ಬೆಂಗಳೂರು: ಸಿಗರೇಟ್ ಖರೀದಿಗೆ 500 ರೂ. ನೋಟು ನೀಡಿ ಸಿಕ್ಕಿಬಿದ್ದ MBA ಪದವೀಧರ; ನಕಲಿ ನೋಟು ದಂಧೆಗೆ ಬಿತ್ತು ಬ್ರೇಕ್
ಕಳ್ಳರು ಅಥವಾ ಅಪರಾಧಿಗಳು ಎಷ್ಟೇ ಬುದ್ದಿವಂತರಾಗಿದ್ದರೂ ಕೂಡ ಅವರು ಮಾಡುವ ಒಂದು ಸಣ್ಣ ತಪ್ಪುಗಳಿಂದ ಅವರನ್ನ ಹಿಡಿಯಬಹುದು. ಈಗ ಯಾಕೆ ಈ ಮಾತು ಬಂತೆಂದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಪೊಲೀಸರು ಬಯಲು ಮಾಡಿರುವ ನಕಲಿ ನೋಟುಗಳ ದಂಧೆಯ ರೂವಾರಿ ಕೂಡ ಇಂತಹದ್ದೇ ಒಂದು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಹೌದು ಒಂದು ಅಂಗಡಿಯಲ್ಲಿ ಸಿಗರೇಟು ಖರೀದಿಸಿ ನೀಡಿದ ಒಂದು ನಕಲಿ 500 ರೂಪಾರಿಯ ನೋಟಿನಿಂದ ಇಂದು ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ದೊಡ್ಡ ನಕಲಿ ನೋಟು ಮುದ್ರಣ ಘಟಕವನ್ನ ಮುಚ್ಚಿಹಾಕುವಂತೆ ಮಾಡಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಯಶಸ್ವಿ ಕಾರ್ಯಚರಣೆಯನ್ನು ನಡೆಸಿ, ಒಮ್ಮೆ ಜೈಲು ಸೇರಿ ಬಿಡುಗಡೆಯಾಗಿ ಬಂದ ನಂತರ ಮತ್ತದೇ ದಂಧೆಗೆ ಇಳಿದ ಎಂಬಿಎ ಪದವೀಧರ ಈಗ ಮತ್ತೆ ಪೊಲೀಸ್ ಅತಿಥಿಯಾಗಿದ್ದಾನೆ.

ಸಿಗರೇಟಿನಿಂದ ಬಯಲಾಯ್ತು ನಕಲಿ ನೋಟಿನ ಜಾಲ
ಇದೇ ತಿಂಗಳು, ಅಂದರೆ ಜುಲೈ 02ರಂದು ತುಮಕೂರು ಜಿಲ್ಲೆಯ ಸಿ.ಎನ್.ಹಳ್ಳಿ ತಾಲೂಕಿನ ಹೊಸಹಳ್ಳಿ ಕೈಮಾರ ಎಂಬ ಹಳ್ಳಿಯಲ್ಲಿ ಈ ಪ್ರಕರಣ ತನಿಖೆ ಪ್ರಾರಂಭವಾಗುತ್ತದೆ.
ಇಲ್ಲಿನ 56 ವರ್ಷದ ಅಂಜನಾ ಶೆಟ್ಟಿ ಅವರ ದಿನಸಿ ಅಂಗಡಿಗೆ ನೀಲಿ ಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ ಬಂದ ಇಬ್ಬರು ಯುವಕರು ಒಂದು ಪ್ಯಾಕೆಟ್ ಸಿಗರೇಟ್ ಖರೀದಿಸಿದ್ದರು. ಇದಕ್ಕಾಗಿ 500 ರೂಪಾಯಿ ನೋಟನ್ನು ನೀಡಿದ್ದರು. ಅಂಜನಾ ಅವರು ಯುವಕರಿಗೆ ಉಳಿದ 370 ರೂಪಾಯಿ ಚಿಲ್ಲರೆಯನ್ನು ಕೂಡ ಹಿಂದಿರುಗಿಸಿದ್ದರು. ಆದರೆ, ಆ ಯುವಕರು ಹೋದ ಬಳಿಕ ನೋಟನ್ನು ಆ ನೋಟುಗಳನ್ನಾ ಸೂಕ್ಷ್ಮವಾಗಿ ನೋಡಿದಾಗ ಅದು ನಕಲಿ ಇರಬಹುದೇ ಎಂಬ ಅನುಮಾನ ಮೂಡಿದೆ. ತಕ್ಷಣವೇ ಅವರು ಎಚ್ಚೆತ್ತುಕೊಂಡು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ.
