ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಬಾಣಂತಿಗೆ ಶಾಕ್ ಕೊಟ್ಟ Amazon: ವೈರಲ್ ಆಗ್ತಿದೆ ಕಾರ್ಪೊರೇಟ್ ವಲಯದ ಕರಾಳ ಮುಖ
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾರ್ಪೊರೇಟ್ ವಲಯದಲ್ಲಿನ ನೈತಿಕತೆ, ಉದ್ಯೋಗಿ ಸ್ನೇಹಿ ವಾತಾವರಣ, ಸಮಾನ ಅವಕಾಶಗಳ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ಎಲ್ಲಾ ಕಂಪೆನಿಗಳು ಇವೆಲ್ಲ ಅಂಶಗಳು ಎಷ್ಟರ ಮಟ್ಟಿಗೆ ಅನುಷ್ಟಾನಗೊಂಡಿದೆ ಎಂಬ ಪ್ರಶ್ನೆ ಬಂದಾಗ ಬೇಸರವಾಗುತ್ತದೆ. ಮಹಿಳೆಯರು, ಅದರಲ್ಲೂ ಉದ್ಯೋಗಸ್ಥ ಅಮ್ಮಂದಿರು ಎದುರಿಸುವ ಸಮಸ್ಯೆಗಳು ಒಂದೆರಡಲ್ಲ.
ಇದಕ್ಕೆ ಪೂರಕ ಎನ್ನುವಂತೆ ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಭರತ್ ಪ್ರಜಾಪತಿ ಎಂಬುವವರು ಹಂಚಿಕೊಂಡಿರುವ ಪೋಸ್ಟ್ ಒಂದು, ಕಾರ್ಪೊರೇಟ್ ವಲಯದ ವಾಸ್ತವವನ್ನು ಎಲ್ಲರ ಮುಂದೆ ತೆರೆದಿಟ್ಟಿದೆ. ಬಾಣಂತಿಯೊಬ್ಬಳು ತನ್ನ ವೃತ್ತಿಜೀವನದ ಮಹತ್ವದ ಹೆಜ್ಜೆಯನ್ನಿಡಲು ಹೊರಟಾಗ ಆಕೆಗೆ ಎದುರಾದ ಕಹಿ ಅನುಭವ, ದೊಡ್ಡ ದೊಡ್ಡ ಕಂಪನಿಗಳ ಸಂವಹನದ ವೈಫಲ್ಯವನ್ನು ಎತ್ತಿತೋರಿಸಿದೆ.

ಮಹಿಳೆಯೊಬ್ಬರು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲುಗಲ್ಲು ಇಡುವ ಉದ್ದೇಶದಿಂದ ಪ್ರತಿಷ್ಠಿತ 'ಅಮೆಜಾನ್ ಇನ್ನೋವೇಶನ್ ಆಕ್ಸಿಲರೇಟರ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಳು. ಆಕೆಗೆ ಐದು ತಿಂಗಳ ಮಗು ಒಂದಿತ್ತು. ತಾನು ಮಗುವಿಗೆ ಎದೆಹಾಲು ಉಣಿಸುತ್ತಿರುವ ಬಾಣಂತಿ ಉದ್ಯೋಗಿ ಎಂಬುದನ್ನು ಆಕೆ ಮೊದಲೇ ಅಮೆಜಾನ್‌ಗೆ ಸ್ಪಷ್ಟವಾಗಿ ತಿಳಿಸಿದ್ದಳು.
ಕಾರ್ಯಕ್ರಮದ ಸಮಯದಲ್ಲಿ ಮಗುವಿನ ಆರೈಕೆಗಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಆಕೆ ಮಾಡಿಕೊಂಡಿದ್ದಳು. ಮಗುವನ್ನು ನೋಡಿಕೊಳ್ಳಲು ತನ್ನ ಪತಿಯನ್ನೂ ಕೂಡ ಜೊತೆಯಲ್ಲಿ ಕರೆದೊಯ್ಯಲು ನಿರ್ಧರಿಸಿ, ಅವರಿಗೂ ಸೇರಿಸಿ ರೈಲು ಟಿಕೆಟ್‌ಗಳನ್ನು ಖರೀದಿಸಿ, ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮುಗಿಸಿದ್ದಳು.
