ಮೌನ ಮಾನವೀಯ ದುರಂತ: ಯುದ್ಧವೇ ಸಹಜ ಎಂಬಂತಾದ ಮಧ್ಯ ಪೂರ್ವದ ಜೀವನ

ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.

ಮಾನವ ಜನಾಂಗದ್ದೊಂದು ವಿಚಿತ್ರ ವಿಚಾರವಿದೆ. ಬಹುತೇಕ ಎಲ್ಲ ತೊಂದರೆಗಳು, ಸಮಸ್ಯೆಗಳನ್ನು ಎದುರಿಸಿಯೂ ಉಳಿಯುವಷ್ಟು ನಾವು ಶಕ್ತಿಶಾಲಿಗಳಾಗಿದ್ದೇವೆ. ಆದರೆ, ಅದೇ ಸಾಮರ್ಥ್ಯದೊಡನೆ ಒಂದು ದುಃಖಕರವಾದ ಆಯಾಮವನ್ನೂ ಹೊಂದಿದ್ದೇವೆ. ಕಷ್ಟ, ನೋವನ್ನು ಅನುಭವಿಸುತ್ತಾ, ನಿಧಾನವಾಗಿ ನಾವು ಆ ನೋವು, ನರಳಾಟಗಳನ್ನೂ ಸಹಜ ಎನ್ನುವಂತೆ ಒಪ್ಪಿಕೊಳ್ಳಲು ಆರಂಭಿಸುತ್ತೇವೆ. ಯುದ್ಧ ಇದಕ್ಕೆ ಅತ್ಯಂತ ಸ್ಪಷ್ಟವಾದ ಉದಾಹರಣೆ. ಆರಂಭದಲ್ಲಿ ಯುದ್ಧ ಆಘಾತಕಾರಿಯಾಗಿ, ಸಹಿಸಲಸಾಧ್ಯವಾಗಿ ಕಂಡುಬರುತ್ತದೆ. ಯುದ್ಧದ ನಡುವೆ ಜೀವನ ನಡೆಸುವುದು ಸಾಧ್ಯವೇ ಇಲ್ಲ ಎನಿಸುತ್ತದೆ. ಇಷ್ಟಾದರೂ ಒಂದಷ್ಟು ಸಮಯ ಕಳೆದ ಬಳಿಕ, ಇದೇ ಯುದ್ಧ ನಮ್ಮ ದೈನಂದಿನ ಜೀವನದ ಇನ್ನೊಂದು ಭಾಗ ಎನ್ನುವಂತೆ ಭಾಸವಾಗತೊಡಗುತ್ತದೆ.

ಕೆಲವೇ ಕೆಲವು ಯುದ್ಧಗಳು ಇದನ್ನು ಬಹಳ ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದು, ಇತ್ತೀಚಿನ ಇರಾನ್ ಯುದ್ಧ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಹಲವಾರು ತಿಂಗಳ ಅವಧಿಗೆ ಈ ಯುದ್ಧ ಸಣ್ಣ ಪುಟ್ಟ ದಾಳಿಗಳ ರೂಪದಲ್ಲಿ, ನಾಯಕರ ನಡುವಿನ ಆಕ್ರೋಶ ಭರಿತ ಹೇಳಿಕೆಗಳ ರೂಪದಲ್ಲಿ, ಯುದ್ಧ ಇನ್ನೇನು ಮುಗಿದೇ ಹೋಯಿತು ಎನ್ನುವಂತಹ ಭರವಸೆ ಮೂಡಿಸಿದ ಹುಸಿ ಕ್ಷಣಗಳ ರೂಪದಲ್ಲಿ ಮುಂದುವರಿಯುತ್ತಲೇ ಹೋಯಿತು. ಆದರೆ, ಯುದ್ಧ ಮಾತ್ರ ನಿಜಕ್ಕೂ ಕೊನೆ ಕಾಣಲೇ ಇಲ್ಲ. ದುರದೃಷ್ಟವಶಾತ್, ಇಂತಹ ದೊಡ್ಡ ನಿರ್ಧಾರಗಳಲ್ಲಿ ಯಾವುದೇ ಪಾತ್ರವನ್ನು ಹೊಂದಿರದಿದ್ದ ಲಕ್ಷಾಂತರ ಕುಟುಂಬಗಳ ಮೇಲೂ ಈ ಸುದೀರ್ಘ ರಾಜಕೀಯ ಬಿಕ್ಕಟ್ಟು ಮೌನವಾಗಿಯೇ ದುಷ್ಪರಿಣಾಮ ಬೀರಿತ್ತು. ಇದರಲ್ಲಿ ಯಾವುದೇ ಪಾತ್ರ ಹೊಂದಿರದಿದ್ದ ಅಮಾಯಕ ಜನರು ಭಾರೀ ಬೆಲೆ ತೆರುವಂತಾಯಿತು.

