ಮುಂಬೈನಲ್ಲಿ ವರುಣ ಸೃಷ್ಟಿಸಿದ ಅನಾಹುತಗಳು ಒಂದಲ್ಲ, ಎರಡಲ್ಲ..
ಮುಂಬೈ, ಜುಲೈ 06: ದೇಶದ ಕೆಲವೆಡೆ ಈಗ ಮುಂಗಾರು ಪಡೆದಿದ್ದು, ಹೆಲವೆಡೆ ಭಾರಿ ಮಳೆಯಿಂದ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿವೆ. ಹಾಗೆಯೇ ಭಾನುವಾರ (ಜುಲೈ 5) ತಡರಾತ್ರಿ ಮುಂಬೈನಲ್ಲಿ ರಣ ಮಳೆಯಿಂದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮನ್ಖುರ್ಡ್‌ನ ಜನತಾ ನಗರದ ಹನುಮಾನ್ ದೇವಾಲಯದ ಹಿಂಭಾಗದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ನೆಲಮಹಡಿ ಸೇರಿದಂತೆ ಮೂರು ಅಂತಸ್ತುಗಳನ್ನು ಹೊಂದಿದ್ದ ಈ ವಸತಿ ಕಟ್ಟಡದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಕಟ್ಟಡದ ಒಳಗಿದ್ದ ಹಲವು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು. ಮಾಹಿತಿ ತಿಳಿಯುತ್ತಿದ್ದಂತೆಯೇ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸ್, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹಾಗೂ 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳ ಅಡಿಯಿಂದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಮರ ಬಿದ್ದು ವ್ಯಕ್ತಿ ಸಾವು
ನಗರದಾದ್ಯಂತ ಬೀಸಿದ ಬಿರುಗಾಳಿ ಹಾಗೂ ಭಾರಿ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ಕುರ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಮರ ಬಿದ್ದು ಸಂಭವಿಸಿದ ಎರಡನೇ ಸಾವು ಇದಾಗಿದೆ.
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ
ಮತ್ತೊಂದು ಘಟನೆಯಲ್ಲಿ ಬಾಂದ್ರಾ ಪೂರ್ವದ ಸಿವಿಕ್ ಹೆಲ್ತ್ ಸೆಂಟರ್ ಆಸ್ಪತ್ರೆಯ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಕಾರ್ಪೊರೇಟರ್ ರೋಹಿಣಿ ಕಾಂಬ್ಳೆ ಹಾಗೂ ಬಿಎಂಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇತ್ತ ವರ್ಲಿಯ ಬಿಡಿಡಿ ಚಾಲ್ ಬಳಿ ಮರ ಬಿದ್ದು ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೆಡ್ ಅಲರ್ಟ್ ಘೋಷಣೆ
ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ 200 ಮಿಲಿ ಮೀಟರ್ ನಿಂದ 300 ಮಿಲಿ ಮೀಟರ್‌ವರೆಗೆ ದಾಖಲೆ ಪ್ರಮಾಣದ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಗರದಲ್ಲಿ ಭಾರಿ ಮಳೆ ಮುನ್ಸೂಚನೆ ಇರುವುದರಿಂದ ಇಂದು ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಕೆಲವು ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ. ಜನರಿಗೆ ಎಚ್ಚರಿಕೆಯಿಂದ ಇರವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ.












Click it and Unblock the Notifications