ಅಂಜನಾ ಶೆಟ್ಟಿ ಅವರ ದೂರಿನ ಆಧಾರದ ಮೇಲೆ ಹುಳಿಯಾರು ಪೊಲೀಸ್ ಹಾಗೂ ಮಾದನಾಯಕನಹಳ್ಳಿ ಪೊಲೀಸರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ವಾಹನ ಟ್ರ್ಯಾಕಿಂಗ್ ಹಾಗೂ ತಾಂತ್ರಿಕ ಕಣ್ಗಾವಲು ವ್ಯವಸ್ಥೆಯನ್ನು ಬಳಸಿಕೊಂಡು ಪೊಲೀಸರು ಆ ನೀಲಿ ಬಣ್ಣದ ಮಾರುತಿ ಆಲ್ಟೋ ಕಾರಿನ ಚಲನವಲನಗಳನ್ನು ಗಮನಿಸಿದರು.
ಕಾರನ್ನ ಹಿಂಬಾಲಿಸಿ ಹೋದ ಪೊಲೀಸರಿಗೆ, ಬೆಂಗಳೂರಿನ ಮಾದನಾಯಕನಹಳ್ಳಿ ಸಮೀಪದ ಗಂಗೊಂಡನಹಳ್ಳಿಯಲ್ಲಿ ಒಂದು ರಹಸ್ಯವಾದ ಜಾಗ ಪತ್ತೆಯಾಗಿದೆ. ಅಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನಕಲಿ ನೋಟುಗಳನ್ನು ಮುದ್ರಿಸುವ ಜಾಗ ಹಾಗೂ ಖೋಟಾ ನೋಟುಗಳು ಪತ್ತೆಯಾಗಿವೆ.
ಜೈಲಿನಿಂದ ಬಂದು ಮತ್ತೆ ಅದೇ ದಂಧೆಗಿಳಿದಿದ್ದ ಎಂಬಿಎ ಪದವೀಧರ
ಪೊಲೀಸರ ಮಾಹಿತಿಯ ಪ್ರಕಾರ, ಬಂಧಿತ ಆರೋಪಿಯನ್ನು ರುದ್ರೇಶ್ ಎಂದು ಗುರುತಿಸಲಾಗಿದೆ. ಈತ ಎಂಬಿಎ ಪದವೀಧರನಾಗಿದ್ದು, ಈ ಹಿಂದೆ ಅಂದರೆ 2024ರಲ್ಲಿ ದಾವಣಗೆರೆ ಪೊಲೀಸರು ಭೇದಿಸಿದ್ದ ನಕಲಿ ನೋಟು ದಂಧೆಯ ಪ್ರಮುಖ ಆರೋಪಿಯಾಗಿದ್ದ. ಕೇವಲ ಮೂರು ತಿಂಗಳ ಅವಧಿಯಲ್ಲಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಚಲಾವಣೆಗೆ ತಂದಿದ್ದ ಆರೋಪ ಇವನ ಮೇಲಿತ್ತು.
ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ರುದ್ರೇಶ್, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ. ಆದರೆ, ಇನ್ನೂ ಬುದ್ಧಿ ಕಲಿಯದ ಈತ ಗಂಗೊಂಡನಹಳ್ಳಿಯಲ್ಲಿ ಮತ್ತೆ ಖೋಟಾ ನೋಟು ಮುದ್ರಣವನ್ನು ಆರಂಭಿಸಿ, ಇದೇ ಕೃತ್ಯವನ್ನು ಮುಂದುವರಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನಕಲಿ ನೋಟುಗಳ ಜಾಲದ ಬಗ್ಗೆ ಮುಂದುವರಿದ ತನಿಖೆ
ದಾಳಿಯ ವೇಳೆ ಪೊಲೀಸರು ಅಪಾರ ಪ್ರಮಾಣದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಈ ಜಾಲವು ಎಷ್ಟು ವಿಸ್ತಾರವಾಗಿದೆ? ಇದುವರೆಗೆ ಎಷ್ಟು ಮೌಲ್ಯದ ನಕಲಿ ನೋಟುಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ? ಹಾಗೂ ಈ ದಂಧೆಯಲ್ಲಿ ರುದ್ರೇಶ್ ಜೊತೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.












Click it and Unblock the Notifications