾರ್ಥಿನಿ, ಗಾಬರಿಯಾಗದೆ ಧೈರ್ಯದಿಂದ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ.

ಘಟನೆಯ ಹಿನ್ನೆಲೆ
ಅರ್ಜೆಂಟೀನಾದ ಕಾರ್ಡೊಬಾ ಪ್ರಾಂತ್ಯದ ಟೊಲೆಡೊ ಎಂಬಲ್ಲಿ ಜುಲೈ 4 ರಂದು ಈ ವಿಮಾನ ಘಟನೆ ನಡೆದಿದೆ. 42 ವರ್ಷದ ಲಿಯಾಂಡ್ರೊ ಆಂಡ್ರೆಸ್ ಬರ್ಟಾಝೊ ಎಂಬಾತ 'ಫ್ಲೈಯಿಂಗ್ ಪ್ಯಾರಟ್ ಕಾರ್ಡೊಬಾ' ಎಂಬ ಫ್ಲೈಯಿಂಗ್ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿಮಾನ ಹಾರಾಟದ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ.
ಆತ 22 ವರ್ಷದ ರೊಸಾರಿಯೊ ಎಂಬ ವಿದ್ಯಾರ್ಥಿನಿಯೊಂದಿಗೆ ಮಾರ್ಗದರ್ಶಕನಾಗಿದ್ದು ಸೆಸ್ನಾ 150 ವಿಮಾನದಲ್ಲಿ ಆಕಾಶಕ್ಕೆ ಹಾರಿದ್ದ. ವಿಮಾನವು ಸುಮಾರು ಸುಮಾರು 820 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಲಿಯಾಂಡ್ರೊ, "ಮುಂದೇನು ಮಾಡಬೇಕು ಎಂದು ನಿನಗೆ ಎಲ್ಲಾ ತಿಳಿದಿದೆ, ನೀನೇ ಮುಂದುವರಿಸು" ಎಂದು ವಿದ್ಯಾರ್ಥಿನಿಗೆ ಹೇಳಿ, ತಕ್ಷಣವೇ ತನ್ನ ಹೆಡ್‌ಸೆಟ್ ಮತ್ತು ಸೀಟ್‌ಬೆಲ್ಟ್ ತೆಗೆದು, ವಿಮಾನದ ಬಾಗಿಲು ತೆರೆದು ಕೆಳಕ್ಕೆ ಜಿಗಿದಿದ್ದಾನೆ.
ವಿದ್ಯಾರ್ಥಿನಿಯ ಸಾಹಸ
ತನ್ನ ಕಣ್ಣೆದುರೇ ಮಾರ್ಗದರ್ಶಕ ಕೆಳಗೆ ಬಿದ್ದರೂ ಹೆದರದೆ ವಿದ್ಯಾರ್ಥಿನಿ ರೊಸಾರಿಯೊ, ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಆದರೆ ರೊಸಾರಿಯೊ ಬಳಿ ಈಗಾಗಲೇ ವಿಮಾನ ಹಾರಾಟದ ಪರವಾನಗಿ ಇತ್ತು. ಆಕೆ ಕೇವಲ ಇನ್‌ಸ್ಟ್ರಕ್ಟರ್ ಜೊತೆಗಿನ ಹಾರಾಟದ ಸಮಯವನ್ನು ಪೂರ್ಣಗೊಳಿಸ ಬೇಕಿತ್ತು ಅಷ್ಟೇ.
ತನ್ನೆಲ್ಲಾ ಅನುಭವವನ್ನು ಬಳಸಿಕೊಂಡು ಆಕೆ ಒಂಟಿಯಾಗಿ ಸೆಸ್ನಾ 150 ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಲ್ಯಾಂಡ್ ಆದ ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಶೋಧ ಕಾರ್ಯಾಚರಣೆ ನಡೆಸಿದಾಗ ಲಿಯಾಂಡ್ರೊ ಮೃತದೇಹ ಪತ್ತೆಯಾಗಿದೆ.
ಲಿಯಾಂಡ್ರೊ ಆಂಡ್ರೆಸ್ ಬರ್ಟಾಝೊ ಹಿನ್ನೆಲೆ
ಲಿಯಾಂಡ್ರೊ ಆಂಡ್ರೆಸ್ ಬರ್ಟಾಝೊ ಒಬ್ಬ ಎಫ್‌ಎಎ ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಪರವಾನಗಿ ಹೊಂದಿದ್ದ ನುರಿತ ಪೈಲಟ್ ಆಗಿದ್ದ. ಆ ದಿನ ಆತ ಎಂದಿನಂತೆ ತುಂಬಾ ಖುಷಿಯಿಂದಲೇ ಶಾಲೆಗೆ ಬಂದಿದ್ದ. ಒಬ್ಬ ವ್ಯಕ್ತಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಮತ್ತೊಬ್ಬ ವ್ಯಕ್ತಿ ಪಕ್ಕದಲ್ಲಿರುವಾಗ ಆತ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಮಗೆಲ್ಲರಿಗೂ ತೀವ್ರ ಆಘಾತ ತಂದಿದೆ ಎಂದು ಫ್ಲೈಯಿಂಗ್ ಶಾಲೆಯ ನಿರ್ದೇಶಕ ಎಡ್ವರ್ಡೊ ಅಲ್ವಾರೆಜ್ ಹೇಳಿದ್ದಾರೆ. ಆತ ಯಾವಾಗಲು ನಗುಮುಖದ ವ್ಯಕ್ತಿಯಾಗಿದ್ದ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಕಾರ್ಡೊಬಾದ ಫೆಡರಲ್ ಪ್ರಾಸಿಕ್ಯೂಟರ್ ಕಚೇರಿ ತನಿಖೆ ಆರಂಭಿಸಿದೆ. ಲಿಯಾಂಡ್ರೊ ತಂದೆ ನೀಡಿರುವ ಮಾಹಿತಿಯ ಪ್ರಕಾರ, ಆತ ಕಳೆದ ಕೆಲವು ದಿನಗಳಿಂದ ತೀವ್ರವಾದ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದ. ಇದಕ್ಕಾಗಿ ಆತ ಮಾನಸಿಕ ತಜ್ಞರಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದ ಎನ್ನಲಾಗಿದೆ.
ಆದರೆ, ಈ ವಿಚಾರ ಫ್ಲೈಯಿಂಗ್ ಶಾಲೆಯ ಯಾರಿಗೂ ತಿಳಿದಿರಲಿಲ್ಲ. ಸದ್ಯ ಪೊಲೀಸರು ಈ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಆತನ ಈ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.












Click it and Unblock the Notifications