ಹೊರ್ಮುಸ್ ಜಲಸಂಧಿಯಲ್ಲಿ ಸೆಣಸಾಟ: ಅಮೆರಿಕ - ಇರಾನ್ ಯುದ್ಧಕ್ಕೆ ಬೆಲೆ ತೆತ್ತ ಭಾರತ
ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.
ಜುಲೈ 8, ಬುಧವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ತಾತ್ಕಾಲಿಕ ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಘೋಷಿಸಿದರು. ಅದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಹೊಸ ಚಕಮಕಿಗಳು ಆರಂಭಗೊಂಡವು. ಒಂದು ವೇಳೆ ಅಮೆರಿಕದ ವಿರುದ್ಧ ಕದನಕ್ಕಿಳಿದರೆ ಅಮೆರಿಕ ತೀವ್ರವಾಗಿ ತಿರುಗೇಟು ನೀಡಲಿದೆ ಎಂದು ಟ್ರಂಪ್ ಎಚ್ಚರಿಸಿದರು. ಇದೇ ವೇಳೆ, ಇರಾನ್ ಜೊತೆಗೆ ಮಾತುಕತೆಗಳು ಮುಂದುವರಿಯಲಿವೆ ಎಂದೂ ಟ್ರಂಪ್ ಹೇಳಿದರು. ಆದರೆ, ಮಧ್ಯಸ್ಥಿಕೆದಾರರು ಸಮಯ ವ್ಯರ್ಥ ಮಾಡುತ್ತಿರುವಂತೆ ಕಾಣುತ್ತಿದೆ ಎಂದೂ ಟ್ರಂಪ್ ಹೇಳಿದರು.
ತೈಲ ಬೆಲೆಗಳು ಇದ್ದಕ್ಕಿದ್ದಂತೆ ಮೇಲಕ್ಕೆ ಜಿಗಿದವು. ಷೇರು ಮಾರುಕಟ್ಟೆಗಳು ಕುಸಿತ ಕಂಡವು. ಬಳಿಕ, ನ್ಯಾಟೋದ ಸಭೆ ಒಂದರಲ್ಲಿ ಟ್ರಂಪ್ ತನ್ನ ತೀಕ್ಷ್ಣವಾದ ಮಾತುಗಳನ್ನು ಮರಳಿ ಆಡಲಿಲ್ಲ. ಈ ಯುದ್ಧ ಸಾಗಿ ಬಂದಿರುವ ಹಾದಿಯೇ ಹೀಗಿದೆ. ಒಂದು ಕ್ಷಣದಲ್ಲಿ ತೀವ್ರತೆ, ಮತ್ತೊಂದು ಕ್ಷಣದಲ್ಲಿ ಅನಿಶ್ಚಿತತೆ.

ಇರಾನ್ ಯುದ್ಧದ ಮಾದರಿ ಈಗ ಬಹುತೇಕ ಪರಿಚಿತವಾಗಿದೆ. ಹೊರ್ಮುಸ್ ಜಲಸಂಧಿಯಲ್ಲಿರುವ ಹಡಗುಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಅಮೆರಿಕನ್ ಪಡೆಗಳು ಇರಾನಿನಲ್ಲಿರುವ ಗುರಿಗಳ ಮೇಲೆ ಆಕ್ರಮಣ ಮಾಡುತ್ತಿವೆ. ಬಹ್ರೇನ್ ಮತ್ತು ಕುವೈತ್‌ಗಳಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಪ್ರಯೋಗಿಸುತ್ತಿದೆ. ಇದೇ ಮಾದರಿಯನ್ನು ಜೂನ್ 26 ಮತ್ತು 27ರಂದೂ ಕಾಣಲಾಗಿತ್ತು. ಇಂತಹ ಪ್ರತಿಯೊಂದು ಸುತ್ತೂ ಸಹ ದುರ್ಬಲ ಕದನ ವಿರಾಮವನ್ನು ಇನ್ನಷ್ಟು ದುರ್ಬಲಗೊಳಿಸಿತ್ತು. ಪ್ರತಿಯೊಂದು ಸುತ್ತಿನ ಕದನವೂ ಜೂನ್ 18ರ ತಿಳಿವಳಿಕೆ ಒಪ್ಪಂದವನ್ನು (ಎಂಒಯು - ಉಭಯ ಪಕ್ಷಗಳ ನಡುವಿನ ಲಿಖಿತ ಶಾಂತಿ ಭರವಸೆ, ಪೂರ್ಣ ಒಪ್ಪಂದವಲ್ಲ) ಪೂರ್ಣ ಪ್ರಮಾಣದ ಶಾಂತಿಯಾಗಿ ಪರಿವರ್ತಿಸುವ ಮಾತುಕತೆಗಳನ್ನು ಇನ್ನಷ್ಟು ವಿಳಂಬಗೊಳಿಸುತ್ತಿದೆ.