ವೃತ್ತಿ ಮತ್ತು ತಾಯ್ತನ ಎರಡನ್ನೂ ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಲು ಹೊರಟಿದ್ದ ಆಕೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಕೊನೆಗಳಿಗೆಯಲ್ಲಿ ಆಘಾತ ನೀಡಿದ 'ಅಮೆಜಾನ್ ಪಾಲಿಸಿ'
ಎಲ್ಲಾ ಸಿದ್ಧತೆ ಮುಗಿಸಿ, ಆಕೆ ರೈಲು ಹತ್ತಿ ತನ್ನ ಪ್ರಯಾಣವನ್ನು ಆರಂಭಿಸಿದ್ದಳು. ಆದರೆ, ಪ್ರಯಾಣದ ಮಧ್ಯದಲ್ಲಿ ಅಮೆಜಾನ್‌ನಿಂದ ಬಂದ ಆ ಒಂದು ಫೋನ್ ಕರೆ ಆಕೆಯ ಉತ್ಸಾಹವನ್ನು ಕಿತ್ತುಕೊಂಡಿದೆ. "ನೀವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ" ಎಂಬ ಸಂದೇಶವನ್ನು ಆಕೆಗೆ ನೀಡಲಾಯಿತು. ಇದಕ್ಕೆ ಅವರು ನೀಡಿದ ಕಾರಣವೆಂದರೆ, ಅಮೆಜಾನ್‌ನ ಪೂರೈಕೆ ಕೇಂದ್ರದ ಆವರಣದಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ ಎಂಬ 'ಅಮೆಜಾನ್ ಪಾಲಿಸಿ' ನಿಯಮ.
ನಿಯಮಗಳಿರುವುದು ಸಹಜ. ಆದರೆ, ಆ ನಿಯಮವನ್ನು ಮೊದಲೇ ತಿಳಿಸದೆ, ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಪ್ರಯಾಣ ಬೆಳೆಸಿದ ನಂತರ ಈ ರೀತಿ ನಿರಾಕರಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಅನ್ಯಾಯದ ಬಗ್ಗೆ ಆ ಮಹಿಳೆ ಸಾರ್ವಜನಿಕವಾಗಿ ತನ್ನ ಅನುಭವವನ್ನು ಹಂಚಿಕೊಂಡಳು. ನೋಡನೋಡುತ್ತಿದ್ದಂತೆ ಈ 'ಲಿಂಕ್ಡ್‌ಇನ್ ಪೋಸ್ಟ್' ವೈರಲ್ ಆಗಿ, ಕಾರ್ಪೊರೇಟ್ ಜಗತ್ತಿನ ಬಗ್ಗೆ ಭಾರೀ ಚರ್ಚೆ ಹುಟ್ಟುಹಾಕಿದೆ. ತೀವ್ರ ಟೀಕೆ ವ್ಯಕ್ತವಾದ ನಂತರ, ಅಮೆಜಾನ್ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿತು ಮತ್ತು ಇದನ್ನಾ ಮರುಪರಿಶೀಲಿಸುವುದಾಗಿ ಭರವಸೆ ನೀಡಿತು. ಆದರೆ, ಇಲ್ಲಿ ಕ್ಷಮೆಯಾಚನೆಗಿಂತಲೂ ಆ ಘಟನೆ ಬಹಳ ಮುಖ್ಯವಾಗುತ್ತದೆ.
ಕಂಪನಿಯ ನೀತಿ-ನಿಯಮಗಳು ಹಾಗೂ ಸುರಕ್ಷತೆ ಎಷ್ಟು ಮುಖ್ಯವೋ, ಸರಿಯಾದ ಸಂವಹನವೂ ಅಷ್ಟೇ ಮುಖ್ಯ. ಒಂದು ಫೋನ್ ಕರೆ, ವಾರಗಟ್ಟಲೆ ಮಾಡಿದ್ದ ಸಿದ್ಧತೆಯನ್ನು ನಿರಾಸೆಯಾಗಿ ಬದಲಾಯಿಸಿತು.












Click it and Unblock the Notifications