ಈ ಜೆನ್ ಜೀ ಮಕ್ಕಳು ಚಿಕ್ಕವರಾಗಿದ್ದಾಗಲೇ ವಯಸ್ಸಾದಂತೆ ಕಾಣೋದ್ಯಾಕೆ?
ಮುಖದಲ್ಲಿ ಕಾಣೋ ಸುಕ್ಕು, ನೆರೆತ ಕೂದಲು ನಮಗೆ ವಯಸ್ಸಾಗಿದೆ ಅಂತ ಹೇಳುತ್ತೆ. ಆದರೆ, ದೇಹಕ್ಕೆ ಇನ್ನೂ ಮುಪ್ಪು ಕಾಡಿರೋಲ್ಲ. ಆದರೆ, ಮೆದುಳು ಮಾತ್ರ ವಯಸ್ಸಾದಂತೆ ವರ್ತಿಸುತ್ತಿರುತ್ತದೆ. ವಯಸ್ಸಿಗೂ ಮುನ್ನವೇ ವೃದ್ಧಾಪ್ಯ ಕಾಣುವುದ್ಯಾಕೆ? ಅದರಲ್ಲಿಯೂ ಜೆನ್ ಜೀ ಎನ್ನೋ ಜನರೇಷನ್‌ಗೆ ಯಾಕೆ ಬೇಗ ಮುಪ್ಪು ಕಾಡುತ್ತಿದೆ? ತಜ್ಞರು ಹೇಳೋ ರೀಸನ್ಸ್ ಇವು.
ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಆಲೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಕೆಲವು ಸೂಕ್ಷ್ಮ ಬದಲಾವಣೆಗಳು ಯಾವುದೇ ಲಕ್ಷಣವಿಲ್ಲದೇ ಮೆದುಳಿನೊಳಗೆ ನಡೆಯುತ್ತಿರುತ್ತವೆ ಎನ್ನುತ್ತಾರೆ ನ್ಯೂರೋಸರ್ಜರಿ ತಜ್ಞರು.

ನಿಮ್ಮ ಮೆದುಳಿಗೇ ಬೇಗ ವಯಸ್ಸಾಗುತ್ತಾ?
ಜನ್ಮ ದಿನಾಂಕದ ಆಧಾರದ ಮೇಲಿನ ವಯಸ್ಸು ಯಾವಾಗಲೂ ಮೆದುಳಿನ ನೈಜ, ಜೈವಿಕ ವಯಸ್ಸನ್ನು ಪ್ರತಿಬಿಂಬಿಸುವುದಿಲ್ಲ. ಈ ವ್ಯತ್ಯಾಸವನ್ನು ವಿಜ್ಞಾನಿಗಳು 'ಬ್ರೈನ್ ಏಜ್ ಗ್ಯಾಪ್' (BAG) ಎನ್ನುತ್ತಾರೆ. ಒಂದೇ ಟೈಮಲ್ಲಿ ಉತ್ಪನ್ನವಾದ ಕಾರು ಚನ್ನಾಗಿ ಮೆಂಟೈನ್ ಮಾಡಿದರೆ ಸದಾ ಹೊಸತರಂತೆ ಕಾಣುತ್ತದೆ. ಧೂಳು ಸಹ ಒರೆಸದೇ ಬಿಟ್ಟರೆ ಹಳೆಯಂದತೆ ಕಾಣುತ್ತದೆ. ಹಾಗೆಯೇ ನಮ್ಮ ಜೀವನಶೈಲಿ, ಯೋಚನಾ ಲಹರಿ ಹಾಗೂ ತಿನ್ನುವ ಆಹಾರ ನಮ್ಮ ದೇಹ ಹಾಗೂ ಮೆದುಳಿನ ಮೇಲೂ ಪರಿಣಾಮ ಬೀರಲಿದ್ದು, ದೇಹಕ್ಕಿಂತಲೂ ಮನಸ್ಸು, ಮೆದಳು ಬೇಗ ವಯಸ್ಸಾಗುವಂತೆ ಮಾಡುತ್ತದೆ.
ಮೆದುಳಿನ ವಯಸ್ಸು ಅನಾರೋಗ್ಯಕ್ಕೆ ಕಾರಣ
40,000ಕ್ಕೂ ಹೆಚ್ಚು ಮಂದಿ ಮೆದುಳಿನ ಸ್ಕ್ಯಾನ್‌ಗಳ ಅಧ್ಯಯನದ ಪ್ರಕಾರ, ಪ್ರತಿ ಹೆಚ್ಚುವರಿ ವರ್ಷ ಮೆದುಳು ಹಳೆಯದಾಗಿ ಕಂಡಷ್ಟೂ ಆರೋಗ್ಯ ಅಪಾಯಗಳು ಹೆಚ್ಚುತ್ತವೆ. ಇದು ಆಲ್ಝೈಮರ್ಸ್ ಅಪಾಯವನ್ನು ಸುಮಾರು ಶೇ. 16.5ರಷ್ಟು ಹಾಗೂ ಒಟ್ಟಾರೆ ಸಾವಿನ ಸಾಧ್ಯತೆಯನ್ನು ಶೇ. 12ರಷ್ಟು ಹೆಚ್ಚಿಸುತ್ತದೆ.