ಆದರೆ, ಈಗಿನ ಕದನದ ಕಾರಣವಾದರೂ ಏನು? ಬಹುತೇಕ ಸಮುದ್ರದಲ್ಲಿನ ಒಂದು ಕಿರಿದಾದ ಜಲಸಂಧಿ.
ಹೊರ್ಮುಸ್ ಜಲಸಂಧಿ ಎನ್ನುವ ಈ ಜಲಮಾರ್ಗ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾಗಿದೆ. ಜಗತ್ತಿನ ಬಹುತೇಕ ಐದನೇ ಒಂದು ಪಾಲು ತೈಲ ಈ ಮಾರ್ಗದ ಮೂಲಕವೇ ಪ್ರತಿದಿನವೂ ಸಂಚರಿಸುತ್ತದೆ. ಇದನ್ನು ಯಾರು ನಿರ್ವಹಿಸುತ್ತಾರೋ, ಅವರಿಗೆ ಅಸಾಧಾರಣ ಅಧಿಕಾರ ಲಭಿಸುತ್ತದೆ.
ಎಂಒಯುನ 5ನೇ ವಿಧಿಯ ಪ್ರಕಾರ, ಹೊರ್ಮುಸ್ ಜಲಸಂಧಿಯ ಭವಿಷ್ಯದ ನಿಯಂತ್ರಣವನ್ನು ಒಮಾನ್ ಮತ್ತು ಇರಾನ್ ಜಂಟಿಯಾಗಿ ನಿರ್ಧರಿಸಲಿವೆ. ಆದರೆ, ಅದಕ್ಕಾಗಿ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಸಮುದ್ರ ತೀರದಾದ್ಯಂತ ಇರುವ ದೇಶಗಳ ಹಕ್ಕುಗಳನ್ನು ಗೌರವಿಸಬೇಕು. ಜೂನ್ 23ರ ವೇಳೆಗೆ, ಉಭಯ ದೇಶಗಳು ಒಂದು ಕಾರ್ಯಾಚರಿಸುವ ತಂಡವನ್ನು ರಚಿಸಿ, ಸಮುದ್ರ ಸಾಗಾಣಿಕೆ ಮುಂದಿನ ದಿನಗಳಲ್ಲಿ ಹೇಗೆ ನಡೆಯಬೇಕು ಎಂದು ನಿರ್ಧರಿಸಲು ಆರಂಭಿಸಿದ್ದವು. ಟೆಹರಾನ್ ಪಾಲಿಗೆ ಇದೊಂದು ಸಣ್ಣ ಗೆಲುವಾಗಿತ್ತು. ಅಂದರೆ, ಇದರ ಪ್ರಕಾರ ಹೊರ್ಮುಸ್ ಜಲಸಂಧಿ ಸರಳವಾಗಿ ತನ್ನ ಹಳೆಯ, ಯುದ್ಧ ಪೂರ್ವ ಸ್ಥಿತಿಯನ್ನು ತಲುಪುವುದು ಸಾಧ್ಯವಿಲ್ಲ. ಆದರೆ, ಒಮಾನ್ ತನ್ನದೇ ಆದ ಯೋಚನೆಗಳನ್ನು ಹೊಂದಿದೆ.