Silent Humanitarian Crisis

ಈಗ, ಇಷ್ಟೆಲ್ಲ ಆದ ನಂತರ, ಕೊನೆಗೂ ಒಂದು ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಇದು ನಿಜಕ್ಕೂ ಸಮಾಧಾನ ಪಡುವ ವಿಚಾರವೇ ಸರಿ. ಆದರೆ, ಯುದ್ಧ ಮುಗಿಯಿತು ಎಂದು ನಾವು ಸಂಭ್ರಮಿಸುವ ಮುನ್ನ, ಯುದ್ಧದ ರೂಪದಲ್ಲಿ ಏನಾನಾಗಿತ್ತು ಎನ್ನುವುದನ್ನೂ ನೆನಪಿಸಿಕೊಳ್ಳಬೇಕು. ಕಳೆದ ಕೆಲ ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಮತ್ತೆ ಹೊಸದಾದ ದಾಳಿಗೆ ಆದೇಶ ನೀಡಿ, ಇರಾನಿನ ತೈಲ ರಫ್ತಿನ ಬಹುತೇಕ 90%ವನ್ನು ನಿರ್ವಹಿಸುವ ಖಾರ್ಗ್ ದ್ವೀಪದ ಮೇಲೆ ನಿಯಂತ್ರಣ ಸಾಧಿಸುವ ಮಾತುಗಳನ್ನಾಡಿದ್ದರು. ವಾಸ್ತವ ಚಿತ್ರಣ ಬೇರೆಯೇ ಇದ್ದರೂ, ಅವಸರವಾಗಿ ಹೇಳಿಕೆ ನೀಡಿದ ಟ್ರಂಪ್, ಒಂದು 'ದೊಡ್ಡ ಒಪ್ಪಂದ'ದ ಮೂಲಕ ಯುದ್ಧ ಮುಕ್ತಾಯ ಕಂಡಿದೆ ಎಂದು ಘೋಷಿಸಿದ್ದರು.

ಟ್ರಂಪ್ ಹೇಳಿಕೆಗಳು ಮತ್ತು ವಾಸ್ತವ ಚಿತ್ರಣದ ನಡುವಿನ ವ್ಯತ್ಯಾಸವೇ ಈ ಯುದ್ಧದ ನೈಜ ವಿನ್ಯಾಸವಾಗಿಬಿಟ್ಟಿದೆ. ಶಾಂತಿ ಒಪ್ಪಂದ ಘೋಷಣೆಯಾದಾಗ ಮಾರುಕಟ್ಟೆಗಳು ತಾತ್ಕಾಲಿಕವಾಗಿ ಪ್ರತಿಕ್ರಿಯೆ ನೀಡಿದವಾದರೂ, ಬಹಳಷ್ಟು ಜನರು ಅದಕ್ಕೆ ಗಮನ ನೀಡಲೇ ಇಲ್ಲ. ಏಕೆಂದರೆ, ಇದಕ್ಕೂ ಮುನ್ನ ಬಹುತೇಕ 40 ಬಾರಿ ಇಂತಹ ಶಾಂತಿಯ ಭರವಸೆಗಳನ್ನು ನೀಡಲಾಗಿತ್ತು. ಜನರು ಇಂತಹ ಭರವಸೆಗಳನ್ನು ನಂಬುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಸಂದರ್ಶನಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಬರೆಹಗಳಲ್ಲಿ ನಾಯಕರು ಆತ್ಮವಿಶ್ವಾಸದಿಂದ ಶಾಂತಿಯ ಕುರಿತು ಮಾತನಾಡಿದ್ದರೂ, ದಾಳಿ - ಪ್ರತಿದಾಳಿಗಳು ಮಾತ್ರ ಮುಂದುವರಿದಿದ್ದವು. ಹೊರ್ಮುಸ್ ಜಲಸಂಧಿ ಮುಚ್ಚಲ್ಪಟ್ಟು, ಮಧ್ಯ ಪೂರ್ವದಾದ್ಯಂತ ಅನಿಶ್ಚಿತತೆಗಳು ಹೆಚ್ಚಾದವು.

