ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಿಂಚಿದ ಕುಂದಾಪುರದ ಕುವರಿ: ಸರ್ಕಾರಿ KPS ಶಾಲೆಯ ಮಹಾಲಕ್ಷ್ಮಿಗೆ 4ನೇ ಸ್ಥಾನ
ಸರ್ಕಾರಿ ಶಾಲೆ ಎಂದರೆ ಮಕ್ಕಳನ್ನ ಸೇರಿಸಲು ಹಿಂದೆ ಮುಂದೆ ನೋಡುವ ಪೋಷಕರಿಗೆ ಉಡುಪಿಯ ಕುಂದಾಪುರ ತಾಲೂಕಿನ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮಹಾಲಕ್ಷ್ಮಿ ಇದೀಗ ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ ತೋರಿಸಿದ್ದಾಳೆ.
ಹೌದು, ಈಕೆ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕಲಾ ಉತ್ಸವದಲ್ಲಿ ಭರತನಾಟ್ಯ ವಿಭಾಗದಲ್ಲಿ ಇಡೀ ದೇಶಕ್ಕೆ 4ನೇ ಸ್ಥಾನ ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ತನ್ನ ಶಾಲೆಗೆ ಕೀರ್ತಿ ತಂದಿದ್ದಾಳೆ. ಈ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿರುವ ಈಕೆಯ ಕಥೆ ಇತರ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದೆ.

ತನ್ನ ಈ ಸಾಧನೆಯ ಬಗ್ಗೆ ಮಾತನಾಡಿದ ಮಹಾಲಕ್ಷ್ಮಿ, ತನಗೆ ಭರತನಾಟ್ಯದ ಮೇಲಿನ ಆಸಕ್ತಿ ಹೇಗೆ ಹುಟ್ಟಿತು ಎಂಬುದನ್ನು ಚಂದವಾಗಿ ವಿವರಿಸಿದ್ದಾಳೆ. ಒಮ್ಮೆ ಆನೆಗುಡ್ಡೆ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನವೊಂದನ್ನು ನೋಡಿದಾಗ, ಆಕೆ ನೋಡಲು ಹೋಗಿದ್ದಳು. ಅಲ್ಲಿ ನೋಡಿದ ನೃತ್ಯ ಆಕೆಯನ್ನು ಬಹಳ ಸೆಳೆದಿದ್ದು. ತಾನೂ ಈ ಕಲೆಯನ್ನು ಕಲಿಯಬೇಕು ಎಂಬ ಆಸೆ ಅವಳಲ್ಲಿ ಶುರುವಾಯಿತು ಎಂದು ಹೇಳಿದ್ದಾಳೆ.
ಆಕೆಯ ಪೋಷಕರ ಬೆಂಬಲದೊಂದಿಗೆ, ಅವಳು ಎರಡನೇ ತರಗತಿಯಲ್ಲಿದ್ದಾಗಲೇ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದಲ್ಲಿ ಪ್ರವಿತಾ ಅಶೋಕ್ ಎಂಬ ನೃತ್ಯ ಗುರುಗಳ ಬಳಿ ಆಕೆ ಭರತನಾಟ್ಯ ಕಲಿಯಲು ಆರಂಭಿಸಿದಳು.
ಕೆಪಿಎಸ್ ಶಾಲೆಯಲ್ಲಿರುವ ಅತ್ಯುತ್ತಮ ಸೌಲಭ್ಯಗಳು
ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ಅಲ್ಲಿ ಓದಿದರೆ ಏನ್ನನ್ನೂ ಸಾಧನೆ ಮಾಡಲು ಆಗುದಿಲ್ಲ. ಜನರ ಮನಸ್ಸಿನಲ್ಲಿರುವ ಇಂತಹ ತಪ್ಪು ಕಲ್ಪನೆಗಳನ್ನ ಮಹಾಲಕ್ಷ್ಮಿ ಅಳಿಸಿಹಾಕಿದ್ದಾಳೆ.
ತಾನು ಓದುತ್ತಿರುವ ಕೆಪಿಎಸ್ ಶಾಲೆಯೂ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ ಎಂದು ಆಕೆ ಹೆಮ್ಮೆಯಿಂದ ಹೇಳಿದ್ದಾಳೆ. ಕರ್ನಾಟಕ ಸರ್ಕಾರವು ಶಾಲೆಯಲ್ಲಿ ಪ್ರತಿ ತರಗತಿಗೂ ಸ್ಮಾರ್ಟ್ ಕ್ಲಾಸ್, ಅಟಲ್ ಟಿಂಕರಿಂಗ್ ಲ್ಯಾಬ್, 5,000ಕ್ಕೂ ಹೆಚ್ಚು ಪುಸ್ತಕಗಳಿರುವ ಬೃಹತ್ ಮತ್ತು ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ. ಜೊತೆಗೆ ವಿಜ್ಞಾನ, ಗಣಿತ ಹಾಗೂ ಭಾಷಾ ವಿಷಯಗಳಿಗೂ ಒಳ್ಳೆಯ ಶಿಕ್ಷಕರಿದ್ದಾರೆ. ಇದಲ್ಲದೆ, ಶಾಲೆಯಲ್ಲಿ ದೊಡ್ಡ ಆಟದ ಮೈದಾನ ಇದೆ ಎಂಬುದೇ ಆಕೆಗೆ ಹೆಮ್ಮೆಯ ವಿಷಯ.