ಹಾದು ಹೋಗುವ ಹಡಗುಗಳ ಮೇಲೆ ಶುಲ್ಕವನ್ನು ವಿಧಿಸಲು ಮಸ್ಕತ್ ನಿರಾಕರಿಸಿದೆ. ಅಂತಾರಾಷ್ಟ್ರೀಯ ಕಾನೂನುಗಳು ಇಂತಹ ಶುಲ್ಕವನ್ನು ಅನುಮತಿಸುವುದಿಲ್ಲ. ಸಮುದ್ರಗಳ ಕುರಿತ ಜಾಗತಿಕ ಒಪ್ಪಂದವಾದ ಯುಎನ್‌ಸಿಎಲ್ಒಎಸ್ 43ನೇ ವಿಧಿಯ ಪ್ರಕಾರ, ದೇಶಗಳು ತಾವು ಒದಗಿಸುವ ಸೇವೆಗಳಾದ ಪೈಲಟ್‌ಗಳು, ಸುರಕ್ಷತಾ ನೆರವು ಅಥವಾ ರಕ್ಷಣೆ, ಇತ್ಯಾದಿಗಳಿಗೆ ಮಾತ್ರ ಶುಲ್ಕ ಪಡೆಯಬಹುದು. ಇರಾನ್ ಮತ್ತು ಒಮಾನ್ ಇನ್ನೂ ಈ ಶುಲ್ಕಗಳು ಕಡ್ಡಾಯವೇ, ಅಥವಾ ಸ್ವಯಂಪ್ರೇರಿತವೇ ಎನ್ನುವ ಕುರಿತು ಚರ್ಚೆ ನಡೆಸುತ್ತಿವೆ.
ದೀರ್ಘಾವಧಿಯ ಚಿತ್ರಣ ಈಗ ನಿಧಾನವಾಗಿ ಸ್ಪಷ್ಟವಾಗುತ್ತಿದೆ. ಆದರೆ, ಸದ್ಯದ ಸಮಯದಲ್ಲಿ ಮಾತ್ರ ಸೆಣಸಾಟವೇ ಮುಂದುವರಿದಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಪ್ರಕಟವಾಗಿರುವ ವಿಶ್ಲೇಷಣೆಯ ಪ್ರಕಾರ, 60 ದಿನಗಳ ಕಾಲ ಹೊರ್ಮುಸ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಇರಾನ್ ಷರತ್ತುಗಳನ್ನು ವಿಧಿಸುವಂತಿಲ್ಲ ಎಂದು ಎಂಒಯು ಸ್ಪಷ್ಟಪಡಿಸಿದೆ. ಇದರ ಪ್ರಕಾರ, ಅಲ್ಲಿ ಹಾದುಹೋಗುವ ಹಡಗುಗಳು ಇರಾನಿಯನ್ ಅಧಿಕಾರಿಗಳಿಗೂ ಮಾಹಿತಿ ನೀಡಬೇಕಿಲ್ಲ ಎಂದು ಅಮೆರಿಕ ವಾದಿಸಿದೆ. ವಾಷಿಂಗ್ಟನ್ ಮತ್ತು ಒಮಾನ್ ಬೆಂಬಲ ಹೊಂದಿರುವ ಇಂಟರ್ನ್ಯಾಷನಲ್ ಮಾರಿಟೈಮ್ ಆರ್ಗನೈಸೇಶನ್ ಎರಡು ತಾತ್ಕಾಲಿಕ ಸಮುದ್ರ ಮಾರ್ಗಗಳನ್ನು ಸೂಚಿಸಿದೆ. ಇವುಗಳಲ್ಲಿ ಒಂದು ಒಮಾನಿ ಸಮುದ್ರದ ಮೂಲಕ ಹಾದುಹೋದರೆ, ಇನ್ನೊಂದು ಇರಾನಿನ ಲಾರಕ್ ದ್ವೀಪದ ಬಳಿಯಿಂದ ಸಾಗುತ್ತದೆ. ಇದರಿಂದಾಗಿ ಸಮಸ್ಯೆಗೆ ಸಿಲುಕುವ ಹಡಗುಗಳನ್ನು ಕ್ಷಿಪ್ರವಾಗಿ ರಕ್ಷಿಸಲು ಸಾಧ್ಯ. ಮುಖ್ಯವಾದ ಮಧ್ಯದ ಕಾಲುವೆಯಲ್ಲಿ ಇನ್ನೂ ಸಮುದ್ರ ಮೈನ್‌ಗಳನ್ನು ತೆಗೆಯುವ ಪ್ರಕ್ರಿಯೆ ಮುಂದುವರಿದಿರುವುದರಿಂದ, ಅದನ್ನು ಸದ್ಯಕ್ಕೆ ಮುಚ್ಚಿಯೇ ಇರಲಾಗುತ್ತದೆ.
ಆದರೆ, ಇದಕ್ಕೆ ಇರಾನ್ ಒಪ್ಪಿಗೆ ಸೂಚಿಸಲಿಲ್ಲ. ಜೂನ್ 25ರಂದು, ತನ್ನ ಅನುಮತಿ ಇಲ್ಲದೆ ದಕ್ಷಿಣ ಒಮಾನಿ ಮಾರ್ಗವನ್ನು ಬಳಸಿದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿತು. ಜೂನ್ 28ರಂದು, ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈಗಾಗಲೇ ಒಪ್ಪಿಕೊಂಡಿರುವ ಪ್ರಕ್ರಿಯೆಯ ಹೊರತಾಗಿ, ಹೊರಗಿನ ಬೇರೆ ಯಾವುದೇ ಹೊಸ ಅಥವಾ ಪ್ರತ್ಯೇಕ ವ್ಯವಸ್ಥೆಗಳನ್ನು ಇರಾನ್ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೊರ್ಮುಸ್ ಜಲಸಂಧಿ ಈಗ ಇರಾನಿನ ಅತಿದೊಡ್ಡ ಮಾತುಕತೆಯ ಅಸ್ತ್ರವಾಗಿದೆ. ಆದ್ದರಿಂದ, ಹೊರ್ಮುಸ್ ಸುತ್ತ ಹೊಸ ನಕ್ಷೆ ಬರೆಯಲು ಇರಾನ್ ಮೌನವಾಗಿ ಒಪ್ಪಿಗೆ ನೀಡಲು ಸಾಧ್ಯವೇ ಇಲ್ಲ.
ಆದರೆ, ಈ ಕದನದ ವೆಚ್ಚ ಈಗಾಗಲೇ ಗೋಚರಿಸುತ್ತಿದೆ. ಐಎಂಎಫ್‌ನ ಏಳು ದಿನಗಳ ಸರಾಸರಿಯ ಪ್ರಕಾರ, ಮೇ ಮತ್ತು ಜೂನ್ ತಿಂಗಳಲ್ಲಿ ಹೊರ್ಮುಸ್ ಜಲಸಂಧಿಯ ಮೂಲಕ ಪ್ರತಿದಿನವೂ ಕೇವಲ 6ರಿಂದ 12 ಹಡಗುಗಳು ಮಾತ್ರವೇ ಹಾದುಹೋಗಿವೆ. ಕಳೆದ ವರ್ಷ, ಇದೇ ತಿಂಗಳುಗಳಲ್ಲಿ ಪ್ರತಿದಿನವೂ 104ರಿಂದ 115 ಹಡಗುಗಳು ಹಾದುಹೋಗಿವೆ.
ಆದರೆ, ಹೊರ್ಮುಸ್ ಜಲಸಂಧಿಯಿಂದ ಸಾಕಷ್ಟು ದೂರದಲ್ಲಿರುವ ಭಾರತದಲ್ಲಿ ವಾಸಿಸುತ್ತಿರುವ ನಾವೇಕೆ ಇದರ ಕುರಿತು ಚಿಂತಿಸಬೇಕು? ಏಕೆಂದರೆ, ಭಾರತ ತನ್ನ ಬಹುತೇಕ ಕಚ್ಚಾ ತೈಲವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಬಹುಪಾಲು ಇದೇ ಜಲಸಂಧಿಯ ಮೂಲಕ ಬರುತ್ತದೆ. ಕಡಿಮೆ ಹಡಗುಗಳ ಸಂಚಾರವೆಂದರೆ, ತೈಲ ಬೆಲೆಯೂ ಹೆಚ್ಚಳವಾಗುತ್ತದೆ. ತೈಲ ಬೆಲೆ ಹೆಚ್ಚಾದರೆ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗುತ್ತವೆ. ಡೀಸೆಲ್ ಬೆಲೆ ಹೆಚ್ಚಾದರೆ, ಟ್ರಕ್‌ಗಳ ಸಂಚಾರ ವೆಚ್ಚವೂ ಹೆಚ್ಚಾಗಿ, ಅವು ಸಾಗಿಸುವ ತರಕಾರಿಗಳೂ ದುಬಾರಿಯಾಗುತ್ತವೆ. ಇನ್ನು ನಮ್ಮ ಮನೆಗಳಲ್ಲಿ ಅಡುಗೆಗೆ ಬಳಸುವ ಎಲ್‌ಪಿಜಿ ಮತ್ತು ಯೂರಿಯಾ ಉತ್ಪಾದನೆಗೆ ಬೇಕಾದ ನೈಸರ್ಗಿಕ ಅನಿಲಗಳನ್ನೂ ಗಲ್ಫ್ ಪೂರೈಸುತ್ತದೆ. ಅನಿಲ ಬೆಲೆ ಹೆಚ್ಚಾದರೆ, ರಸಗೊಬ್ಬರ ಸಬ್ಸಿಡಿ ವೆಚ್ಚವೂ ಅಷ್ಟೇ ಹೆಚ್ಚಾಗುತ್ತದೆ. ಅಥವಾ, ರೈತರ ಮೆಚ್ಚಿನ ಯೂರಿಯಾ ಸಹ ದುಬಾರಿಯಾಗುತ್ತದೆ. ಸಮುದ್ರ ಸಾಗಾಣಿಕೆ ಮತ್ತು ವಿಮಾ ವೆಚ್ಚವೂ ದುಬಾರಿಯಾಗುತ್ತದೆ. ಇದರೊಡನೆ, 9 ಮಿಲಿಯನ್ ಭಾರತೀಯರು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಉದ್ಯೋಗ, ಸಂಬಳ, ಅವರು ಮನೆಗಳಿಗೆ ಕಳುಹಿಸುವ ಹಣ, ಎಲ್ಲವೂ ಆ ಪ್ರದೇಶದಲ್ಲಿನ ಶಾಂತಿಯನ್ನು ಅವಲಂಬಿಸಿವೆ.
ಈ ಪ್ರದೇಶದ ಅಶಾಂತಿಯ ಪರಿಣಾಮ ದೂರ ಪ್ರದೇಶಗಳನ್ನೂ ತಲುಪುತ್ತವೆ. ಇರಾಕಿನಿಂದ ಅಮೆರಿಕನ್ ಪಡೆಗಳು ಹಿಂದಕ್ಕೆ ಮರಳುತ್ತಿದ್ದು, ಇದೇ ವೇಳೆ ಅಲ್ಲಿ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ ಮೂಲಕ ಇರಾನ್ ಹೆಚ್ಚು ಬಲವಾಗಿ ಬೆಳೆಯುತ್ತಿದೆ. ಇಷ್ಟಾದರೂ ಬಾಗ್ದಾದ್ ವಾಷಿಂಗ್ಟನ್‌ಗೆ ಮೌಲ್ಯ ನೀಡುತ್ತಿದೆ. ಜೂನ್ 15ರಂದು, ಅಮೆರಿಕದ ರಾಯಭಾರಿ ಟಾಮ್ ಬರಾಕ್ ಅವರು ಇರಾಕಿನ ನೂತನ ಪ್ರಧಾನಿ ಅಲಿ ಅಲ್ ಜೈದಿ ಮೇಲೆ ಇರಾನ್ ಬೆಂಬಲಿತ ಸಶಸ್ತ್ರ ಪಡೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಜೂನ್ 28ರಂದು, ಅರಾಘ್ಚಿ ಬಾಗ್ದಾದ್‌ಗೆ ಆಗಮಿಸಿದ ದಿನವೇ, ಇರಾಕಿ ಪಡೆಗಳು ಕನಿಷ್ಠ 47 ಹಿರಿಯ ರಾಜಕಾರಣಿಗಳು ಮತ್ತು ಕಮಾಂಡರ್‌ಗಳ ಮನೆಗಳ ಮೇಲೆ ಒಂದು ಅಪರೂಪದ ಮಧ್ಯರಾತ್ರಿ ದಾಳಿ ನಡೆಸಿತು. ಅವರಲ್ಲಿ ಬಹುತೇಕರು ಇರಾನ್‌ಗೆ ಆತ್ಮೀಯರಾಗಿದ್ದರು ಎನ್ನಲಾಗಿದೆ.
ಇನ್ನು ಲೆಬನಾನ್‌ನಲ್ಲಿ, ಜೂನ್ 26ರ ಫ್ರೇಮ್‌ವರ್ಕ್ ಒಪ್ಪಂದದ ಪ್ರಕಾರ, ಹೆಜ್ಬೊಲ್ಲಾ ತನ್ನ ಆಯುಧಗಳನ್ನು ಹಸ್ತಾಂತರಿಸಿದ ಬಳಿಕ ಇಸ್ರೇಲಿ ಪಡೆಗಳು ಅಲ್ಲಿಂದ ಹಿಂದೆ ಸರಿಯುತ್ತವೆ ಎನ್ನಲಾಗಿದೆ. ಆದರೆ, ಹೆಜ್ಬೊಲ್ಲಾ ತನ್ನ ಆಯುಧಗಳನ್ನು ಹಸ್ತಾಂತರಿಸಲು ಸ್ಪಷ್ಟವಾಗಿ ನಿರಾಕರಿಸಿದೆ. ಲೆಬನಾನ್ ಸರ್ಕಾರ ಈ ಒಪ್ಪಂದವನ್ನು ಅನುಮೋದಿಸಿದೆಯಾದರೂ, ಅದನ್ನು ಬಲವಾಗಿ ಜಾರಿಗೆ ತರಲು ಸಾಧ್ಯವಿಲ್ಲ.