ಪಾಕಿಸ್ತಾನಕ್ಕೆ ಸಂಕಷ್ಟ ತಂತು ಡೊನಾಲ್ಡ್ ಟ್ರಂಪ್‌ರ ಇಸ್ರೇಲ್ ಒಪ್ಪಂದದ ಬೇಡಿಕೆ
ಪಾಕಿಸ್ತಾನಕ್ಕೆ ಸಂಕಷ್ಟ ತಂತು ಡೊನಾಲ್ಡ್ ಟ್ರಂಪ್‌ರ ಇಸ್ರೇಲ್ ಒಪ್ಪಂದದ ಬೇಡಿಕೆ

ಇಲ್ಲಿಂದಲೇ ಸಾಮಾನ್ಯ ಕುಟುಂಬಗಳಿಗೂ ಯುದ್ಧದ ಬಿಸಿ ತಟ್ಟಲಾರಂಭಿಸಿತು. ಇರಾನ್ ಹಲವು ಅರಬ್ ದೇಶಗಳನ್ನು ಅಮೆರಿಕದ ಮಿತ್ರರು ಎಂದು ಪರಿಗಣಿಸಿ, ಅವುಗಳ ಮೇಲೆ ದಾಳಿ ನಡೆಸಿತು. ಜೋರ್ಡಾನ್, ಕುವೈತ್, ಮತ್ತು ಬಹ್ರೇನ್ ಮೇಲೆ ದಾಳಿಗಳಾದವು. ಬಳಿಕ ಯುಎಇ, ಸೌದಿ ಅರೇಬಿಯಾ ಮತ್ತು ಕತಾರ್‌ಗಳ ಮೇಲೆ ವಾರಗಳ ಕಾಲ ದಾಳಿ ನಡೆದು, ಜನರು ಪ್ರಾಣ ಕಳೆದುಕೊಂಡರು. ಈ ದಾಳಿಗಳಲ್ಲಿ ಪ್ರಮುಖ ಇಂಧನ ನೆಲೆಗಳು ಹಾನಿಗೊಳಗಾದವು. ದುಬೈಯಲ್ಲಿನ ಓರ್ವ ವ್ಯಾಪಾರಿ ವಿಮಾನಗಳು ರದ್ದಾಗಿ ಗ್ರಾಹಕರನ್ನು ಕಳೆದುಕೊಳ್ಳುವುದನ್ನು, ಅಥವಾ ಕತಾರ್‌ನಲ್ಲಿ ವಾಸಿಸುವ ಓರ್ವ ಕಾರ್ಮಿಕ ಪ್ರತಿ ರಾತ್ರಿ ಮೊಳಗುವ ಸೈರನ್ ಸದ್ದಿನ ನಡುವೆ ಜೀವನ ನಡೆಸುವುದನ್ನು ಊಹಿಸಿಕೊಳ್ಳಿ. ಅವರಿಗೆ ಮನೆಗಳ ಹೊರಗೇ ಭೀತಿ ಬಾಗಿಲು ತಟ್ಟುತ್ತಿರುವಾಗ, ಟಿವಿಯಲ್ಲಿ ಶಾಂತಿಯ ಮಾತುಗಳು ಬರುವುದಕ್ಕೆ ಅರ್ಥವೇ ಇರಲಿಲ್ಲ. ಈಗಲೂ ಶಾಂತಿಯ ಕುರಿತು ನಂಬಿಕೆ ಮೂಡಿ, ಜನಜೀವನ ಸಹಜ ಸ್ಥಿತಿಗೆ ಮರಳಲು ಬಹಳಷ್ಟು ಸಮಯವೇ ಬೇಕಾಗಬಹುದು.

