ಇದೇನಾ ಸೆಲೆಬ್ರಿಟಿಗಳ ಅಸಲಿ ಮುಖ? ತಾನೇ ಪ್ರಚಾರ ಮಾಡಿದ ಲಸ್ಸಿ ಕುಡಿಯಲು ನಿರಾಕರಿಸಿದ 'ಅಮ್ಮಾವ್ರ ಗಂಡ' ನಟಿ ಟ್ರೋಲ್
ಕನ್ನಡ ಸೇರಿ ಬಹುಭಾಷೆಗಳಲ್ಲಿ ಮಿಂಚಿರುವ ಬಾಲಿವುಡ್‌ನ ಹಿರಿಯ ನಟಿ ಭಾಗ್ಯಶ್ರೀ ಅವರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದ ನಟಿ, ಅಲ್ಲಿನ ಪ್ರಸಿದ್ಧ ಸ್ಥಳೀಯ ಲಸ್ಸಿ ಅಂಗಡಿಯೊಂದರಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಹರಟೆ ಹೊಡೆಯುತ್ತಾ ಪ್ರಚಾರ ಮಾಡಿದ್ದರು. ಆದರೆ ಕ್ಯಾಮೆರಾ ಆಫ್ ಆಗುತ್ತಿದ್ದಂತೆಯೇ ಅವರು ನಡೆದುಕೊಂಡ ರೀತಿಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವರ ವಿಡಿಯೋ ಮತ್ತು ಪೋಸ್ಟ್‌ಗಳು ಸಖತ್ ವೈರಲ್ ಆಗುತ್ತಿವೆ.
ಕ್ಯಾಮೆರಾ ಮುಂದೆ ನಗು, ಕ್ಯಾಮೆರಾ ಹಿಂದೆ ನಿರಾಕರಣೆ
ವೈರಲ್ ಆಗಿರುವ ಮಾಹಿತಿ ಪ್ರಕಾರ, ಭಾಗ್ಯಶ್ರೀ ಅವರು ವಾರಣಾಸಿಯ ಸಂಪ್ರದಾಯ ಶೈಲಿಯ ಮಣ್ಣಿನ ಕಪ್‌ಗಳಲ್ಲಿ (ಕುಲ್ಹಡ್) ತುಂಬಿಸಿಟ್ಟಿದ್ದ ಲಸ್ಸಿಗಳ ಮುಂದೆ ನಿಂತು ಅತ್ಯಂತ ಉತ್ಸಾಹದಿಂದ ಫೋಟೋ ಹಾಗೂ ವಿಡಿಯೋಗಳಿಗೆ ಫೋಸ್ ನೀಡಿದ್ದರು. ಸ್ಥಳೀಯ ಆಹಾರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಸಾಮಾನ್ಯ ಸೆಲೆಬ್ರಿಟಿ ವಿಡಿಯೋಗಳಂತೆಯೇ ಈ ಶೂಟಿಂಗ್ ನಡೆದಿತ್ತು. ಆದರೆ, ರೀಲ್ಸ್ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ನಟಿ ಆ ಲಸ್ಸಿಯನ್ನು ಕುಡಿಯಲು ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, "ಇದರಲ್ಲಿ ಅತಿಯಾದ ಸಕ್ಕರೆ ಮತ್ತು ಕೊಬ್ಬಿನಾಂಶ ಇದೆ. ಹಾಗಾಗಿ ನಾನು ಇದನ್ನು ಕುಡಿಯುವುದಿಲ್ಲ" ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ನಟಿಯ ಎರಡು ನಡೆ ಬಗ್ಗೆ ಟ್ರೋಲ್
ನಟಿಯ ಈ ದ್ವಂದ್ವ ನಿಲುವು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. "ತಾವು ಕುಡಿಯದೇ ಇರುವ, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುವ ಆಹಾರ ಪದಾರ್ಥಗಳನ್ನು ಕೇವಲ ಪ್ರಚಾರಕ್ಕಾಗಿ ಅಥವಾ ವೀವ್ಸ್‌ಗಾಗಿ ಜನರಿಗೆ ತೋರಿಸುವುದು ಎಷ್ಟು ಸರಿ? ಸೆಲೆಬ್ರಿಟಿಗಳ ಇಂತಹ ನಕಲಿ ಪ್ರಚಾರ ನಂಬಿ ಜನ ಮೋಸಹೋಗಬೇಕಾ?" ಎಂದು ಹಲವರು ಕಿಡಿಕಾರಿದ್ದಾರೆ. ಕ್ಯಾಮೆರಾ ಮುಂದೆ ಒಂದು, ಕ್ಯಾಮೆರಾ ಹಿಂದೆ ಮತ್ತೊಂದು ಮಾಡುವ ಇಂತಹ ಪ್ರಚಾರಗಳು ನಕಲಿ ಎನ್ನುವುದನ್ನು ಈ ಘಟನೆ ಸಾಬೀತುಪಡಿಸಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಂದೆಡೆ ನಟಿಯ ಪರವಾಗಿಯೂ ಕೆಲವು ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ. ಚಿತ್ರರಂಗದಲ್ಲಿರುವ ನಟ-ನಟಿಯರು ತಮ್ಮ ಫಿಟ್‌ನೆಸ್ ಹಾಗೂ ಕಟ್ಟುನಿಟ್ಟಿನ ಡಯಟ್ ಕಾಯ್ದುಕೊಳ್ಳುವುದು ಅನಿವಾರ್ಯ. ಕೇವಲ ಒಂದು ರೀಲ್ಸ್ ಅಥವಾ ವಿಡಿಯೋದಲ್ಲಿ ಭಾಗಿಯಾದ ತಕ್ಷಣ ಅವರು ಆ ಆಹಾರವನ್ನು ಪೂರ್ತಿಯಾಗಿ ಸೇವಿಸಲೇಬೇಕು ಎಂಬ ನಿಯಮವಿಲ್ಲ. ಅಲ್ಲದೆ ವೈರಲ್ ಆಗಿರುವ ತುಣುಕು ಸಂಪೂರ್ಣ ಸತ್ಯವನ್ನು ಬಿಂಬಿಸುತ್ತಿಲ್ಲ ಎಂದು ನಟಿಯ ಪರ ನಿಂತಿದ್ದಾರೆ.
Actress Bhagyashree spotted making Insta reel in Varanasi.
— Rishi Bagree (@rishibagree) July 5, 2026
Leaves Lassi after Shoot is over.
Says too much sugar and fat 😂 pic.twitter.com/KamIufHj2v
'ಮೈನೆ ಪ್ಯಾರ್ ಕಿಯಾ' ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಫೇಮಸ್ ಆಗಿದ್ದ ಭಾಗ್ಯಶ್ರೀ, ಸದಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫಿಟ್‌ನೆಸ್, ಯೋಗ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಈ ವೈರಲ್ ವಿಡಿಯೋ ಹಾಗೂ ವಿವಾದದ ಬಗ್ಗೆ ನಟಿ ಭಾಗ್ಯಶ್ರೀ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸೆಲೆಬ್ರಿಟಿಗಳ ಇಂತಹ 'ನಕಲಿ' ಪ್ರಚಾರಗಳ ಅಸಲಿ ಮುಖವಾಡದ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯಂತೂ ಮುನ್ನೆಲೆಗೆ ಬಂದಿದೆ.

ಶಿವಣ್ಣನ ಸಿನಿಮಾಗಳಲ್ಲಿ ಮಿಂಚಿದ್ದ ಭಾಗ್ಯಶ್ರೀ
ಬಾಲಿವುಡ್ ಮಾತ್ರವಲ್ಲದೆ ನಟಿ ಭಾಗ್ಯಶ್ರೀ ಅವರು ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. 1997ರಲ್ಲಿ ತೆರೆಕಂಡ ಅಮ್ಮಾವ್ರ ಗಂಡ ಇದು ನಟಿ ಭಾಗ್ಯಶ್ರೀ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರು 'ರಾಣಿ' ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಜೋಡಿಯಾಗಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ನಂತರ 2006ರಲ್ಲಿ ಗಂಡುಗಲಿ ಕುಮಾರರಾಮ ಐತಿಹಾಸಿಕ ಹಿನ್ನೆಲೆಯ ಈ ಚಿತ್ರದಲ್ಲಿ ಭಾಗ್ಯಶ್ರೀ ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿದ್ದರು. ಬಳಿಕ 2019ರಲ್ಲಿ ತೆರೆಕಂಡ ಸೀತಾರಾಮ ಕಲ್ಯಾಣದಲ್ಲಿ ದಶಕಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿದ ಭಾಗ್ಯಶ್ರೀ, ನಿಖಿಲ್ ಕುಮಾರ್ ಸ್ವಾಮಿ ಚಿತ್ರದಲ್ಲಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.













Click it and Unblock the Notifications