ಪಾಕಿಸ್ತಾನಿ ಫೇರ್‌ನೆಸ್ ಕ್ರೀಮ್‌ನಿಂದ 18 ಮಹಿಳೆಯರ ಕಿಡ್ನಿ ವೈಫಲ್ಯ ! ಇದು ಭಾರತಕ್ಕೆ ಬಂದಿದ್ದಾದರೂ ಹೇಗೆ? ಜನರ ಆಕ್ರೋಶ
ಬೆಳ್ಳಗಾಗಬೇಕು ಎನ್ನುವ ಮಹಿಳೆಯರ ಬಯಕೆಯೇ ಇದೀಗ ಜೀವಕ್ಕೆ ಕುತ್ತು ತಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಲ್ಲಿ, ಇಲ್ಲಿನ ಸುಮಾರು 18 ಮಹಿಳೆಯರಿಗೆ ಇದ್ದಕ್ಕಿದ್ದಂತೆ ಗಂಭೀರ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಂಡವು. ವೈದ್ಯರು ಮೂಲ ಕಾರಣವನ್ನು ಹುಡುಕುತ್ತಾ ಹೋದಾಗಲೇ ಬೆಳಕಿಗೆ ಬಂದದ್ದು ಆಘಾತಕಾರಿ ಸತ್ಯ. ಈ ಎಲ್ಲಾ ಮಹಿಳೆಯರು ನಿರ್ದಿಷ್ಟ ಪಾಕಿಸ್ತಾನಿ ಫೇರ್‌ನೆಸ್ ಕ್ರೀಮ್ ಅನ್ನು ಬಳಸುತ್ತಿದ್ದರು. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ ವ್ಯಾಪಕ ಕೋಲಾಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಈ ಪ್ರಾಡಕ್ಟ್ ಹೇಗೆ ಬಂತು ಎನ್ನುವ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ.
ಸುಂದರವಾಗಿ ಕಾಣಬೇಕು ಎನ್ನುವ ಭರಾಟೆಯಲ್ಲಿ ಜನರು ಯೋಚಿಸದೆ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ, ಬಳಸಲು ಪ್ರಾರಂಭಿಸುತ್ತಾರೆ. ಆದರೆ ಮಹಾರಾಷ್ಟ್ರದ ನಾಗ್ಪುರದಿಂದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಇದೀಗ ಎಲ್ಲರನ್ನೂ ಆತಂಕಕ್ಕೆ ಗುರಿ ಮಾಡಿದೆ. ಇಲ್ಲಿ, ಕಳೆದ ಎರಡು ವರ್ಷಗಳಲ್ಲಿ 18 ಮಹಿಳೆಯರು ಬ್ಯೂಟಿ ಕ್ರೀಮ್ ಬಳಕೆಯಿಂದಾಗಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯ ಕ್ರೀಮ್ ಅಲ್ಲ, ಪಾಕಿಸ್ತಾನದಲ್ಲಿ ತಯಾರಿಸಿದ "ಗೋರಿ ಬ್ಯೂಟಿ ಕ್ರೀಮ್". ಈ ಕ್ರೀಂ ಆನ್‌ಲೈನ್ ಪ್ಲಾಟ್‌ಫಾರ್ಮ್ಗಳನಲ್ಲಿ ಮತ್ತು ಹಲವಾರು ಇನ್‌ಸ್ಟಾಗ್ರಾಮ್ ಪೇಜ್‌ಗಳ ಮೂಲಕ ಭಾರತದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದೆ.

ಪ್ರಯೋಗಾಲಯ ಪರೀಕ್ಷೆಯಲ್ಲಿ ಹೊರಬಿತ್ತು ಆಘಾತಕಾರಿ ಸಂಗತಿ:
ಈ ಇಡೀ ಘಟನೆಯನ್ನು ಚಿರಾಗ್ ಬರ್ಜತ್ಯ ಎಂಬ ಹೆಲ್ತ್ ಕಟೆಂಟ್ ಕ್ರಿಯೇಟರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಈ ಎಲ್ಲಾ ಮಹಿಳೆಯರು ಈ ಪಾಕಿಸ್ತಾನಿ ಕ್ರೀಮ್ ಬಳಸುತ್ತಿದ್ದಾರೆ ಎನ್ನುವುದನ್ನು ನಾಗ್ಪುರದ ವೈದ್ಯರು ಗಮನಿಸಿದ್ದಾರೆ. ಕೂಡಲೇ ಅವರು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಫ್‌ಡಿಎ ಈ ಕ್ರೀಮ್‌ನ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದೆ. ಈ ಪರೀಕ್ಷೆಯ ವರದಿ ಆಘಾತಕಾರಿಯಾಗಿತ್ತು. ಕ್ರೀಮ್‌ನಲ್ಲಿ ಮಿತಿಗಿಂತ 752 ಪಟ್ಟು ಹೆಚ್ಚು ಪಾದರಸ ಇರುವುದು ಪತ್ತೆಯಾಗಿದೆ.
