ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಕಾರ್ಪೊರೇಟ್ ಉದ್ಯೋಗಿ : 56ರ ವಯಸ್ಸಿನಲ್ಲಿ ಇದೆಂಥಾ ಪಾಡು
ಇತ್ತೀಚಿನ ದಿನಗಳಲ್ಲಿ ಲೇ ಆಫ್ ಭೂತ ಎಲ್ಲರನ್ನೂ ಕಾಡುತ್ತಿದೆ. ಯಾರ ಉದ್ಯೋಗಕ್ಕೆ ಯಾವಾಗ, ಯಾವ ಕಾರಣಕ್ಕೆ ಕುತ್ತು ಬರುತ್ತದೆ ಎಂದು ಊಹಿಸುವುದು ಕೂಡಾ ಕಷ್ಟವಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳಲ್ಲಿಯಂತೂ ಈ ಲೇ ಆಫ್ ಎನ್ನುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಇದೀಗ ನೋಯ್ಡಾದ 56 ವರ್ಷದ ಮನೋಜ್ ಎನ್ನುವವರ ಕತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರು ತಮ್ಮ ೫೬ನೇ ವಯಸ್ಸಿನಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ್ ಅವರನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದುಹಾಕಲಾಗಿದೆ. ಇವರು ತನ್ನ ಜೀವನದ 14 ವರ್ಷಗಳನ್ನು ದೊಡ್ಡ ಕಾರ್ಪೊರೇಟ್ ಕಂಪನಿಗೆ ಮೀಸಲಿಟ್ಟರು. ಆದರೆ ಈ ವಯಸ್ಸಿನಲ್ಲಿ ಕೆಲಸ ಕಳೆದುಕೊಂಡು ದಿಕ್ಕು ತೋಚದಂತಾಗಿದ್ದರು.

ಕೆಲಸ ಇಲ್ಲ ಎಂದ ಮಾತ್ರಕ್ಕೆ ಮನೆ ಮಂದಿಯ ಖರ್ಚು ವೆಚ್ಚ ನಿಲ್ಲುವುದೇ? ಅವರ ಪಾಲನೆ ಪೋಷಣೆಗೆ ಉದ್ಯೋಗದ ಅಗತ್ಯವಿತ್ತು. ಆಗ ಮನೋಜ್ ಅವರು ಆಯ್ಕೆ ಮಾಡಿಕೊಂಡದ್ದು ಡೆಲಿವೆರಿ ಪಾರ್ಟ್ನರ್ ಆಗಿ ಕೆಲಸ ಮಾಡುವುದನ್ನು. ಮನೋಜ್ ಅವರ ಕತೆ ಹೊರ ಬರುತ್ತಿದ್ದಂತೆಯೇ ವಯಸ್ಸಾದವರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ.
ಕಿರಣ್ ವರ್ಮಾ ಎನ್ನುವವರು ನೋಯ್ಡಾದಲ್ಲಿ ಒಂದು ಪ್ರಮುಖ ಪತ್ರವನ್ನು ತಲುಪಿಸಲು ಪೋರ್ಟರ್ ಆ್ಯಪ್ ಮೂಲಕ ವಿತರಣಾ ಪಾಲುದಾರರನ್ನು ಬುಕ್ ಮಾಡಿದಾಗ ಈ ಇಡೀ ಕಥೆ ಬಯಲಾಗಿದೆ. ಕಿರಣ್ ಇದು ಸಾಮಾನ್ಯ ಡೆಲಿವೆರಿ ಎಂದೇ ಭಾವಿಸಿದ್ದರು. ಆದರೆ 56 ವರ್ಷದ ಮನೋಜ್ ತನ್ನ ಮನೆ ಬಾಗಿಲ ಮುಂದೆ ಕಾಣಿಸಿಕೊಂಡಾಗ, ಅವರು ಸ್ವಲ್ಪ ಭಾವುಕರಾದರು. ಯಾಕೆಂದರೆ ಮನೋಜ್ ಮೆಟ್ಟಿಲುಗಳನ್ನು ಹತ್ತಲು ಸ್ವಲ್ಪ ಕಷ್ಟಪಡುತ್ತಿದ್ದರು. ಆದರೂ ತನ್ನ ಕೆಲಸವನ್ನು ಮಾತ್ರ ನಗುನಗುತ್ತಲೇ ಮುಂದುವರೆಸಿದ್ದರು. ಕಿರಣ್ ಡೆಲಿವೆರಿ ಬಾಯ್ ಮನೋಜ್ ಜೊತೆ ಮಾತಿಗಿಳಿಯುತ್ತಾರೆ. ಆಗ ಮನೋಜ್ ಇಂದು ನನಗೆ ಕೆಲಸವಿರಲಿಲ್ಲ, ಯಾವುದಾದರೊಂದು ಕೆಲಸ ಬರಲಿ ಎಂದು ಕಾಯುತ್ತಾ ಕುಳಿತಿದ್ದೆ" ಎಂದು ಹೇಳಿದರು.