2.5 ವರ್ಷಗಳ ನಿರ್ಣಾಯಕ ಘಟ್ಟ
ಮೆದುಳು ನಿಜವಾದ ವಯಸ್ಸಿಗಿಂತ ಸುಮಾರು 2.5 ವರ್ಷ ಹೆಚ್ಚು ಹಳೆಯದಾದಾಗ, ಜ್ಞಾಪಕಶಕ್ತಿ ಬೇಗೆ ಕಡಿಮೆಯಾಗುತ್ತದೆ. ಪ್ರತಿಕ್ರಿಯೆ ನೀಡುವ ಸಮಯ, ಏಕಾಗ್ರತೆ, ಜ್ಞಾಪಕಶಕ್ತಿ ಕುಸಿತದ ಜೊತೆಗೆ ಪಾರ್ಶ್ವವಾಯು ಮತ್ತು ತೀವ್ರ ಖಿನ್ನತೆಯ ಅಪಾಯವೂ ಹೆಚ್ಚುತ್ತದೆ.
ಮೆದುಳನ್ನು ಮುದಕರಾಗಿಸೋ ಅಪಾಯಗಳಿವು:
ದೀರ್ಘಕಾಲಿಕ ಒತ್ತಡ: ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಳ, ಹಿಪೊಕ್ಯಾಂಪಸ್ ಕುಗ್ಗುವಿಕೆಗೆ ಕಾರಣವಾಗಬಹುದು.
ನಿದ್ರಾ ಹೀನತೆ: ಗುಣಮಟ್ಟದ ಕೊರತೆಯ ನಿದ್ರೆ ಮೆದುಳನ್ನು 2-3 ವರ್ಷ ಹೆಚ್ಚು ಹಳೆಯದಾಗಿಸಬಹುದು.
ಅತಿ ಸಂಸ್ಕರಿಸಿದ ಆಹಾರ: ಪ್ಯಾಕೆಟ್ ಚಿಪ್ಸ್‌ನಂತಹ ತಿಂಡಿಗಳ ನಿಯಮಿತ ಸೇವನೆ ಮಾನಸಿಕ ಪ್ರಕ್ರಿಯೆ ನಿಧಾನಗೊಳಿಸಬಹುದು.
ಸಾಮಾಜಿಕ ಪ್ರತ್ಯೇಕತೆ: ಆಲ್ಝೈಮರ್ಸ್ ಅಪಾಯವನ್ನು ಶೇ. 47ರಷ್ಟು ಹೆಚ್ಚಿಸಬಲ್ಲದು. ಸದಾ ಕೈಯಲ್ಲಿ ಮೊಬೈಲ್ ಹಿಡಿದು, ಎದುರಿಗೆ ಬಂದವರನ್ನು ಮಾತನಾಡಿಸದೇ ಹೋಗೋ ಜನರಲ್ಲಿ ಇದು ಹೆಚ್ಚು ಕಾಡುತ್ತೆ.
ಮೆದುಳು ಯಂಗ್ ಆಗಿರಲು ಏನು ಮಾಡಬೇಕು?
ಮೆದುಳಿಗೆ ಸ್ವತಃ ಮರುನಿರ್ಮಾಣ ಮಾಡಿಕೊಳ್ಳುವ ಸಾಮರ್ಥ್ಯವಿದೆ (ನ್ಯೂರೋಪ್ಲಾಸ್ಟಿಸಿಟಿ). 80ರ ವಯಸ್ಸಿನಲ್ಲೂ ಚುರುಕಾದ ಜ್ಞಾಪಕಶಕ್ತಿ ಹೊಂದಿರುವ 'ಸೂಪರ್‌ಏಜರ್ಸ್' ಇದಕ್ಕೆ ಉದಾಹರಣೆ.
ಮೆದುಳನ್ನು ಯುವಕವಾಗಿಡುವ ಅಭ್ಯಾಸಗಳು
ಪದಬಂಧ, ಓದುವಿಕೆ, ಹೊಸ ಕೌಶಲ್ಯ ಕಲಿಕೆ; ಧ್ಯಾನ ಮತ್ತು ವಿಶ್ರಾಂತಿ ತಂತ್ರಗಳು; ನಿಯಮಿತ ವಾಕಿಂಗ್/ವ್ಯಾಯಾಮ; ಗುಣಮಟ್ಟದ ನಿದ್ರೆ; ಕುಟುಂಬ-ಸ್ನೇಹಿತರೊಂದಿಗಿನ ಅರ್ಥಪೂರ್ಣ ಸಂಬಂಧಗಳು - ಇವೆಲ್ಲವೂ ಮೆದುಳಿನ ಆರೋಗ್ಯಕ್ಕೆ ದಿನನಿತ್ಯದ ಔಷಧಿಯಂತೆ ಕೆಲಸ ಮಾಡುತ್ತವೆ ಎಂದು ಡಾ. ಭಗತ್ ಹೇಳುತ್ತಾರೆ.












Click it and Unblock the Notifications