ಪಾದರಸವು ದೇಹಕ್ಕೆ ಹೇಗೆ ಹಾನಿ ಮಾಡುತ್ತದೆ?:
ಚಿರಾಗ್ ತಮ್ಮ ಪೋಸ್ಟ್‌ನಲ್ಲಿ ಪಾದರಸವು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಲೋಹ ಎಂದು ವಿವರಿಸಿದ್ದಾರೆ. ಫೇರ್‌ನೆಸ್ ಕ್ರೀಮ್ ತಯಾರಕರು ಇದನ್ನು ಬಳಸುತ್ತಾರೆ. ಏಕೆಂದರೆ ಇದು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ತಡೆಯುತ್ತದೆ. ಮೆಲನಿನ್ ನಮ್ಮ ಚರ್ಮದ ಬಣ್ಣಕ್ಕೆ ಕಾರಣವಾಗಿದೆ. ಮೆಲನಿನ್ ನಿರ್ಬಂಧಿಸಲ್ಪಟ್ಟಾಗ, ಕೆಲವೇ ದಿನಗಳಲ್ಲಿ ಮುಖವು ಕಾಂತಿಯುತವಾಗಿ ಬಿಳಿ ಬಣ್ಣವನ್ನು ಪಡೆಯುತ್ತವೆ. ಆದರೆ ಇದು ನೈಸರ್ಗಿಕ ಸೌಂದರ್ಯವಲ್ಲ, ಬದಲಿಗೆ ಚರ್ಮಕ್ಕಾಗುವ ರಾಸಾಯನಿಕ ಹಾನಿಯಾಗಿದೆ. ನಮ್ಮ ಚರ್ಮವು ಈ ಪಾದರಸವನ್ನು ಹೀರಿಕೊಳ್ಳುತ್ತದೆ ಮತ್ತು ಅದು ಕ್ರಮೇಣ ನಮ್ಮ ಮೂತ್ರಪಿಂಡಗಳಲ್ಲಿ ಸಂಗ್ರಹವಾಗುತ್ತದೆ. ಇದು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಬೇಡಿಕೆ:
ಈ ವಿಷಯದ ಬಗ್ಗೆ ಜನರು ತಮ್ಮ ಕುಟುಂಬ ಸದಸ್ಯರಿಗೆ, ವಿಶೇಷವಾಗಿ ಸಣ್ಣ ಪಟ್ಟಣಗಳು ಅಥವಾ ಹಳ್ಳಿಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆ ನೀಡಬೇಕೆಂದು ಚಿರಾಗ್ ಒತ್ತಾಯಿಸಿದ್ದಾರೆ. ಒಂದು ವೇಳೆ ನೀವು ಈ ಕ್ರೀಮ್ ಬಳಸದಿದ್ದರೂ ಸಹ, ನಿಮ್ಮ ಮನೆಯ ಕೆಲಸದವರು, ಊರಿನ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಯಾರಾದರೂ ಈ "ಫೇರ್ ಬ್ಯೂಟಿ ಕ್ರೀಮ್" ಬಳಸುತ್ತಿದ್ದರೆ, ಅದನ್ನು ತಕ್ಷಣವೇ ಅದನ್ನು ನಿಲ್ಲಿಸುವುದು ಒಳಿತು. ಏಕೆಂದರೆ ಅದು ನಿಮ್ಮ ಜೀವಕ್ಕೆ ಕುತ್ತು ತರಬಹುದು.
ಈ ವಿಷಯ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಮತ್ತು ಜನರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋವನ್ನು ಜನ ಟೀಕಿಸಲು ಪ್ರಾರಂಭಿಸುತ್ತಿದ್ದಂತೆ ಕಂಪನಿಯು ತನ್ನ ಹೇಳಿಕೆ ನೀಡಿದೆ. ನಾವು ಈ ವಿಷಯವನ್ನು ಗಂಭೀರವಾಗಿ ತನಿಖೆ ಮಾಡುತ್ತಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್‌ನಿಂದ ಈ ಉತ್ಪನ್ನವನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿದ್ದೇವೆ. ನಮ್ಮ ಗ್ರಾಹಕರಿಗೆ ಸುರಕ್ಷಿತ ಮಾರುಕಟ್ಟೆಯನ್ನು ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ನಾವು ಎಲ್ಲಾ ಭದ್ರತಾ ಕಾಳಜಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಮೀಶೋ ಹೇಳಿದೆ.
ಅಂತರ್ಜಾಲದಲ್ಲಿ ಭುಗಿಲೆದ್ದ ಕೋಪ:
ಈ ಸುದ್ದಿ ಹೊರಬಿದ್ದ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ತಯಾರಿಸಿದ ಉತ್ಪನ್ನವನ್ನು ಭಾರತದಲ್ಲಿ ಆನ್‌ಲೈನ್‌ನಲ್ಲಿ ಹೇಗೆ ಮಾರಾಟ ಮಾಡಲಾಗುತ್ತಿದೆ ಎಂದು ಜನರು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, "ಪಾಕಿಸ್ತಾನದಲ್ಲಿ ತಯಾರಿಸಿದ ಕ್ರೀಮ್ ಅನ್ನು ಇಲ್ಲಿ ಏಕೆ ಮತ್ತು ಹೇಗೆ ಮಾರಾಟ ಮಾಡಲಾಗುತ್ತಿದೆ?" ಎಂದು ಕೇಳಿದರೆ, ಇನ್ನೊಬ್ಬ ಬಳಕೆದಾರರು, "ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮಾರಾಟವಾಗುವ ಕ್ರೀಮ್" ಎಂದು ಹೇಳಿದ್ದಾರೆ. ಸರ್ಕಾರವು ಈ ಕ್ರೀಮ್ ಮತ್ತು ಈ ಪಾಕಿಸ್ತಾನಿ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ತಕ್ಷಣ ನಿಷೇಧಿಸಬೇಕು ಇನ್ನೊಬ್ಬರು ಆಗ್ರಹಿಸಿದ್ದಾರೆ.
18 women in Nagpur, Maharashtra complained about kidney problems to their doctors in the span of two years. Doctors saw a pattern and checked that all of them were using this pakistani cream sold by many Instagram pages and meesho.
— Chirag Barjatya (@chiragbarjatya) July 5, 2026
FDA Maharashtra took the cream samples. Sent to… pic.twitter.com/LqPZayJQKV
(ಬರಹ: ರಂಜಿತಾ ಆರ್.ಕೆ.)














Click it and Unblock the Notifications