ಇನ್ನು ಆರ್ಥಿಕ ಆಘಾತವಂತೂ ಈ ಪ್ರದೇಶವನ್ನು ಮೀರಿ ಬೆಳೆದಿತ್ತು. ಭಾರತೀಯರಿಗೂ ಇದರ ಪರಿಣಾಮ ತಟ್ಟಿತ್ತು. ಜಗತ್ತಿನ ಬಹುತೇಕ 17% ದ್ರವೀಕೃತ ನೈಸರ್ಗಿಕ ಅನಿಲ ಕತಾರ್‌ನಿಂದಲೇ ಪೂರೈಕೆಯಾಗುತ್ತಿದ್ದು, ನಮ್ಮ ಬಸ್‌ಗಳು, ಟ್ರಕ್‌ಗಳು, ಕಾರ್ಖಾನೆಗಳು, ಮತ್ತು ಅಡುಗೆ ಮನೆಗಳಿಗೆ ಶಕ್ತಿ ನೀಡುವ ತೈಲ, ಅನಿಲಗಳು ಹೊರ್ಮುಸ್ ಜಲಸಂಧಿಯ ಮೂಲಕವೇ ಬರಬೇಕಿತ್ತು. ಈ ಸಣ್ಣದಾದ ಸಮುದ್ರ ಮಾರ್ಗವೇ ಆಯುಧದ ರೀತಿಯಲ್ಲಿ ಬಳಕೆಯಾದಾಗ, ತೈಲ ಬೆಲೆಗಳು ಹೆಚ್ಚಳವಾಗಿ, ರೂಪಾಯಿ ದುರ್ಬಲಗೊಂಡು, ಪೆಟ್ರೋಲ್, ಅಡುಗೆ ಅನಿಲ, ಮತ್ತು ದೈನಂದಿನ ವಸ್ತುಗಳ ಬೆಲೆ ನಮ್ಮ ಮಾರುಕಟ್ಟೆಯಲ್ಲೂ ಹೆಚ್ಚಳವಾಗತೊಡಗಿತು. ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆದ ಯುದ್ಧ ದೆಹಲಿ, ಮುಂಬೈ, ಅಥವಾ ಬೆಂಗಳೂರುಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಕುಟುಂಬಗಳ ತಿಂಗಳ ವೆಚ್ಚದಲ್ಲಿ ಹೆಚ್ಚಳ ತಂದಿತು. ಇಂದಿನ ಜಗತ್ತು ಎಷ್ಟರಮಟ್ಟಿಗೆ ಪರಸ್ಪರ ಸಂಪರ್ಕಿತವಾಗಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.