14 ವರ್ಷಗಳ ಸೇವೆಯಿಂದ ಹಠಾತ್ ವಜಾ:
ಕಿರಣ್ ವರ್ಮಾ ಅವರ ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಮನೋಜ್ ಅವರು ಟಾಟಾ, ಎಐಎ ಜೀವ ವಿಮಾ ಕಂಪನಿಯ ಆಡಳಿತ ವಿಭಾಗದಲ್ಲಿ 2023 ರವರೆಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. ಅವರು ಅಲ್ಲಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ, 2023 ರಲ್ಲಿ ನಡದ ಲೇ ಆಫ್‌ನಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡರು. ನಂತರ, ಅವರು ಹಲವಾರು ಸ್ಥಳಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ, ಯಾವುದೇ ಕಂಪನಿಯು ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಿಲ್ಲ. ಅಂತಿಮವಾಗಿ, ಅವರ ಕುಟುಂಬವನ್ನು ಪೋಷಿಸಲು ಮತ್ತು ಜೀವನ ಸಾಗಿಸಲು, ಅವರು ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
"ನಾವು ಪಲ್ಯದಲ್ಲಿರುವ ಕರಿಬೇವಿನ ಎಲೆಗಳಂತೆ"
ಕೆಲಸ ಕಳೆದುಕೊಂಡಿರುವ ಬಗ್ಗೆ ಮಾತನಾಡುತ್ತಾ ಮನೋಜ್ ಕಾರ್ಪೊರೇಟ್ ಜಗತ್ತಿನ ಬಗ್ಗೆ ಒಂದು ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಮನೋಜ್ ಅನುಭವಿ ಉದ್ಯೋಗಿಗಳನ್ನು ಕರಿಬೇವಿಗೆ ಹೋಲಿಸಿದ್ದಾರೆ. ಪಲ್ಯ ಮಾಡುವಾಗ ನಾವು ಕರಿಬೇವು ಹಾಕುತ್ತೇವೆ. ಆದರೆ ಪಲ್ಯವನ್ನು ತಿನ್ನುವಾಗ ಆ ಕರಿಬೇವನ್ನು ಎಸೆಯುತ್ತೇವೆ. ಹಾಗೆಯೇ ಅಗತ್ಯವಿಲ್ಲ ಎಂದು ಗೊತ್ತಾದ ಕೂಡಲೇ ಕೆಲಸದಿಂದ ಮೊದಲು ಅನುಭವಿಗಳನ್ನೇ ತೆಗೆದುಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ವಯಸ್ಸು ಮತ್ತು ಕೆಲಸದ ಬಗ್ಗೆ ಭುಗಿಲೆದ್ದ ಚರ್ಚೆ:
ಕಿರಣ್ ವರ್ಮಾ ಅವರ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗಿದ್ದು, ಸಾವಿರಾರು ವೃತ್ತಿಪರರು ಮತ್ತು ನೇಮಕಾತಿದಾರರನ್ನು ಆಕರ್ಷಿಸಿದೆ. ಪೋರ್ಟರ್ ಕಂಪನಿಯು ಸಹ ಪೋಸ್ಟ್‌ಗೆ ಕಾಮೆಂಟ್ ಮಾಡಿದೆ. ಅದರ ವಿತರಣಾ ಪಾಲುದಾರರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದೆ. ಆದರೆ ಅವರು ಮನೋಜ್ ಅವರ ವೈಯಕ್ತಿಕ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಕಥೆ ಭಾರತದ ಉದ್ಯೋಗ ಮಾರುಕಟ್ಟೆಯ ನಿಜವಾದ ಸ್ವರೂಪವನ್ನು ಬಹಿರಂಗಪಡಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಳೆಯ ವೃತ್ತಿಪರರಿಗೆ ಉದ್ಯೋಗ ಹುಡುಕುವುದು ಒಂದು ಗಮನಾರ್ಹ ಸವಾಲಾಗಿ ಪರಿಣಮಿಸಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications