ಶಾಲಾ ಮಕ್ಕಳಿಗಿಲ್ಲ ಅನ್ನಭಾಗ್ಯ: 9-10ನೇ ತರಗತಿ ಮಕ್ಕಳ ನಿರ್ಲಕ್ಷಿಸಿದ ಸರ್ಕಾರ: ಆರ್ ಅಶೋಕ್ ಟೀಕೆ
ಬೆಂಗಳೂರು: ರಾಜ್ಯ ಸರ್ಕಾರ ತಾನು ಜಾರಿಗೆ ತಂದ 'ಪಂಚ ಗ್ಯಾರೆಂಟಿ' ಯೋಜನೆಗಳ ವಿಚಾರವಾಗಿ ಗಂಭೀರ ಆರೋಪಗಳನ್ನು ಎದುರಿಸುತ್ತಲೇ ಇದೆ. ಇದೀಗ ರಾಜ್ಯದ 9 ಮತ್ತು 10 ತರಗತಿ ಮಕ್ಕಳು ಬಿಸಿಯೂಟಕ್ಕೆ ಅಕ್ಕಿ ಸರಬರಾಜು ಆಗದೇ ಸಮಸ್ಯೆ ಆಗಿದೆ. ಅಕ್ಕಿ ಖರೀದಿಸುಂತೆ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪತ್ರ ಬರೆದರೂ ಈವರೆಗೆ ಇಲಾಖೆ ಕ್ರಮವಹಿಸಿಲ್ಲ. ಹೀಗಾಗಿ ಪ್ರಾಥಮಿಕ ತರಗತಿ ಮಕ್ಕಳಿಗೆ ಮೀಸಲಿಟ್ಟ ಅಕ್ಕಿಯಲ್ಲಿ ಅಡುಗೆ ಮಾಡಿ ಬಡಿಸಲಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ 'ಶಾಲಾ ಮಕ್ಕಳಿಗಿಲ್ಲ ಅನ್ನಭಾಗ್ಯ' ಶಿರ್ಷಿಕೆಯಡಿ ಪೋಸ್ಟ್ ಹಂಚಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ 9 ಮತ್ತು 10ನೇ ತರಗತಿಯ ಹೈಸ್ಕೂಲ್ ಮಕ್ಕಳಿಗೆ ಬಿಸಿಯೂಟದ ಅಕ್ಕಿ ಪೂರೈಸಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಅವರು ದೂರಿದರು. ಪ್ರಾಥಮಿಕ ಶಾಲೆಯ (1ರಿಂದ 8ನೇ ತರಗತಿ) ಪುಟ್ಟ ಮಕ್ಕಳಿಗೆ ಮೀಸಲಿಟ್ಟ ಅಕ್ಕಿಯಲ್ಲೇ ಹೈಸ್ಕೂಲ್ ಮಕ್ಕಳಿಗೂ ಅನ್ನ ಬೇಯಿಸಿ ಬಡಿಸುವ ಸ್ಥಿತಿ ರಾಜ್ಯದಲ್ಲಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಇದೇನಾ ನಿಮ್ಮ 'ಗ್ಯಾರಂಟಿ' ಆಡಳಿತದ ಸಾಧನೆ? ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಅನ್ನ ಹಾಕಲು ಸಾಧ್ಯವಾಗದ ನೀವು ರಾಜ್ಯ ಆಳಲು ಲಾಯಕ್ಕೇ? ಎಂದು ಪ್ರಶ್ನಿಸಿದ್ದಾರೆ.

ಶಾಲಾ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ
ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಜೂನ್ 15ರಂದೇ ಪತ್ರ ಬರೆದಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಒಟ್ಟು 59,000ಕ್ಕೂ ಅಧಿಕ ಟನ್ ಅಕ್ಕಿ ಖರೀದಿಸಬೇಕಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತು ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಿದರೂ ಸಹಿತ ಶಿಕ್ಷಣ ಇಲಾಖೆಯ ಆಯುಕ್ತರು ಇದುವರೆಗೂ ಯಾವುದೇ ಬಿಗಿ ಕ್ರಮ ಕೈಗೊಂಡಿಲ್ಲ ಎಂದು ಅವರು ವಿವರಿಸಿದರು.
SIR: ಮತದಾರರ ಪಟ್ಟಿ ಪರಿಷ್ಕರಣೆ ಗೊಂದಲಕ್ಕೆ ಸರ್ಕಾರ ಹೊಣೆ ಅಲ್ಲ; ಬಿಎಲ್‌ಒಗಳದ್ದು ತಪ್ಪು: ಡಿಸಿಎಂ
ಶಿಕ್ಷಣ ಇಲಾಖೆ ಆಯುಕ್ತರು ಈ ಕೂಡಲೇ ಕ್ರಮಕ್ಕೆ ಮುಂದಾದರೂ ಅಕ್ಕಿ ಪೂರೈಕೆಗೆ ಕನಿಷ್ಠ ಎರಡುವಾರಗಳು ಹಿಡಿಯುತ್ತವೆ. ಜುಲೈ ತಿಂಗಳು ಮುಗಿಯುವವರೆಗೂ ಹೈಸ್ಕೂಲ್ ಮಕ್ಕಳಿಗೆ ಹೊಸ ಅಕ್ಕಿ ಸಿಗುವುದು ಅನುಮಾನ ಎಂದು ಸ್ವತಃ ಅಧಿಕಾರಿಗಳೇ ಕೈಚೆಲ್ಲಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಗೆ ಅನ್ನ ನೀಡಲು ಹೋಗಿ ಈಗ ಪ್ರಾಥಮಿಕ ಶಾಲಾ ಮಕ್ಕಳ ಅಕ್ಕಿ ದಾಸ್ತಾನೂ ಕರಗಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ಬಿಸಿಯೂಟ ವ್ಯವಸ್ಥೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಎಂದು ಅವರು ವಿವರಿಸಿದರು.
ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗೆ ಬರುವುದು ಒಂದು ಹೊತ್ತಿನ ನೆಮ್ಮದಿಯ ಊಟ ಮತ್ತು ಶಿಕ್ಷಣಕ್ಕಾಗಿ. ಆದರೆ ಈ ನಾಲಾಯಕ್ ಸರ್ಕಾರ ಆ ಮಕ್ಕಳ ಹೊಟ್ಟೆಯ ಮೇಲೂ ಹೊಡೆಯುತ್ತಿದೆ. ಕಳೆದ ವರ್ಷ ಕಳಪೆ ತೊಗರಿ ಬೇಳೆ ನೀಡಿ ಸುದ್ದಿಯಾಗಿದ್ದ ಈ ಸರ್ಕಾರ, ಈ ವರ್ಷ ಅಕ್ಕಿಯನ್ನೇ ಇಲ್ಲದಂತೆ ಮಾಡಿದೆ ಎಂದು ಕಟುವಾಗಿ ಟೀಕಿಸಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ತಕ್ಷಣವೇ ಎಚ್ಚೆತ್ತುಕೊಂಡು ಹೈಸ್ಕೂಲ್ ಮಕ್ಕಳಿಗೆ ಅಕ್ಕಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈಗಲೇ ನಿರ್ಲಕ್ಷ್ಯ ವಹಿಸಿದರೆ ಬಡ ಮಕ್ಕಳ ಹೊಟ್ಟೆ ಹಸಿವಿನ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು ಎಂದು ಅವರು ಎಚ್ಚರಿಸಿದ್ದಾರೆ.
49 ಲಕ್ಷಕ್ಕೂ ಅಧಿಕ ಮಕ್ಕಳಿಗೆ ನಿತ್ಯ ಬಿಸಿಯೂಟ
ರಾಜ್ಯದಲ್ಲಿ ಒಟ್ಟು 49 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಗಳಲ್ಲಿ ಬಿಸಿಯೂಟ ಸವಿಯುತ್ತಾರೆ. 1-5ನೇ ತರಗತಿ ಮಕ್ಕಳಿಗೆ 100 ಗ್ರಾಂ ಅಕ್ಕಿ, 6-10ನೇ ತರಗತಿ ಮಕ್ಕಳಿಗೆ ತಲಾ 150 ಗ್ರಾಂ ಅಕ್ಕಿ ಲೆಕ್ಕದಲ್ಲಿ ಅಡುಗೆ ಮಾಡಿ ಬಡಿಸಲಾಗುತ್ತದೆ. ಸದ್ಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಬಿಸಿಯೂಟಕ್ಕಾಗಿ ಜೂನ್ ಮತ್ತು ಜುಲೈ ತಿಂಗಳಿಗೆ ಬರೋಬ್ಬರಿ 59000 ಕ್ವಿಂಟಲ್ ಅಕ್ಕಿ ಬೇಕಿದೆ. ಸರ್ಕಾರ ಕ್ರಮ ವಹಿಸಿದರೆ 15 ದಿನಗಳಲ್ಲಿ ಇಷ್ಟು ಅಕ್ಕಿ ಪೂರೈಕೆ ಆಗುವ ನಿರೀಕ್ಷೆ ಇದೆ.












Click it and Unblock the Notifications