ಈ ಯುದ್ಧದ ಹಾನಿ ಬಹಳಷ್ಟು ದೀರ್ಘಾವಧಿಯ ಯೋಜನೆಗಳಿಗೂ ಸಮಸ್ಯೆ ತಂದೊಡ್ಡಿದೆ. ಹೊರ್ಮುಸ್ ಜಲಸಂಧಿಯ ಕತ್ತನ್ನು ಎಷ್ಟು ಸುಲಭವಾಗಿ ಹಿಸುಕಬಹುದು ಎನ್ನುವುದನ್ನು ಕಂಡು ಆತಂಕಗೊಂಡ ಸೌದಿ ಅರೇಬಿಯಾ, ತನ್ನ ಹಣವನ್ನು ಬಂದರುಗಳು ಮತ್ತು ಡೇಟಾ ಸೆಂಟರ್‌ಗಳ ನಿರ್ಮಾಣಕ್ಕೆ ಬಳಸತೊಡಗಿತು. ಪ್ರಮುಖ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ನಿಲ್ಲಿಸಿದ ಪರಿಣಾಮವಾಗಿ, ದುಬೈ ಸಹ ಹಿಂಜರಿತ ಕಂಡಿತು. ಇವೆಲ್ಲ ಮಾರುಕಟ್ಟೆ ಮತ್ತು ಹಣದ ಲೆಕ್ಕಾಚಾರಗಳಾಚೆ, ಯಾವ ಅಳತೆಗೂ ಸಿಗದ ಭಾವನಾತ್ಮಕ ಮತ್ತು ಸಾಮಾಜಿಕ ಗಾಯಗಳನ್ನೂ ಈ ಯುದ್ಧ ಉಂಟುಮಾಡಿತ್ತು. ಮಧ್ಯ ಪೂರ್ವ ಪ್ರದೇಶದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರು ತಮ್ಮ ಗುರಿಗಳನ್ನು ಸಾಧಿಸಲು ಹಠಕ್ಕೆ ಬಿದ್ದ ಪರಿಣಾಮವಾಗಿ, ಲಕ್ಷಾಂತರ ಜನರು ತಮ್ಮ ಉದ್ಯೋಗ, ಉದ್ಯಮಗಳು, ಮತ್ತು ಕನಸುಗಳು ಕಮರಿ ಹೋಗುವುದನ್ನು ಅಸಹಾಯಕರಾಗಿ ನೋಡಬೇಕಾಯಿತು. ಆದರೆ, ಟ್ರಂಪ್ ಮತ್ತು ನೆತನ್ಯಾಹು ಅಲ್ಲಿನ ಜನಸಾಮಾನ್ಯರ ಸಂಕಷ್ಟಗಳತ್ತ ಗಮನ ಹರಿಸಲೇ ಇಲ್ಲ.

ಇಂಧನ ಬಿಕ್ಕಟ್ಟು: ಒಪೆಕ್ ಒಕ್ಕೂಟದಿಂದ ಯುಎಇ ನಿರ್ಗಮನ ಘೋಷಣೆ, ಇದು ಒಪೆಕ ಅಂತ್ಯವೆಂದ ವಿಶ್ಲೇಷಣೆ
ಇಂಧನ ಬಿಕ್ಕಟ್ಟು: ಒಪೆಕ್ ಒಕ್ಕೂಟದಿಂದ ಯುಎಇ ನಿರ್ಗಮನ ಘೋಷಣೆ, ಇದು ಒಪೆಕ ಅಂತ್ಯವೆಂದ ವಿಶ್ಲೇಷಣೆ

ಇಲ್ಲಿನ ಬೆಳವಣಿಗೆಯನ್ನು ಇನ್ನಷ್ಟು ಆತಂಕಕಾರಿಯಾಗಿಸುವುದು ಏನೆಂದರೆ, ಇಲ್ಲಿ ಯುದ್ಧ ಮತ್ತು ಶಾಂತಿಯ ಅರ್ಥಗಳೇ ಅಸ್ಪಷ್ಟವಾಗಿವೆ. ಗಾಜಾದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಕದನ ವಿರಾಮ ಘೋಷಣೆಯಾದ ನಂತರವೂ ಬಹುತೇಕ 1,000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲೆಬನಾನ್‌ನಲ್ಲಿ ಎಪ್ರಿಲ್ ತಿಂಗಳ ಕದನ ವಿರಾಮ ಘೋಷಣೆಯ ನಂತರವೂ ಹಿಂಸಾಚಾರಗಳು ಮುಂದುವರಿದಿವೆ. ಅಲ್ಲಿ ಒಂದು ಮಿಲಿಯನ್ ಜನರು ಇಂದಿಗೂ ನೆಲೆಯಿಲ್ಲದಂತಾಗಿದ್ದು, ಕಳೆದ ಕೇವಲ ಎರಡು ತಿಂಗಳ ಅವಧಿಯಲ್ಲಿ ಬಹುತೇಕ 1,500 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ದುಃಖದ ವಿಚಾರವೆಂದರೆ, ಬಲಿಯಾದವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಆದರೆ, ಈ ವಾಸ್ತವ ಇಂದು ಇತರ ವರದಿಗಳ ಹಿಂದೆ ಅವಿತು ಕುಳಿತಿದೆ. ಕದನ ವಿರಾಮಗಳನ್ನು ಇಂದು 'ದುರ್ಬಲ', 'ಅನಿಶ್ಚಿತ', ಅಥವಾ 'ಒತ್ತಡಕ್ಕೆ ಸಿಲುಕಿರುವ' ಎಂಬೆಲ್ಲ ಪದಗಳಿಂದ ಬಣ್ಣಿಸಲಾಗುತ್ತಿದ್ದು, ಇಂತಹ ಕದನ ವಿರಾಮ ಜಾರಿಯಲ್ಲಿದ್ದರೂ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಆಕ್ರಮಣ ನಡೆಸುತ್ತಲೇ ಇವೆ.

