'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ಸಿಂಚನಾ ಪಾತ್ರ ಮತ್ತೆ ಬದಲು, ಹಳೆಯ ನಟಿ ಕಮ್‌ಬ್ಯಾಕ್, ಹೊಸ ತಿರುವು
Lakshmi Nivasa: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಮತ್ತೊಂದು ಪಾತ್ರಧಾರಿಯ ಪಾತ್ರ ಬದಲಾವಣೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಸೀರಿಯಲ್‌ಗಳಲ್ಲಿ ಪಾತ್ರ ಬದಲಾವಣೆ ಆಗುವುದು ಸಹಜ ಎನ್ನುವಂತೆ ಆಗಿದೆ. ಮೊದಲೆಲ್ಲ ಸೀರಿಯಲ್‌ಗಳಲ್ಲಿ ಪಾತ್ರ ಬದಲಾದರೆ ವೀಕ್ಷಕರು ಮುನಿಸಿಕೊಳ್ಳುತ್ತಿದ್ದರು. ಆದರೆ ಸೀರಿಯಲ್ ಕಥೆಯನ್ನೇ ತಿರುಚು ಮುರುಚು ಮಾಡುವುದಕ್ಕಿಂತ ಪಾತ್ರ ಬದಲಾವಣೆ ಪರವಾಗಿಲ್ಲ ಎನ್ನುವ ಅಭಿಪ್ರಾಯ ವೀಕ್ಷಕರಲ್ಲೂ ಬರುತ್ತಿದೆ. ಆದರೆ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಈ ಹಿಂದೆ ನಟಿಸುತ್ತಿದ್ದ ನಟಿಯೇ ಕಮ್‌ಬ್ಯಾಕ್ ಮಾಡಿರುವುದು ವೀಕ್ಷಕರಲ್ಲಿ ಸಂತೋಷವನ್ನುಂಟು ಮಾಡಿದೆ.
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಗೌಡ್ರ ಮಗಳಾಗಿ ಒಂದೊಳ್ಳೆ ಪಾತ್ರ ಮಾಡುತ್ತಿದ್ದರು ರೂಪಿಕಾ. ಬಾಲ ನಟಿಯಾಗಿ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಅವರೀಗ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಂಕಿತ್ ಎಂಬುವರು ಈ ಸುಂದರಿಯನ್ನು ಕೈ ಹಿಡಿಯಲಿರುವ ಅದೃಷ್ಟವಂತ. ಆಗಸ್ಟ್ 31 ರಂದು ಬೆಂಗಳೂರಿನಲ್ಲೇ ರೂಪಿಕಾ - ಅಂಕಿತ್ ಮದುವೆ ಅದ್ಧೂರಿಯಾಗಿ ನಡೆಯಲಿದೆ.

ರೂಪಿಕಾ - ಅಂಕಿತ್ ಅವರದ್ದು ದೊಡ್ಡವರು ನೋಡಿ ಗೊತ್ತು ಮಾಡಿರೋ ಮದುವೆ. 'ನನಗೆ ಮದುವೆ ಮಾಡಬೇಕು ಅಂತ ಫ್ಯಾಮಿಲಿಯವರು ತುಂಬಾ ದಿನಗಳಿಂದ ಹುಡುಗನನ್ನ ಹುಡುಕುತ್ತಿದ್ದರು. ಅಂಕಿತ್ ಸಹ ನಮ್ಮ ದೂರದ ಸಂಬಂಧಿಯೇ. ಕಂಕಣ ಬಲ ಕೂಡಿ ಬಂತು. ಮದುವೆಗೆ ತಯಾರಿ ನಡೆಯುತ್ತಿದೆʼ ಎಂದಿರುವ ಅಂಕಿತಾ ಭಾವೀ ಪತಿ ಸದ್ಯ ಕೆನಡಾದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಅಲ್ಲಿನ 'ಇನ್ವೆಸ್ಕೋ' ಕಂಪನಿಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ್ಮೇಲೆ ಪತಿ ಜೊತೆ ಕೆನಡಾಕ್ಕೆ ತೆರಳುವ ತಯಾರಿಯಲ್ಲಿ ತೊಡಗಿದ್ದಾರೆ ರೂಪಿಕಾ.
ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರಬಂದ ರೂಪಿಕಾ
ಇತ್ತೀಚೆಗಷ್ಟೇ ರೂಪಿಕಾ ಅವರಿಗೆ ಹೂವು ಮೂಡಿಸುವ ಶಾಸ್ತ್ರ ನಡೆದಿದೆ. ಈ ಕಾಲದಲ್ಲೀ ಹೀಗೂ ನಡೆಯುತ್ತಾ ಅನ್ನೋ ಹಾಗೆ ಈ ನಟಿ ಈವರೆಗೂ ಭಾವಿ ಪತಿಯನ್ನ ಮುಖತಃ ಭೇಟಿ ಮಾಡಿಲ್ಲವಂತೆ. ವೀಡಿಯೋ ಕಾಲ್‌ನಲ್ಲೇ ಹುಡುಗ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೇನಿದ್ದರು ಆಗಸ್ಟ್‌ನಲ್ಲಿ ಮದುವೆ ನಡೆಯಬೇಕಿದೆ. ಮದುವೆ ನಂತರ ರೂಪಿಕಾ ಅವರು ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಕೆನಡಾದಲ್ಲಿ ಸೆಟಲ್ ಆಗುವ ಪ್ಲ್ಯಾನ್ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿನೇ ಅವರು ಸೀರಿಯಲ್‌ನಿಂದ ಹೊರ ಬಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಭರತನಾಟ್ಯ ಕಲಾವಿದೆ ಆಗಿರುವ ರೂಪಿಕಾ ನೂರಾರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋವನ್ನೂ ನಡೆಸುತ್ತಿದ್ದಾರೆ. ಮದುವೆಯಾದ್ಮೇಲೆ.. ಕೆನಡಾಕ್ಕೆ ಹೋದ್ಮೇಲೆ.. ಅಲ್ಲೂ ಡ್ಯಾನ್ಸ್ ಸ್ಟುಡಿಯೋ ತೆರೆದು ಅಲ್ಲಿರುವವರಿಗೆ ಭರತನಾಟ್ಯ ಹೇಳಿಕೊಡುವ ಪ್ಲಾನ್ ನಟಿ ರೂಪಿಕಾ ಅವರಿಗೆ ಇದೆ. ʼಉತ್ತಮ ಅವಕಾಶಗಳು ಸಿಕ್ಕಿದರೆ ಮದುವೆಯಾದ್ಮೇಲೂ ನಟಿಸುತ್ತೇನೆʼ ಎಂದು ರೂಪಿಕಾ ಹೇಳ್ತಾರಾದ್ರೂ ʼಲಕ್ಷ್ಮೀ ನಿವಾಸ ʼ ಸೀರಿಯಲ್‌ನಲ್ಲಂತೂ ಮುಂದುವರಿಯಲ್ಲ.
ಅವರ ಬದಲಿಗೆ ಎಂಟ್ರಿ ಕೊಡುತ್ತಿರುವವರು ಇವರೇ ನೋಡಿ
'ಲಕ್ಷ್ಮೀ ನಿವಾಸ' ಬಹಳ ಕಾಲದಿಂದ ಟಾಪ್ 5 ಸೀರಿಯಲ್‌ಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಧಾರಾವಾಹಿಯ ಪ್ರತಿ ಪಾತ್ರಕ್ಕೂ ಒಳ್ಳೆಯ ಫೀಡ್‌ಬ್ಯಾಕ್ ಇದೆ. ಸದ್ಯಕ್ಕೀಗ ಶ್ರೀನಿವಾಸ್ ಮತ್ತು ಲಕ್ಷ್ಮೀ ದಂಪತಿಯ ಕೊನೆ ಸೊಸೆ ಸಿಂಚನಾ ಪಾತ್ರದಲ್ಲಿದ್ದ ರೂಪಿಕಾ ಬದಲಿಗೆ ಹೊಸ ಅಲ್ಲಲ್ಲ ಹಳೆ ನಟಿಯೊಬ್ಬರ ಆಗಮನವಾಗುತ್ತಿದೆ. ಅವರು ಮತ್ಯಾರೂ ಅಲ್ಲ ದಿವ್ಯಶ್ರೀ ಗ್ರಾಮಾ. ಈ ಹೆಸರು ಎಲ್ಲೋ ಕೇಳ್ದಂಗಿದೆಯಲ್ಲಾ ಅಂದ್ಕೊಂಡ್ರಾ.. ಇವರು ಮತ್ಯಾರೂ ಅಲ್ಲ, ಶುರುವಲ್ಲಿ ʼಲಕ್ಷ್ಮೀ ನಿವಾಸʼ ಸೀರಿಯಲ್‌ನಲ್ಲಿ ಸಂಜನಾ ಪಾತ್ರವನ್ನು ಮಾಡುತ್ತಿದ್ದ ನಟಿ.