ಇದೇ ವೇಳೆ ಗಲ್ಫ್ ಮೌನವಾಗಿಯೇ ತನ್ನನ್ನು ಮರು ಹೊಂದಿಸುತ್ತಿದೆ. ಜೂನ್ 18ರಂದು, ಕತಾರ್ ಇರಾನಿನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಅನ್ನು ತನ್ನ ನಾರ್ತ್ ಫೀಲ್ಡ್ ಜೊತೆಗೆ ಸಂಪರ್ಕಿಸುವ 2022ರ ಒಪ್ಪಂದವನ್ನು ವಿಸ್ತರಿಸಿತು. ಇದರಿಂದಾಗಿ ಇರಾನ್ 1,000 ಮೆಗಾವ್ಯಾಟ್ ಕತಾರ್ ವಿದ್ಯುತ್ ಸ್ವೀಕರಿಸುವ ಸಾಧ್ಯತೆಗಳಿವೆ. ಸೌದಿ ಅರೇಬಿಯಾ ಗಲ್ಫ್ - ಇರಾನ್ ಸಮನ್ವಯ ಸಭೆಯೊಂದನ್ನು ರೂಪಿಸುತ್ತಿದೆ ಎನ್ನಲಾಗಿದೆ. ಒಮಾನ್, ಕತಾರ್ ಮತ್ತು ಸೌದಿ ಅರೇಬಿಯಾಗಳು ಕದನದ ಬದಲು ಮಾತುಕತೆಯನ್ನು ಆರಿಸಿಕೊಂಡಿವೆ. ಆದರೆ, ಬಹ್ರೇನ್, ಕುವೈತ್ ಮತ್ತು ಯುಎಇಗಳು ಭಿನ್ನ ಮಾರ್ಗ ಹಿಡಿದಿವೆ. ಅಮೆರಿಕದ ಜೊತೆಗಿನ ಅವುಗಳ ಬಾಂಧವ್ಯ ಈಗ ತಣ್ಣಗಾಗಿದೆ. ಹೊರ್ಮುಸ್ ಜಲಸಂಧಿಯನ್ನು ಬಲಪ್ರಯೋಗದಿಂದ ಮುಕ್ತಗೊಳಿಸುವ ಅಮೆರಿಕದ ವಿಫಲ ಯತ್ನಕ್ಕೆ ಬೆಂಬಲ ನೀಡಲು ರಿಯಾದ್ ನಿರಾಕರಿಸಿದ ಪರಿಣಾಮವಾಗಿ, ಅಮೆರಿಕ - ಸೌದಿ ಸಂಬಂಧ ಹಾಳಾಗತೊಡಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಅಮೆರಿಕ ತನ್ನನ್ನು ಇನ್ನಷ್ಟು ತಡೆಗಟ್ಟಲು ಪ್ರಯತ್ನಿಸಲಿ ಎನ್ನುವುದು ಇರಾನಿನ ನಿರೀಕ್ಷೆ. ಇರಾನ್ ತನ್ನ ಮಿತಿಯನ್ನು ಇನ್ನಷ್ಟು ಪರೀಕ್ಷಿಸಲಿ ಎನ್ನುವುದು ಅಮೆರಿಕದ ಲೆಕ್ಕಾಚಾರ. ಒಂದು ಅಂತಿಮ ಒಪ್ಪಂದಕ್ಕೆ ಸಹಿ ಬೀಳುವ ತನಕ, ಇನ್ನಷ್ಟು ಸೀಮಿತ ದಾಳಿಗಳು, ತೀಕ್ಷ್ಣ ಮಾತುಗಳು ಮತ್ತು ದೊಡ್ಡ ಬೆದರಿಕೆಗಳು ಮುಂದುವರಿಯಬಹುದು.
ಆದರೆ, ಅಂತಿಮವಾಗಿ, ಒಂದು ಸಣ್ಣ ಜಲಸಂಧಿ ಎರಡು ದೊಡ್ಡ ಶಕ್ತಿಗಳನ್ನು ಮತ್ತೆ ಮತ್ತೆ ಕದನಕ್ಕೆ ಇಳಿಸುತ್ತಿದೆ. ಇದರ ಪರಿಣಾಮಗಳು ಭಾರತದ ಪ್ರತಿಯೊಂದು ಪೆಟ್ರೋಲ್ ಪಂಪ್, ಪ್ರತಿಯೊಂದು ಅಡುಗೆ ಮನೆ ಮತ್ತು ಪ್ರತಿಯೊಂದು ಕೃಷಿ ಭೂಮಿಯನ್ನು ತಲುಪಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])














Click it and Unblock the Notifications