ಇನ್ನು ಬಹಳಷ್ಟು ಕಠಿಣ ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭಿಸಿಲ್ಲ. ಹೊರ್ಮುಸ್ ಜಲಸಂಧಿ ಇನ್ನಾದರೂ ಹೇಗೆ ಸುರಕ್ಷಿತವಾಗಿರಬಹುದು? ಇರಾನಿನ ಯುರೇನಿಯಂ ಪುಷ್ಟೀಕರಣ ಯೋಜನೆಯ ಮೇಲೆ ಎಂತಹ ಮಿತಿಗಳನ್ನು ಹೇರಬಹುದು? ಇರಾನಿನ ಕ್ಷಿಪಣಿ ಯೋಜನೆಗಳನ್ನು ನಿಯಂತ್ರಿಸಲು ಸಾಧ್ಯವೇ? ಇವೆಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಲಭಿಸುವ ತನಕ, ಪ್ರತಿಯೊಂದು ಶಾಂತಿ ಒಪ್ಪಂದವೂ ಕೇವಲ ತಾತ್ಕಾಲಿಕ ಸ್ಥಗಿತ ಎಂಬಂತೆಯೇ ಕಾಣಲಿವೆ.

ಬಹುಶಃ ಈ ಯುದ್ಧ ಕಲಿಸಿದ ಅತ್ಯಂತ ಯಾತನಾದಾಯಕ ಪಾಠವೆಂದರೆ ಇದೇ. ನಾವು ಇಂದು ಅಪಾಯದ ಜೊತೆಗೇ ಜೀವಿಸುವುದನ್ನು ಕಲಿತಿದ್ದು, ಭಯವನ್ನು ನಿತ್ಯದ ಅಭ್ಯಾಸವೆಂಬಂತೆ ರೂಢಿಸಿಕೊಂಡಿದ್ದೇವೆ. ಇನ್ನು ಕುಸಿದುಬಿದ್ದ ಭರವಸೆಗಳನ್ನೇ 'ಶಾಂತಿ' ಎನ್ನಲಾಗುತ್ತಿದೆ. ಆದರೆ, ತಮ್ಮ ದೈನಂದಿನ ಜೀವನದಲ್ಲಿ ಕುಟುಂಬಗಳ ಅರಿವಿಗೆ ಬರದ ಶಾಂತಿ ಕೇವಲ ಕಾಗದದ ಮೇಲಿನ ಒಂದು ಪದವಷ್ಟೇ. ನೈಜ ಶಾಂತಿಯನ್ನು ಪತ್ರಿಕಾಗೋಷ್ಠಿಗಳಲ್ಲಿ ಮಾತ್ರ ಘೋಷಿಸುವುದಲ್ಲ. ಸಾಮಾನ್ಯ ಕುಟುಂಬಗಳು ಯಾವುದೇ ಭೀತಿಯಿಲ್ಲದೆ ರಾತ್ರಿ ನಿದ್ರಿಸಿದಾಗ ಶಾಂತಿಯನ್ನು ಮನೆಗಳಲ್ಲೂ ಅನುಭವಿಸಲು ಸಾಧ್ಯ. ಆ ದಿನ ಬರುವ ತನಕ, ನಾವು ಸದ್ಯದ ಮೌನಕ್ಕೇ ಧನ್ಯವಾದ ಅರ್ಪಿಸಬೇಕಷ್ಟೇ. ಹಾಗೆಂದು ಈ ಮೌನವನ್ನು ಸುರಕ್ಷತೆ ಎಂದು ಮಾತ್ರ ತಪ್ಪಾಗಿ ಭಾವಿಸುವಂತಿಲ್ಲ!

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+