ಆದರೆ ಸೀರಿಯಲ್ ಶುರುವಾಗಿ ಸ್ವಲ್ಪ ದಿನಗಳಲ್ಲಿಯೇ ಸಿಂಚನಾ ಪಾತ್ರ ಬದಲಾಗಿತ್ತು. ದಿವ್ಯಶ್ರೀ ಗ್ರಾಮಾ ಸೀರಿಯಲ್‌ನಿಂದ ಹೊರ ಬಂದಿದ್ದರು. ಕಾರಣ ಅದೇ ಹೊತ್ತಿಗೆ ಇವರಿಗೆ ಕಲರ್ಸ್ ಕನ್ನಡದಿಂದ ಬಂದಿದ್ದ 'ಚುಕ್ಕಿತಾರೆ' ಸೀರಿಯಲ್ ಆಫರ್. ಅದು ಸೀರಿಯಲ್‌ನ ಬಹುಮುಖ್ಯ ಪಾತ್ರವಾದ ಕಾರಣ ಈ ಸಿಂಚನಾ ಪಾತ್ರ ಬಿಟ್ಟ ದಿವ್ಯ ಆ ಸೀರಿಯಲ್ ಸೇರಿಕೊಂಡಿದ್ದರು. ಇವರ ಪಾತ್ರಕ್ಕೆ ರೂಪಿಕಾ ಎಂಟ್ರಿಕೊಟ್ಟಿದ್ದರು. ಆರಂಭದ ದಿನಗಳಲ್ಲಿ ವೀಕ್ಷಕರು ಈ ಬದಲಾವಣೆ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದರೆ ಬರಬರುತ್ತ ಅನಿವಾರ್ಯವಾಗಿ ಒಪ್ಪಿಕೊಂಡರು. ಇದೀಗ ಸಿಂಚನಾ ಪಾತ್ರ ಮತ್ತೊಮ್ಮೆ ಬದಲಾಗುತ್ತಿದೆ. ವಿಶೇಷತೆ ಅಂದ್ರೆ ಆರಂಭದಲ್ಲಿ ಈ ಪಾತ್ರ ಮಾಡಿದವರೇ ಮತ್ತೆ ಆ ಪಾತ್ರಕ್ಕೆ ಬಂದಿದ್ದಾರೆ.
ಬದಲಾವಣೆ ಸಹಜ
ಈಗ ಸೀರಿಯಲ್‌ಗಳಲ್ಲಿ ಬದಲಾವಣೆ ಸಹಜವಾಗುತ್ತಿದೆ. ಮದುವೆ ಕಾರಣಕ್ಕೆ ಸೀರಿಯಲ್ ಬಿಟ್ಟ ನಟಿಯರು ಸಾಕಷ್ಟಿದ್ದಾರೆ. ಹೀಗಾಗಿ ಇದೆಲ್ಲ ವೀಕ್ಷಕರಿಗೂ ಅಭ್ಯಾಸವಾಗಿದೆ.
(ಬರಹ - ಭವಾನಿ ಭಟ್)













Click it and Unblock the Notifications