ಪ್ರತಿಭಾ ಕಾರಂಜಿಯಿಂದ 'ರಾಷ್ಟ್ರೀಯ ಕಲಾ ಉತ್ಸವ'ದವರೆಗೆ ಪಯಣ
ಮಹಾಲಕ್ಷ್ಮಿಯ ಈ ಪಯಣ ಶಾಲಾ ಮಟ್ಟದಿಂದಲೇ ಆರಂಭವಾಯಿತು. ಮೊದಲೆಲ್ಲಾ ಕ್ಲಸ್ಟರ್ ಮಟ್ಟದ 'ಪ್ರತಿಭಾ ಕಾರಂಜಿ'ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಳು. ಶಾಲಾ ಶಿಕ್ಷಕರ ಬೆಂಬಲದೊಂದಿಗೆ ಜಿಲ್ಲಾ ಮಟ್ಟದ 'ಕಲಾ ಉತ್ಸವ'ದಲ್ಲಿ ಭಾಗವಹಿಸಿ ಅಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾದಳು. ನಂತರ ರಾಜ್ಯಮಟ್ಟದ ಕಲಾ ಉತ್ಸವದಲ್ಲಿ ಸ್ಪರ್ಧಿಸಿ ಇಡೀ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಕಾಲಿಟ್ಟಳು.
ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಕಥಕ್, ಕೂಚಿಪುಡಿ ಸೇರಿದಂತೆ ಭಾರತದ ವಿವಿಧ ನೃತ್ಯ ಪ್ರಕಾರಗಳ ಸ್ಪರ್ಧಿಗಳ ನಡುವೆ ಸ್ಪರ್ಧಿಸಿ ದೇಶಕ್ಕೇ 4ನೇ ಸ್ಥಾನ ಪಡೆದುಕೊಂಡಿರುವುದು ಅವಳ ಜೀವನಕ್ಕೆ ಸಿಕ್ಕ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಎನ್ನಬಹುದು.
ಉಡುಪಿ ಜಿಲ್ಲೆ ಕುಂದಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ (ಕೆಪಿಎಸ್) ವಿದ್ಯಾರ್ಥಿನಿ ಮಹಾಲಕ್ಷ್ಮೀ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಸಹಕಾರದಿಂದ ತಮಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
— School Education & Literacy Department Karnataka (@ShalaShikshana) July 9, 2026
Mahalakshmi, a talented student representing… pic.twitter.com/RdE6XJRqRP
ತನ್ನ ಈ ಸಾಧನೆಗೆ ಪೋಷಕರು, ನೃತ್ಯ ತರಬೇತಿದಾರರು, ಮತ್ತು ಶಾಲೆಯ ಶಿಕ್ಷಕ ವರ್ಗದ ನಿರಂತರ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದು ಮಹಾಲಕ್ಷ್ಮಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾಳೆ. ಶಾಲೆಯಿಂದ ರಾಷ್ಟ್ರಮಟ್ಟದವರೆಗೆ ಈ ಸ್ಪರ್ಧೆಗಾಗಿ ಎರಡು ಬಾರಿ ಪ್ರಯಾಣ ಬೆಳೆಸಿದಾಗಲೂ ಅದ್ಭುತ ಬೆಂಬಲ ಸಿಕ್ಕಿದೆ ಎಂದು ಆಕೆ ಖುಷಿ ವ್ಯಕ್ತಪಡಿಸಿದ್ದಾಳೆ.
ಅಲ್ಲದೆ, ಸರ್ಕಾರ ಹಾಗೂ ಕಲಾ ಉತ್ಸವ ಸಮಿತಿಯು ವಿದ್ಯಾರ್ಥಿಗಳನ್ನು ಬೆಂಗಳೂರಿನಿಂದ ಪುಣೆಗೆ ಅತ್ಯಂತ ಸುರಕ್ಷಿತವಾಗಿ ಕರೆದೊಯ್ದು, ಅಲ್ಲಿ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೂ ಆಕೆ ಕೃತಜ್ಞತೆ ಸಲ್ಲಿಸಿದ್ದಾಳೆ.












Click it and Unblock the Notifications