ಶ್ರೀರಾಮಮಂದಿರ ದೇಣಿಗೆ ವಿವಾದ: RSS ಆದಾಯದ ಮೂಲ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕರ್ನಾಟಕದೊಂದಿಗೆ ನಂಟು ಹೊಂದಿರುವ ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ವಿಚಾರವು ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡುತ್ತಿದೆ. ದೇಣಿಗೆ ಹಣ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹೋಗಿರಬೇಕು. ಅದಕ್ಕಾಗಿಯೇ ಇಷ್ಟು ತಡವಾಗಿ ಪ್ರತಿಕ್ರಿಯಿಸಿದ್ದಾರೆ. ಇವರಿಗೆ ತನಿಖೆ, ಕಠಿಣ ಶಿಕ್ಷೆ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಆರ್‍ಎಸ್‌ಎಸ್ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ಮುಂದುವರಿಸಿದ್ದಾರೆ.
ಇಂದು ಸೋಮವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ ಅವರು, ನಿಧಿ ದುರುಪಯೋಗದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಆರ್‍ಎಸ್‌ಎಸ್‌ಗೆ ನೈತಿಕ ಅಧಿಕಾರ ಏನಿದೆ? ಎಂದು ಪ್ರಶ್ನಿಸಿದರು.

ಶ್ರೀರಾಮ ಮಂದಿರದ ದೇಣಿಗೆ ಹಣ ಲೂಟಿ ಹೊಡೆದಿದ್ದೇ ಆರ್ ಎಸ್‌ಎಸ್. ಹೀಗಾಗಿಯೇ ತನ್ನ ಮೇಲಿನ ಆರೋಪಗಳಿಗೆ ಆರ್‌ಎಸ್‌ಎಸ್ ನಾಯಕರು ತಡವಾಗಿ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲವು ನಿಧಿಸಂಗ್ರಹದಲ್ಲಿ ಭಾಗಿಯಾದ ಸಂಸ್ಥೆಗಳಲ್ಲಿನ ಆಳವಾದ ಆಂತರಿಕ ಜಟಿಲತೆಯನ್ನು ಸೂಚಿಸುತ್ತದೆ. ಇಂದು ಕಠಿಣ ಶಿಕ್ಷೆ ಕುರಿತು ಮಾತನಾಡುವ ಇವರಿಗೆ ದೇಣಿಗೆ ಹಣದಲ್ಲಿ ಅವರಿಗೂ ಪಾಲು ಹೋಗಿರಬೇಕು ಎಂದು ಖರ್ಗೆ ಆರೋಪಿಸಿದರು.
ಆರ್ ಎಸ್‌ಎಸ್ ಆದಾಯ ಮೂಲ ಪ್ರಶ್ನಿಸಿದ ಖರ್ಗೆ
ಆರ್‌ಎಸ್‌ಎಸ್ ಬಿಜೆಪಿಯನ್ನು ಸೈದ್ಧಾಂತಿಕವಾಗಿ ಪೋಷಿಸುತ್ತಿದೆ. ಆರ್‌ಎಸ್‌ಎಸ್ "ಹಣ ಅಕ್ರಮ ವರ್ಗಾವಣೆ"ಯಲ್ಲಿ ತೊಡಗಿದೆ. ಆರ್ ಎಸ್‌ಎಸ್ ನೋಂದಣಿ ಕುರಿತು ಪ್ರಶ್ನಿಸಿದ್ದ ಖರ್ಗೆ ಇದೀಗ ಅದರ ಆದಾಯದ ಮೂಲ ಏನೆಂದು ಪ್ರಶ್ನಿಸಿದ್ದು, ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಆರ್‌ಎಸ್‌ಎಸ್ 2,500 ಕ್ಕೂ ಹೆಚ್ಚು ಸಂಘಟನೆಗಳ ಜಾಲ ಹೊಂದಿದೆ. ಇವರೆಲ್ಲ ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಅವರು ದೂರಿದ್ದಾರೆ. ನೋಂದಣಿ ಮಾಡದೇ ಉಳಿದುಕೊಂಡ ಆರ್‍ಎಸ್‌ಎಸ್ ಕಾನೂನು ಅಥವಾ ಸಂವಿಧಾನವನ್ನು ಮೀರಿದೆಯೇ ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.
ವಿವಾದ ಬಗ್ಗೆ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?
ಮೊನ್ನೆ ಶುಕ್ರವಾರ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಪ್ರತಿಕ್ರಿಯಿಸಿದ್ದರು. ರಾಮ ಮಂದಿರಕ್ಕಾಗಿ ನಡೆದ ದೇಣಿಗೆಯ ಲೂಟಿಯಿಂದ ಇಡೀ ಸಮಾಜದ ಭಾವನೆಗಳು ಮತ್ತು ನಂಬಿಕೆ ನೋವುಂಟು ಮಾಡಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅವರು ಯಾರೇ ಆದರೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದರು.
ದೇಣಿಗೆ ಹಣ ದುರುಪಯೋಗ ಮಾಡಿಕೊಳ್ಳುವ ಮೂಲಕ "ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳು" ಹಿಂದೂ ಧರ್ಮವನ್ನು ಕೆಣಕಲು ಯತ್ನಿಸುತ್ತಿವೆ. ಇಂತಹ ಪಿತೂರಿ ತಡೆಯಲು ಇಂದಿನ ಸನ್ನಿವೇಶದಲ್ಲಿ ಅಗತ್ಯ ತಾಳ್ಮೆ ಮತ್ತು ಸಂಯಮ ಪ್ರದರ್ಶಿಸಬೇಕೆಂದು ಎಂದು ಅವರು ಹಿಂದೂ ಸಮಾಜಕ್ಕೆ ಕರೆ ನೀಡಿದರು. ಜೊತೆಗೆ ಉತ್ತರ ಪ್ರದೇಶದ ರಾಜ್ಯ ಸರ್ಕಾರ ವಿಶೇಷ ತನಿಖೆ ತಂಡ (ಎಸ್‌ಐಟಿ) ರಚಿಸಿದೆ. ಅದರಡಿ ಹಣ ಲೂಟಿಯ ತನಿಖೆ ನಡೆಯಲಿದೆ. ಯಾರೇ ತಪ್ಪು ಮಾಡಿದ್ದರು ತನಿಖೆಯಿಂದ ತಿಳಿದು ಬರುತ್ತಿದ್ದಂತೆ ಕಾನೂನಾತ್ಮಕವಾಗಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದರು.













Click it and Unblock the Notifications